Monday, June 17, 2024

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್ಸಿಗರು ಹೀಗೇಕೆ?

ಕಾಂಗ್ರೆಸ್ ಭಾರತದಲ್ಲಿ ಮತ್ತೆ ಬಲಗೊಳ್ಳಬೇಕಾದರೆ ಬಹಳ ಮುಖ್ಯವಾಗಿ ಅದರ ಎಲ್ಲ ಕಾರ್ಯಕರ್ತರು ಮತ್ತು ನಾಯಕರಲ್ಲಿ ಸೈದ್ಧಾಂತಿಕ ಸ್ಪಷ್ಟತೆ ಇರಬೇಕು. ಜಾತ್ಯತೀತತೆಯ ಬಗ್ಗೆ, ಕೋಮುವಾದದ ವಿರೋಧಿ ನಿಲುವುಗಳ ಬಗ್ಗೆ ನಿಲುವು ಸ್ಪಷ್ಟವಿರಬೇಕು. ಇದರ ಬಗ್ಗೆ ದೊಡ್ಡ ಮಟ್ಟದಲ್ಲಿ ಕಾರ್ಯಾಗಾರಗಳನ್ನು ನಡೆಸಿ ಅವರಲ್ಲಿ ತಿಳಿವಳಿಕೆ ಮೂಡಿಸಬೇಕಾದ ಅಗತ್ಯವಿದೆ – ಶ್ರೀನಿವಾಸ ಕಾರ್ಕಳ

ಕಾಂಗ್ರೆಸ್ ಶತಮಾನದ ಇತಿಹಾಸ ಇರುವ ಒಂದು ಅತ್ಯಂತ ಹಳೆಯ ರಾಜಕೀಯ ಪಕ್ಷ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಹೊಂದಿರುವ ಪಕ್ಷ. ಈಗಲೂ ಭಾರತದಲ್ಲಿ ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧಿ ಆಗಿರುವ ಮತ್ತು ಕೋಟ್ಯಂತರ ಮತದಾರರ ವಿಶ್ವಾಸ ಗಳಿಸಿರುವ ಪಕ್ಷ. 2019 ರ ಚುನಾವಣೆ ಸೋತಾಗಲೂ ಅದು ಚಲಾವಣೆಗೊಂಡ ಮತಗಳಲ್ಲಿ ಸುಮಾರು 12 ಕೋಟಿ ಮತ ಗಳಿಸಿತ್ತು.

ಇಂತಹ ಒಂದು ಪಕ್ಷ ಮತ್ತೆ ಜನರ ವಿಶ್ವಾಸ ಪಡೆದು ಅಧಿಕಾರಕ್ಕೆ ಮರಳಲು ಒದ್ದಾಡುತ್ತಿದೆ. ಅದು ಎದುರಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ಸೈದ್ಧಾಂತಿಕ ಸ್ಪಷ್ಟತೆಯ ಸಮಸ್ಯೆಯೂ ಒಂದು. “ನಿಮ್ಮ ಸಿದ್ಧಾಂತ ಏನು?” ಎಂದು ಪ್ರಶ್ನಿಸಿದರೆ ಕೆಲ ನಾಯಕರು ಭಾರತ ಸಂವಿಧಾನವೇ ನಮ್ಮ ಸಿದ್ಧಾಂತ ಎನ್ನುತ್ತಾರೆ. ಆದರೆ ಭಾರತ ಸಂವಿಧಾನದ ತತ್ತ್ವಗಳು ಈಗಿನ ಕಾಂಗ್ರೆಸ್ ನಾಯಕರ ಮತ್ತು ಕಾರ್ಯಕರ್ತರ ಮೈಗೂಡಿವೆಯೇ? ತೀರಾ ಎಡವೂ ಅಲ್ಲದ, ತೀರಾ ಬಲವೂ ಅಲ್ಲದ ಸಿದ್ದಾಂತ ಹೊಂದಿರಬೇಕಾದ ಅದು ಯಾಕೆ ಎಡಬಿಡಂಗಿಯಾಗುತ್ತಾ ಬಲದತ್ತಲೇ ಸಾಗಿದಂತೆ ಭಾಸವಾಗುತ್ತಿದೆ? ಈಗಿನ ಕಾಂಗ್ರೆಸಿಗರ ನಡೆವಳಿಕೆಗಳಲ್ಲಿ ಯಾವ ಆಕ್ಷೇಪಾರ್ಹ ಅಂಶಗಳಿವೆ? ತಕ್ಷಣಕ್ಕೆ ನನ್ನ ಗಮನಕ್ಕೆ ಬಂದ ಕೆಲ ಸಂಗತಿಗಳು ಇಂತಿವೆ.

ಕಾಂಗ್ರೆಸ್ ನ ಬಹುತೇಕ ಮಂದಿಯ, ವಿಶೇಷವಾಗಿ ನಾಯಕರ ಸಮಸ್ಯೆ ಏನೆಂದರೆ –

1. ಅವರಲ್ಲಿ ಹೆಚ್ಚಿನವರಿಗೆ ಸುತ್ತಲ ಜಗತ್ತಿನಲ್ಲಿ ಏನಾಗುತ್ತಿದೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ರಾಜಕೀಯವಾಗಿ ಏನೇನು ಬೆಳವಣಿಗೆಗಳು ಸಂಭವಿಸುತ್ತಿವೆ ಎಂಬ ಕನಿಷ್ಠ ಅರಿವೂ ಇಲ್ಲ (ಇದರ ಪರಿಣಾಮವೇ ಕುಖ್ಯಾತ ಸ್ತ್ರೀಪೀಡಕನಿಗೆ ಆಹ್ವಾನ ಹೋದುದು).

2. ಬಿಜೆಪಿಯವರು ಚುನಾವಣಾ ಟಿಕೆಟ್ ಕೊಡುವಾಗ ವ್ಯಕ್ತಿಯ ಹಿನ್ನೆಲೆಯನ್ನು ಕೂಲಂಕಷ ತಪಾಸಣೆ  ಮಾಡುತ್ತಾರೆ. ಸಂಘ ಸಿದ್ಧಾಂತ ವಿರೋಧಿಗಳಿಗೆ ಅಲ್ಲಿ ಅವಕಾಶ ಇಲ್ಲವೇ ಇಲ್ಲ. ಆದರೆ ಕಾಂಗ್ರೆಸ್ ನಲ್ಲಿ ಹಣ ಮತ್ತು ಗೆಲ್ಲುವ ಸಾಮರ್ಥ್ಯವೇ ಪ್ರಧಾನ ಅರ್ಹತೆ. ಆತ ನೇರ ಆರ್ ಎಸ್ ಎಸ್ ನವನೇ ಆದರೂ ಪರವಾಗಿಲ್ಲ. ಸಿದ್ಧಾಂತಕ್ಕೆ ಒಂದು ಹಿಡಿ ಮಣ್ಣು.

3. ಇವರಲ್ಲಿ ಹೆಚ್ಚಿನವರು X ( ಹಿಂದಿನ ಟ್ವಿಟರ್), ಫೇಸ್‌ಬುಕ್‌ ಖಾತೆಗಳನ್ನು ಹೊಂದಿದ್ದಾರೆ. ಅದರಲ್ಲಿ ರಾಜಕೀಯ ಪೋಸ್ಟ್ ಗಳು ಇರುವುದು ಕಡಿಮೆ. ಹೆಚ್ಚಾಗಿ ಇರುವುದು “ನಾನು ಈವತ್ತು ಇಂಥವರ ಮದುವೆಗೆ ಹೋಗಿದ್ದೆ, ಬೊಜ್ಜಕ್ಕೆ ಹೋಗಿದ್ದೆ” ಎಂಬ ಸುದ್ದಿಗಳು. ಮೋದಿಯವರ ಪ್ರತಿಯೊಂದು ಸೋಶಿಯಲ್ ಮೀಡಿಯಾ ಪೋಸ್ಟ್ ಅನ್ನು ರಾಷ್ಟ್ರ ಮಟ್ಟದಿಂದ ಹೋಬಳಿ ಮಟ್ಟದವರೆಗೆ ಬಿಜೆಪಿಗರು ಹಂಚಿಕೊಳ್ಳುತ್ತಾರೆ. ಆದರೆ ರಾಹುಲ್ ಗಾಂಧಿಯವರ ಅತ್ಯಂತ ಮೌಲಿಕ ಮತ್ತು ದಿಟ್ಟ ಪೋಸ್ಟ್ ಗಳನ್ನು ಹಂಚಿಕೊಳ್ಳಲೂ ಈ ಮಂದಿಗೆ ಸೋಮಾರಿತನ.

4. ಬಿಜೆಪಿಯ ಮುಖ್ಯಮಂತ್ರಿ, ಪ್ರಧಾನಿ ತಪ್ಪು ಮಾಡಿದರೂ ಅವರ ಮಂತ್ರಿಗಳು, ಶಾಸಕರು ಸಮರ್ಥಿಸುತ್ತಾರೆ, ಅವರ ಹಿಂದೆ ಬಂಡೆಗಲ್ಲಿನಂತೆ ನಿಲ್ಲುತ್ತಾರೆ. ಆದರೆ ಕಾಂಗ್ರೆಸ್ ನಾಯಕರು ಸರಿ ಕೆಲಸ ಮಾಡಿ ವಿರೋಧಿಗಳು ಮತ್ತು ಚಡ್ಡಿ ಮಾಧ್ಯಮಗಳಿಂದ ಧಾಳಿಗೊಳಗಾದಾಗಲೂ ಅವರ ಮಂತ್ರಿಗಳು, ಶಾಸಕರು, ಪಕ್ಷ ಕಾರ್ಯಕರ್ತರು ತಟಸ್ಥರಾಗುತ್ತಾರೆ. ನಾಯಕನನ್ನು ಏಕಾಂಗಿಯಾಗಿಸುತ್ತಾರೆ. ಅತ್ಯುತ್ತಮ ಉದಾಹರಣೆ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿಯವರ ಸ್ಥಿತಿ.

5. ಕಾಂಗ್ರೆಸ್ ನ ಬಹುತೇಕ ಮಂದಿಗೆ ಆರ್ ಎಸ್ ಎಸ್ ಎಂದರೆ ಏನು, ಅದರ ಹುಟ್ಟಿನ ಹಿನ್ನೆಲೆ, ಅದರ ಅಜೆಂಡಾ, ಅದರ ಮೇಲಿರುವ ಬ್ರಾಹ್ಮಣ್ಯ ಹಿಡಿತ ಇತ್ಯಾದಿ ಯಾವುದರ ಅರಿವೂ ಇಲ್ಲ. ಆರ್ ಎಸ್ ಎಸ್ ಅನ್ನು ಯಾಕೆ ವಿರೋಧಿಸಬೇಕು ಎಂಬುದಂತೂ ಗೊತ್ತೇ ಇಲ್ಲ. ಖಾಸಗಿಯಾಗಿ ಕೇಳಿ, ‘ಆರ್ ಎಸ್ ಎಸ್ ಭಾರೀ ಶಿಸ್ತಿನ ಸಂಘಟನೆ’ ಎಂದು ನಾಲ್ಕು ಹೊಗಳಿಕೆಯ ಮಾತನ್ನೇ ಆಡಿಯಾರು.

6. ಸಂಘ ಮತ್ತು ಬಿಜೆಪಿಯವರು ಮುಂದಿನ ದಶಕಗಳ, ಶತಕಗಳ ರಾಜಕೀಯ ಅಧಿಕಾರದ ಬಗ್ಗೆ ಯೋಚಿಸಿ ನೆಲ ಹದಗೊಳಿಸುತ್ತಾರೆ. ಬೇರುಗಳನ್ನು ಆಳಕ್ಕೆ ಇಳಿಸುತ್ತಾರೆ. ಕಾಂಗ್ರೆಸ್ ನ ಬಹುತೇಕ ಮಂದಿಯ ಗುರಿ ಕೇವಲ ಮುಂದಿನ ಚುನಾವಣೆ ಗೆಲ್ಲುವುದು‌ ಮತ್ತು ಹೇಗಾದರೂ ಗೆಲ್ಲುವುದು. ಅದರಾಚೆಯ ಬಗ್ಗೆ ಅವರಿಗೆ ಚಿಂತೆ ಇಲ್ಲ. ಕೇವಲ ಚುನಾವಣೆ ಗೆಲ್ಲುವುದನ್ನು ಗುರಿಯಾಗಿಸಿಕೊಂಡ ಯಾವ ರಾಜಕೀಯ ಪಕ್ಷಕ್ಕೂ ಭವಿಷ್ಯವಿಲ್ಲ. ಅಂತಹ ಪಕ್ಷಗಳಿರುವ ದೇಶಕ್ಕೂ ಭವಿಷ್ಯವಿಲ್ಲ.

ಪಟ್ಟಿ ಇನ್ನೂ ದೀರ್ಘ ಇದೆ..

ಕಾಂಗ್ರೆಸ್ ಭಾರತದಲ್ಲಿ ಮತ್ತೆ ಬಲಗೊಳ್ಳಬೇಕಾದರೆ ಬಹಳ ಮುಖ್ಯವಾಗಿ ಅದರ ಎಲ್ಲ ಕಾರ್ಯಕರ್ತರು ಮತ್ತು ನಾಯಕರಲ್ಲಿ ಸೈದ್ಧಾಂತಿಕ ಸ್ಪಷ್ಟತೆ ಇರಬೇಕು. ಜಾತ್ಯತೀತತೆಯ ಬಗ್ಗೆ, ಕೋಮುವಾದದ ವಿರೋಧಿ ನಿಲುವುಗಳ ಬಗ್ಗೆ ನಿಲುವು ಸ್ಪಷ್ಟವಿರಬೇಕು. ಇದರ ಬಗ್ಗೆ ದೊಡ್ಡ ಮಟ್ಟದಲ್ಲಿ ಕಾರ್ಯಾಗಾರಗಳನ್ನು ನಡೆಸಿ ಅವರಲ್ಲಿ ತಿಳಿವಳಿಕೆ ಮೂಡಿಸಬೇಕಾದ ಅಗತ್ಯವಿದೆ. ಬದ್ಧತೆ ಎನ್ನುವುದು ಯಾವತ್ತೂ ಅರೆಬರೆಯಾಗಿರಬಾರದು. ಅದು ನೂರಕ್ಕೆ ನೂರು ಇರಬೇಕು. ಇಲ್ಲವಾದರೆ ಕಾಂಗ್ರೆಸ್ ಹತ್ತರಲ್ಲಿ ಹನ್ನೊಂದನೆಯ ಪಕ್ಷವಾಗಿ ತನ್ನ ಭವಿಷ್ಯಕ್ಕೆ ತಾನೇ ಕಲ್ಲುಹಾಕಿಕೊಳ್ಳುತ್ತದೆ.

ಶ್ರೀನಿವಾಸ ಕಾರ್ಕಳ

ಚಿಂತಕರು‌

ಇದನ್ನೂ ಓದಿ- ಬೆಂಗಳೂರಲ್ಲಿ ತುಳು ನಾಡಿನ ಕಂಬಳ; ಫ್ಯೂಡಲ್‌ ಕ್ರೀಡೆಗೆ ಪ್ರಭುತ್ವದ ಪ್ರೋತ್ಸಾಹ

Related Articles

ಇತ್ತೀಚಿನ ಸುದ್ದಿಗಳು