“..ಬೂಕರ್ ಬಂದಾಗಿನಿಂದಲೂ ಮಹಿಳೆ, ಮುಸ್ಲಿಂ ಮತ್ತು ಜಾತ್ಯತೀತ ಪರಂಪರೆಯವರು ಎಂಬ ಕಾರಣಕ್ಕೆ ಬಾನು ಮುಷ್ತಾಕರ ವಿರುದ್ಧ ಕತ್ತಿಮಸೆಯುತ್ತಲಿರುವವರ ಪರೋಕ್ಷ ಸೃಷ್ಟಿಯೇ ಈ ಚಪ್ಪಲಿ ಪ್ರಕರಣ..” ಮಾಚಯ್ಯ ಎಂ ಹಿಪ್ಪರಿಗಿಯವರ ಬರಹದಲ್ಲಿ
ಬಾನು ಮುಷ್ತಾಕರ ಚಪ್ಪಲಿ ಪ್ರಕರಣವನ್ನು ಪ್ರವೇಶಿಸುವುದಕ್ಕು ಮುನ್ನ ಪುರಾಣದ ಈ ಒಂದು ಕಥನವನ್ನು ವಿಮರ್ಶಿಸಿ ಬರೋಣ…
ನೀವೆಲ್ಲ ಕೇಳಿರುವಂತಹ ರಾಮಾಯಣದ ಪ್ರಸಂಗ. ವನವಾಸಕ್ಕೆ ಹೊರಟಿದ್ದ ರಾಮನ ಮನವೊಲಿಸಿ ವಾಪಾಸ್ ಕರೆತರುವಲ್ಲಿ ಸೋಲುವ ಭರತ, ರಾಮನ ಪಾದುಕೆಯನ್ನು ತಂದು ಸಿಂಹಾಸನದಲ್ಲಿಟ್ಟು ರಾಜ್ಯವಾಳುತ್ತಾನೆ. ಭರತನಿಗೆ ತನ್ನ ಅಣ್ಣನ ಮೇಲಿರುವ ಗೌರವ, ಪ್ರೀತಿ, ಅಭಿಮಾನ ಇಲ್ಲಿ ಅನಾವರಣವಾಗುತ್ತದೆ. ಆದರೆ ಭಾರತದ ಸಂಕೀರ್ಣ ಸಮಾಜವನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಇದೇ ಕಥೆಯನ್ನು ನಾವು ಇನ್ನೂ ಒಂದು ಆಯಾಮದಿಂದ ನೋಡಬೇಕಾಗುತ್ತದೆ. ಭರತನು, ರಾಮನ ಪಾದುಕೆಯನ್ನೇ ಯಾಕೆ ತಂದ? ರಾಮನಿಗೆ ಸೇರಿದ ಬೇರಾವುದೇ ವಸ್ತು ಅಥವಾ ವಸ್ತ್ರವನ್ನು ಯಾಕೆ ಆತ ಸಿಂಹಾಸನದ ಮೇಲಿಟ್ಟು ಆರಾಧಿಸಲಿಲ್ಲ?
ರಾಮನಿಗೆ ಸಂಬಂಧಿಸಿದ ಕನಿಷ್ಠಾತಿಕನಿಷ್ಠ ವಸ್ತುವೂ ತನ್ನ ಪಾಲಿಗೆ ಗರಿಷ್ಠವಾದುದು ಎನ್ನುವ ಸಂದೇಶದ ಮೂಲಕ, ಅಣ್ಣನ ಮೇಲೆ ಭರತ ಎಂಥಾ ಅಗಾಧ ಗೌರವ ಹೊಂದಿದ್ದ ಎಂಬುದನ್ನು ಸಾರುವುದು ಆ ರೂಪಕದ ಉದ್ದೇಶವಾಗಿತ್ತು. ಆದರೆ ನಾವಿಲ್ಲಿ ಪ್ರಶ್ನಿಸಿಕೊಳ್ಳಬೇಕಿರುವುದು, ರಾಮನ ಪಾಲಿಗೇ ಆಗಲಿ ಅಥವಾ ಬೇರಾವುದೆ ವ್ಯಕ್ತಿಯ ಪಾಲಿಗೇ ಆಗಲಿ ಅವರವರ ಚಪ್ಪಲಿಗಳು, ಬೂಟುಗಳು, ಶೂಗಳು ಯಾಕೆ ಕಟ್ಟಕಡೆಯ ಕನಿಷ್ಠಾಧ್ಯತೆಯ ವಸ್ತುಗಳ ಸ್ಥಾನ ಪಡೆದುಕೊಳ್ಳುತ್ತವೆ? ಮನೆಯೊಳಗೂ ತರದಂತಹ ತಿರಸ್ಕಾರಕ್ಕೆ ಯಾಕೆ ತುತ್ತಾಗುತ್ತವೆ? ಯಾಕೆಂದರೆ, ಕೊಚ್ಚೆ-ಕೆಸರು-ಕಲ್ಲು-ಮುಳ್ಳು ಅಂತೆಲ್ಲ ನೋಡದೆ ನಾವು ಅವುಗಳನ್ನು ಬಳಸಿರುತ್ತೆವಾದ್ದರಿಂದ ಅವು ಮಲಿನಗೊಂಡಿರುತ್ತವೆ. ಮಲಿನಕಾರಕ ವಸ್ತುಗಳನ್ನು ಮನೆಯೊಳಗೆ ತರುವುದು ಒಳಿತಲ್ಲ. ಆದರೆ ಭಾರತದಂತಹ ಜಾತೀವ್ಯವಸ್ಥೆಯ ಸಮಾಜದಲ್ಲಿ ಚಪ್ಪಲಿಗಳು ಕನಿಷ್ಠ ತಿರಸ್ಕಾರದ ವಸ್ತುಗಳಾಗಲು ಇದೊಂದೇ ಕಾರಣ ಎನ್ನಲಾಗದು. ಒಂದುವೇಳೆ, ಅದು ಮಾತ್ರವೇ ಕಾರಣವಾಗಿದ್ದರೆ, ತೊಳೆದು ಶುದ್ದಗೊಳಿಸಿದ ಚಪ್ಪಲಿಗಳನ್ನು ನಾವು ಮನೆಯೊಳಗೆ ತೆಗೆದುಕೊಂಡು ಹೋಗಲು ಅವಕಾಶವಿದೆಯೇ? ಅಥವಾ ವಿದೇಶಿಗರಂತೆ ಮನೆಯೊಳಗೆ ಉಪಯೋಗಿಸುವುದಕ್ಕೆಂದು ಪ್ರತ್ಯೇಕ ಚಪ್ಪಲಿಗಳನ್ನು ಬಳಸಲು ನಮ್ಮ ಕರ್ಮಠ ಪರಂಪರೆಯಲ್ಲಿ ಅವಕಾಶವಿತ್ತೇ? (ಈಗೀಗ ಪಾಶ್ಚಾತ್ಯರ ಅನುಕರಣೆಯಲ್ಲಿ ಕೆಲವರು ಇದನ್ನು ರೂಢಿಸಿಕೊಂಡಿರಬಹುದು)… ಅದು ಎಷ್ಟೇ ಶುದ್ಧವಿದ್ದರೂ; ಆಗತಾನೆ ದುಬಾರಿ ಬೆಲೆತೆತ್ತು ಖರೀದಿಸಿ ತಂದ ಚಪ್ಪಲಿಯೆ ಆದರೂ ಮನೆಯೊಳಗೆ ತರುವಂತಿಲ್ಲ ಎಂಬ ಬಲವಾದ ನಂಬಿಕೆಯ ನಡುವೆ ಬೆಳೆದವರು ನಾವು. ಯಾಕೆ ಹೀಗೆ? ಸ್ವಚ್ಛತೆಯ ಕಾರಣವಲ್ಲದೆ, ಸಾಮಾಜಿಕ ಆಯಾಮವನ್ನೂ ತರ್ಕಿಸುವಂತೆ ಮಾಡುತ್ತದೆ ಈ ಪ್ರಶ್ನೆ.
ವರ್ಣಾಶ್ರಮದ ಹೆಸರಿನಲ್ಲಿ ಸಮಾಜವನ್ನು ಅಡ್ಡಡ್ಡ ವಿಭಜಿಸಿ ಹಾಕಿದ ವ್ಯವಸ್ಥೆ ನಮ್ಮದು. ಹೀಗೆ ವಿಭಜಿಸಲು ಬಳಸಿಕೊಂಡದ್ದು ವಿರಾಟ್‌ಪುರುಷನ ದೇಹವನ್ನು. ನೆತ್ತಿಯಿಂದ ಬ್ರಾಹ್ಮಣರು, ತೋಳುಗಳಿಂದ ಕ್ಷತ್ರಿಯರು, ತೊಡೆಗಳಿಂದ ವೈಶ್ಯರು, ಪಾದದಿಂದ ಶೂದ್ರರು ಹುಟ್ಟಿದರು ಎಂಬ ಅತಾರ್ಕಿಕ ವಾದದ ಮೂಲಕ ಈ ಅಮಾನವೀಯ ವಿಭಜನೆಯನ್ನು ಸಮರ್ಥಿಸಿಕೊಳ್ಳಲಾಗುತ್ತೆ. ನಮ್ಮ ವ್ಯವಸ್ಥೆಯಲ್ಲಿ ಮೇಲಿನ ಮೂರು ಜನರಿಗೆ ಶೂದ್ರರ ಬಗ್ಗೆ ಎಷ್ಟು ತಿರಸ್ಕಾರವಿದೆಯೋ, ಅಷ್ಟೇ ತಿರಸ್ಕಾರ ಅವರು ಅವತರಿಸಿದ ಜಾಗ ಎನ್ನಲಾದ ಪಾದದ ಬಗ್ಗೆಯೂ ಇದೆ; ಆ ಪಾದಗಳಿಗೆ ರಕ್ಷಣೆಯಾಗಿ ಬಳಕೆಯಾಗುವ ಪಾದರಕ್ಷೆಗಳ ಬಗ್ಗೆಯೂ ಆ ತಿರಸ್ಕಾರ ವಿಸ್ತರಿಸಿಕೊಂಡಿದೆ. ಬಿಳಿ ಬಣ್ಣ ಶ್ರೇಷ್ಠ, ಕಪ್ಪು ಕನಿಷ್ಠ; ಮೇಲಿನದು ಉತ್ತಮ, ಕೆಳಗಿನದು ಅಧಮ ಎಂಬ ತರತಮಗಳನ್ನು ಪ್ರಚೋದಿಸಿದ ವರ್ಣಾಶ್ರಮ ಪರಿಕಲ್ಪನೆಯಲ್ಲಿ ಪಾದ ಮತ್ತು ಪಾದರಕ್ಷೆಗಳಿಗೆ ಕನಿಷ್ಠದ ಸ್ಥಾನ ಸಿಕ್ಕಿದುದಕ್ಕೆ ಇದು ಕೇವಲ ತಾತ್ವಿಕ ಕಾರಣವಷ್ಟೆ. ತಾನೇ ಬಳಸುವ ತನ್ನ ಪಾದರಕ್ಷೆಗಳನ್ನು ವ್ಯಕ್ತಿಯೊಬ್ಬ ಕನಿಷ್ಠ ತಿರಸ್ಕಾರದ ವಸ್ತುವಾಗಿ ಪರಿಗಣಿಸುವಂತೆ ಮಾಡಿದ ನಿಜವಾದ ಸಾಮಾಜಿಕ ಕಾರಣವೆಂದರೆ, ಅವುಗಳನ್ನು ಉತ್ಪಾದಿಸುವ ದಲಿತ ಸಮುದಾಯಗಳೊಂದಿಗೆ ಅವುಗಳನ್ನು ಸಮೀಕರಿಸಿ ನೋಡುವ ಜಾತಿವ್ಯವಸ್ಥೆ!
ಅನಾದಿ ಕಾಲದಿಂದಲೂ ಭಾರತದಲ್ಲಿ ಚಪ್ಪಲಿಯನ್ನು ತಯಾರಿಸುವ, ಹೊಲಿಯುವ ಕಾಯಕವನ್ನು ದಲಿತ ಸಮುದಾಯಗಳಿಗೆ ನಮ್ಮ ಸಮಾಜ ಮೀಲಿಟ್ಟಿದೆ. ದಲಿತರನ್ನು ತಿರಸ್ಕಾರದಿಂದ ನೋಡುವ ನಮ್ಮ ವ್ಯವಸ್ಥೆ, ದಲಿತರು ತಯಾರಿಸುವ ಪಾದರಕ್ಷೆಗಳ ಬಗ್ಗೆಯೂ ಗಾಢ ತಿರಸ್ಕಾರವನ್ನು ನಟಿಸುತ್ತಾ ಬಂದಿದೆ. ನಾವೇ ಮೆಟ್ಟುವ ನಮ್ಮ ಪಾದರಕ್ಷೆಗಳನ್ನು ಅನಿವಾರ್ಯ ಸಂದರ್ಭಗಳಲ್ಲಿ ಹಿಡಿದುಕೊಳ್ಳಲೇಬೇಕಾದ ಸಮಯ ಬಂದಾಗ ಕೈಯಲ್ಲಿ ಮುಟ್ಟದೆ ಕಡ್ಡಿಯಲ್ಲೋ, ಬಳ್ಳಿಯಲ್ಲೋ ನೇತಾಡಿಸಿಕೊಂಡು ಬರೋದನ್ನು ನೋಡುತ್ತೇವೆ; ಪಾದರಕ್ಷೆಗಳನ್ನು ಮುಟ್ಟಿದ ನಂತರ ಕೈತೊಳೆದುಕೊಳ್ಳುವುದನ್ನು ರೂಢಿಸಿಕೊಂಡಿದ್ದೇವೆ. Hygiene ನೆಪದಲ್ಲಿ ಅಲ್ಲೊಂದು ಸುಪ್ತ ಅಸ್ಪೃಶ್ಯತೆ ಛಾಯೆ ಬೆಸೆದುಕೊಂಡಿರುತ್ತದೆ.
ಹಾಗಾಗಿ ನಮ್ಮದೇ ಪಾದರಕ್ಷೆಗಳು ನಮ್ಮ ಇಡೀ ವಸ್ತುಗಳಲ್ಲಿ ಕಟ್ಟಕಡೆಯ ಆದ್ಯತೆಯ, ತಿರಸ್ಕಾರದ ವಸ್ತುಗಳಾಗುತ್ತಾ ಬಂದಿವೆ. ಅದೇ ಕಾರಣಕ್ಕೆ ರಾಮಾಯಣದಲ್ಲಿ ರಾಮನ ಶ್ರೇಷ್ಠತೆ ಮತ್ತು ಭರತನ ವಿಧೇಯತೆಗಳನ್ನು ತುಲನೆ ಮಾಡಲು ರಾಮನ ಕನಿಷ್ಟಾಧ್ಯತೆಯ ಪಾದುಕೆಗಳನ್ನೆ ಭರತ ಆರಾಧಿಸುತ್ತಾನೆ. ರಾಮನ ಮೇಲಿನ ಗೌರವ ಮತ್ತು ಭಕ್ತಿಯ ಕಾರಣಕ್ಕೆ ಭರತನಿಗೆ ಆತನ ಪಾದರಕ್ಷೆಗಳು ಆದರಣೀಯವೆನಿಸಿದವೇ ಹೊರತು, ಪಾದರಕ್ಷೆಗಳ ಒಟ್ಟಾರೆ ಪುರಸ್ಕಾರ ಮನೋಭಾವವನ್ನು ಅದು ಪ್ರತಿನಿಧಿಸುವುದಿಲ್ಲ.
ಹೀಗೆ ಜಾತಿವ್ಯವಸ್ಥೆಯ ತಿರಸ್ಕಾರದ ಪ್ರತೀಕವಾಗಿ ಮಾತ್ರವಲ್ಲದೆ, ಆ ತಿರಸ್ಕಾರದ ವಿರುದ್ಧದ ಕ್ರಾಂತಿಕಾರಿ ಪ್ರಯತ್ನಗಳಲ್ಲೂ ನಾವು ಪಾದರಕ್ಷೆಗಳನ್ನು ಸಂಕೇತವಾಗಿ ನೋಡಬಹುದು. ಬಸವಣ್ಣ ಮತ್ತು ಮಾದಾರ ಹರಳಯ್ಯ ದಂಪತಿಗಳ ಪ್ರಕರಣ ಇದಕ್ಕೊಂದು ನಿದರ್ಶನ. ಆ ದಂಪತಿ ತಮ್ಮ ಚರ್ಮದಿಂದ ಹೊಲಿದು ತರುವ ಪಾದರಕ್ಷೆಗಳ ಚೆಮ್ಮಾವುಗೆಗಳನ್ನು ಬಸವಣ್ಣನವರು ತಮ್ಮ ತಲೆಯ ಮೇಲೆ ಹೊತ್ತು ಅಸ್ಪೃಷ್ಯತೆಯ ವಿರುದ್ಧ ಪ್ರತಿಭಟನೆಯನ್ನು ದಾಖಲಿಸುತ್ತಾರೆ. ಪಾದರಕ್ಷೆಗಳನ್ನು ಜಾತಿವ್ಯವಸ್ಥೆಯ, ಅಸ್ಪೃಷ್ಯತೆಯ ತಿರಸ್ಕಾರದ ಸಂಕೇತವಾಗಿ ಬಳಸುತ್ತಿದ್ದುದರಿಂದಲೇ ಅವತ್ತು ಕ್ರಾಂತಿಜ್ಯೋತಿ ಬಸವಣ್ಣನವರು ಅವುಗಳನ್ನು ಪುರಸ್ಕಾರದ ಸಂಕೇತಗಳಾಗಿ ಪರಿವರ್ತಿಸಲು ಹಾಗೆ ಮಾಡಿದ್ದರು ಎನ್ನಬಹುದು. ಆದರೆ ಬಸವಣ್ಣನವರ ಸಮಾನತೆಯ ಕ್ರಾಂತಿಗಿಂತ, ವರ್ಣಾಶ್ರಮದ ವಿಭಜನೆಯೇ ನಮ್ಮನ್ನು ಇವತ್ತಿಗೂ ಗಾಢವಾಗಿ ಪ್ರಭಾವಿಸಿರುವುದರಿಂದ ಪಾದರಕ್ಷೆಗಳನ್ನು ತಿರಸ್ಕಾರದ ಕೀಳು ಸರಕುಗಳಾಗಿಯೇ ಪರಿಗಣಿಸುತ್ತಿದ್ದೇವೆ.
ಒಬ್ಬ ವ್ಯಕ್ತಿಯ ಘನತೆಯನ್ನು ಹೀಗಳೆಯುವ ಸಂದರ್ಭದಲ್ಲಿ ‘ಚಪ್ಪಲಿಯನ್ನು ಬಿಡುವ ಜಾಗದಲ್ಲಿ ಆತನನ್ನು ಇಟ್ಟಿದ್ದೇವೆ’ ಎಂಬ ಮಾತನ್ನು; ಇನ್ನೂ ಆಳವಾಗಿ ಅವಮಾನಿಸಬೇಕೆನಿಸಿದಾಗ ‘ಮೆಟ್ಟಿನಲ್ಲಿ ಹೊಡೆಯುತ್ತೇನೆ’ ಎಂಬ ನಿಂದನೆಯನ್ನು ಸಾಮಾನ್ಯವಾಗಿ ನಾವು ಕೇಳುತ್ತೇವೆ. ಇಂಥಾ ಮಾತುಗಳು ಪಾದರಕ್ಷೆಗಳ ಬಗೆಗಿನ ಸ್ವಚ್ಛತೆ-ಮಲಿನತೆಯ ಅಭಿಪ್ರಾಯಕ್ಕಿಂತ ಹೆಚ್ಚಾಗಿ ನಮ್ಮ ಸಮಾಜದಲ್ಲಿ ಅವುಗಳ ಬಗೆಗೆ ಹಾಸುಹೊಕ್ಕಾಗಿರುವ ಕೀಳು ಅಭಿಪ್ರಾಯವನ್ನು ಅರ್ಥ ಮಾಡಿಸುತ್ತವೆ. ಪ್ರತಿ ಅಭಿಪ್ರಾಯವೂ ಜಾತಿನಿರ್ಧರಿತ ಅಥವಾ ಜಾತಿಪ್ರಭಾವಿತವಾಗಿರುವ ಭಾರತೀಯ ಸಮಾಜದಲ್ಲಿ ಪಾದರಕ್ಷೆಗಳೆಡೆಗಿನ ಈ ಅಭಿಪ್ರಾಯದಲ್ಲಿ ಜಾತಿಪ್ರತಿನಿಧಿತ್ವವನ್ನು ನಿರಾಕರಿಸಲು ಹೇಗೆ ಸಾಧ್ಯ?
‘ಬೇಕಾದಾಗ ನಮ್ಮ ಸೇವೆಗೆ ಬಳಸಿಕೊಳ್ಳುತ್ತೇವೆ; ಬೇಡವಾದಾಗ ತಿರಸ್ಕರಿಸಿ ದೂರ ಇಡುತ್ತೇವೆ’ ಇದೇ ಮನುವಾದ ಪ್ರತಿಪಾದಿಸುವ ಜಾತಿವ್ಯವಸ್ಥೆಯ ಜೀವಾಳ. ಅಸ್ಪೃಷ್ಯರಷ್ಟೇ ಅಲ್ಲ, ಅವರು ತಯಾರಿಸುವ ಚಪ್ಪಲಿಗಳೂ ಇಂಥಹ ಅನುಕೂಲಸಿಂಧು ತಿರಸ್ಕಾರಕ್ಕೆ ತುತ್ತಾಗುತ್ತಾ ಬಂದಿವೆ. ಚಪ್ಪಲಿಗಳಡೆಗಿನ ಈ ತಿರಸ್ಕಾರಕ್ಕೆ ಸ್ವಚ್ಛತೆಯ ಕಾರಣವನ್ನು ನಾವೆಲ್ಲ ಒಪ್ಪುತ್ತಲೇ, ಅದರ ಹಿಂದೆ ಅಡಗಿರುವ ಈ ಸಾಮಾಜಿಕ ಆಯಾಮವನ್ನೂ ಅರ್ಥ ಮಾಡಿಕೊಳ್ಳಬೇಕಿದೆ. ಪ್ರತಿ ಮೌಢ್ಯಾಚಾರಣೆಗಳ ಹಿಂದೆಯೂ ಒಂದೊಂದು ವೈಜ್ಞಾನಿಕ ಸಮರ್ಥನೆಗಳನ್ನು ಹುಟ್ಟುಹಾಕಲು ಮನುವಾದಿಗಳು ಹೆಣಗಾಡುತ್ತಿರುವಾಗ, ಕೆಲವು ಅನಿಷ್ಟ ಆಚರಣೆಗಳ ಹಿಂದಿರುವ ಸಾಮಾಜಿಕ ಆಯಾಮಗಳನ್ನು ಚರ್ಚಿಸುವುದರಲ್ಲಿ ನಾವೇಕೆ ಹಿಂದೇಟು ಹಾಕಬೇಕು?
ಹಾಗಂತ hygiene ಆಯಾಮವನ್ನು ಕಡೆಗಣಿಸಿ, ಕಲುಷಿತ ಪಾದರಕ್ಷೆಗಳನ್ನು ತಲೆಮೇಲೆ ಹೊತ್ತು ಗೌರವಿಸೋಣ, ಅಥವಾ ಮನೆಯೊಳಗೆ ಕೊಂಡೊಯ್ದು ಪ್ರತಿರೋಧಿಸೋಣ ಎಂಬುದು ಈ ಬರಹದ ಉದ್ದೇಶವಲ್ಲ. ಆದರೆ ಆ hygiene ಅನ್ನು ಒಂದು ritualistic ಆಗಿ ಪರಿವರ್ತಿಸುವ; ಆ ritualistic ಆಚರಣೆಯನ್ನು ಒಂದು ದುರುದ್ದೇಶದ ಕಾರಣಕ್ಕೆ ಮೌಢ್ಯವಾಗಿ ಜನರ ಮೇಲೆ ಹೇರುವ ಹುನ್ನಾರಗಳಿಂದ ನಾವು ಸದಾ ಎಚ್ಚರವಾಗಿರಬೇಕಾಗುತ್ತದೆ. ಯಾಕೆಂದರೆ ritual ಹೆಸರಿನಲ್ಲಿ ಇಂತಹ ಮೌಢ್ಯಾಚರಣೆಗಳ ಮೂಲಕ ಕೆಲವು ಸಮಯದಾಯಗಳ ಆತ್ಮಬಲ, ಸ್ವಾಭಿಮಾನ ಕುಗ್ಗಿಸಿ, ಅವರಲ್ಲಿ ಕೀಳರಿಮೆ ಹುಟ್ಟಿಸಿ, ಅವರನ್ನು ಶತಶತಮಾನಗಳಿಂದ ಶೋಷಣೆಗೆ ಒಳಪಡಿಸುತ್ತಾ ಬಂದ ಪರಂಪರೆ ನಮ್ಮದು.
ಈ ಹಿನ್ನೆಲೆಯಲ್ಲಿ ನೋಡಿದಾಗ, ಅಂಬೇಡ್ಕರರ ಚಿತ್ರಪಟಕ್ಕೆ ಚಪ್ಪಲಿಯನ್ನು ಕಳಚಿಟ್ಟು ಪುಷ್ಪನಮನ ಸಲ್ಲಿಸಬೇಕಿತ್ತು ಎನ್ನುವುದು emotional issue ಅಥವಾ ಗೌರವ ನೀಡುವಿಕೆಯ ಸಂಗತಿಯಲ್ಲ; ಅದು, ritualistic tradition, ಆರಾಧನೆ-ಭಕ್ತಿಯ ಭಾವ. ಈ ಯಾವುದನ್ನೂ ಅಂಬೇಡ್ಕರ್ ಒಪ್ಪಿದವರಲ್ಲ. Traditional ritualಗಳನ್ನು ಅವರು ಅಧ್ಯಾತ್ಮದ ಕ್ರಿಯೆಗಳನ್ನಾಗಿ ನೋಡಿದವರಲ್ಲ, ಬದಲಿಗೆ, ಸಾಮಾಜಿಕ ನಿಯಂತ್ರಣವನ್ನು ಸಾಧಿಸುವ ತಂತ್ರಗಾರಿಕೆಗಳಂತೆ ಕಂಡವರು. ಭಕ್ತಿ ಮತ್ತು ವ್ಯಕ್ತಿ ಆರಾಧನೆಗಳು ಗುಲಾಮಿತನದ ಸಂಕೇತ; ಆ ಮೂಲಕ ಅವು ಸರ್ವಾಧಿಕಾರಕ್ಕೆ ಎಡೆಮಾಡಿಕೊಡುತ್ತವೆ ಎಂದು ಗಟ್ಟಿಯಾಗಿ ಪ್ರತಿಪಾದಿಸಿದ ಪ್ರಬುದ್ಧ ರಾಜಕೀಯ ಚಿಂತಕ. ಪಾದರಕ್ಷೆಗಳೆಡೆಗೆ ನಮ್ಮ ಸಮಾಜದಲ್ಲಿ ಅಸ್ಪೃಷ್ಯತಾಚರಣೆಯ ಭಾವವೂ ಬೆಸೆದುಕೊಂಡಿರುವುದರಿಂದಲೇ, ದೇವಸ್ಥಾನದ ಹೊರಗೆ ನಿಂತು ದೇವರಿಗೆ ಕೈ ಮುಗಿಯುವಾಗಲೂ ಚಪ್ಪಲಿಗಳನ್ನು ಕಳಚಿಟ್ಟು ನಮಸ್ಕರಿಸುವ ritual ರೂಢಿಯಲ್ಲಿದೆ. ಅಂಥಾ ಅಸ್ಪೃಶ್ಯತೆ, ಅಂಥಾ ಸಾಮಾಜಿಕ ಶೋಷಣೆ, ಅಂಥಾ ಮೌಢ್ಯ, ಅಂಥಾ ತಿರಸ್ಕಾರ-ಬಹಿಷ್ಕಾರಗಳನ್ನು ಆಳವಾಗಿ ಖಂಡಿಸಿ ವ್ಯಕ್ತಿಗೌರವ ಮತ್ತು ಸ್ವತಂತ್ರ ಚಿಂತನೆಗಳನ್ನು ಎತ್ತಿಹಿಡಿದ ಬಾಬಾಸಾಹೇಬರಿಗೂ ನೀವು ಚಪ್ಪಲಿ ಕಳಚಿಟ್ಟು ಗೌರವ ಸಲ್ಲಿಸಬೇಕೆನ್ನುವುದು ಅಂಬೇಡ್ಕರರನ್ನು ritual ವ್ಯಕ್ತಿಯಾಗಿಸುವ ಅಥವಾ ಭಕ್ತಿ-ಆರಾಧನೆಯ ಉಸುಕಿನಲ್ಲಿ ಸಿಲುಕಿಸುವ ಯತ್ನವಾಗಿರುತ್ತದೆಯೇ ಹೊರತು ಅವರನ್ನು ಗೌರವಿಸುವ ಭಾವನಾತ್ಮಕ ಪರಿ ಅನ್ನಿಸಿಕೊಳ್ಳುವುದಿಲ್ಲ.
ದೇವರನ್ನೇ ಧಿಕ್ಕರಿಸಿದ ಬಾಬಾಸಾಹೇಬರು ಸ್ವತಃ ತಾನೇ ದೇವರಾಗಲು ಬಯಸುತ್ತಿದ್ದರು ಎಂದು ನಿಮಗನ್ನಿಸುತ್ತದೆಯೇ? ವ್ಯಕ್ತಿ ಪೂಜೆಯನ್ನು ಖಂಡಿಸಿದವರು ತನ್ನದೇ ritualistic ಆರಾಧನೆಯನ್ನು ಒಪ್ಪುತ್ತಿದ್ದರು ಎಂದು ನಿಮಗನ್ನಿಸುತ್ತದೆಯೇ? Public moralityಗಿಂತ constitutional moralityಗೆ ಒತ್ತು ಕೊಟ್ಟ ಅವರು ಮೌಢ್ಯಾಭಿಮಾನವನ್ನು ಆಸ್ವಾದಿಸುತ್ತಿದ್ದರು ಎಂದು ನಿಮಗನ್ನಿಸುತ್ತಿದೆಯೇ? ಅಕಸ್ಮಾತ್ ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ ‘ಹೌದು’ ಎಂದಾದರೆ, ನೀವು ಎಷ್ಟೇ ಪ್ರಖರ ಅಂಬೇಡ್ಕರ್‍ವಾದಿಯಾಗಿದ್ದರೂ ತುರ್ತಾಗಿ ಬಾಬಾಸಾಹೇಬರನ್ನು ಮರುಓದಬೇಕಾದ ಜರೂರಿದೆ ಅಂತಲೇ ಅರ್ಥ. ಯಾಕೆಂದರೆ, ಅಂಬೇಡ್ಕರ್ ತರಹದ ವ್ಯಕ್ತಿತ್ವಗಳು ಯಾವತ್ತೂ ತಮ್ಮ ವಿಚಾರಗಳ ಮೂಲಕ ಉಸಿರಾಡಲು ಬಯಸುತ್ತಾರೆ.
ಲಾಸ್ಟ್ ಸಿಪ್: ಅಂದಹಾಗೆ, ಬಾನು ಮುಷ್ತಾಕ್ ಅವರು ಚಪ್ಪಲಿ ಧರಿಸಿ ಅಂಬೇಡ್ಕರ್ ಚಿತ್ರಪಟಕ್ಕೆ ಹೂನಮನ ಸಲ್ಲಿಸಿದ ಪ್ರಕರಣದಲ್ಲಿ ಸಂಘರ್ಷ ಇರುವುದು ಬಾನು ಮುಷ್ತಾಕ್ ಮತ್ತು ಅಂಬೇಡ್ಕರ್‍ವಾದಿಗಳ ನಡುವೆ ಅಲ್ಲ. ಹಾಗಿದ್ದಿದ್ದರೆ ಆಯೋಜಕರು, ಬಾನು ಮುಷ್ತಾಕರಿಗೆ ಪುಷ್ಪನಮನ ಸಲ್ಲಿಸಲು ಅವಕಾಶವನ್ನೇ ಕೊಡುತ್ತಿರಲಿಲ್ಲ. ತಮ್ಮ ಕರ್ಮಠ ಮೌಢ್ಯಾಭಿಮಾನವನ್ನು ಪ್ರತಿಪಾದಿಸಿ ರಾದ್ಧಾಂತ ಮಾಡುತ್ತಿದ್ದರು. ಆದರೆ ಅಂಬೇಡ್ಕರ್ ಮೌಲ್ಯಗಳಿಗೆ ಬೆಲೆಕೊಟ್ಟ ಕಾರ್ಯಕ್ರಮದ ಆಯೋಜಕರು ಬಾನು ಮುಷ್ತಾಕ್ ಅವರ ಸ್ವತಂತ್ರ ಚಿಂತನೆ ಮತ್ತು ವ್ಯಕ್ತಿ ಘನತೆಯನ್ನು ಪುರಸ್ಕರಿಸಿ ತಮ್ಮ ಭೀಮಚಿಂತನೆಯನ್ನು ದೃಢಪಡಿಸಿದ್ದಾರೆ. ಆದರೆ, ಬೂಕರ್ ಬಂದಾಗಿನಿಂದಲೂ ಮಹಿಳೆ ಎಂಬ ಕಾರಣಕ್ಕೆ, ಮುಸ್ಲಿಂ ಎಂಬ ಕಾರಣಕ್ಕೆ, ಜಾತ್ಯತೀತ ಪರಂಪರೆಯವರು ಎಂಬ ಕಾರಣಕ್ಕೆ ಬಾನು ಮುಷ್ತಾಕರ ವಿರುದ್ಧ ಕತ್ತಿಮಸೆಯುತ್ತಲೇ ಇರುವ ಕೆಲವು ಮನುವಾದಿ ಮನಸ್ಸುಗಳು ಈ ಚಿತಾವಣೆಯ ಹಿಂದೆ ಕೆಲಸ ಮಾಡುತ್ತಿವೆ. ಇಲ್ಲಿ ಅಂಬೇಡ್ಕರ್ ಅವರಿಗೆ ಅವಮಾನವಾಗಿದೆ ಎಂದು ಮೊಸಳೆ ಕಣ್ಣೀರು ಸುರಿಸುತ್ತಿರುವವರು, ಅವಕಾಶ ಸಿಕ್ಕಾಗಲೆಲ್ಲ ಅಂಬೇಡ್ಕರ್‍ಗೆ ಅವಮಾನಿಸಲು ಬಯಸಿದವರು, ಬಯಸುತ್ತಲೇ ಇರುವವರು ಎಂಬುದನ್ನು ನಾವು ಮರೆಯಬಾರದು. ಇಂತವರ ಹಕೀಕತ್ತುಗಳಿಗೆ ಬಲಿಯಾಗದೆ ಉಳಿಯುವುದೇ ಇಂದು ನಮ್ಮ ಮುಂದಿರುವ ದೊಡ್ಡ ಸವಾಲು.
