Tuesday, July 29, 2025

ಸತ್ಯ | ನ್ಯಾಯ |ಧರ್ಮ

ಪ್ರಜ್ವಲ್‌ ರೇವಣ್ಣ ಮುಸ್ಲಿಂ ಆಗಿದ್ದಿದ್ದರೆ ಹೀಗೆ ಸುಮ್ಮನಿರ್ತಿದ್ರಾ? ಮೋದಿ ಸರ್ಕಾರಕ್ಕೆ ನಟಿ ಸ್ವರ ಭಾಸ್ಕರ ಪ್ರಶ್ನೆ

ಹಾಸನದ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣ ಪ್ರಕರಣವು ದೇಶವ್ಯಾಪಿ ಸದ್ದು ಮಾಡುತ್ತಿದ್ದು, ಹಲವರ ಆಕ್ರೋಶಕ್ಕೂ ಕಾರಣವಾಗಿದ್ದು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಮಾಹಿತಿಗಳು ಹೊರಬರುತ್ತಿರುವುದರ ಜೊತೆಗೆ ಹೊಸ ತಿರುವುಗಳೂ ಕಾಣಿಸಿಕೊಳ್ಳುತ್ತಿದೆ.

ಈ ಪ್ರಕರಣದ ಕುರಿತು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ರೀತಿಯ ಪ್ರಶ್ನೆಗಳನ್ನು ಜನಸಾಮಾನ್ಯರು ಮತ್ತು ಖ್ಯಾತ ವ್ಯಕ್ತಿಗಳು ಎತ್ತುತ್ತಿದ್ದು, ಹೆಣ್ಣು ಮಕ್ಕಳ ಸುರಕ್ಷತೆಯ ಕುರಿತು ಅವರೆಲ್ಲರೂ ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ.

ಈ ನಡುವೆ ಈ ವಿಷಯವಾಗಿ ಕೇಂದ್ರದ ಮೋದಿ ಸರ್ಕಾರದ ಮೌನದ ಬಗ್ಗೆ ನಟಿ ಸ್ವರ ಭಾಸ್ಕರ ಪ್ರಶ್ನೆಗಳನ್ನು ಎತ್ತಿದ್ದು, ಒಂದು ವೇಳೆ ಆರೋಪಿ ಮುಸ್ಲಿಮನಾಗಿರುತ್ತಿದ್ದಿದ್ದರೆ ನೀವು ಇಷ್ಟೇ ಮೌನವಾಗಿ ಇರುತ್ತಿದ್ರಾ ಎಂದು ಕೇಳಿದ್ದಾರೆ.

ಇತ್ತೀಚೆಗಷ್ಟೇ ಮುಸ್ಲಿಂ ಯುವಕನೊಬ್ಬ ನೇಹಾ ಎನ್ನುವ ಯುವತಿಯನ್ನು ಕೊಂದಿದ್ದನ್ನು ಬಿಜೆಪಿ ದೇಶದ ಮಟ್ಟದಲ್ಲಿ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡು ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಅದಾಗಿ ಕೆಲವೇ ದಿನಗಳ ಅಂತರದಲ್ಲಿ ಪ್ರಜ್ವಲ್‌ ಹಗರಣ ಹೊರಬಿದ್ದಿದ್ದು ಬಿಜೆಪಿ ಈ ವಿಷಯದಲ್ಲಿ ಅಂತ ಕಾಯ್ದುಕೊಂಡಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಸ್ವರ ಭಾಸ್ಕರ,

“ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಬಗ್ಗೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಮೌನಕ್ಕೆ ನಾವೇಕೆ ಬೆಚ್ಚಿಬಿದ್ದಿದ್ದೇವೆ? ವಿಷಯ ಗೊತ್ತಿದ್ದೂ ಮೋದಿ ಪ್ರಜ್ವಲ್‌ ಪರ ಪ್ರಚಾರ ಮಾಡಿದ್ದು ನಮಗೇಕೆ ಆಘಾತ ತರಬೇಕು? ಕಥುವಾ, ಉನ್ನಾವೋ, ಹತ್ರಾಸ್, ಕುಲದೀಪ್ ಸೆಂಗರ್, ಬ್ರಿಜ್ಭೂಷಣ್ ಶರಣ್ ಮತ್ತು ಇತರರ ಉದಾಹರಣೆ ಈಗಾಗಲೇ ನಮ್ಮ ಮುಂದಿದೆ! ಅಪರಾಧಿ ಮುಸ್ಲಿಂ ಅಥವಾ ಟಿಎಂಸಿ/ಕಾಂಗ್ರೆಸ್‌ನವರಾಗಿದ್ದರೆ ಮಾತ್ರ ಅವರು ಮಹಿಳಾ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಾರೆ.” ಎಂದಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ, ಹಾಗೂ ಆರೋಪಿ ಪ್ರಜ್ವಲ್‌ ತಂದೆ ರೇವಣ್ಣನನ್ನು ಕಿಡ್ನ್ಯಾಪ್‌ ಪ್ರಕರಣದಲ್ಲಿ ಈಗಾಗಲೇ ಬಂಧಿಸಲಾಗಿದ್ದು, ಪ್ರಜ್ವಲ್‌ ದೇಶಕ್ಕೆ ಮರಳುವುದನ್ನೇ ತನಿಖಾಧಿಕಾರಿಗಳು ಕಾಯುತ್ತಿದ್ದಾರೆ. ಉಳಿದಂತೆ ಸಂತ್ರಸ್ಥೆಯ ಅಪಹರಣ ಪ್ರಕರಣದಲ್ಲಿ ರೇವಣ್ಣ ಪತ್ನಿ ಭವಾನಿಯವರ ಹೆಸರೂ ಕೇಳಿಬಂದಿದ್ದು, ಅವರನ್ನು ಸಹ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆನ್ನುವ ಊಹಾಪೋಹಗಳು ಓಡಾಡುತ್ತಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page