ಬೆಂಗಳೂರು : ವಿವಿಧ ಬೇಡಿಕೆಗಳ (Demands )ಈಡೇರಿಕೆಗೆ ಒತ್ತಾಯಿಸಿ ಆರೋಗ್ಯ ಇಲಾಖೆಯ (Healthcare workers ) ಅಧಿಕಾರಿಗಳು ನಾಳೆಯಿಂದ ರಾಜ್ಯಾದ್ಯoತ ಮುಷ್ಕರ ಕೈಗೊಳ್ಳಲಿದ್ದಾರೆ.
ವೈದ್ಯರು(Doctors ) ನೌಕರರು ಹೊರ ರೋಗಿಗಳ ವಿಭಾಗದ ಕರ್ತವ್ಯ ಬಹಿಷ್ಕರಿಸಿ ಬುಧವಾರದಿಂದ ಮುಷ್ಕರ ನಡೆಸಲಿದ್ದಾರೆ.ಮಾ.15 ರವರೆಗೆ ವೈದ್ಯರು, ಸಿಬ್ಬಂದಿ ಕಪ್ಪು ಪಟ್ಟಿಧರಿಸಿ ತುರ್ತು ಕರ್ತವ್ಯದಲ್ಲಿ ಭಾಗಿಯಾಗಲಿದ್ದಾರೆ. ಆನಂತರವೂ ಸರಕಾರದಿಂದ ಯಾವುದೇ ಸ್ಪಂದನೆ ಸಿಗದಿದ್ದರೆ ಮಾ. 16ರಿಂದ ಸಂಪೂರ್ಣ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವ ಮುಷ್ಕರ ಮುಂದುವರಿಸಲು ನಿರ್ಧರಿಸಲಾಗಿದೆ.
ಮುಷ್ಕರದ ಕುರಿತು ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮಾಹಿತಿ ನೀಡಲಾಗಿದ್ದರೂ, ಇದುವರೆಗೆ ಸರ್ಕಾರದಿಂದ ಯಾವುದೇ ಮಾತುಕತೆ ನಡೆದಿಲ್ಲ. ಬಿಕ್ಕಟ್ಟು ಬಗೆಹರಿಸಲು ಸರ್ಕಾರ ಮುಂದಾಗದಿರುವುದು ವೈದ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಮುಷ್ಕರ ಆರಂಭವಾದರೆ ಸರ್ಕಾರಿ ಆಸ್ಪತ್ರೆಗಳನ್ನು ನಂಬಿರುವ ಸಾವಿರಾರು ಬಡ ರೋಗಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಚಿಕಿತ್ಸೆಗಳಿಗೆ ಅಡ್ಡಿಯಾಗುವ ಸಾಧ್ಯತೆಯಿದೆ.
ಏನೆಲ್ಲಾ ಬೇಡಿಕೆ..?
ಕಳೆದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸರ್ಕಾರಿ ವೈದ್ಯರ ಮುಂಬಡ್ತಿ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸಬೇಕು ಮತ್ತು ಸೇವಾ ಜ್ಯೇಷ್ಠತಾ ಪಟ್ಟಿಯನ್ನು ನಿಯಮಾನುಸಾರ ಪರಿಷ್ಕರಿಸಬೇಕು.
1973 ರಲ್ಲಿ ರೂಪಿಸಲಾದ ವೃಂದ ಮತ್ತು ನೇಮಕಾತಿ ನಿಯಮಗಳು ಇಂದಿಗೂ ಮುಂದುವರಿದಿದ್ದು, ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಈ ನಿಯಮಗಳನ್ನು ತಕ್ಷಣವೇ ತಿದ್ದುಪಡಿ ಮಾಡಬೇಕು.
ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತದೊತ್ತಡ, ಮಧುಮೇಹಕ್ಕೆ ನೀಡುವ ಇನ್ಸುಲಿನ್, ಜೀವರಕ್ಷಕ ಆಂಟಿಬಯೋಟಿಕ್ಸ್ ಸೇರಿದಂತೆ ಅಗತ್ಯ ಔಷಧಿಗಳ ತೀವ್ರ ಕೊರತೆಯಿದೆ. ಬಡ ರೋಗಿಗಳಿಗೆ ಅನುಕೂಲವಾಗುವಂತೆ ಔಷಧಿಗಳ ಪೂರೈಕೆಯನ್ನು ಸುಗಮಗೊಳಿಸಬೇಕು.
ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಯೋಜನೆ ಮತ್ತು ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಉದ್ಯೋಗ ಭದ್ರತೆ ಒದಗಿಸಬೇಕು ಹಾಗೂ ಪ್ರತಿ ತಿಂಗಳ ಮೊದಲ ವಾರದಲ್ಲೇ ಕಡ್ಡಾಯವಾಗಿ ವೇತನ ಪಾವತಿಸಬೇಕು ಸೇರಿದಂತೆ ಇನ್ನೂ ಹತ್ತು ಹಲವು ಬೇಡಿಕೆಗಳನ್ನು ವೈದ್ಯರು ಮುಂದಿಟ್ಟಿದ್ದಾರೆ.
