Friday, June 13, 2025

ಸತ್ಯ | ನ್ಯಾಯ |ಧರ್ಮ

ಇದ್ದಕ್ಕಿದ್ದಂತೆ ಮೋದಿಗೆ ಜಾತಿ ಜನಗಣತಿ ಏಕೆ ಬೇಕಾಯ್ತು?

ಅಲ್ಪಾವಧಿಯ ಚುನಾವಣಾ ನಿರೀಕ್ಷೆಗಳನ್ನು ಮೀರಿ, ಜಾತಿ ಜನಗಣತಿ ನಡೆಸುವ ನಿರ್ಧಾರವು ಭಾರತೀಯ ರಾಜಕೀಯ ಮತ್ತು ಸಮಾಜದ ಮೇಲೆ ರಚನಾತ್ಮಕ ಪರಿಣಾಮ ಬೀರುತ್ತದೆ - ಕ್ರಿಸ್ಟೋಫ್ ಜಾಫ್ರೆಲಾಟ್ 

ಏಪ್ರಿಲ್ 30 ರಂದು ಪ್ರಧಾನಿ ನರೇಂದ್ರ ಮೋದಿ ಸಂಪುಟದ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ (CCPA) ಮುಂಬರುವ ಜನಗಣತಿಯ ಭಾಗವಾಗಿ ಜಾತಿ ಗಣತಿಯನ್ನುಮಾಡುವುದಾಗಿ ನಿರ್ಧರಿಸಿತು. ಈ ನಿರ್ಧಾರವು ಜಾತಿ ಗಣತಿಯು ಹಿಂದೂಗಳನ್ನು ವಿಭಜಿಸುತ್ತದೆ ಎಂದು ಪ್ರತಿಪಾದಿಸುವ ಸಂಘ ಪರಿವಾರದ ಚಿಂತನೆಗೆ ವಿರುದ್ಧವಾಗಿದೆ.

2023 ರ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷವು ಜಯಗಳಿಸಿದ ನಂತರ, ಈ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ನಡೆಸಿದ ಜಾತಿ ಜನಗಣತಿ ಅಭಿಯಾನವನ್ನು ಪರೋಕ್ಷವಾಗಿ ಉಲ್ಲೇಖಿಸುತ್ತಾ ಮೋದಿ ಹೀಗೆ ಹೇಳಿದ್ದರು: ‘ಚುನಾವಣೆಯ ಸಮಯದಲ್ಲಿ ಜನರು ಜಾತಿಯ ಆಧಾರದ ಮೇಲೆ ದೇಶವನ್ನು ವಿಭಜಿಸಲು ಪ್ರಯತ್ನಿಸಿದರು. ನನಗೆ, ಕೇವಲ ನಾಲ್ಕು ಜಾತಿಗಳಿವೆ: ಮಹಿಳೆಯರು, ಯುವಕರು, ರೈತರು ಮತ್ತು ಬಡವರು.’ ಈ ಹೇಳಿಕೆ ನೀಡುವ ಎರಡು ವರ್ಷಗಳ ಮೊದಲು, ಲೋಕಸಭೆಗೆ ನೀಡಿದ ಉತ್ತರದಲ್ಲಿ, ಮೋದಿ ಸರ್ಕಾರವು ಭಾರತ ಸರ್ಕಾರವು ಪರಿಶಿಷ್ಟ ಜಾತಿಗಳನ್ನು ಮೀರಿ ಜಾತಿವಾರು ಡೇಟಾವನ್ನು ಲೆಕ್ಕಹಾಕದಿರಲು  ನಿರ್ಧರಿಸಿದೆ ಎಂದು ಹೇಳಲಾಗಿತ್ತು.

ಮೋದಿ ಯು-ಟರ್ನ್!

ನಾವು ಗಮನದಲ್ಲಿ ಇಟ್ಟುಕೊಳ್ಳಬೇಕಾದ ಪ್ರಮುಖ ಅಂಶವೆಂದರೆ, ಬಿಹಾರದಲ್ಲಿ ನಡೆಯಲಿರುವ ಚುನಾವಣೆಗಳು. ಈ ರಾಜ್ಯದಲ್ಲಿ, ವಸಾಹತುಶಾಹಿ ಕಾಲದಿಂದಲೂ ಜಾತಿಯು ಚುನಾವಣಾ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸಿದೆ. ನಿತೀಶ್ ಕುಮಾರ್ ಸರ್ಕಾರ 2022 ರಲ್ಲಿ ಜಾತಿ ಸಮೀಕ್ಷೆಯನ್ನು ನಡೆಸಿತು . ಸಂಸತ್ತಿನಲ್ಲಿ ಬಿಜೆಪಿಗೆ ಪ್ರಮುಖ ಬೆಂಬಲವಾಗಿ ನಿಂತಿರುವ ನಿತೀಶ್ ಅವರ ಪಕ್ಷವಾದ ಜನತಾದಳ (ಯುನೈಟೆಡ್), ಮೋದಿ ಸರ್ಕಾರದ ಜಾತಿ ಜನಗಣತಿ ನಿರ್ಧಾರವನ್ನು (ಮತ್ತು ಕೇವಲ ಸಮೀಕ್ಷೆಯಲ್ಲ) ಬೆಂಬಲಿಸದೆ ಇದ್ದರೆ ಅಥವಾ ವಿರೋಧಿಸಿದರೆ, ತನ್ನನ್ನು ತಾನೇ ವಿರೋಧಿಸಿದಂತಾಗುತ್ತದೆ. ಮೋದಿ ಸರ್ಕಾರ ಜಾತಿ ಜನಗಣತಿಯನ್ನು ಅನುಮೋದಿಸದಿದ್ದರೆ, ಮುಂಬರುವ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್-ರಾಷ್ಟ್ರೀಯ ಜನತಾದಳ ಮೈತ್ರಿ ಬಹುಶಃ ಆ ವಿಷಯವನ್ನು ಬಹಳ ಪರಿಣಾಮಕಾರಿಯಾಗಿ ಬಳಸುತ್ತಿತ್ತು. ಪ್ರಾಸಂಗಿಕವಾಗಿ, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸೇರಿದಂತೆ ಬಿಜೆಪಿ ನಾಯಕರು ಈಗ ಜಾತಿ ಜನಗಣತಿಯನ್ನು ಅನುಮೋದಿಸಿರುವುದು ಮೋದಿಯವರ ಅದ್ಭುತ ನಡೆ ಎಂದು ಹೊಗಳುತ್ತಿದ್ದಾರೆ. ಅಲ್ಲದೇ ಇವರು, ಸ್ವಾತಂತ್ರ್ಯದ ನಂತರ ಯಾವುದೇ ಜನಗಣತಿಯಲ್ಲಿ ಕಾಂಗ್ರೆಸ್ ನೇತೃತ್ವದ ಯಾವುದೇ ಸರ್ಕಾರ ಜಾತಿಯನ್ನು ಎಣಿಸಿಲ್ಲ ಎಂದು ವಾದಿಸುತ್ತಿದ್ದಾರೆ. 2011 ರ ಜನಗಣತಿಯಲ್ಲಿ ಜಾತಿಯನ್ನು ದಾಖಲಿಸಲಾಗಿದೆ, ಆದರೆ ಮೋದಿ ಸರ್ಕಾರ ಆ ಡೇಟಾವನ್ನು ಸಾರ್ವಜನಿಕರ ಮುಂದೆ ಇಟ್ಟಿಲ್ಲ ಎಂಬ ವಿಚಾರವನ್ನು ಅವರು ಮುಚ್ಚಿಹಾಕುತ್ತಿದ್ದಾರೆ.

ಬಿಹಾರ ಚುನಾವಣೆ ಮತ್ತು ಸಾಮಾನ್ಯವಾಗಿ ಹೇಳುವುದಾದರೆ, ಸಾಮಾಜಿಕ ನ್ಯಾಯ ಆಧಾರಿತ ಜಾತಿ ಜನಗಣತಿಯ ಹೆಸರಿನಲ್ಲಿ ರಾಹುಲ್ ಗಾಂಧಿ ಹೇರಿದ ಒತ್ತಡದ ನಂತರ ಯೂಟರ್ನ್‌ ಹೊಡೆದ ಮೋದಿ ಸರ್ಕಾರ ವಿರೋಧ ಪಕ್ಷದ ಒಂದು ಆಶಯವನ್ನು ಕಸಿದುಕೊಳ್ಳುವ ಉದ್ದೇಶದಿಂದ ಜಾತಿ ಜನಗಣತಿಯ ನಿರ್ಧಾರವನ್ನು ತೆಗೆದುಕೊಂಡಿದೆ. ಮೋದಿ ಈ ವಿಚಾರದಲ್ಲಿ ಉಲ್ಟಾ ಹೊಡೆದದ್ದಕ್ಕೆ ಇರುವ ಕಾರಣಗಳನ್ನು ನೋಡಬೇಕು.

ಮೋದಿ ಮತ್ತು ಮಧ್ಯಮ ವರ್ಗದ ನಡುವೆ ಬಿಗಿಗೊಳ್ಳುತ್ತಿರುವ ಸಂಬಂಧವು ಅವುಗಳಲ್ಲಿ ಒಂದು. 1990 ರ ದಶಕದಿಂದ ಮಂಡಲ್ ವರದಿಯ ಅನುಷ್ಠಾನಕ್ಕೆ ಪ್ರತಿಕ್ರಿಯೆಯಾಗಿ ‘ಮೇಲ್’ ಜಾತಿ, ಮಧ್ಯಮ ವರ್ಗದ ಮತದಾರರು ಬಿಜೆಪಿಯತ್ತ ಮುಖ ಮಾಡಿದರು, ಏಕೆಂದರೆ ಅವರು ಬಿಜೆಪಿ ಸರ್ಕಾರ ಬಂದರೆ ಜಾತಿ ಆಧಾರಿತ ಮೀಸಲಾತಿಗಳನ್ನು ದುರ್ಬಲಗೊಳ್ಳುತ್ತದೆ (ಅಥವಾ ಇನ್ನೂ ಹೆಚ್ಚಿನದನ್ನು) ಅವರು ನಿರೀಕ್ಷಿಸಿದ್ದರು. ಅವರು ಹೇಳಿದ್ದು ಸರಿ: ಮೋದಿ ಸರ್ಕಾರವು ಸಾರ್ವಜನಿಕ ವಲಯವನ್ನು ತುಂಬಾ ಕುಗ್ಗಿಸಿದೆ, ಕೋಟಾದ ಅಡಿಯಲ್ಲಿ ಉದ್ಯೋಗಗಳು ಮೀಸಲಾತಿಗೆ ಅನುಗುಣವಾಗಿ ಕಡಿಮೆಯಾಗಿದೆ. ಬಿಜೆಪಿ ‘ಮೇಲ್’ ಜಾತಿಗಳಿಗೆ 10% ಕೋಟಾವನ್ನು ನೀಡಿತು ( ಆರ್ಥಿಕ ಪರ-ದುರ್ಬಲ ವರ್ಗದ ಸಕಾರಾತ್ಮಕ ತಾರತಮ್ಯದ ನೆಪದಲ್ಲಿ ). ಇದಲ್ಲದೆ, ಉನ್ನತ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗದ ಪ್ರಾತಿನಿಧ್ಯವು ನಿಗದಿಪಡಿಸಿದ ಕೋಟಾಗಳಿಗಿಂತ ಕಡಿಮೆಯಾಗಿದೆ.  

ಇದರರ್ಥ, ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಮಧ್ಯಮ ವರ್ಗದವರಿಗೆ ಕೋಟಾ ಪ್ರಯೋಜನಗಳು ಒಟ್ಟಾರೆಯಾಗಿ ಕಡಿಮೆಯಾಗಿವೆ, ಇದು ಈ ಗುಂಪಿನ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಮೋದಿ ಅವರ 2014 ರ ಧ್ಯೇಯವಾಕ್ಯಕ್ಕೆ – ನವ-ಮಧ್ಯಮ ವರ್ಗದ ಸೃಷ್ಟಿಯನ್ನು ಸಂಭ್ರಮಿಸುವುದಕ್ಕೆ ( celebrating the making of a neo-middle class which was supposed to make the middle class larger and larger) ವಿರುದ್ಧವಾಗಿ  ಈ ವರ್ಗವು ಕುಗ್ಗುತ್ತಿದೆ. ಶ್ರೀಮಂತ 10% ಜನರು ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತಿದ್ದರೆ, ಅವರಿಗಿಂತ ಕೆಳಗಿರುವವರಿಗೆ ಏನೂ ಇಲ್ಲ.

2024 ರಲ್ಲಿ ಪ್ರಕಟವಾದ ವರ್ಲ್ಡ್‌ ಇನ್‌ಇಕ್ವಾಲಿಟಿ ಲ್ಯಾಬ್ ವರದಿಯ ಪ್ರಕಾರ, 1947 ರಲ್ಲಿ ಒಟ್ಟು ಆದಾಯದ 37% ರಿಂದ 1982 ರಲ್ಲಿ 30% ಕ್ಕೆ ಇಳಿದ ನಂತರ, 10% ಅತ್ಯಂತ ಶ್ರೀಮಂತರ ರಾಷ್ಟ್ರೀಯ ಆದಾಯದ ಪಾಲು (ಅದರ ಅತ್ಯಂತ ಕಡಿಮೆ ಹಂತ) 1990 ರಲ್ಲಿ 33.5% ಕ್ಕೆ ಏರಿತು ಮತ್ತು ನಂತರ 2022-23 ರಲ್ಲಿ 57.7% ಕ್ಕೆ ಏರಿತು. ಇತರ ಸೂಚಕಗಳು ಅದೇ ತೀರ್ಮಾನಗಳನ್ನು ನೀಡುತ್ತವೆ. ಆದಾಯದ ಬಳಕೆಯ ವಿಚಾರದಲ್ಲೂ ಇದೇ ಪರಿಸ್ಥಿತಿ. ನಗರವಾಸಿಗಳಲ್ಲಿ ಶೇ. 50 ರಷ್ಟು ಬಡವರು ತಿಂಗಳಿಗೆ ಸರಾಸರಿ 5000 ರೂ. ಗಿಂತ ಕಡಿಮೆ ಖರ್ಚು ಮಾಡುತ್ತಾರೆ, ಶೇ. 5 ರಷ್ಟು ಶ್ರೀಮಂತರು 20,824 ರೂ., ಮುಂದಿನ ಶೇ. 5 ರಷ್ಟು ಜನ 12,399 ರೂ., ಶೇ. 10 ರಷ್ಟು ಜನ 9,582 ರೂ. ಮತ್ತು ಉಳಿದ ಶೇ. 50 ರಿಂದ ಶೇ. 20 ರಷ್ಟು ಜನರು(ಭಾರತದ ಬೇರೆಡೆ ಕೆಲವೊಮ್ಮೆ ಇವರನ್ನು ‘ಮಧ್ಯಮ ವರ್ಗ’ ಎಂದು ಕರೆಯಲಾಗುತ್ತದೆ) ತಿಂಗಳಿಗೆ 5,662 ರಿಂದ ಶೇ. 7,673 ರೂ. ವರೆಗೆ ಖರ್ಚುಮಾಡುತ್ತಾರೆ.

ಆದ್ದರಿಂದ, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷ ಆರ್‌ಸಿ ಭಾರ್ಗವ ಅವರ ಹೇಳಿಕೆಯಂತೆ, ಭಾರತೀಯ ಕುಟುಂಬಗಳಲ್ಲಿ ಕೇವಲ 12% ಮಾತ್ರ ಕಾರುಗಳನ್ನು ಖರೀದಿಸಲು ಶಕ್ತರು. ಈ ಭಾಗ್ಯವು ನವ-ಮಧ್ಯಮ ವರ್ಗದವರಿಗೆ ಬರಲು ಆಶಿಸಿದ ಎಲ್ಲರಿಗೂ ನಿರಾಶೆಯಾಗಿದೆ. ಈಗ, ಅವರಲ್ಲಿ ಅನೇಕರು ‘ಕೆಳ’ ಜಾತಿ ಸಮುದಾಯಗಳಿಂದ ಬಂದವರು ಮತ್ತು ಇವರು ಜಾತಿ ರಾಜಕೀಯವು ತಮಗೆ ಲಾಭ ತರಬಹುದು ಎಂದು ನಂಬಬಹುದು.  

ಇದಕ್ಕೆ ವ್ಯತಿರಿಕ್ತವಾಗಿ, ಜಾತಿ ರಾಜಕೀಯ ‘ಮೇಲ್ವರ್ಗ’ದ ಮಧ್ಯಮ ವರ್ಗವನ್ನು ಕೆರಳಿಸಬಹುದು, ಅವರು ಹಿಂದುತ್ವ ಸೇರಿದಂತೆ ಮೋದಿಯ ಇತರ ರಾಜಕೀಯದ ನಡೆಗಳನ್ನು ಮೆಚ್ಚುತ್ತಾರೆ. ಅವರು ಬೇರೆ ಯಾರನ್ನು ಬೆಂಬಲಿಸಬಹುದು? ಅವರು ಎಷ್ಟು ಶೇಕಡಾ ಮತದಾರರನ್ನು ಪ್ರತಿನಿಧಿಸುತ್ತಾರೆ?

ಇದು ಮೋದಿಯವರ ಯೂಟರ್ನ್ ಗೆ ಎರಡನೇ ವಿವರಣೆಯನ್ನು ನೀಡುತ್ತದೆ: ಪ್ಲೆಬಿಯನ್ ಮತದಾರರ ಮೇಲೆ ಅವರ ಹೆಚ್ಚುತ್ತಿರುವ ಅವಲಂಬನೆ. CSDS-ಲೋಕ್ನಿಟಿ ಪ್ರಕಾರ, ಬಿಜೆಪಿಯನ್ನು ಆಯ್ಕೆ ಮಾಡಿದ ಬಡ ಮತದಾರರಲ್ಲಿ 2009 ರಲ್ಲಿ 16% ರಿಂದ 2014 ರಲ್ಲಿ 24%, 2019 ರಲ್ಲಿ 36% ಮತ್ತು 2024 ರಲ್ಲಿ 37% ಕ್ಕೆ ಏರಿಕೆಯಾಗಿದೆ. ಪರಿಣಾಮವಾಗಿ, ಬಿಜೆಪಿ ಮತದಾರರೊಳಗಿನ ಎರಡು ತೀವ್ರ ಗುಂಪುಗಳ ನಡುವಿನ ಅಂತರವು ಕೇವಲ ನಾಲ್ಕು ಶೇಕಡಾವಾರು ಅಂಕಗಳಿಗೆ ಇಳಿದಿದೆ. 35% ಮಧ್ಯಮ ವರ್ಗದವರಿಗೆ ವಿರುದ್ಧವಾಗಿ 41% ಶ್ರೀಮಂತರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಬಹುಸಂಖ್ಯಾತ ಬಡವರು ಮೋದಿಯ ಹಿಂದೆ ಇರುವಾಗ, ಮೋದಿ ಯಾಕೆ ಈ  ‘ಮೇಲ್ವರ್ಗ’ ಜಾತಿಯ ಮಧ್ಯಮ ವರ್ಗದ ಅಗತ್ಯಗಳನ್ನು ಪೂರೈಸಬೇಕು ? 

ಮೋದಿ ತಮ್ಮ ‘ಘನತೆಯ ರಾಜಕೀಯ’ವನ್ನು ಪ್ರಚಾರ ಮಾಡಿ ಬಡವರನ್ನು ಪರಿಣಾಮಕಾರಿಯಾಗಿ ಆಕರ್ಷಿಸಿದ್ದಾರೆ. ಇದಕ್ಕಾಗಿ ಅವರ ಸಾವಿರಾರು ಭಾಷಣಗಳಲ್ಲಿ ಮತ್ತು ವಿಶೇಷವಾಗಿ ಮಾನ್ ಕಿ ಬಾತ್ ಕಾರ್ಯಕ್ರಮದಲ್ಲಿ ತಮ್ಮದು ಘನತೆಯ ರಾಜಕಾರಣ ಎಂಬುದನ್ನು ಮತ್ತೆ ಮತ್ತೆ ಬಡವರ ಮುಂದೆ ಇಟ್ಟಿದ್ದಾರೆ. ಅವರು ಸಮಾಜದಲ್ಲಿ ಪ್ಲೆಬಿಯನ್ನರ, ಹಾಗೆಯೇ ಕಷ್ಟಪಟ್ಟು ಕೆಲಸ ಮಾಡುವವರ ಪ್ರಮುಖ ಪಾತ್ರದ ಬಗ್ಗೆ ಒತ್ತಿ ಹೇಳಿದ್ದಾರೆ. ಆದರೆ ಬಡವರಲ್ಲಿ ಅವರ ಬಗ್ಗೆ ಇರುವ ಜನಪ್ರಿಯತೆಯು ಪ್ರಧಾನ ಮಂತ್ರಿ ಆವಾಸ್ ಯೋಜನೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಥವಾ ಪ್ರಧಾನ ಮಂತ್ರಿ ಜನ ಧನ ಯೋಜನೆ ಮುಂತಾದ ಹಲವಾರು ಯೋಜನೆಗಳ ‘ಕಲ್ಯಾಣವಾದಿ ಜನಪ್ರಿಯತೆ’ಯಿಂದ ಬಂದಿದೆ.

CSDS ಸಮೀಕ್ಷೆಗಳು ಈ ಕಾರ್ಯಕ್ರಮಗಳಿಂದ ಪ್ರಯೋಜನ ಪಡೆಯುವ ಬಡವರು ಬಿಜೆಪಿಗೆ ಮತ ಹಾಕದವರಿಗಿಂತ ಹೆಚ್ಚು ಮತ ಹಾಕುತ್ತಾರೆ ಎಂದು ತೋರಿಸುತ್ತವೆ. ಈ ಪರಸ್ಪರ ಸಂಬಂಧವು ಪ್ರಸ್ತುತ ಆರ್ಥಿಕ ಕುಸಿತದ ಸಂದರ್ಭದಲ್ಲಿ ಬಡವರಲ್ಲಿ ಮೋದಿ ಮತ್ತು ಅವರ ಕಲ್ಯಾಣ ಕಾರ್ಯಕ್ರಮಗಳ ಅಗತ್ಯವಿದೆ ಎಂಬ ಭಾವನೆ ಇರುವುದರಿಂದ ಅವರ ಬೆಂಬಲ ನೆಲೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸೂಚಿಸುತ್ತದೆ. ವಾಸ್ತವವಾಗಿ, ಸಂಪೂರ್ಣವಾಗಿ ಅಧಿಕಾರ ಕೇಂದ್ರಿತ ಆಡಳಿತಗಾರನು ಜನಸಾಮಾನ್ಯರಲ್ಲಿರುವ ಬಡತನದ ಬಗ್ಗೆ ಚಿಂತಿಸುವುದಿಲ್ಲ, ಈ ಹೊಸ clientelist logic ಸಂದರ್ಭದಲ್ಲಿ ಅವರು ಇವನ ಮೇಲೆ ಅವಲಂಬಿತರಾಗಿರುತ್ತಾರೆ.

ಜಾತಿಗೂ ಇದೇ ರೀತಿಯ ತಾರ್ಕಿಕ ಮಾರ್ಗ ಅನ್ವಯಿಸಬಹುದು. ಬಿಜೆಪಿಗೆ ಬೆಂಬಲ ನೀಡುವ ವಿಷಯಕ್ಕೆ ಬಂದಾಗ ಹಿಂದೂ ಮೇಲ್ಜಾತಿಗಳು ಮತ್ತು ಹಿಂದೂ ಕೆಳ OBC ಗಳ ನಡುವಿನ ವ್ಯತ್ಯಾಸವು ಈಗಾಗಲೇ ಕಡಿಮೆಯಾಗಿದೆ: 2024 ರಲ್ಲಿ ಪಕ್ಷಕ್ಕೆ ಮತ ಚಲಾಯಿಸಿದವರಲ್ಲಿ 53% ಮತ್ತು ನಂತರದವರಲ್ಲಿ 49% ಆಗಿದೆ. ಹಿಂದೂ ಬಹುಸಂಖ್ಯಾತತೆಯ ಪ್ರಭಾವವು ಮೊದಲು ಈ ಗಮನಾರ್ಹ ಒಮ್ಮುಖವನ್ನು ವಿವರಿಸಬಹುದು. 1990 ರ ದಶಕದಿಂದ, ರಾಮ ಜನ್ಮಭೂಮಿ ಚಳುವಳಿಯೊಂದಿಗೆ, ಸಂಘ ಪರಿವಾರವು ಜಾತಿ ಗುರುತುಗಳನ್ನು ಇಲ್ಲವಾಗಿಸಲು ಕೇಸರಿ ಅಲೆಯನ್ನು ಉತ್ತೇಜಿಸಲಾಯಿತು. ಈ ತಂತ್ರವು ಮುಸ್ಲಿಮರ ನಿರಂತರ ಟೀಕೆಯ ಮೇಲೆ ನಿಂತಿದೆ, ಜಾತಿ ರಾಜಕೀಯದ ಬದಲು ಮತೀಯ ಮಾರ್ಗಗಳಲ್ಲಿ ಸಮಾಜವನ್ನು ಧ್ರುವೀಕರಿಸುವ ಗುರಿ. 2024 ರ ಚುನಾವಣಾ ಪ್ರಚಾರದ ಸಮಯದಲ್ಲಿ CSDS ನಡೆಸಿದ ಸಮೀಕ್ಷೆಯು ಈ ತಂತ್ರವು ಫಲ ನೀಡಿದೆ ಎಂದು ತೋರಿಸುತ್ತದೆ, ಏಕೆಂದರೆ ಮುಸ್ಲಿಂ ವಿರೋಧಿ ಪೂರ್ವಾಗ್ರಹವು ‘ಮೇಲ್ಜಾತಿಯ ಹಿಂದೂಗಳಂತೆ’ ಕೆಳಜಾತಿಯ ಹಿಂದೂಗಳಲ್ಲಿ ಪ್ರಚಲಿತವಾಗಿದೆ. ಉದಾಹರಣೆಗೆ, ಹಿಂದೂಗಳಲ್ಲಿ ಶೇ. 27 ರಷ್ಟು ಜನರು ಮುಸ್ಲಿಮರು ಬೇರೆಯವರಂತೆ ‘ವಿಶ್ವಾಸಾರ್ಹರಲ್ಲ’ ಎಂದು ‘ಸಂಪೂರ್ಣವಾಗಿ’ ಅಥವಾ ‘ಸ್ವಲ್ಪ ಮಟ್ಟಿಗೆ’ ಒಪ್ಪಿಕೊಂಡರೂ, ಅವರಲ್ಲಿ ಶೇ. 28.7 ರಷ್ಟು ಜನ ದಲಿತರು ಮುಸ್ಲಿಮರ ಬಗ್ಗೆ ಅತ್ಯಂತ ನಕಾರಾತ್ಮಕ ದೃಷ್ಟಿಕೋನಗಳನ್ನು ಬೆಳೆಸಿಕೊಂಡಿರುವುದು ಕಂಡು ಬಂದಿತ್ತು. 

‘ಕೆಳವರ್ಗದ’ ಹಿಂದೂಗಳನ್ನು ಈಗಾಗಲೇ ಗೆದ್ದಿರುವ ಬಿಜೆಪಿ ಜಾತಿ ಜನಗಣತಿ ಕಾರ್ಡ್ ಬಳಸಿ ಈ ಲಾಭಗಳನ್ನು ಕ್ರೋಢೀಕರಿಸಬಹುದು. 

ಮೊದಲನೆಯದಾಗಿ, ಬಿಜೆಪಿಯಲ್ಲಿ ‘ಮೇಲ್ವರ್ಗ’ದವರ ಪ್ರಾಬಲ್ಯ ಇನ್ನೂ ಹೆಚ್ಚಾಗಿದೆ. ಇದು ಪಕ್ಷದ ಕಾರ್ಯಕರ್ತರ ಸೋಷಿಯಾಲಜಿಯಿಂದ ಸ್ಪಷ್ಟವಾಗಿದೆ, ಅವರು ಹೆಚ್ಚಾಗಿ ಆರ್‌ಎಸ್‌ಎಸ್‌ ಹಿನ್ನಲೆಯಿಂದ ಬಂದವರು. ಅದರ ಸಂಸದರ ಪ್ರೊಫೈಲ್‌ನಿಂದಲೂ ಇದು ಸ್ಪಷ್ಟವಾಗಿದೆ. ಜರ್ನಲ್ ಆಫ್ ಇಂಡಿಯನ್ ಪಾಲಿಟಿಕ್ಸ್ ಅಂಡ್ ಪಾಲಿಸಿಯಲ್ಲಿ ಪ್ರಕಟವಾಗಲಿರುವ ಮುಂಬರುವ ಗಿಲ್ಲೆಸ್ ವರ್ನಿಯರ್ಸ್ ಅವರ ಲೇಖನದಲ್ಲಿ ತೋರಿಸಿರುವಂತೆ, 2024 ರಲ್ಲಿ ಎನ್‌ಡಿಎ ಅಭ್ಯರ್ಥಿಗಳಲ್ಲಿ ಶೇ. 31 ಕ್ಕಿಂತ ಹೆಚ್ಚು ಮತ್ತು ಭಾರತ ಮೈತ್ರಿಕೂಟದ ಅಭ್ಯರ್ಥಿಗಳಲ್ಲಿ ಶೇ. 19 ರಷ್ಟು ಅಭ್ಯರ್ಥಿಗಳು ‘ಮೇಲ್ವರ್ಗ’ದವರು. ಹೀಗಿರುವಾಗ, ‘ಕೆಳವರ್ಗ’ ಪರವಾದ ಬದಲಾವಣೆಗೆ ಈ ನಾಯಕರು ಹೇಗೆ ಪ್ರತಿಕ್ರಿಯಿಸುತ್ತಾರೆ, ವಿಶೇಷವಾಗಿ ಪಕ್ಷವು ಹೆಚ್ಚಿನ ಸಂಖ್ಯೆಯಲ್ಲಿ ‘ಕೆಳವರ್ಗ’ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡುವ ವಿಚಾರದಲ್ಲಿ?

ಎರಡನೆಯದಾಗಿ, 2024 ರಲ್ಲಿ ಬಿಜೆಪಿ ಅನೇಕ ‘ಕೆಳ’ ಒಬಿಸಿಗಳನ್ನು ತನ್ನೆಡೆಗೆ ಸೆಳೆದುಕೊಂಡಿತ್ತು, ಏಕೆಂದರೆ ಈ ಜಾತಿ ಗುಂಪುಗಳನ್ನು ವಿರೋಧ ಪಕ್ಷಗಳು ನಿರ್ಲಕ್ಷಿಸಿದ್ದವು. ಅವು ‘ಮೇಲ್ವರ್ಗ’ ಒಬಿಸಿಗಳ ಮೇಲೆ ಕೇಂದ್ರೀಕರಿಸಿದವು (ಮತ್ತು ಪರಿಣಾಮವಾಗಿ, ಈ ಗುಂಪುಗಳು 2024 ರಲ್ಲಿ ಬಿಜೆಪಿಗೆ ತುಂಬಾ ಕಡಿಮೆ ಮತ ಹಾಕಿದವು, 39% ರಷ್ಟು). ಇಲ್ಲಿ ಕುತೂಹಲಕಾರಿಯಾದ ಅಪವಾದವೊಂದಿದೆ: ಯುಪಿಯಲ್ಲಿ, ಸಮಾಜವಾದಿ ಪಕ್ಷವು ‘ಕೆಳವರ್ಗ’ ಒಬಿಸಿಗಳಿಗೆ ಹೆಚ್ಚಿನ ಟಿಕೆಟ್ ನೀಡುವ ಮೂಲಕ ಅವರನ್ನು ಓಲೈಸಲು ಸ್ವಲ್ಪ ಸಂಖ್ಯೆಯ ಯಾದವರ (‘ಮೇಲ್ವರ್ಗ’ ಒಬಿಸಿಗಳು) ನಾಮನಿರ್ದೇಶನ ಮಾಡಿತು – ಆ ತಂತ್ರ ಕೆಲಸ ಮಾಡಿತು, ಮುಖ್ಯವಾಗಿ ಯಾದವರು ಎಸ್‌ಪಿಗೆ ಮತ ಹಾಕಿದರು. ಆದರೆ ಪಕ್ಷದ ‘ಕೆಳವರ್ಗ’ ಒಬಿಸಿ ಅಭ್ಯರ್ಥಿಗಳು ಬದಲಾವಣೆಗಾಗಿ, ತಮ್ಮ ಸಮುದಾಯದ ಅಭ್ಯರ್ಥಿಗಳನ್ನು ಬೆಂಬಲಿಸಲು ಅವರೊಂದಿಗೆ ಸೇರಿಕೊಂಡರು.

ಬಿಹಾರದಲ್ಲಿ ಈ ಪ್ರಯೋಗವನ್ನು ಪುನರಾವರ್ತಿಸಬಹುದೇ? ಚೆಂಡು ವಿರೋಧ ಪಕ್ಷದ ಅಂಗಳದಲ್ಲಿದೆ: ಆರ್‌ಜೆಡಿ ಮತ್ತು ಕಾಂಗ್ರೆಸ್ ಎಸ್‌ಪಿಯ ತಂತ್ರವನ್ನು ಅನುಕರಿಸಿದರೆ, ಮೋದಿ ಆಡಲು ಪ್ರಯತ್ನಿಸುತ್ತಿರುವ ಜಾತಿ ಜನಗಣತಿ ಕಾರ್ಡ್ ಅನ್ನು ಬಿಜೆಪಿ-ಜೆಡಿ (ಯು) ಒಕ್ಕೂಟವು ಲಾಭ ಮಾಡಿಕೊಳ್ಳುವುದನ್ನು ತಡೆಯಬಹುದು.

ಈ ಅಲ್ಪಾವಧಿಯ ನಿರೀಕ್ಷೆಯನ್ನು ಮೀರಿ, ಜಾತಿ ಜನಗಣತಿ ನಡೆಸುವ ನಿರ್ಧಾರವು ಭಾರತೀಯ ರಾಜಕೀಯ ಮತ್ತು ಸಮಾಜದ ಮೇಲೆ ರಚನಾತ್ಮಕ ಪರಿಣಾಮ ಬೀರುತ್ತದೆ. ಜಾತಿ ಜನಗಣತಿಯು ಸ್ವತಃ ಒಂದು ಅಂತ್ಯವಲ್ಲ. ಇದು ಅಧಿಕಾರಶಾಹಿ, ಸಾರ್ವಜನಿಕ ವಲಯದ ಉದ್ಯಮಗಳು ಇತ್ಯಾದಿಗಳಲ್ಲಿ ವಿವಿಧ ಜಾತಿ ಗುಂಪುಗಳ ಕಡಿಮೆ/ಅಥವಾ ಹೆಚ್ಚಿನ ಪ್ರಾತಿನಿಧ್ಯವನ್ನು ಅಳೆಯಲು ಬಳಸಲಾಗುವ ಸಂಖ್ಯಾಶಾಸ್ತ್ರೀಯ ಸಾಧನವಾಗಿದೆ. ಇದು ಸಾಮಾಜಿಕ ನ್ಯಾಯಕ್ಕಾಗಿ ವಿವಿಧ ಗುಂಪುಗಳಿಂದ ಹೊಸ ಬೇಡಿಕೆಗಳಿಗೆ ಕಾರಣವಾಗುತ್ತದೆ. ಈ ಪ್ರಕ್ರಿಯೆಯು ಬಹುಶಃ ಮಂಡಲ್ ಸಮಯದಲ್ಲಿ ಇದ್ದ ಹಾಗೆ ಅದೇ ಪ್ರತಿರೋಧವನ್ನು ಬೆಳೆಸುತ್ತದೆ, ಇದನ್ನು ಆರ್‌ಎಸ್‌ಎಸ್‌ನ ಮಖವಾಣಿ ಆರ್ಗನೈಸರ್ ‘ಶೂದ್ರ ಕ್ರಾಂತಿ’ ಎಂದು ವಿವರಿಸಿದೆ. ಆದ್ದರಿಂದ, ಭಾರತೀಯ ರಾಜಕೀಯದ ಕೇಂದ್ರಬಿಂದುವು ಜನಾಂಗೀಯತೆ-ಮತೀಯತೆಯಿಂದ ಸಾಮಾಜಿಕ-ಆರ್ಥಿಕ ಜಾತಿ ಆಧಾರಿತ ವಿಚಾರಕ್ಕೆ ಮತ್ತೆ ಹಿಂತಿರುಗುತ್ತದೆ. ನರೇಂದ್ರ ಮೋದಿ ಈ ದೀರ್ಘಕಾಲೀನ ಪರಿಣಾಮವನ್ನು ನಿರೀಕ್ಷಿಸದೇ ಇರಬಹುದು, ಆದರೆ ಕೆಲವೊಮ್ಮೆ ಯುದ್ಧತಂತ್ರದ ಕ್ರಮಗಳು ಗಣನೀಯ ಪ್ರಮಾಣದ ಅನಿರೀಕ್ಷಿತ ಪರಿಣಾಮಗಳನ್ನು ಬೀರುತ್ತವೆ. 

ಕ್ರಿಸ್ಟೋಫ್ ಜಾಫ್ರೆಲಾಟ್ ಅವರು ಪ್ಯಾರಿಸ್‌ನ CERI-ಸೈನ್ಸಸ್ ಪೋ/CNRS ನಲ್ಲಿ ಹಿರಿಯ ಸಂಶೋಧನಾ ಸಹೋದ್ಯೋಗಿಯಾಗಿ, ಲಂಡನ್‌ನ ಕಿಂಗ್ಸ್ ಕಾಲೇಜಿನಲ್ಲಿ ಭಾರತೀಯ ರಾಜಕೀಯ ಮತ್ತು ಸಮಾಜಶಾಸ್ತ್ರದ ಪ್ರಾಧ್ಯಾಪಕರು ಮತ್ತು ಬ್ರಿಟಿಷ್ ಅಸೋಸಿಯೇಷನ್ ​​ಫಾರ್ ಸೌತ್ ಏಷ್ಯನ್ ಸ್ಟಡೀಸ್‌ನ ಅಧ್ಯಕ್ಷರು. ಇದು ದಿ ವೈರ್‌ನಲ್ಲಿ ಪ್ರಕಟವಾದ Why Does Narendra Modi Suddenly Want a Caste Census? ದ ಕನ್ನಡಾನುವಾದ

Related Articles

ಇತ್ತೀಚಿನ ಸುದ್ದಿಗಳು

You cannot copy content of this page