Home ರಾಜಕೀಯ ಬಲಿತ ದಲಿತನನ್ನು ಕಂಡರೆ ಕುಮಾರಸ್ವಾಮಿಗೆ ಯಾಕೆ ಕಣ್ಣುರಿ?: ಪ್ರಿಯಾಂಕ್ ಖರ್ಗೆ

ಬಲಿತ ದಲಿತನನ್ನು ಕಂಡರೆ ಕುಮಾರಸ್ವಾಮಿಗೆ ಯಾಕೆ ಕಣ್ಣುರಿ?: ಪ್ರಿಯಾಂಕ್ ಖರ್ಗೆ

0

ಕಲಬುರಗಿ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಆರೋಪಗಳಿಗೆ ದಾಖಲೆಗಳಿದ್ದರೆ ಅವುಗಳನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ರವಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಜನರ ಹಿತಾಸಕ್ತಿಗಿಂತ ತಮ್ಮ ಸ್ವಹಿತಾಸಕ್ತಿಗಾಗಿ ಕುಮಾರಸ್ವಾಮಿ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಕುಮಾರಸ್ವಾಮಿ ಅವರು ಪಾದಯಾತ್ರೆ ಮಾಡಿಕೊಂಡು ಆರೋಗ್ಯವಾಗಿರಲಿ. ಅವರ ಬಳಿ ಇರುವ ಎಲ್ಲ ಪುರಾವೆಗಳನ್ನು ಪಾಂಪ್ಲೆಟ್‌ಗಳ ಮೂಲಕ ಜನರಿಗೆ ಹಂಚಲಿ. ನಮ್ಮ ಕುಟುಂಬದ ವಿರುದ್ಧ ಆರೋಪ ಮಾಡುವ ಬದಲು ದಾಖಲೆಗಳನ್ನು ಬಿಡುಗಡೆ ಮಾಡಲಿ. ತಪ್ಪು ನಡೆದಿದ್ದರೆ ತನಿಖೆ ನಡೆಸಲಿ. ತನಿಖಾ ಸಂಸ್ಥೆಗಳು ಅವರ ಬಳಿಯೇ ಇವೆ. ನಮ್ಮ ಕುಟುಂಬದ ವಿಚಾರದಲ್ಲಿ ಏನೇ ಆರೋಪಗಳಿದ್ದರೂ ಅವುಗಳಿಗೆ ಸಂಬಂಧಿಸಿದ ದಾಖಲೆಗಳಿವೆ ಎಂದು ಖರ್ಗೆ ಹೇಳಿದರು.

ಯಾರ ಮೇಲಾದರೂ ಆರೋಪ ಬಂದಾಗ ತನಿಖೆ ನಡೆಸಬಾರದು ಎನ್ನುವುದು ಹೇಗೆ ಸಾಧ್ಯ? ಇದೀಗ ಕುಮಾರಸ್ವಾಮಿ ಅವರ ಕಾರ್ಯಕರ್ತರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಅದನ್ನೂ ಮಾಡಬಾರದು ಎಂದರೆ ಹೇಗೆ? ಕುಮಾರಸ್ವಾಮಿ ಅವರು ಎಲ್ಲ ವಿಚಾರಗಳಲ್ಲೂ ಆರೋಪ ಮಾಡುತ್ತಾರೆ. ಅವರು ಮಾಡುವ ಪ್ರತಿಯೊಂದು ಆರೋಪಕ್ಕೂ ಉತ್ತರ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ದಲಿತರು ಬಲಿಷ್ಠರಾಗುವುದನ್ನು ಸಹಿಸಲು ಆಗುತ್ತಿಲ್ಲ:
ಕುಮಾರಸ್ವಾಮಿ ಅವರು ತಮ್ಮನ್ನು ‘ಬಲಿತ ದಲಿತ’ ಎಂದು ಕರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಖರ್ಗೆ, ದಲಿತರು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಲಿಷ್ಠರಾಗುವುದನ್ನು ಕಂಡು ಕೆಲವರಿಗೆ ಯಾಕೆ ಕಣ್ಣುರಿ ಎಂದು ಪ್ರಶ್ನಿಸಿದರು.

“ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವವರು ಸಿನಿಮಾ ನಿರ್ಮಾಪಕರಾಗಬಹುದು, ನಿರ್ದೇಶಕರಾಗಬಹುದು, ‘ಜಾಗ್ವಾರ್’ ಆಗಿ ನಟಿಸಬಹುದು, ರಿಯಲ್ ಎಸ್ಟೇಟ್ ಉದ್ಯಮ ಮಾಡಬಹುದು, ಐಷಾರಾಮಿ ಕಾರುಗಳಲ್ಲಿ ಓಡಾಡಬಹುದು. ಆದರೆ ದಲಿತರು ಕೋಟ್ ಹಾಕಿಕೊಂಡು, ಇಂಗ್ಲಿಷ್ ಮಾತನಾಡಿಕೊಂಡು ಉನ್ನತ ಸ್ಥಾನಕ್ಕೇರಿದರೆ ಇವರಿಗೆ ಕಣ್ಣು ಕುಕ್ಕುತ್ತದೆಯೇ? ದಲಿತರು ಗೃಹ ಸಚಿವರಾಗಬಾರದೇ, ಆರ್ಥಿಕವಾಗಿ ಬಲಿಷ್ಠರಾಗಬಾರದೇ?” ಎಂದು ಪ್ರಶ್ನಿಸಿದರು.

ದಲಿತರು ಉನ್ನತ ಸ್ಥಾನಗಳನ್ನು ಅಲಂಕರಿಸುವುದು ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದನ್ನು ಸಹಿಸದ ಮನೋಭಾವ ಸರಿಯಲ್ಲ. ನಾವು ಸ್ವಾಭಿಮಾನಿಗಳು. ನಮ್ಮ ಕುಟುಂಬದ ವಿರುದ್ಧ ಆರೋಪ ಮಾಡುವವರು ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಹೇಳಿದರು.

ದಲಿತರಿಗೆ ಆಗುತ್ತಿರುವ ಅವಮಾನಗಳ ಬಗ್ಗೆ ಮಾತನಾಡಲಿ:
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಿಲ್ಲ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ ಕಾರ್ಯಕ್ರಮಗಳ ಬಳಿಕ ಸ್ಥಳ ಶುದ್ಧೀಕರಣ ಮಾಡಿರುವ ಘಟನೆಗಳು ನಡೆದಿವೆ, ಇಂತಹ ಘಟನೆಗಳನ್ನು ಕುಮಾರಸ್ವಾಮಿ ಅವರು ವಿರೋಧಿಸಿದ್ದಾರೆಯೇ ಎಂದು ಪ್ರಶ್ನಿಸಿದರು.

“ನಾವು ಯಾವ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ದಲಿತರು ಎದುರಿಸುತ್ತಿರುವ ತಾರತಮ್ಯ ಮತ್ತು ಅವಮಾನಗಳ ಬಗ್ಗೆ ಮಾತನಾಡುವ ಬದಲು ಅವರ ಪ್ರಗತಿಯನ್ನೇ ಪ್ರಶ್ನಿಸುವುದು ಸರಿಯಲ್ಲ” ಎಂದರು.

ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ವಿರುದ್ಧ ಏನೆಲ್ಲ ಮಾತನಾಡಿದ್ದರು ಎಂಬುದನ್ನು ಜನರು ನೆನಪಿಸಿಕೊಳ್ಳಬೇಕು. ಈಗ ಸಿದ್ದರಾಮಯ್ಯ ಅವರ ಮೇಲೆ ಪ್ರೀತಿ ತೋರಿಸುತ್ತಿರುವುದರ ಹಿಂದಿನ ರಾಜಕೀಯ ಉದ್ದೇಶವೇನು ಎಂಬುದನ್ನು ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕಣ್ಣೀರು ಹಾಕುವ ಪ್ರಯತ್ನದಿಂದ ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಿದೆ. ಕುಮಾರಸ್ವಾಮಿ ಅವರಿಗೆ ತಮ್ಮ ಕುರ್ಚಿ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಅದನ್ನು ಉಳಿಸಿಕೊಳ್ಳಲು ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಮೀಸಲು ಕ್ಷೇತ್ರದಿಂದ ಗೆದ್ದು ಶಾಸಕರಾಗಿರುವ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಖರ್ಗೆ, “ಕುಮಾರಸ್ವಾಮಿ ಅವರು ಕಲಬುರಗಿ ಅಥವಾ ಕರಾವಳಿ ಭಾಗದಲ್ಲಿ ಬಂದು ಚುನಾವಣೆಗೆ ಸ್ಪರ್ಧಿಸಿ ಗೆದ್ದು ತೋರಿಸಲಿ” ಎಂದು ಸವಾಲ್ ಹಾಕಿದರು.

ಸ್ಟಿಂಗ್ ಆಪರೇಷನ್ ಪ್ರಕರಣದ ಕುರಿತು ವೈಜ್ಞಾನಿಕವಾಗಿ ತನಿಖೆ ನಡೆಸಲಾಗುವುದು. ನಮ್ಮ ಪಕ್ಷದವರೇ ಆಗಿರಲಿ ಅಥವಾ ಬೇರೆ ಪಕ್ಷದವರೇ ಆಗಿರಲಿ, ತಪ್ಪು ಮಾಡಿರುವುದು ಸಾಬೀತಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.

ಕರ್ನಾಟಕ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಕರಣಗಳಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದರು.

ತೊಗರಿಗೆ ಜಿಐ ಟ್ಯಾಗ್, ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ
ಕಲಬುರಗಿ ಜಿಲ್ಲೆಯ ತೊಗರಿಗೆ ಭೌಗೋಳಿಕ ಗುರುತಿನ (ಜಿಐ) ಟ್ಯಾಗ್ ದೊರಕಿಸುವಲ್ಲಿ, ಭೀಮಾ ಪಲ್ಸ್, ಕಲಬುರಗಿ ಪಲ್ಸ್ ಹಾಗೂ ಕಲಬುರಗಿ ರೊಟ್ಟಿಯಂತಹ ಕಾರ್ಯಕ್ರಮಗಳ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಮತ್ತು ಗುರುತು ದೊರಕಿಸಲು ನಾವೇ ಮಾಡಿದ್ದೇವೆ ಎಂದು ಪತ್ರಕರ್ತರೊಬ್ಬರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

You cannot copy content of this page

Exit mobile version