“ಕಾನೂನು ಒಂದೇ ಕಡೆಯಲ್ಲಿ ಸಮೀಕರಣವನ್ನು (assimilation) ಉತ್ತೇಜಿಸುತ್ತಾ, ಬುಡಕಟ್ಟು ಗುರುತಿನ ಪುರಾವೆಯಾಗಿ ಪ್ರತ್ಯೇಕತೆಯನ್ನು ಪರಿಗಣಿಸಲು ಸಾಧ್ಯವಿಲ್ಲ” - ಚಕ್ಷು ಜೈನ್ & ಉನ್ನತಿ ಜೈನ್
ಅಸ್ಸಾಂನಲ್ಲಿ 6 ಪ್ರಮುಖ ಸಮುದಾಯಗಳಾದ ತೈ ಅಹೋಮ್, ಚುಟಿಯಾ, ಕೋಚ್-ರಾಜಬಂಶಿ, ಮೋರಾನ್, ಮಟಕ್ ಮತ್ತು ಚಹಾ ತೋಟಗಳ ಬುಡಕಟ್ಟು/ಆದಿವಾಸಿ ಸಮುದಾಯಗಳು ಪರಿಶಿಷ್ಟ ಪಂಗಡಗಳ (ST) ಪಟ್ಟಿಗೆ ತಮ್ಮನ್ನು ಸೇರಿಸಬೇಕೆಂದು ಒತ್ತಾಯಿಸುತ್ತಿವೆ. ಈ 6 ಸಮುದಾಯಗಳು ಒಟ್ಟಾಗಿ ಅಸ್ಸಾಂನ ಒಟ್ಟು ಜನಸಂಖ್ಯೆಯ ಸರಿಸುಮಾರು 27%ರಷ್ಟಿವೆ.
ಈ ಬೇಡಿಕೆ ಮತ್ತೊಮ್ಮೆ, ಹಳೆಯದಾದರೂ ಇನ್ನೂ ಬಗೆಹರಿಯದ ಒಂದು ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ: ಭಾರತದಲ್ಲಿ ಯಾರನ್ನು ಪರಿಶಿಷ್ಟ ಪಂಗಡ ಎಂದು ಪರಿಗಣಿಸಲಾಗುತ್ತದೆ?
ಮೊದಲ ನೋಟಕ್ಕೆ ಇದರ ಉತ್ತರ ಸರಳವಾಗಿ ಕಾಣುತ್ತದೆ. ಭಾರತದ ಸಂವಿಧಾನದ 341ನೇ ವಿಧಿಯು, ಸಂಬಂಧಿತ ರಾಜ್ಯದ ರಾಜ್ಯಪಾಲರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ, “ಬುಡಕಟ್ಟುಗಳು ಅಥವಾ ಬುಡಕಟ್ಟು ಸಮುದಾಯಗಳು, ಅಥವಾ ಅವುಗಳೊಳಗಿನ ಗುಂಪುಗಳ ಭಾಗಗಳನ್ನು ಪರಿಶಿಷ್ಟ ಪಂಗಡಗಳೆಂದು” ಗುರುತಿಸುವ ಅಧಿಕಾರವನ್ನು ರಾಷ್ಟ್ರಪತಿಗೆ ನೀಡುತ್ತದೆ.
ಆದರೆ, ಒಂದು ಸಮುದಾಯವನ್ನು ಮೊದಲಿಗೆ ‘ಪರಿಶಿಷ್ಟ ಪಂಗಡ’ ಎಂದು ಪರಿಗಣಿಸಲು ಯಾವ ಅರ್ಹತೆಗಳಿರಬೇಕು ಎಂಬುದನ್ನು ಸಂವಿಧಾನ ಸ್ಪಷ್ಟವಾಗಿ ಹೇಳುವುದಿಲ್ಲ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು 6 ದಶಕಗಳಿಗೂ ಹಿಂದಿನ ಆಡಳಿತಾತ್ಮಕ ಮಾನದಂಡಗಳ ಒಂದು ಪಟ್ಟಿಯನ್ನು ಬಳಸಲಾಗುತ್ತಿದೆ. ಆದರೆ, ಇಂದಿನ ಭಾರತದ ಬುಡಕಟ್ಟು ಸಮುದಾಯಗಳ ವಾಸ್ತವಿಕ ಪರಿಸ್ಥಿತಿಗೆ ಈ ಮಾನದಂಡಗಳು ಹೆಚ್ಚು ಹೊಂದಿಕೆಯಾಗುತ್ತಿಲ್ಲ ಎಂಬುದು ಗಮನಾರ್ಹ.
ಅಸ್ಸಾಂನ ಸಮಸ್ಯೆ
ಪ್ರಸ್ತುತ ಅಸ್ಸಾಂನಲ್ಲಿ ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕೆ ಒತ್ತಾಯಿಸುತ್ತಿರುವ 6 ಸಮುದಾಯಗಳು ಇತರೆ ಹಿಂದುಳಿದ ವರ್ಗಗಳ (OBC) ಪಟ್ಟಿಯಲ್ಲಿವೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ದೊರೆಯುತ್ತಿದ್ದರೂ, OBC ಸ್ಥಾನಮಾನವು ಪರಿಶಿಷ್ಟ ಪಂಗಡದ ಸ್ಥಾನಮಾನದ ಅಡಿಯಲ್ಲಿ ಸಂವಿಧಾನ ಒದಗಿಸುವಷ್ಟು ರಕ್ಷಣೆಯನ್ನು ನೀಡುವುದಿಲ್ಲ ಎಂದು ಈ ಸಮುದಾಯಗಳು ವಾದಿಸುತ್ತವೆ. ವಿಶೇಷವಾಗಿ ಪೂರ್ವಜರಿಂದ ಬಂದ ಭೂಮಿಯ ಹಕ್ಕುಗಳು, ಸಾಂಸ್ಕೃತಿಕ ಪರಂಪರೆ ಮತ್ತು ರಾಜಕೀಯ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ಸಂವಿಧಾನಾತ್ಮಕ ರಕ್ಷಣೆಗಳು OBC ಸ್ಥಾನಮಾನದಲ್ಲಿ ಲಭ್ಯವಿಲ್ಲ ಎಂಬುದು ಅವರ ವಾದ.
ಹೀಗಾಗಿ, ಅವರ ಬೇಡಿಕೆ ಕೇವಲ ಮೀಸಲಾತಿಗೆ ಸೀಮಿತವಾಗಿಲ್ಲ. ವಿಶಿಷ್ಟ ಸಮುದಾಯಗಳಾಗಿ ತಮಗೆ ಸಂವಿಧಾನಾತ್ಮಕ ಮಾನ್ಯತೆ ಮತ್ತು ರಕ್ಷಣೆ ದೊರೆಯಬೇಕು ಎಂಬ ವಿಶಾಲ ಹಕ್ಕೊತ್ತಾಯವೂ ಇದರ ಹಿಂದಿದೆ.
ಆದರೆ, ಇಂತಹ ಮಾನ್ಯತೆಯನ್ನು ನಿರ್ಧರಿಸುವ ಪ್ರಕ್ರಿಯೆಯು ಇಂದಿಗೂ ದಶಕಗಳ ಹಿಂದೆ ಲೋಕೂರ್ ಸಮಿತಿಯ ಅಡಿಯಲ್ಲಿ ರೂಪಿಸಲಾದ ಮಾನದಂಡಗಳನ್ನೇ ಅವಲಂಬಿಸಿದೆ. ಅವುಗಳಲ್ಲಿ “ಭೌಗೋಳಿಕ ಪ್ರತ್ಯೇಕತೆ” ಮತ್ತು “ಪ್ರಾಚೀನ ಗುಣಲಕ್ಷಣಗಳು” ಎಂಬ ಮಾನದಂಡಗಳೂ ಸೇರಿವೆ. ವಲಸೆ, ನಗರೀಕರಣ, ರಾಜಕೀಯ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವಿಕೆ ಮತ್ತು ಆರ್ಥಿಕ ಬದಲಾವಣೆಗಳನ್ನು ಅನುಭವಿಸಿರುವ ಹಾಗೂ ಈಗಲೂ ಎದುರಿಸುತ್ತಿರುವ ಸಮುದಾಯಗಳ ಇಂದಿನ ವಾಸ್ತವಿಕತೆಗೆ ಈ ಪರಿಕಲ್ಪನೆಗಳು ಹೆಚ್ಚು ಹೆಚ್ಚು ಹಳೆಯದಾಗಿವೆ ಮತ್ತು ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟಕರವಾಗಿವೆ.
ಹೀಗಾಗಿ, ಅಸ್ಸಾಂನಲ್ಲಿನ ಈ ವಿವಾದವು ಒಂದು ಗಂಭೀರ ಪ್ರಶ್ನೆಯನ್ನು ಎತ್ತುತ್ತದೆ: ಪರಿಶಿಷ್ಟ ಪಂಗಡದ ಸ್ಥಾನಮಾನವನ್ನು ನಿರ್ಧರಿಸಲು ಭಾರತದಲ್ಲಿ ಪ್ರಸ್ತುತ ಇರುವ ವ್ಯವಸ್ಥೆ ಇನ್ನೂ ಸಮರ್ಪಕವಾಗಿದೆಯೇ?
ಈ ಪ್ರಶ್ನೆ ಮಹತ್ವದ್ದಾಗಿದೆ. ಏಕೆಂದರೆ, ಪರಿಶಿಷ್ಟ ಪಂಗಡದ ಸ್ಥಾನಮಾನವು ಕೇವಲ ಆಡಳಿತಾತ್ಮಕ ವರ್ಗೀಕರಣವಲ್ಲ. ಇದು ಮೀಸಲಾತಿ, ರಾಜಕೀಯ ಪ್ರಾತಿನಿಧ್ಯ ಹಾಗೂ ಭೂಮಿ ಮತ್ತು ಸಂಪನ್ಮೂಲಗಳಿಗೆ ಸಂಬಂಧಿಸಿದ ರಕ್ಷಣೆ ಸೇರಿದಂತೆ ಹಲವು ಸಂವಿಧಾನಾತ್ಮಕ ಮತ್ತು ಕಾನೂನುಬದ್ಧ ರಕ್ಷಣೆಗಳಿಗೆ ಪ್ರವೇಶವನ್ನು ನಿರ್ಧರಿಸುತ್ತದೆ. ಹೀಗಾಗಿ, ಯಾರನ್ನು ಪರಿಶಿಷ್ಟ ಪಂಗಡವೆಂದು ಪರಿಗಣಿಸಬೇಕು ಎಂಬ ನಿರ್ಧಾರವು ವಾಸ್ತವವಾಗಿ, ಯಾರಿಗೆ ಈ ಸಂವಿಧಾನಾತ್ಮಕ ಖಾತರಿಗಳ ಸಂಪೂರ್ಣ ಪ್ರಯೋಜನ ದೊರೆಯಬೇಕು ಎಂಬುದನ್ನು ನಿರ್ಧರಿಸುವುದಾಗಿದೆ.
‘ಪ್ರಾಚೀನ ಗುಣಲಕ್ಷಣಗಳ’ ಸುತ್ತ ರೂಪುಗೊಂಡ ಮಾನದಂಡ
ಸಂವಿಧಾನವು ‘ಪರಿಶಿಷ್ಟ ಪಂಗಡ’ ಎಂಬ ಪದಕ್ಕೆ ಯಾವುದೇ ಸ್ಪಷ್ಟವಾದ ಅರ್ಥವಿವರಣೆಯನ್ನು ನೀಡುವುದಿಲ್ಲ.
ಸಂವಿಧಾನದ 366(25)ನೇ ವಿಧಿ ಪರಿಶಿಷ್ಟ ಪಂಗಡವನ್ನು “342ನೇ ವಿಧಿಯ ಅಡಿಯಲ್ಲಿ ಪರಿಶಿಷ್ಟ ಪಂಗಡವೆಂದು ಪರಿಗಣಿಸಲ್ಪಟ್ಟ ಬುಡಕಟ್ಟು, ಬುಡಕಟ್ಟು ಸಮುದಾಯ ಅಥವಾ ಅಂತಹ ಬುಡಕಟ್ಟು ಅಥವಾ ಸಮುದಾಯದೊಳಗಿನ ಯಾವುದೇ ಭಾಗ ಅಥವಾ ಗುಂಪು” ಎಂದು ವಿವರಿಸುತ್ತದೆ. ಆದರೆ, ಇದು ಕೇವಲ ಉಲ್ಲೇಖಾತ್ಮಕ ವ್ಯಾಖ್ಯಾನವಾಗಿದೆ. ಕಾನೂನಿನ ಪ್ರಕಾರ ಯಾರನ್ನು ಪರಿಶಿಷ್ಟ ಪಂಗಡವೆಂದು ಗುರುತಿಸಲಾಗಿದೆ ಎಂಬುದನ್ನು ಇದು ಹೇಳುತ್ತದೆಯೇ ಹೊರತು, ಒಂದು ಸಮುದಾಯಕ್ಕೆ ಅಂತಹ ಮಾನ್ಯತೆ ದೊರೆಯಲು ಯಾವ ಗುಣಲಕ್ಷಣಗಳು ಇರಬೇಕು ಎಂಬುದನ್ನು ತಿಳಿಸುವುದಿಲ್ಲ.
ಈ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿನ ಕೊರತೆಯನ್ನು ಪರಿಹರಿಸುವ ಉದ್ದೇಶದಿಂದ ಸರ್ಕಾರವು 1965ರಲ್ಲಿ ಲೋಕೂರ್ ಸಮಿತಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸಲಹಾ ಸಮಿತಿಯನ್ನು ರಚಿಸಿತು. ಪರಿಶಿಷ್ಟ ಪಂಗಡದ ಸ್ಥಾನಮಾನವನ್ನು ನಿರ್ಧರಿಸಲು ಸಮಿತಿಯು 5 ಮಾನದಂಡಗಳನ್ನು ಗುರುತಿಸಿತು: ‘ಪ್ರಾಚೀನ ಗುಣಲಕ್ಷಣಗಳು’, ವಿಶಿಷ್ಟ ಸಂಸ್ಕೃತಿ, ಭೌಗೋಳಿಕ ಪ್ರತ್ಯೇಕತೆ, ಹೊರಗಿನವರೊಂದಿಗೆ ಬೆರೆಯಲು ಹಿಂಜರಿಕೆ ಮತ್ತು ‘ಹಿಂದುಳಿದಿರುವಿಕೆ’. ಇಂದಿಗೂ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಈ ಮಾನದಂಡಗಳನ್ನು ಉಲ್ಲೇಖಿಸುತ್ತಿದೆ.
ಸಮಸ್ಯೆ ಈ ಮಾನದಂಡಗಳು ಹಳೆಯವು ಎಂಬುದಕ್ಕೆ ಮಾತ್ರ ಸೀಮಿತವಾಗಿಲ್ಲ. ಅವುಗಳಲ್ಲಿ ಹಲವು ಮೂಲತಃ ಅಸ್ಪಷ್ಟವಾಗಿದ್ದು, ಇಂದಿನ ವಾಸ್ತವಿಕತೆಗೆ ಹೊಂದಿಕೆಯಾಗದ ಚಿಂತನಾ ವಿಧಾನವನ್ನು ಆಧರಿಸಿವೆ ಎಂಬುದೇ ಮುಖ್ಯ ಸಮಸ್ಯೆ. ಇವು ಸಂವಿಧಾನ ಅಥವಾ ಕಾನೂನಿನಲ್ಲಿ ಸ್ಪಷ್ಟವಾಗಿ ರೂಪಿಸಲಾದ ಮಾನದಂಡಗಳಿಗಿಂತ ಹೆಚ್ಚಾಗಿ ಆಡಳಿತಾತ್ಮಕ ಮಾನದಂಡಗಳಾಗಿವೆ. ಒಂದೊಂದಾಗಿ ಪರಿಶೀಲಿಸಿದಾಗಲೂ ಇವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.
ಉದಾಹರಣೆಗೆ, “ಪ್ರಾಚೀನ ಗುಣಲಕ್ಷಣಗಳು” ಎಂದರೆ ನಿಖರವಾಗಿ ಏನು? ನಿರ್ದಿಷ್ಟ ಉದ್ಯೋಗ, ಸಾಮಾಜಿಕ ಆಚರಣೆ ಅಥವಾ ಜೀವನ ವಿಧಾನವೇ? ಮತ್ತು ಒಂದು ಸಮುದಾಯವು ಇಂತಹ ಗುಣಲಕ್ಷಣಗಳಿಂದ ಸಾಕಷ್ಟು ದೂರ ಸರಿದಿದೆ, ಹೀಗಾಗಿ ಆ ಸಮುದಾಯ ಇನ್ನು ಮುಂದೆ ಈ ಮಾನದಂಡವನ್ನು ಪೂರೈಸುವುದಿಲ್ಲ ಎಂದು ನಿರ್ಧರಿಸುವವರು ಯಾರು?
ಅದೇ ರೀತಿ, ‘ವಿಶಿಷ್ಟ ಸಂಸ್ಕೃತಿ’ ಎಂಬ ಮಾನದಂಡವು ಅದರ ಅರ್ಥವೇ ಸೂಚಿಸುವಂತೆ, ಬುಡಕಟ್ಟು ಸಮುದಾಯದ ಅಸ್ಮಿತೆಯ ಪ್ರಮುಖ ಅಂಶವಾಗಿದೆ. ಭಾರತದಲ್ಲಿನ ಬಹುತೇಕ ಪ್ರತಿಯೊಂದು ಸಮುದಾಯವೂ ತನ್ನದೇ ಆದ ಭಾಷೆ, ಆಚರಣೆಗಳು, ಸಂಪ್ರದಾಯಗಳು, ಪದ್ಧತಿಗಳು ಮತ್ತು ಸಾಮಾಜಿಕ ಅಸ್ಮಿತೆಯನ್ನು ಹೊಂದಿದೆ. ಹೀಗಾಗಿ, ನಿಜವಾದ ಪ್ರಶ್ನೆ ಒಂದು ಸಮುದಾಯಕ್ಕೆ ವಿಶಿಷ್ಟ ಸಂಸ್ಕೃತಿ ಇದೆಯೇ ಎಂಬುದಲ್ಲ; ಪರಿಶಿಷ್ಟ ಪಂಗಡವೆಂದು ಗುರುತಿಸಲು ಅದರ ಸಾಂಸ್ಕೃತಿಕ ವೈಶಿಷ್ಟ್ಯ ಎಷ್ಟು ಪ್ರಮಾಣದಲ್ಲಿರಬೇಕು ಅಥವಾ ಯಾವ ಯಾವ ಸಾಂಸ್ಕೃತಿಕ ವೈಶಿಷ್ಟ್ಯಗಳ ಸಂಯೋಜನೆ ಅಗತ್ಯ ಎಂಬುದಾಗಿದೆ.
ಇದಲ್ಲದೆ, ‘ಭೌಗೋಳಿಕ ಪ್ರತ್ಯೇಕತೆ’ ಎಂಬ ಮಾನದಂಡವೂ ಅದರ ಮುಕ್ತ ಮತ್ತು ವ್ಯಕ್ತಿನಿಷ್ಠ ಸ್ವಭಾವದಿಂದಾಗಿ ನಿಖರತೆಯನ್ನು ಹೊಂದಿಲ್ಲ. ಐತಿಹಾಸಿಕವಾಗಿ ಪ್ರತ್ಯೇಕವಾಗಿದ್ದ, ಆದರೆ ನಂತರ ವಲಸೆ ಹೋಗಿರುವ, ನಗರೀಕರಣಗೊಂಡಿರುವ ಅಥವಾ ವಿಶಾಲ ಸಮಾಜದೊಂದಿಗೆ ಹೆಚ್ಚು ಬೆರೆತಿರುವ ಸಮುದಾಯದ ಗತಿಯೇನು? ಹೆಚ್ಚಿನ ಚಲನಶೀಲತೆಯಿಂದ [ಸ್ಥಿತ್ಯಂತರದಿಂದ] ಅದರ ಬುಡಕಟ್ಟು ಅಸ್ಮಿತೆ ಕಡಿಮೆಯಾಗುತ್ತದೆಯೇ? ಇಂತಹ ಬದಲಾವಣೆಗಳ ನಡುವೆಯೂ ಬುಡಕಟ್ಟು ಅಸ್ಮಿತೆ ಉಳಿದುಕೊಂಡರೆ, ಭೌಗೋಳಿಕ ಪ್ರತ್ಯೇಕತೆಯನ್ನು ಅಗತ್ಯ ಗುಣಲಕ್ಷಣವೆಂದು ಪರಿಗಣಿಸಲು ತಾರ್ಕಿಕ ಆಧಾರವಿರುವುದಿಲ್ಲ. ಒಂದು ವೇಳೆ ಹಾಗೆ ಆಗದಿದ್ದರೆ, ಈ ಮಾನದಂಡ ಒಂದು ಅಸಹಜ ವೈರುಧ್ಯವನ್ನು ಸೃಷ್ಟಿಸುತ್ತದೆ: ಸಾರ್ವಜನಿಕ ನೀತಿಗಳು ಉತ್ತೇಜಿಸಲು ಬಯಸುವ ಅಭಿವೃದ್ಧಿ ಮತ್ತು ಸಮಾಜದೊಂದಿಗೆ ಬೆರೆಯುವಿಕೆಯೇ, ಕೊನೆಗೆ ಒಂದು ಸಮುದಾಯದ ಬುಡಕಟ್ಟು ಅಸ್ಮಿತೆಯನ್ನು ಪ್ರಶ್ನಿಸಲು ಕಾರಣವಾಗಬಹುದು.
‘ಹೊರಗಿನವರೊಂದಿಗೆ ಬೆರೆಯಲು ಹಿಂಜರಿಕೆ’ ಮತ್ತು ‘ಹಿಂದುಳಿದಿರುವಿಕೆ’ ಎಂಬ ಮಾನದಂಡಗಳೂ ಇದೇ ರೀತಿಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಶಿಕ್ಷಣ, ಉದ್ಯೋಗ, ರಾಜಕೀಯ ಮತ್ತು ನಗರೀಕರಣದ ಮೂಲಕ ವಿಶಾಲ ಸಮಾಜದೊಂದಿಗೆ ಹೆಚ್ಚಿನ ಸಂಪರ್ಕ ಹೊಂದುವುದರಿಂದ ಬುಡಕಟ್ಟು ಅಸ್ಮಿತೆ ಕಡ್ಡಾಯವಾಗಿ ಅಳಿಸಿಹೋಗುವುದಿಲ್ಲ. ಬದಲಾಗಿ, ಒಂದು ಸಮುದಾಯವು ದೇಶದ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ ಎಂಬುದನ್ನು ಅದು ತೋರಿಸಬಹುದು.
ಅದೇ ರೀತಿ, ‘ಹಿಂದುಳಿದಿರುವಿಕೆ’ ಎಂಬ ಮಾನದಂಡವು ಹಿಂದುಳಿದಿರುವಿಕೆ ಎಂದರೆ ಆದಾಯ, ಸಾಕ್ಷರತೆ, ಶಿಕ್ಷಣ, ಉದ್ಯೋಗ, ಮೂಲಭೂತ ಸೇವೆಗಳ ಲಭ್ಯತೆ ಅಥವಾ ಜೀವನ ಪರಿಸ್ಥಿತಿಗಳಲ್ಲಿ ಯಾವುದನ್ನು ಸೂಚಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸುವುದಿಲ್ಲ. ಅಸ್ತಿತ್ವದಲ್ಲಿರುವ ಮಾನದಂಡವು ಯಾವುದೇ ಅಳೆಯಬಹುದಾದ ಮಿತಿಯನ್ನೂ ನಿಗದಿಪಡಿಸಿಲ್ಲ. ಒಂದು ಸಮುದಾಯವು ಎಷ್ಟು ಕಡಿಮೆ ಆದಾಯದಲ್ಲಿ ಬದುಕಿರಬೇಕು? ಅದು ಅರ್ಹತೆ ಪಡೆಯಲು ಅದರ ಶಿಕ್ಷಣದ ಮಟ್ಟ ಎಷ್ಟಿರಬೇಕು ಅಥವಾ ಆರ್ಥಿಕವಾಗಿ ಎಷ್ಟು ಹೊರಗುಳಿದಿರಬೇಕು? ಇಂತಹ ಸ್ಪಷ್ಟ ಮಾನದಂಡಗಳ ಅನುಪಸ್ಥಿತಿಯಲ್ಲಿ ಈ ಮಾನದಂಡ ಅಸ್ಪಷ್ಟವಾಗಿಯೇ ಉಳಿಯುತ್ತದೆ.
ಇದು ಇತ್ತೀಚೆಗೆ ಹುಟ್ಟಿಕೊಂಡ ಟೀಕೆಯಲ್ಲ. 2006ರ ಕರಡು ರಾಷ್ಟ್ರೀಯ ಬುಡಕಟ್ಟು ನೀತಿಯು, “ಲೋಕೂರ್ ಸಮಿತಿಯು (1965ರಲ್ಲಿ) ನಿಗದಿಪಡಿಸಿದ ಮಾನದಂಡಗಳು ಇಂದಿನ ಕಾಲಕ್ಕೆ ಬಹುತೇಕ ಪ್ರಸ್ತುತವಾಗಿಲ್ಲ” ಎಂದು ಹೇಳಿತ್ತು. ವಿಶೇಷವಾಗಿ, ಈಗಲೂ ‘ಪ್ರಾಚೀನ ಗುಣಲಕ್ಷಣಗಳನ್ನು’ ಹೊಂದಿವೆ ಎಂದು ಹೇಳಬಹುದಾದ ಬುಡಕಟ್ಟುಗಳು ಬಹಳ ಕಡಿಮೆ ಇರುವುದನ್ನು ಅದು ಗಮನಿಸಿತ್ತು. ಆದ್ದರಿಂದ, “ಇನ್ನಷ್ಟು ನಿಖರವಾದ ಮಾನದಂಡಗಳನ್ನು” ಅಳವಡಿಸಿಕೊಳ್ಳುವಂತೆ ಅದು ಶಿಫಾರಸು ಮಾಡಿತ್ತು.
ಕಾರ್ಯವಿಧಾನಕ್ಕೆ ಸಂಬಂಧಿಸಿದ ಸಮಸ್ಯೆಗಳು
ಆದರೆ, ಸಮಸ್ಯೆ ಕೇವಲ ಮಾನದಂಡಗಳಿಗೆ ಮಾತ್ರ ಸೀಮಿತವಾಗಿಲ್ಲ. ಪರಿಶಿಷ್ಟ ಪಂಗಡದ (Scheduled Tribe – ST) ಪಟ್ಟಿಯಲ್ಲಿ ಸೇರ್ಪಡೆಯಾಗುವ ಪ್ರಕ್ರಿಯೆಯಲ್ಲಿಯೂ ಒಂದು ರಚನಾತ್ಮಕ ಸಮಸ್ಯೆ ಇದೆ. 1999ರ ಜೂನ್ 15ರಂದು ಭಾರತ ಸರ್ಕಾರ ಅನುಮೋದಿಸಿದ, ತದನಂತರ 2002 ಮತ್ತು 2022ರಲ್ಲಿ ತಿದ್ದುಪಡಿ ಮಾಡಲಾದ “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪಟ್ಟಿಯನ್ನು ನಿರ್ದಿಷ್ಟಪಡಿಸುವ ಆದೇಶಗಳಲ್ಲಿ ಸೇರ್ಪಡೆ, ಹೊರಗೊಳಿಸುವಿಕೆ ಮತ್ತು ಇತರ ತಿದ್ದುಪಡಿಗಳ ಕುರಿತ ಬೇಡಿಕೆಗಳನ್ನು ನಿರ್ಧರಿಸುವ ವಿಧಾನ”ದ ಪ್ರಕಾರ, ಒಂದು ಸಮುದಾಯವನ್ನು ಪರಿಶಿಷ್ಟ ಪಂಗಡವಾಗಿ ಸೇರಿಸುವ ಪ್ರಸ್ತಾವನೆಯನ್ನು ಸಂಬಂಧಿತ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶದ ಆಡಳಿತವು ಶಿಫಾರಸು ಮಾಡಬೇಕು ಮತ್ತು ಅದಕ್ಕೆ ಸೂಕ್ತ ಕಾರಣಗಳನ್ನು ನೀಡಬೇಕು. ಜೊತೆಗೆ, ಆ ಪ್ರಸ್ತಾವನೆಗೆ ಜನಾಂಗಶಾಸ್ತ್ರೀಯ (ethnographic) ವರದಿ ಲಗತ್ತಿಸಬೇಕು ಹಾಗೂ ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಸಮ್ಮತಿಯೂ ಇರಬೇಕು.
ಇದು ಈ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರಗಳಿಗೆ ಗಣನೀಯ ಪ್ರಭಾವವನ್ನು ನೀಡುತ್ತದೆ. ಒಂದು ರಾಜ್ಯ ಸರ್ಕಾರವು ಬೇಡಿಕೆಯನ್ನು ಆರಂಭಿಸಿ ಅದನ್ನು ಬೆಂಬಲಿಸಲು ಸಿದ್ಧವಾಗಿರದಿದ್ದರೆ, ಪರಿಶಿಷ್ಟ ಪಂಗಡದ ಮಾನ್ಯತೆ ಕೋರುವ ಸಮುದಾಯಕ್ಕೆ ಮುಂದೆ ಸಾಗಲು ಬಹಳ ಕಡಿಮೆ ಅವಕಾಶವಿರುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆ ಮಾಡುವ ಪ್ರಕ್ರಿಯೆಯಲ್ಲಿ ರಾಜ್ಯವು ರಾಜಕೀಯ ಪ್ರಭಾವ ಬೀರುವುದಕ್ಕೆ ಭಾರತ ಸಾಕಷ್ಟು ಅವಕಾಶವನ್ನು ನೀಡಿದೆ. ಅಸ್ಸಾಂನಲ್ಲಿ ಉಂಟಾದ ವಿವಾದ ಇದಕ್ಕೆ ಒಂದು ಉದಾಹರಣೆಯಾಗಿದೆ.
ಇದಲ್ಲದೆ, ಭಾರತದಾದ್ಯಂತ ಬುಡಕಟ್ಟು ಮಾನ್ಯತೆ ನೀಡುವ ವಿಧಾನದಲ್ಲಿ ಏಕರೂಪತೆಯ ಕೊರತೆಯೂ ಇದೆ. ಉದಾಹರಣೆಗೆ, ಚಕ್ಮಾ ಸಮುದಾಯವನ್ನು ತ್ರಿಪುರಾದಲ್ಲಿ ಪರಿಶಿಷ್ಟ ಪಂಗಡವೆಂದು ಗುರುತಿಸಲಾಗಿದೆ; ಆದರೆ ಅರುಣಾಚಲ ಪ್ರದೇಶದಲ್ಲಿ ಅದೇ ಮಾನ್ಯತೆ ಇಲ್ಲ.
State of Maharashtra v. Milind (2001) 1 SCC 4 ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಈ ಅವಲಂಬನೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸಂವಿಧಾನದ 342ನೇ ವಿಧಿಯ ಅಡಿಯಲ್ಲಿ ನಿರ್ದಿಷ್ಟಪಡಿಸಲಾದ ಪರಿಶಿಷ್ಟ ಪಂಗಡಗಳ ಪಟ್ಟಿಗೆ ನ್ಯಾಯಾಧೀಶರು ಯಾವುದೇ ಸಮುದಾಯವನ್ನು ಸೇರಿಸಲು, ತೆಗೆದುಹಾಕಲು ಅಥವಾ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತ್ತು. ರಾಷ್ಟ್ರಪತಿಗಳ ಆದೇಶದಲ್ಲಿ ಯಾವುದೇ ಬದಲಾವಣೆಯನ್ನು ಕೇವಲ ಸಂಸತ್ತು ಕಾನೂನಿನ ಮೂಲಕವೇ ಮಾಡಬಹುದು.
ಹೀಗಾಗಿ, ರಾಜ್ಯ ಸರ್ಕಾರವು ಯಾವುದೇ ಬೇಡಿಕೆಯನ್ನು ಆರಂಭಿಸದಿದ್ದರೆ ಅಥವಾ ಅದನ್ನು ಬೆಂಬಲಿಸದಿದ್ದರೆ, ಒಂದು ಸಮುದಾಯವು ನ್ಯಾಯಾಲಯಗಳ ಮೂಲಕ ನೇರವಾಗಿ ಪಟ್ಟಿಗೆ ಸೇರ್ಪಡೆಗೊಳ್ಳಲು ಪ್ರಯತ್ನಿಸಿ ನಿಗದಿತ ಪ್ರಕ್ರಿಯೆಯನ್ನು ಬದಿಗೊತ್ತಲು ಸಾಧ್ಯವಿಲ್ಲ.
ಪ್ರತ್ಯೇಕತೆ ಮತ್ತು ಅಸ್ಮಿತೆಯ ಕುರಿತು
ಆದ್ದರಿಂದ, ಭಾರತವು ಪ್ರಸ್ತುತ ಅಸ್ತಿತ್ವದಲ್ಲಿರುವ ಚೌಕಟ್ಟನ್ನು ಮರುಪರಿಶೀಲಿಸುವ ಅಗತ್ಯವಿದೆ. ದುರ್ಬಲ ಮತ್ತು ಅಂಚಿನಲ್ಲಿರುವ ಸಮುದಾಯಗಳ ಪ್ರಸ್ತುತ ವಾಸ್ತವತೆಗಳು ಹಾಗೂ ಅಗತ್ಯಗಳನ್ನು ಪ್ರತಿಬಿಂಬಿಸುವಂತಹ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಅನುಸರಿಸಲಾಗುತ್ತಿರುವ ವಿಧಾನಗಳು ಇದಕ್ಕೆ ಒಂದು ಸಾಧ್ಯ ಆರಂಭಿಕ ಮಾರ್ಗವನ್ನು ಒದಗಿಸಬಹುದು. ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ (ILO) 1989ರ ಕನ್ವೆನ್ಷನ್ ಸಂಖ್ಯೆ 169 ಮತ್ತು ಸ್ಥಳೀಯ/ಮೂಲವಾಸಿ ಜನರ ಹಕ್ಕುಗಳ ಕುರಿತ ವಿಶ್ವಸಂಸ್ಥೆಯ ಘೋಷಣೆ (UNDRIP, 2007) ಅಸ್ಮಿತೆ ಮತ್ತು ನಿರಂತರತೆಗೆ ಹೆಚ್ಚಿನ ಮಹತ್ವ ನೀಡುತ್ತವೆ.
ILO ಕನ್ವೆನ್ಷನ್ ಸಂಖ್ಯೆ 169ರ ವಿಧಿ 1(2)ರಲ್ಲಿ ಸ್ವಯಂ-ಗುರುತಿಸುವಿಕೆಯನ್ನು (self-identification) ಮೂಲಭೂತ ಮಾನದಂಡವಾಗಿ ಅತ್ಯಂತ ಮಹತ್ವದ ಸ್ಥಾನದಲ್ಲಿ ಇರಿಸಲಾಗಿದೆ. ಇದು ಪ್ರತ್ಯೇಕತೆ, ಆದಿಮತೆ ಅಥವಾ ವಿಶಾಲ ಸಮಾಜದೊಂದಿಗೆ ಬೆರೆಯಲು ಇರುವ ಹಿಂಜರಿಕೆಯಂತಹ ಲಕ್ಷಣಗಳ ಆಧಾರದ ಮೇಲೆ ಸಮುದಾಯಗಳನ್ನು ವ್ಯಾಖ್ಯಾನಿಸಲು ಪ್ರಯತ್ನಿಸುವ ಹಳೆಯ ಚೌಕಟ್ಟುಗಳಿಂದ ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ. ಒಂದು ಸಮುದಾಯವು ತನ್ನ ಗುರುತನ್ನು ಉಳಿಸಿಕೊಳ್ಳಲು ಭೌಗೋಳಿಕವಾಗಿ ಪ್ರತ್ಯೇಕವಾಗಿಯೇ ಇರಬೇಕಾಗಿಲ್ಲ; ಆರ್ಥಿಕವಾಗಿ ಹಿಂದುಳಿದ ಸ್ಥಿತಿಯಲ್ಲಿಯೇ ಇರಬೇಕಾಗಿಲ್ಲ; ಅಥವಾ ವಿಶಾಲ ಸಮಾಜದೊಂದಿಗೆ ಬೆರೆಯಲು ಹಿಂಜರಿಯಬೇಕಾಗಿಲ್ಲ ಎಂಬುದನ್ನು ಇದು ಗುರುತಿಸುತ್ತದೆ.
ಇದೇ ರೀತಿಯ ವಿಧಾನವನ್ನು ಅಮೆರಿಕದಲ್ಲಿಯೂ ಕಾಣಬಹುದು. Code of Federal Regulationsನ Title 25, Part 83ರ ಅಡಿಯಲ್ಲಿ, ಫೆಡರಲ್ ಮಾನ್ಯತೆ ನೀಡುವ ಪ್ರಕ್ರಿಯೆಯಲ್ಲಿ ನಿರಂತರ ಸ್ವಯಂ-ಗುರುತಿಸುವಿಕೆ, ವಿಶಿಷ್ಟ ಸಮುದಾಯವಾಗಿ ಅಸ್ತಿತ್ವ, ರಾಜಕೀಯ ಅಧಿಕಾರ ಮತ್ತು ಐತಿಹಾಸಿಕ ಮೂಲವಂಶದಂತಹ ಅಂಶಗಳನ್ನು ಪರಿಗಣಿಸಲಾಗುತ್ತದೆ. ಹೀಗಾಗಿ, ಭೌಗೋಳಿಕ ಪ್ರತ್ಯೇಕತೆ ಅಥವಾ ‘ಆದಿಮ’ ಎಂದು ಕರೆಯಲ್ಪಡುವ ಲಕ್ಷಣಗಳಿಗಿಂತ ಐತಿಹಾಸಿಕ ನಿರಂತರತೆ, ಸಾಮೂಹಿಕ ಗುರುತು ಮತ್ತು ಸಮುದಾಯದ ಸಂಸ್ಥೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
ಆದರೆ, ಭಾರತವು ವಿದೇಶಿ ಮಾದರಿಯನ್ನು ಹಾಗೆಯೇ ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ.
ಭಾರತದಲ್ಲಿಯೇ ತನ್ನ ಬುಡಕಟ್ಟು ಸಮುದಾಯಗಳ ಕುರಿತು ವ್ಯಾಪಕ ಜನಾಂಗಶಾಸ್ತ್ರೀಯ (ethnographic) ಮಾಹಿತಿಯಿದೆ. ಇದರಲ್ಲಿ ಐತಿಹಾಸಿಕ ದಾಖಲೆಗಳು, ಭಾಷಾ ಆಧಾರಿತ ಸಾಕ್ಷ್ಯಗಳು, ಸಾಂಸ್ಕೃತಿಕ ಆಚರಣೆಗಳು, ಸಾಂಪ್ರದಾಯಿಕ ಸಂಸ್ಥೆಗಳು ಮತ್ತು ಸಮುದಾಯದ ನಿರಂತರ ಅಸ್ತಿತ್ವವನ್ನು ದಾಖಲಿಸುವ ದಾಖಲೆಗಳು ಸೇರಿವೆ. ಇಂತಹ ಮಾಹಿತಿಯನ್ನು ಸ್ವಯಂ-ಗುರುತಿಸುವಿಕೆ ಹಾಗೂ ಇತರ ವಸ್ತುನಿಷ್ಠ ಸೂಚಕಗಳೊಂದಿಗೆ ಪರಿಗಣಿಸಿ, ಒಂದು ಸಮುದಾಯದ ಬುಡಕಟ್ಟು ಸ್ಥಾನಮಾನವನ್ನು ನಿರ್ಧರಿಸಬಹುದು.
ಆದ್ದರಿಂದ, ಬುಡಕಟ್ಟು ಮಾನ್ಯತೆಯು ಪ್ರತ್ಯೇಕತೆ ಅಥವಾ ಹಿಂದುಳಿದಿರುವಿಕೆಯ ಮಾನದಂಡಗಳನ್ನು ಮೀರಿ ಸಾಗಬೇಕು. ಅದರ ಬದಲಾಗಿ, ಒಂದು ಸಮುದಾಯವು ನಿರಂತರವಾದ ಐತಿಹಾಸಿಕ ಮತ್ತು ಸಾಮೂಹಿಕ ಗುರುತನ್ನು ಹೊಂದಿದೆಯೇ ಎಂಬುದರ ಮೇಲೆ ಗಮನ ಕೇಂದ್ರೀಕರಿಸಬೇಕು. ಅಭಿವೃದ್ಧಿಯ ಉದ್ದೇಶ ಆ ಗುರುತನ್ನು ಬಲಪಡಿಸುವುದಾಗಿರಬೇಕು; ಆ ಗುರುತನ್ನೇ ಪ್ರಶ್ನಿಸಲು ಅಭಿವೃದ್ಧಿಯನ್ನು ಒಂದು ಕಾರಣವನ್ನಾಗಿ ಮಾಡಬಾರದು.
ಚಕ್ಷು ಜೈನ್ ಅವರು NMIMS ಡೀಮ್ಡ್ ಟು ಬಿ ಯೂನಿವರ್ಸಿಟಿ, ಚಂಡೀಗಢದ ಬಿಎ.ಎಲ್‌ಎಲ್‌ಬಿ (Hons.) ಪದವಿಯ 7 ನೇ ಸೆಮಿಸ್ಟರ್ ವಿದ್ಯಾರ್ಥಿ. ಉನ್ನತಿ ಜೈನ್ ಅವರು ಅದೇ ವಿಶ್ವವಿದ್ಯಾಲಯದ ಬಿಬಿಎ.ಎಲ್‌ಎಲ್‌ಬಿ (Hons.) ಪದವಿಯ 5 ನೇ ಸೆಮಿಸ್ಟರ್ ವಿದ್ಯಾರ್ಥಿನಿ. ಈ ಲೇಖನವು Why India's Outdated Framework For Recognising Scheduled Tribes Needs an Update ಎಂಬ ದಿ ವೈರ್ ಲೇಖನದ ಕನ್ನಡಾನುವಾದವಾಗಿದೆ
