ಮೋದಿ ಅವರ ಹೇಳಿಕೆಗಳು ದಮನಕಾರಿ ಆಡಳಿತದ ವಿರುದ್ಧ ಧ್ವನಿ ಎತ್ತುತ್ತಿರುವವರನ್ನು ಕಂಗೆಡಿಸಿವೆ ಎಂದು ಮಾಧವ್ ಹೇಳುತ್ತಾರೆ. ಅವರು ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಈ ದೇಶದ ಯುವಜನರು “ದಿಮಾಗಿ ನಕ್ಸಲ್” ಎಂಬ ಹಣೆಪಟ್ಟಿಯನ್ನು ಸ್ವೀಕರಿಸಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ - ಹಿರಿಯ ಪತ್ರಕರ್ತ, ರಾಜಕೀಯ ವಿಶ್ಲೇಷಕ ಎಂ.ಕೆ ವೇಣು
ಪಕ್ಷದ ಪುನರ್‌ರಚನೆಯ ಭಾಗವಾಗಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸೈದ್ಧಾಂತಿಕ ನಾಯಕ ರಾಮ್ ಮಾಧವ್ ಅವರನ್ನು ಇತ್ತೀಚೆಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ. ನರೇಂದ್ರ ಮೋದಿ–ಅಮಿತ್ ಶಾ ನೇತೃತ್ವದ ವ್ಯವಸ್ಥೆಯಲ್ಲಿ ಕೆಲವು ವರ್ಷಗಳ ಕಾಲ ರಾಜಕೀಯವಾಗಿ ಅಂಚಿನಲ್ಲೇ ಉಳಿದಿದ್ದ ಮಾಧವ್ ಅವರಿಗೆ ಈಗ ಈ ಸ್ಥಾನ ದೊರೆತಿದೆ. ಮಾಧವ್ ಅವರನ್ನು ಅಧಿಕೃತವಾಗಿ ಮತ್ತೆ ಮುನ್ನೆಲೆಗೆ ತರಲು ಆಯ್ಕೆ ಮಾಡಿದ ಸಮಯವೂ ಗಮನಾರ್ಹವಾಗಿದೆ.
ದೇಶಾದ್ಯಂತ ಹದಗೆಟ್ಟ ಶಿಕ್ಷಣ ವ್ಯವಸ್ಥೆಯ ವಿರುದ್ಧ ಪ್ರತಿಭಟಿಸುತ್ತಿರುವ ಭಾರತದ ಯುವಜನರು ಮೋದಿ ಅವರ ‘ಪ್ರಬಲ ನಾಯಕ’ ಎಂಬ ವರ್ಚಸ್ಸಿಗೆ ತೀವ್ರ ಹೊಡೆತ ನೀಡುತ್ತಿರುವ ಸಂದರ್ಭದಲ್ಲೇ ಈ ನೇಮಕ ನಡೆದಿದೆ. ಪ್ರಧಾನಿ ಮೋದಿ ಅವರು ಆಗಸ್ಟ್ 15 ರಂದು ಕೆಂಪುಕೋಟೆಯಿಂದ ಮಾಡಿದ ಭಾಷಣದಲ್ಲಿ “ದಿಮಾಗಿ ನಕ್ಸಲ್” ಎಂಬ ಪರಿಕಲ್ಪನೆಯನ್ನು ದೇಶದ ಮುಂದಿಟ್ಟ ಕೇವಲ 2 ದಿನಗಳ ಬಳಿಕ ಮಾಧವ್ ಅವರ ನೇಮಕ ಘೋಷಣೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು “ದಿಮಾಗಿ ನಕ್ಸಲ್” ಎಂಬ ಪದಪ್ರಯೋಗ ಮಾಡಿದ್ದಕ್ಕೆ ನಿರೀಕ್ಷೆಯಂತೆಯೇ ಜೆನ್‌ಝಡ್ ಯುವಜನರಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ, ಮೀಮ್ಸ್ ಮತ್ತು ರೀಲ್ಸ್‌ಗಳ ಮತ್ತೊಂದು ಅಲೆ ಹರಿದುಬಂತು. ಹಲವು ಪ್ರತಿಪಕ್ಷ ನಾಯಕರು ಬಿಜೆಪಿ ಸೃಷ್ಟಿಸಿದ ಈ ಹೊಸ ಪದಪ್ರಯೋಗವನ್ನು ಉತ್ಸಾಹದಿಂದಲೇ ಬಳಸಿಕೊಂಡರು. ಆದರೆ ಇದು ಕೆಲ ವರ್ಷಗಳ ಹಿಂದೆ ಬಳಸಲಾಗುತ್ತಿದ್ದ “ಅರ್ಬನ್ ನಕ್ಸಲ್” ಎಂಬ ಪದದ ಮತ್ತೊಂದು ರೂಪವಷ್ಟೇ. ಕೆಲವು ವರ್ಷಗಳ ಹಿಂದೆ ಸಂಸತ್ತಿನಲ್ಲಿ ನೀಡಿದ್ದ ಉತ್ತರದ ಪ್ರಕಾರ, “ಅರ್ಬನ್ ನಕ್ಸಲ್” ಎಂಬ ಪದಕ್ಕೆ ಯಾವುದೇ ಅಧಿಕೃತ ಅಸ್ತಿತ್ವವೇ ಇಲ್ಲ.
2020ರ ಮಾರ್ಚ್ 11ರಂದು ರಾಜ್ಯಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ, “‘ಅರ್ಬನ್ ನಕ್ಸಲ್ಸ್’ ಎಂಬ ಪದವನ್ನು ಗೃಹ ವ್ಯವಹಾರಗಳ ಸಚಿವಾಲಯ ಬಳಸುವುದಿಲ್ಲ” ಎಂದು ಹೇಳಿದ್ದರು.
ಮುಂದಿನ ದಿನಗಳಲ್ಲಿ ಮೋದಿ ಸರ್ಕಾರ ಸಂಸತ್ತಿನಲ್ಲಿ ಇದೇ ರೀತಿಯ ಉತ್ತರ ನೀಡಿ, “ದಿಮಾಗಿ ನಕ್ಸಲ್” ಎಂಬ ಪದವೂ ಅಧಿಕೃತ ದಾಖಲೆಗಳಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ಹೇಳುವ ಸಾಧ್ಯತೆ ಇದೆ. ಆದರೆ, ಅಧಿಕೃತ ದಾಖಲೆಗಳಲ್ಲಿ ಅಸ್ತಿತ್ವದಲ್ಲಿಲ್ಲದ ಸಂಗತಿಗಳೇ ಆರ್‌ಎಸ್‌ಎಸ್ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಕ್ಷೇತ್ರ ಎಂಬುದು ನಮಗೆ ಈಗಾಗಲೇ ಚೆನ್ನಾಗಿ ತಿಳಿದಿದೆ! ನೂರಾರು ಸಣ್ಣಪುಟ್ಟ, ಪರಿವಾರ ಸಂಘಟನೆಗಳನ್ನು ಒಳಗೊಂಡಿರುವ ಆರ್‌ಎಸ್‌ಎಸ್‌ನ ಬಹುಹೆಡೆಗಳ ಸಂಘಟನಾ ವ್ಯವಸ್ಥೆ ಕೂಡ ಅಧಿಕೃತ ದಾಖಲೆಗಳಲ್ಲಿ ತನ್ನ ಅಸ್ತಿತ್ವವನ್ನು ತೋರಿಸುವುದಿಲ್ಲ.
ಹೀಗಾಗಿ, ಹೊಸ ಹುದ್ದೆಗೇರಿದ ಬಳಿಕ ಮಾಧವ್ ಅವರು “ದಿಮಾಗಿ ನಕ್ಸಲ್” ಕುರಿತ ಚರ್ಚೆಗೆ ಮತ್ತಷ್ಟು ಇಂಧನ ತುಂಬಿರುವುದು ಅಚ್ಚರಿಯೇನಲ್ಲ. ಆಗಸ್ಟ್ 29ರಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ನಲ್ಲಿ “ದಿಮಾಗಿ ನಕ್ಸಲ್‌ಗೆ ನಿಜವಾಗಿಯೂ ವ್ಯಾಖ್ಯಾನ ಬೇಕೇ?” ಎಂಬ ಶೀರ್ಷಿಕೆಯಡಿ ಅವರು ಅಭಿಪ್ರಾಯ ಲೇಖನವೊಂದನ್ನು ಬರೆದಿದ್ದಾರೆ. ಏಕೆಂದರೆ, ಯಾವುದೇ ವ್ಯಾಖ್ಯಾನವಿಲ್ಲದೆಯೂ ಕೆಲವು ಸಂಗತಿಗಳು ತಮ್ಮದೇ ಆದ ಅಸ್ತಿತ್ವವನ್ನು ಹೊಂದಿರಬೇಕು ಎಂಬ ಕಾರಣಕ್ಕಾಗಿ!
“ಪ್ರಧಾನಿ ಮೋದಿ ಅವರು ತಮ್ಮ ವಿರೋಧಿಗಳ ಮನಸ್ಸನ್ನು ಕೆರಳಿಸುವಲ್ಲಿ ಅಸೂಯೆ ಪಡುವಷ್ಟು ನೈಪುಣ್ಯತೆ ಹೊಂದಿದ್ದಾರೆ” ಎಂದು ಅವರು ಹೇಳಿದ್ದಾರೆ. ಮೋದಿ ಅವರ “ದಿಮಾಗಿ ನಕ್ಸಲ್” ಎಂಬ ಪದಪ್ರಯೋಗವು ಪಾರಿವಾಳಗಳ ಹಿಂಡಿನ ನಡುವೆ ಬೆಕ್ಕನ್ನು ಬಿಟ್ಟಂತಾಗಿದೆ ಎಂದು ಮಾಧವ್ ಬರೆದಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾಜಿ ಗೃಹ ಸಚಿವ ಪಿ. ಚಿದಂಬರಂ ಅವರ “ನಾನು ಹೆಮ್ಮೆಯ ದಿಮಾಗಿ ನಕ್ಸಲ್” ಎಂಬ ಪ್ರತಿಕ್ರಿಯೆ ಹಾಗೂ ಕೆಲವು ಹಿರಿಯ ಪತ್ರಕರ್ತರನ್ನು “ದಿಮಾಗಿ ನಕ್ಸಲ್” ಎಂದು ಬಿಂಬಿಸಿರುವುದನ್ನು ವಿರೋಧಿಸಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
ನಂತರ ಮಾಧವ್ ಈ ವಿಚಾರವನ್ನು ಹಗುರವಾಗಿ ಪರಿಗಣಿಸುತ್ತಾ, ಇಂತಹ “ವಾದ-ವಿವಾದಗಳು ಹಾನಿಕರವಲ್ಲ ಮತ್ತು ಆನಂದದಾಯಕವಾಗಿರಬಹುದು” ಎಂದು ಹೇಳಿದ್ದಾರೆ. ಹಿಂದೆ ಕೂಡ “ಅರ್ಬನ್ ನಕ್ಸಲ್” ಮತ್ತು “ಖಾನ್ ಮಾರ್ಕೆಟ್ ಗ್ಯಾಂಗ್”ನಂತಹ ಪದಗಳನ್ನು ಬಳಸಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ. ಅಂದಹಾಗೆ, ಮಾಧವ್ ಅವರೂ ತಮ್ಮದೇ ಗ್ಯಾಂಗ್‌ನೊಂದಿಗೆ ಖಾನ್ ಮಾರ್ಕೆಟ್‌ನಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುತ್ತಿದ್ದರು ಎಂಬುದು ತಿಳಿದಿರುವ ಸಂಗತಿ.
ಮೋದಿ ಅವರ ಹೇಳಿಕೆಯನ್ನು ಸಮರ್ಥಿಸುವ ಅಥವಾ ಸಾಮಾನ್ಯೀಕರಿಸುವ ಪ್ರಯತ್ನವನ್ನು ಮಾಧವ್ ಮಾಡುತ್ತಿರುವುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಮಾವೋವಾದಿಗಳಿಗೆ ನಗರ ಪ್ರದೇಶಗಳ ಬುದ್ಧಿಜೀವಿಗಳ ಬೆಂಬಲವಿದೆ ಎಂಬ ಆತಂಕವನ್ನು ಯುನೈಟೆಡ್ ಪ್ರೋಗ್ರೆಸಿವ್ ಅಲಯನ್ಸ್ (ಯುಪಿಎ) ಸರ್ಕಾರವೂ ಹೊಂದಿತ್ತು ಎಂದು ಸೂಚಿಸುವ ಮೂಲಕ ಅವರು ಮೋದಿ ಅವರ ಹೇಳಿಕೆಯನ್ನು ಸಮರ್ಥಿಸಲು ಪ್ರಯತ್ನಿಸಿದ್ದಾರೆ.
ಆದರೆ, ಮೋದಿ ಆಡಳಿತದಲ್ಲಿ ಭಿನ್ನಾಭಿಪ್ರಾಯವನ್ನು ಅಪರಾಧೀಕರಿಸಿರುವುದು ಹಿಂದೆಂದೂ ಕಾಣದ ಮಟ್ಟಕ್ಕೆ ತಲುಪಿರುವುದನ್ನು ಗಮನಿಸಿದರೆ ಮಾಧವ್ ಅವರ ಈ ಚಾಣಾಕ್ಷ ವಾದ ಇಲ್ಲಿಗೇ ನಿಲ್ಲುವುದಿಲ್ಲ. ಸರ್ಕಾರದ ಮಾತಿಗೆ ತಲೆಬಾಗದ ಪ್ರತಿಪಕ್ಷ ನಾಯಕರು, ಎನ್‌ಜಿಒಗಳು, ಮಾಧ್ಯಮ ಸಂಸ್ಥೆಗಳು, ಹೋರಾಟಗಾರರು ಮತ್ತು ಉದ್ಯಮಿಗಳ ವಿರುದ್ಧ ಪೊಲೀಸರು ಹಾಗೂ ತನಿಖಾ ಸಂಸ್ಥೆಗಳನ್ನು ಯಾವ ಪ್ರಮಾಣದಲ್ಲಿ ಬಳಸಲಾಗಿದೆ ಎಂಬುದನ್ನು ತೋರಿಸಲು ಸಾಕಷ್ಟು ದತ್ತಾಂಶಗಳಿವೆ.
“ಅರ್ಬನ್ ನಕ್ಸಲ್”, “ಲ್ಯೂಟನ್ಸ್ ಗ್ಯಾಂಗ್” ಮತ್ತು ಈಗ “ದಿಮಾಗಿ ನಕ್ಸಲ್” ಎಂಬ ಪದಗಳೆಲ್ಲವೂ ಹಿಂದೂತ್ವದ ಬಲಪಂಥೀಯರ ರಾಜಕೀಯ ಅಸ್ತ್ರಗಳ ಭಾಗವಾಗಿವೆ. ಸ್ವಾತಂತ್ರ್ಯಾನಂತರ ಹಲವು ದಶಕಗಳ ಕಾಲ ದೇಶದ ರಾಜಕೀಯ ಚರ್ಚೆಯನ್ನು ಪ್ರಭಾವಿಸಿದ್ದ ಎಡಪಂಥೀಯ-ಕೇಂದ್ರಾಭಿಮುಖ ಹಾಗೂ ನೆಹರೂವಾದಿ ಚಿಂತನೆಗಳನ್ನು ಈ ಪದಗಳು ಗುರಿಯಾಗಿಸುತ್ತವೆ.
ಬಿಜೆಪಿಯ ಹಿರಿಯ ನಾಯಕ ಹಾಗೂ ಪಕ್ಷದ ಮಾಜಿ ಅಧ್ಯಕ್ಷ ಮುರಳಿ ಮನೋಹರ ಜೋಶಿ ಒಮ್ಮೆ ನನಗೆ ಹೇಳಿದ್ದರು: ಎಡಪಂಥೀಯರು ಮತ್ತು ಸಮಾಜವಾದಿಗಳು ಚುನಾವಣಾ ರಾಜಕೀಯದ ಅಧಿಕೃತ ಅಧಿಕಾರ ವ್ಯವಸ್ಥೆಯಲ್ಲಿ ಅಂಚಿಗೆ ತಳ್ಳಲ್ಪಡಬಹುದು; ಆದರೆ ಅವರ ಚಿಂತನಾ ಪ್ರಕ್ರಿಯೆ ಹಾಗೂ ಭಾರತೀಯ ಸಮಾಜದ ಒಟ್ಟಾರೆ ಮನಸ್ಥಿತಿಯ ಮೇಲಿನ ಅವರ ಪ್ರಭಾವ ಅಷ್ಟು ಸುಲಭವಾಗಿ ಮಾಯವಾಗುವುದಿಲ್ಲ.
ಜೋಶಿ ಅವರ ಈ ಮಾತನ್ನು ಗಮನಿಸಿದರೆ, ನಮ್ಮ ರಾಜಕೀಯ ವ್ಯವಸ್ಥೆಯಲ್ಲಿರುವ “ದಿಮಾಗಿ ನಕ್ಸಲ್” ಮನೋಭಾವವು ಬಹುಸಂಖ್ಯಾತ ಭಾರತೀಯರ ಚಿಂತನೆಯಲ್ಲೇ ಆಳವಾಗಿ ಬೇರೂರಿದೆ ಎಂಬುದನ್ನು ಸೂಚಿಸಬಹುದು.
ಬದಲಾವಣೆಯನ್ನು ತರಲು ನಡೆದ ಬಹುತೇಕ ಎಲ್ಲ ದೊಡ್ಡ ರಾಜಕೀಯ ಚಳವಳಿಗಳಿಗೂ ಪ್ರಧಾನಿ ಮೋದಿ ನಿರ್ಮೂಲನೆ ಮಾಡಲು ಬಯಸುತ್ತಿರುವ ಇದೇ ಮನೋಭಾವವೇ ಬಹುಶಃ ಪ್ರೇರಕ ಶಕ್ತಿಯಾಗಿತ್ತು. ಉತ್ತರ ಭಾರತದಲ್ಲಿ ನಡೆದ ಅತಿದೊಡ್ಡ ಯುವಜನ ಚಳವಳಿಗಳಲ್ಲಿ ಒಂದಕ್ಕೆ ನಾಯಕತ್ವ ವಹಿಸಿದ್ದ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರನ್ನು ಇಂದಿನ “ದಿಮಾಗಿ ನಕ್ಸಲ್” ಎಂಬ ವ್ಯಾಖ್ಯಾನದ ಪ್ರಕಾರ ಸುಲಭವಾಗಿಯೇ ಆ ಹೆಸರಿನಡಿ ವರ್ಗೀಕರಿಸಬಹುದಿತ್ತು. ತುರ್ತು ಪರಿಸ್ಥಿತಿ ಹೇರಿಕೆಯಾಗುವ ಮುನ್ನ ದಮನಕಾರಿ ಭಾರತ ಸರ್ಕಾರದ ವಿರುದ್ಧ ಪೊಲೀಸರು ಮತ್ತು ಸೈನಿಕರು ದಂಗೆ ಏಳುವಂತೆ ಕರೆ ನೀಡಿದ್ದೇ ಅವರ ಪಾಲಿನ ಅತಿದೊಡ್ಡ “ದೇಶವಿರೋಧಿ” ಕೃತ್ಯವಾಗುತ್ತಿತ್ತು.
ಇಂದಿನ ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯದ ಮೇಲಿನ ಅಸಹಿಷ್ಣುತೆಯ ಮಟ್ಟವನ್ನು ಗಮನಿಸಿದರೆ, ಜಯಪ್ರಕಾಶ್ ನಾರಾಯಣ್ ಅವರ ವಿರುದ್ಧ ಯುಎಪಿಎ, ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ), ದೇಶದ್ರೋಹದಂತಹ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ವಿಚಾರಣೆಯೇ ಇಲ್ಲದೆ ಜೈಲಿನಲ್ಲಿ ಕೊಳೆಯಲು ಬಿಡಲಾಗುತ್ತಿತ್ತು. ಪ್ರಸ್ತುತ ಸರ್ಕಾರದ ಹಲವು ಸಚಿವರು ಮತ್ತು ಬಿಜೆಪಿ ನಾಯಕರು ಒಮ್ಮೆ ಜೆ.ಪಿ. ಅವರ ಅನುಯಾಯಿಗಳಾಗಿದ್ದರು. ಆದರೆ ಕಳೆದ ಒಂದು ದಶಕದಲ್ಲಿ ಅವರಿಗೆ ರಾಜಕೀಯ ಮರೆಗುಳಿತನ ಬಂದಂತಿದೆ.
ಮಾಧವ್ ಅವರು ತಮ್ಮ ನಾಯಕರಿಗೆ ತಮ್ಮ ಸೈದ್ಧಾಂತಿಕ ರಾಜಕೀಯ ಅಸ್ತ್ರಗಳ ಪುಸ್ತಕವನ್ನೇ ಬದಿಗಿಡುವಂತೆ ಸಲಹೆ ನೀಡುವುದು ಒಳಿತು. ಏಕೆಂದರೆ, ಅದರ ಅವಧಿ ಮುಗಿದಿದೆ ಎಂಬುದನ್ನು ಜೆನ್‌ಝಡ್, ಜೆನ್‌ಎಕ್ಸ್ ಮತ್ತು ಆಲ್ಫಾ ಪೀಳಿಗೆಯ ಚಳವಳಿ ಈಗಾಗಲೇ ಸಾರಿ ಸಾರಿ ಹೇಳಿದೆ. ಈ ಚಳವಳಿ ದೇಶದ ವಿವಿಧ ಭಾಗಗಳಲ್ಲಿ ವಿಕೇಂದ್ರೀಕೃತ ರೂಪದಲ್ಲಿ ಇನ್ನೂ ಮುಂದುವರಿಯುತ್ತಿದೆ. ಕಳೆದ 12 ವರ್ಷಗಳಿಂದ ಪದೇಪದೇ ಬಳಸಲಾಗುತ್ತಿರುವ ಈ ಕೋಮುವಾದಿ ಮತ್ತು ಅತಿರಾಷ್ಟ್ರವಾದಿ ರಾಜಕೀಯ ಅಸ್ತ್ರಗಳು ಈಗಾಗಲೇ ಸವೆದುಹೋಗಿದ್ದು, ಅವುಗಳ ಧ್ವನಿ ತುಂಬಾ ಹಳೆಯದಾಗಿ ಮತ್ತು ನೀರಸವಾಗಿ ಕೇಳಿಸುತ್ತಿದೆ.
ಈ ದಮನಕಾರಿ ಆಡಳಿತದ ವಿರುದ್ಧ ಧ್ವನಿ ಎತ್ತುತ್ತಿರುವವರನ್ನು ಮೋದಿ ಅವರ ಹೇಳಿಕೆಗಳು ಬಹುಶಃ ಕಂಗೆಡಿಸಿವೆ ಎಂದು ಮಾಧವ್ ಅಭಿಪ್ರಾಯಪಡುತ್ತಾರೆ. ಆದರೆ ಪರಿಸ್ಥಿತಿ ಹಾಗಿಲ್ಲ. ಏಕೆಂದರೆ, ಈ ದೇಶದ ಯುವಜನರು “ದಿಮಾಗಿ ನಕ್ಸಲ್” ಎಂಬ ಹಣೆಪಟ್ಟಿಯನ್ನು ಸ್ವೀಕರಿಸಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. 16 ರಿಂದ 30 ವರ್ಷ ವಯಸ್ಸಿನ ಯುವಜನರು ಇಂದು ಏನು ಯೋಚಿಸುತ್ತಿದ್ದಾರೆ ಎಂಬುದರ ಬಗ್ಗೆ ನಿಖರವಾದ ಅಭಿಪ್ರಾಯ ಪಡೆಯಲು ಬಿಜೆಪಿ ತನ್ನ ಅಪಾರ ಸಂಪನ್ಮೂಲಗಳನ್ನು ಬಳಸಿಕೊಂಡು ಸಮೀಕ್ಷೆ ನಡೆಸಿ ಈ ಮಾತನ್ನು ಪರೀಕ್ಷಿಸಬಹುದು. ಯುವಜನರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. 2047 ರ ವೇಳೆಗೆ “ಅಮೃತ ಕಾಲ” ಮತ್ತು “ವಿಕಸಿತ ಭಾರತ” ನಿರ್ಮಾಣವಾಗಲಿದೆ ಎಂಬ ಅಸ್ಪಷ್ಟ ಭರವಸೆಗಳನ್ನು ಮುಂದಿಡುವ ಹಿಂದೂತ್ವವಾದಿ ರಾಷ್ಟ್ರೀಯತೆಯ ಕಾರ್ಯಸೂಚಿಗೆ ಅವರ ಬಳಿ ಸಮಯವಿಲ್ಲ.
2019ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಮರುದಿನವೇ ಇಂಡಿಯನ್ ಎಕ್ಸ್‌ಪ್ರೆಸ್ನಲ್ಲಿ ಲೇಖನವೊಂದನ್ನು ಬರೆದಿದ್ದು ಇದೇ ಮಾಧವ್. ಅದರಲ್ಲಿ ಅವರು, “ಸುಳ್ಳು ಜಾತ್ಯತೀತವಾದಿ/ಉದಾರವಾದಿ ಕೂಟಗಳ ಖಾನ್ ಮಾರ್ಕೆಟ್‌ನ ಗದ್ದಲವು ದೇಶದ ಬೌದ್ಧಿಕ ಮತ್ತು ನೀತಿ ನಿರೂಪಣಾ ವ್ಯವಸ್ಥೆಯ ಮೇಲೆ ಅದರ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಭಾವ ಮತ್ತು ಹಿಡಿತ ಸಾಧಿಸಿತ್ತು. ಮೋದಿ-2 ಸರ್ಕಾರದ ಅಡಿಯಲ್ಲಿ, ಆ ಕೂಟದ ಉಳಿದ ಅವಶೇಷಗಳನ್ನು ದೇಶದ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಬೌದ್ಧಿಕ ವಲಯಗಳಿಂದ ಹೊರಗಟ್ಟಬೇಕು” ಎಂದು ಹೇಳಿದ್ದರು.
ಇಲ್ಲಿಯೂ “ದಿಮಾಗಿ ನಕ್ಸಲ್”ನ ಛಾಯೆ ಕಾಣಿಸುತ್ತಿದೆಯೇ? ಭಿನ್ನಾಭಿಪ್ರಾಯವನ್ನು ನಿರ್ಮೂಲನೆ ಮಾಡುವ ಕಲ್ಪನೆ ಬಹಳ ಹಿಂದಿನಿಂದಲೇ ಚಾಲ್ತಿಯಲ್ಲಿದೆ ಮತ್ತು ಈಗ ರಾಜಕೀಯ ವ್ಯವಸ್ಥೆ ಹಾಗೂ ಸಮಾಜ ಎರಡೂ ಒಂದು ಹಂತದ ದಣಿವಿನ ಸ್ಥಿತಿಗೆ ತಲುಪಿವೆ ಎಂದು ಸಮಂಜಸವಾಗಿಯೇ ವಾದಿಸಬಹುದು. ಯುವಜನರ ಈ ನೇರ ಪ್ರತಿರೋಧವು ಅವರ ಅಸಹನೆಯನ್ನೇ ಪ್ರತಿಬಿಂಬಿಸುತ್ತದೆ. ಹೊಸದಾಗಿ ಜವಾಬ್ದಾರಿ ವಹಿಸಿಕೊಂಡಿರುವ ರಾಮ್ ಮಾಧವ್ ಅವರು ಇದನ್ನು ಎಲ್ಲರಿಗಿಂತ ಮೊದಲು ಅರ್ಥಮಾಡಿಕೊಳ್ಳಬೇಕು.
ಇದು ಹಿರಿಯ ಪತ್ರಕರ್ತ, ರಾಜಕೀಯ ವಿಶ್ಲೇಷಕ ಎಂ.ಕೆ ವೇಣು ಅವರು ದಿ ವೈರ್‌ನಲ್ಲಿ ಬರೆದಿರುವ Ram Madhav Is Back But BJP's 'Dimagi Naxal' Playbook Has Expired ಲೇಖನದ ಕನ್ನಡಾನುವಾದ
