“..ಆರ್‌ಎಸ್‌ಎಸ್‌ನ ಭಾಷಾ ಶೈಲಿಯ ಮುಖ್ಯ ತಂತ್ರವೆಂದರೆ, “ಸಂಘರ್ಷವನ್ನು ಮರೆಮಾಚಿ, ತಾರತಮ್ಯ ಉಳಿಸಿಕೊಂಡು, ಕೃತಕ ಏಕತೆಯನ್ನು ಸ್ಥಾಪಿಸುವುದು”. ಹಕ್ಕುಗಳ ಆಧಾರಿತ ಹೋರಾಟಗಳನ್ನು ಸಾಂಸ್ಕೃತಿಕ, ಧಾರ್ಮಿಕ ಕರ್ತವ್ಯದ ಚೌಕಟ್ಟಿಗೆ ತರುವುದು..” ನಿಖಿಲ್ ಕೋಲ್ಪೆಯವರ ಬರಹದಲ್ಲಿ
ತುಳು ಭಾಷೆಯಲ್ಲಿ ಒಂದು ಮಾತಿದೆ- “ಬಾಯಿಡ್ ಮಗ ಮಗ; ಬಂಜಿಡ್ ಬಗ ಬಗ!” ಅಂತ. ಬಾಯಲ್ಲಿ “ಮಗ ಮಗ” ಎಂದು ಲಲ್ಲೆಗೆರೆದರೂ ಹೊಟ್ಟಿಯಲ್ಲಿ ಕಿಚ್ಚು “ಭಗ ಭಗ” ಎಂದು ಉರಿಯುತ್ತದೆ ಎಂದು ಇದರ ಅರ್ಥ. ಎದುರಿನಲ್ಲಿ ಸಜ್ಜನರಂತೆ ವರ್ತಿಸಿ, ಒಗಗೊಳಗೇ ನಿಮಗೆ ಕೇಡನ್ನು ಚಿಂತಿಸುವವನ್ನು ಉದ್ದೇಶಿಸಿ ಈ ಮಾತು ಇದೆ. ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬಂತಿರುವ ಆರ್‌ಎಸ್‌ಎಸ್ ಸಂಘಟನೆಗೆ ಇದು ಸರಿಯಾಗಿ ಅನ್ವಯಿಸುತ್ತದೆ. ಆರೆಸ್ಸೆಸ್ಸಿನ ತತ್ವ, ಉದ್ದೇಶ, ನೀತಿ, ಪರಿಕಲ್ಪನೆ, ಪರಿಭಾಷೆ ಮತ್ತು ಕೃತ್ಯ- ಎಲ್ಲವುಗಳಲ್ಲೂ ಎರಡೆರಡು ಅರ್ಥಗಳಿವೆ, ಇಬ್ಬಗೆಯಿದೆ. ವಿರೋಧಿಗಳನ್ನು ಮಾತ್ರವಲ್ಲದೇ, ತನ್ನ ಕಾರ್ಯಕರ್ತರನ್ನೂ ಗೊಂದಲಗೊಳಿಸುವ ತಂತ್ರವನ್ನು ಇದು ಹೊಂದಿದೆ. ಈ ಕುರಿತು ಈಗಾಗಲೇ ಉಲ್ಲೇಖಿಸಿದ್ದರೂ, ಇದನ್ನು ಸ್ವಲ್ಪ ವಿವರವಾಗಿ ನೋಡೋಣ.
ಆರ್‌ಎಸ್‌ಎಸ್ ಬಳಸುವ ಭಾಷೆ ಮತ್ತು ಶಬ್ದಕೋಶ ಜೊತೆಗೆ ಪರಿಭಾಷೆ ಅಥವಾ ಪಾರಿಭಾಷಿಕ ಪದಗಳು ಕೇವಲ ಸಂವಹನಕ್ಕಷ್ಟೇ ಸೀಮಿತವಾಗಿಲ್ಲ; ಅದು ಅದರ ವಿಚಾರಧಾರೆ ಮತ್ತು ಸಮಾಜವನ್ನು ನೋಡುವ ದೃಷ್ಟಿಕೋನವನ್ನು ರೂಪಿಸುವ ಮತ್ತು ಪ್ರತಿಫಲಿಸುವ ಒಂದು ಪ್ರಮುಖ ಸಾಧನವಾಗಿದೆ. ಉದಾಹರಣೆಗೆ “ಹಿಂದೂ” (Hindu) ಪದದ ಮೂಲ ಮತ್ತು ಆರ್‌ಎಸ್‌ಎಸ್‌ನ ಇಬ್ಬಗೆಯ ನಿಲುವುಗಳನ್ನು ನೋಡೋಣ. “ಹಿಂದೂ” ಎಂಬ ಪದವು ‘ಸಿಂಧೂ’ ಎಂಬ ಸಂಸ್ಕೃತ ಶಬ್ದದಿಂದ ಬಂದಿದೆ. ಪ್ರಾಚೀನ ಪರ್ಷಿಯನ್ನರು (ಪಾರ್ಸಿ) ಭಾರತೀಯ ಉಪಖಂಡದ ಜನರೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದಾಗ, ‘ಸ’ಕಾರವನ್ನು ‘ಹ’ ಎಂದು ಉಚ್ಚರಿಸುತ್ತಿದ್ದರು. ಹೀಗಾಗಿ ‘ಸಿಂಧೂ’ ನದಿಯ ಆಚೆಗೆ ವಾಸಿಸುತ್ತಿದ್ದ ಜನರನ್ನು ಮತ್ತು ಆ ಪ್ರದೇಶವನ್ನು ‘ಹಿಂದೂ’ ಎಂದು ಕರೆಯಲಾಯಿತು ಎಂಬುದು ಪ್ರಾಥಮಿಕ ಶಿಕ್ಷಣ ಹೊಂದಿರುವ ಎಲ್ಲರಿಗೂ ಗೊತ್ತು. ಗ್ರೀಕರು ಇದನ್ನು ‘ಇಂಡಸ್’ (Indus – ಇದರಿಂದ ‘ಇಂಡಿಯಾ’ ಎಂಬ ಹೆಸರು ಬಂತು) ಎಂದು ಉಚ್ಚರಿಸಿದರು. ಅರಬ್ಬರು ಮತ್ತು ಮಧ್ಯ ಏಷ್ಯಾದವರು ‘ಅಲ್-ಹಿಂದ್’ ಎಂದು ಕರೆದರು. ಆರಂಭದಲ್ಲಿ ಇದು ಯಾವುದೇ ಒಂದು ನಿರ್ದಿಷ್ಟ ಧರ್ಮವನ್ನು ಸೂಚಿಸದೆ, ಕೇವಲ ಭೌಗೋಳಿಕ ಮತ್ತು ಸಾಂಸ್ಕೃತಿಕ ಗುರುತಾಗಿತ್ತು. ಪಶ್ಚಿಮದ ಧರ್ಮಗಳಿಂದ ಭಾರತದ ಸ್ಥಳೀಯ ಸಾಂಪ್ರದಾಯಿಕ ನಂಬಿಕೆಗಳನ್ನು ಪ್ರತ್ಯೇಕಿಸಿ ನೋಡಲು, ವಿಶೇಷವಾಗಿ ಬ್ರಿಟಿಷ್ ಆಡಳಿತಾವಧಿಯಲ್ಲಿ, “ಹಿಂದೂ” ಎಂಬುದು ಒಂದು ಧಾರ್ಮಿಕ ವರ್ಗವಾಗಿ ರೂಪುಗೊಂಡಿತು. ಹಿಂದೂ ಮಹಾಸಭಾ, ಕಾಂಗ್ರೆಸ್, ಆರೆಸ್ಸೆಸ್ ಸೇರಿದಂತೆ ಎಲ್ಲರೂ ಇದಕ್ಕೆ ನೇತುಹಾಕಿಕೊಂಡರು. ಹಿಂದೂ ಪದದ ಕುರಿತು ಇಂದಿಗೂ ಎಲ್ಲರಲ್ಲೂ ಗೊಂದಲವಿದೆ. ದಲಿತರು, ಆದಿವಾಸಿಗಳು “ನಾವು ಹಿಂದೂಗಳಲ್ಲ” ಎಂದು ಹೇಳುತ್ತಾರೆ. ಪೇಜಾವರದ ಹಿಂದಿನ ಮಠಾಧೀಶರೇ “ಬ್ರಾಹ್ಮಣರು ಹಿಂದೂಗಳಲ್ಲ” ಎಂದು ಹೇಳಿದ್ದರು. ನಮ್ಮ ಕರಾವಳಿಯಲ್ಲಿ ಇತ್ತೀಚಿನ ತನಕ ಹಳ್ಳಿಗರು “ನಾವು ಹಿಂದೂಗಳು” ಎನ್ನುವಾಗ ಅದರಲ್ಲಿ ಬ್ರಾಹ್ಮಣರು, ಕೊಂಕಣಿ ಜಿಎಸ್‌ಬಿಗಳು, ಮುಸ್ಲಿಮರು, ಕ್ರೈಸ್ತರು, ದಲಿತರು ಇರುತ್ತಿರಲಿಲ್ಲ! ಅವರನ್ನು ಬಿಟ್ಟು ಉಳಿದ ಶೂದ್ರರು, ತುಳುವರು ಎಂಬ ಅರ್ಥವೇ ಇರುತ್ತಿದ್ದುದು. ಈ ಗೊಂದಲವೇ ಆರೆಸ್ಸೆಸ್ಸಿಗೆ ಬೇಕಾಗಿರುವುದು.
”ಹಿಂದೂ” ಪದದ ಕುರಿತು ಆರ್‌ಎಸ್‌ಎಸ್‌ನ ಇಬ್ಬಗೆಯ ನಿಲುವು
ಆರ್‌ಎಸ್‌ಎಸ್ ಈ ಪದವನ್ನು ಸನ್ನಿವೇಶಕ್ಕೆ ತಕ್ಕಂತೆ- ಭಾರತೀಯ ನಾಗರಿಕತೆಯ ವಿಶಾಲ ಗುರುತಾಗಿಯೂ, ಮತ್ತು ಸಾಂಸ್ಕೃತಿಕ-ರಾಜಕೀಯ ಸಂಘಟನೆಯ ಮೂಲಾಧಾರವಾಗಿಯೂ – ಹೀಗೆ ಎರಡು ವಿಭಿನ್ನ ಕೋನಗಳಲ್ಲಿ ಬಳಸಿಕೊಂಡಿದೆ. ಸಾರ್ವಜನಿಕ ವೇದಿಕೆಗಳಲ್ಲಿ ಆರ್‌ಎಸ್‌ಎಸ್ ನಾಯಕರು “ಹಿಂದೂ” ಎಂಬುದು ಕೇವಲ ಒಂದು ಪೂಜಾ ಪದ್ಧತಿ ಅಥವಾ ಧರ್ಮವಲ್ಲ, ಅದು ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರ ನಾಗರಿಕ ಮತ್ತು ಸಾಂಸ್ಕೃತಿಕ ಗುರುತು ಎಂದು ಪ್ರತಿಪಾದಿಸುತ್ತಾರೆ. ಈ ವ್ಯಾಖ್ಯಾನದಂತೆ ಭಾರತದಲ್ಲಿ ಹುಟ್ಟಿದ ಮುಸ್ಲಿಮರು, ಕ್ರಿಶ್ಚಿಯನ್, ಸಿಖ್ ಸೇರಿದಂತೆ ಪ್ರತಿಯೊಬ್ಬರೂ ಸಾಂಸ್ಕೃತಿಕವಾಗಿ “ಹಿಂದೂ”ಗಳೇ ಆಗಿದ್ದಾರೆ.
ಆರೆಸ್ಸೆಸ್ಸಿನ ಸರಸಂಘಚಾಲಕ ಮೋಹನ್ ಭಾಗವತ್ ಆಗಾಗ ಉದುರಿಸುವ ಯಥಾವತ್ ಅಣಿಮುತ್ತುಗಳು ಇಲ್ಲಿವೆ: ”140 ಕೋಟಿ ಭಾರತೀಯರಿಗೂ ‘ಹಿಂದೂ’ ಎಂಬ ಪದ ಅನ್ವಯಿಸುತ್ತದೆ… ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ ತಮ್ಮ ರಾಷ್ಟ್ರೀಯತೆ ಮತ್ತು ಸಾಂಸ್ಕೃತಿಕ ಪರಂಪರೆಯ ದೃಷ್ಟಿಯಿಂದ ಹಿಂದೂಗಳೇ.” ಮತ್ತು “ಭಾರತದಲ್ಲಿ ‘ಅಹಿಂದೂ’ (ಹಿಂದೂ ಅಲ್ಲದವರು) ಯಾರೂ ಇಲ್ಲ… ಇಲ್ಲಿನ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರೆಲ್ಲರೂ ಒಂದೇ ಪೂರ್ವರಜರ ವಂಶಜರು.” ಚುನಾವಣೆಗಳು ಬಂದಾಗ ಮುಸ್ಲಿಂ, ಕ್ರೈಸ್ತರು ಮತ್ತು ವಾಜಪೇಯಿಯಂತವರನ್ನು ಮೆಚ್ಚುವ ಮಂದಗಾಮಿ ಸೆಕ್ಯುಲರ್ ಮತದಾರರನ್ನು ಓಲೈಸಲು ಈ ಮಾತುಗಳು ಮುನ್ನೆಲೆಗೆ ಬರುತ್ತವೆ.
ಆರ್‌ಎಸ್‌ಎಸ್ ‘ಹಿಂದೂಯಿಸಂ’ ಎಂಬ ಪದವನ್ನು ಪಾಶ್ಚಿಮಾತ್ಯರು ಅಥವಾ ವಿದೇಶಿಯರು ನೀಡಿದ ಸಂಕುಚಿತ ಪದ ಎಂದು ಭಾವಿಸುತ್ತದೆ. ಅದರ ಪ್ರಕಾರ, ‘ಹಿಂದುತ್ವ’ ಎಂಬುದು ಭಾರತೀಯ ಸಂಸ್ಕೃತಿಯ ನೈಜ ಸ್ವರೂಪ ಎಂದು ಹೇಳುತ್ತದೆ. ”ನೀವು ವಿದೇಶಿ ಚಿಂತನೆಗಳಿಂದ ಹೊರಬರಬೇಕು… ‘ಇಸಂ’ (ism) ಎಂಬುದು ವಿದೇಶಿ ಶಬ್ದ, ಅದನ್ನು ಹಿಂದಿಯಲ್ಲಿ ‘ವಾದ’ ಎಂದು ಕರೆಯುತ್ತೇವೆ. ಆದರೆ ನಮ್ಮ ಸಾಂಪ್ರದಾಯಿಕ ಪದ ‘ಹಿಂದೂತ್ವ’, ಹಿಂದೂತನ. ಹಿಂದೂತ್ವವು ಯಾರನ್ನೂ ಹೊರಗಿಡುವುದಿಲ್ಲ, ಎಲ್ಲರನ್ನೂ ಒಳಗೊಳ್ಳುತ್ತದೆ.” ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಇದರ ಒಳ ಅರ್ಥವೆಂದರೆ, ಧಾರ್ಮಿಕ ಹಿಂದೂ ಅಲ್ಲದವರು ಹಿಂದೂ ಪದ್ಧತಿ, ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು; ಇಲ್ಲಿ ಬೇರೆ ಧರ್ಮಗಳಿಂದ, ಮೂಲ ನಿವಾಸಿಗಳಿಂದ ಬಂದ ಆಚರಣೆಗಳಿಗೆ ಸ್ಥಾನವಿಲ್ಲ. ಉಳಿದದ್ದು ತೋರಿಕೆಯ ಮಾತು.
ಅದೇ ಸಮಯದಲ್ಲಿ, ತಮ್ಮ ಸಂಘಟನೆಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಅಥವಾ ರಾಷ್ಟ್ರೀಯ ಭದ್ರತೆಯ ವಿಷಯ ಬಂದಾಗ, ಆರ್‌ಎಸ್‌ಎಸ್ “ಹಿಂದೂ” ಎಂಬ ಪದವನ್ನು ದೇಶವನ್ನು ರಕ್ಷಿಸಲು ಸಂಘಟಿತರಾಗಬೇಕಾದ ಒಂದು ನಿರ್ದಿಷ್ಟ ಸಾಮಾಜಿಕ ಅದಕ್ಕಿಂತಲೂ ಹೆಚ್ಚಾಗಿ ವಿಶಾಲ ಧಾರ್ಮಿಕ ಸಮುದಾಯವಾಗಿ ಸಂಕುಚಿತ ಅರ್ಥದಲ್ಲಿ ಬಿಂಬಿಸುತ್ತದೆ. ಮುಸ್ಲಿಮರು, ಭಯೋತ್ಪಾದಕರು, ಪಾಕಿಸ್ತಾನ, ಬಾಂಗ್ಲಾದೇಶ ಇತ್ಯಾದಿಗಳನ್ನು ಮುನ್ನೆಲೆಗೆ ತರುತ್ತದೆ. ”ಹಿಂದೂ ಸಮಾಜವು ತನ್ನನ್ನು ತಾನು ಸಂಘಟಿಸಿಕೊಳ್ಳುವುದು ಅದರ ಹೊಣೆಗಾರಿಕೆಯಾಗಿದೆ… ಹಿಂದೂಗಳು ಬಲಶಾಲಿಯಾದಾಗ ದೇಶವು ಸುರಕ್ಷಿತವಾಗಿರುತ್ತದೆ.” ಎಂಬುದು ಮೋಹನ್ ಭಾಗವತ್ ನುಡಿಮುತ್ತು. ಆದರೆ, ಸಂಘದ ಚಟುವಟಿಕೆಗಳಲ್ಲಿ ಸಾರಾಸಗಟಾಗಿ ಮುಸ್ಲಿಂ ಸಹಿತ ಪರಧರ್ಮೀಯರ ದ್ವೇಷವನ್ನು ಕಲಿಸಲಾಗುತ್ತದೆ. ಸಂಘಪರಿವಾರದ ನಾಯಕರು ಮತ್ತು ಅದರ ಬಾಡಿಗೆ ಭಾಷಣಕಾರರು ಬಹಿರಂಗವಾಗಿಯೇ ಮುಸ್ಲಿಮರ ವಿರುದ್ಧ ಅವಹೇಳನಕಾರಿ, ಪ್ರಚೋದಕ ಭಾಷಣಗಳನ್ನು ಮಾಡುತ್ತಾರೆ. ಇದನ್ನೇ ಸೂಕ್ಷ್ಮವಾಗಿ ಪರಿಶೀಲಿಸಿದರೆ, ನಿಮಗೆ ಇದರ ಆಯಾಮಗಳು ಗೊತ್ತಾಗುತ್ತದೆ. ಇದಕ್ಕಾಗಿಯೇ ಈಗ ಬ್ರಾಹ್ಮಣ ಮೇಲ್ಮೆಯನ್ನು ಪ್ರತಿಪಾದಿಸುವ “ಸನಾತನ” ಎಂಬ ಪದವನ್ನು ಹೆಚ್ಚಾಗಿ ಚಾಲ್ತಿಗೆ ತರಲಾಗುತ್ತಿದೆ.
ಇದೇ ಮಾದರಿಯನ್ನು ಅವರು ಸಮಾಜದ ವಿವಿಧ ವರ್ಗಗಳನ್ನು ವರ್ಗೀಕರಿಸಲು ಬಳಸುವ ಪರ್ಯಾಯ ಪರಿಭಾಷೆಗಳಲ್ಲಿ (Parallel Terminology) ಕಾಣಬಹುದು. ಈ ಶಬ್ದಗಳ ಬಳಕೆಯ ಹಿಂದಿರುವ ಸಾಮಾಜಿಕ ಮತ್ತು ರಾಜಕೀಯ ದುರುದ್ದೇಶಗಳನ್ನು ನಾವು ಗಮನಿಸಬೇಕು.
ಮೂಲನಿವಾಸಿ, ಆದಿವಾಸಿಯಲ್ಲ- ವನವಾಸಿ ಅಥವಾ ಅರಣ್ಯವಾಸಿ!
ನಾವೆಲ್ಲರೂ ಸಮಾಜಶಾಸ್ತ್ರೀಯವಾಗಿ ಒಪ್ಪಿತವಾದ ಮೂಲನಿವಾಸಿ ಮತ್ತು ಆದಿವಾಸಿ ಪದಗಳನ್ನು ಬಳಸುತ್ತೇವೆ. ಈ ವಿಶಾಲ (ನಿಜಾರ್ಥದಲ್ಲಿ ಸಂಕುಚಿತ) “ಹಿಂದೂ” ಚೌಕಟ್ಟಿನಿಂದ ಬಹುತೇಕ ಹೊರಗುಳಿದ, ತಮ್ಮದೇ ಸಂಪ್ರದಾಯ, ಭಾಷೆ, ಆಚಾರ ವಿಚಾರಗಳನ್ನು ಒಳಗೊಂಡ ಸಮುದಾಯಗಳಿವು. ಇದು ಮೂಲತಃ ಹೊರಗಿನಿಂದ ಬಂದ ಆರ್ಯನ್ ಆರಾಧಕರಿಗೆ ಎದೆಗೆ ಇರಿಯುತ್ತದೆ. ‘ಆದಿವಾಸಿ’ ಎಂದರೆ “ಈ ಭೂಮಿಯ ಮೂಲ ನಿವಾಸಿಗಳು” ಎಂದರ್ಥ. ಇದನ್ನು ಒಪ್ಪಿಕೊಂಡರೆ, ನಂತರ ಬಂದವರು (ಆರ್ಯರು ಅಥವಾ ಇತರರು) ಹೊರಗಿನವರು ಎಂಬ ಸಿದ್ಧವಾಗುತ್ತದೆ ಎಂಬ ಕಾರಣಕ್ಕಾಗಿ ಆರೆಸ್ಸೆಸ್ ‘ವನವಾಸಿ’ ಅಥವಾ ‘ಅರಣ್ಯವಾಸಿ’ ಎಂಬ ಪದಗಳನ್ನು ಬಳಸುತ್ತದೆ. ಇದು ಭಾರತದ ಮೂಲನಿವಾಸಿಗಳ ಐತಿಹಾಸಿಕ ಹಕ್ಕುಗಳು ಮತ್ತು “ಆದಿವಾಸಿ” ಎಂಬ ಗುರುತನ್ನು ಇಲ್ಲದಾಗಿಸುತ್ತದೆ. ಅವರನ್ನು ಪ್ರತ್ಯೇಕ ಸಂಸ್ಕೃತಿ/ಹಕ್ಕುಗಳಿರುವ ಸಮುದಾಯವೆಂದು ನೋಡುವ ಬದಲು, “ಕಾಡಿನಲ್ಲಿರುವ ಹಿಂದೂಗಳ ಒಂದು ಭಾಗ” ಎಂಬ ಚೌಕಟ್ಟಿಗೆ ತರಲು ಈ ಪದಬಳಕೆ ನೆರವಾಗುತ್ತದೆ. ವನವಾಸಿ ಎಂಬ ತೋರಿಕೆಯ ಸುಂದರ ಪದದ ಹಿಂದಿನ ನಿಜವಾದ ಅರ್ಥವೆಂದರೆ, ಇವರೆಲ್ಲಾ ಹಿಂದೂ ಸಂಸ್ಕೃತಿಯಿಂದ ಹೊರಗಿದ್ದ ಅಸಂಸ್ಕೃತ ಪ್ರಾಣಿ ಸಮಾನ ಕಾಡುಜನರು ಎಂದೇ ಆಗಿದೆ.
ಮಹಿಳೆಯರು, ಸ್ತ್ರೀಯರು- ಆರೆಸ್ಸೆಸ್ಸಿನ ಮಾತೆಯರು, ಭಗಿನಿಯರು!
ಮಹಿಳೆಯರನ್ನು ಪ್ರತ್ಯೇಕ ಹಕ್ಕುಗಳಿರುವ ವ್ಯಕ್ತಿಗಳಾಗಿ ನೋಡುವ ಬದಲು, ಆರೆಸ್ಸೆಸ್- ‘ಮಾತೃಶಕ್ತಿ’, ‘ಪೂಜನೀಯ ಮಾತೆಯರು’, ಅಥವಾ ‘ಸೋದರಿಯರು’ (ಭಗಿನಿ) ಎಂದು ಸಂಬೋಧಿಸುತ್ತದೆ. ಆರೆಸ್ಸೆಸ್ ಸಭೆಗಳಲ್ಲಿ, ಸಾಹಿತ್ಯಗಳಲ್ಲಿ ನೀವಿದನ್ನು ಗಮನಿಸಬಹುದು. ಸ್ತ್ರೀ-ಪುರುಷ ಎಂಬ ನಿಸರ್ಗ ಸಹಜ ಪ್ರತ್ಯೇಕತೆಯನ್ನು, ಸಮಾನತೆಯನ್ನು ಇದು ಪ್ರತಿಪಾದಿಸುವುದಿಲ್ಲ. ಮಹಿಳೆಗೆ ಸಮಾಜದಲ್ಲಿ ಗೌರವ ಕೊಡುವ ಸಾಂಪ್ರದಾಯಿಕ ಚೌಕಟ್ಟಿನ ಹೆಸರಿನಲ್ಲಿ ಇದು ಪಿತೃಪ್ರಭುತ್ವದ “ಉದಾರತೆ” ಮಾತ್ರ. ಮಹಿಳೆಗೆ “ತಾಯಿ” ಅಥವಾ “ಸೋದರಿ” ಎಂಬ ಪವಿತ್ರ ಸ್ಥಾನಮಾನ ಕೊಡುವ ಮೂಲಕ ಆಕೆಯನ್ನು ಕುಟುಂಬದ/ಸಂಸ್ಕೃತಿಯ ರಕ್ಷಕಿಯಾಗಿ ಮನೆಯ ಒಳಹೊರಗಿನ ಸಾಂಪ್ರದಾಯಿಕ ಪಾತ್ರಕ್ಕೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಆಧುನಿಕ ಹಕ್ಕುಗಳು, ಸ್ವಾಯತ್ತತೆ ಮತ್ತು ವೈಯಕ್ತಿಕ ಆಯ್ಕೆಗಳ ಆಧಾರದ ಮೇಲೆ ಮಹಿಳಾ ಹಕ್ಕುಗಳನ್ನು ಚರ್ಚಿಸುವ ಬದಲು, ಆಕೆಯ ಪಾತ್ರವನ್ನು ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯ ವ್ಯಾಪ್ತಿಯಲ್ಲೇ ಬಂಧಿಸಿಡಲು ಈ ಪರಿಭಾಷೆ ನೆರವಾಗುತ್ತದೆ. ವಾಸ್ತವಿಕವಾಗಿ ಏನು ನಡೆಯುತ್ತಿದೆ ಎಂಬುದನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂತ್ವವಾದಿಗಳಿಂದ ಮಹಿಳೆಯರ ಅಶ್ಲೀಲ ಅವಹೇಳನ, ಅತ್ಯಾಚಾರಗಳು, ಧಾರ್ಮಿಕ ಸಭೆಗಳಲ್ಲಿ ನಗ್ನ ಕುಣಿತ, ಧಾರ್ಮಿಕ ಮೆರವಣಿಗೆಗಳಲ್ಲಿ ಕುಡುಕ ಬೀದಿ ಪೋಲಿಗಳಂತೆ ಅಂದಾದುಂದಿ ವರ್ತನೆ ಇವೆಲ್ಲವನ್ನೂ ಮಾಡುತ್ತಲೇ- ಮಹಿಳೆಯರ ರಕ್ಷಣೆಯ ನೆಪದಲ್ಲಿ ನೈತಿಕ ಪೊಲೀಸ್‌ಗಿರಿ, ಅವರ ಅವಹೇಳನ, ಹಲ್ಲೆ ಎಲ್ಲವನ್ನೂ ಕಾಣಬಹುದು. ಮಹಿಳೆಯರ ಕುರಿತು ಆರೆಸ್ಸೆಸ್ ಮತ್ತು ಸಂಘಪರಿವಾರದ ಆಷಾಢಭೂತಿತನ ಕಣ್ಣಿಗೆ ರಾಚುವಂತಿದೆ. ಮಹಿಳೆಯರ ಕುರಿತು ಆರೆಸ್ಸೆಸ್ ನಿಲುವು ಮತ್ತು ಮಹಿಳೆಯರಿಗೆ ಅದರಲ್ಲಿರುವ ಸ್ಥಾನಮಾನದ ಕುರಿತು ಪ್ರತ್ಯೇಕವಾಗಿ ನೋಡೋಣ. “ರಾಷ್ಟ್ರೀಯ ಸ್ವಯಂಸೇವಕ ಸಂಘ”- ಅದರೆ ಅದರ ಸ್ತ್ರೀವೇಷ ಮಾತ್ರ “ರಾಷ್ಟ್ರ ಸೇವಿಕಾ ಸಂಘ” ಯಾಕೆ? ಅದು ಯಾಕೆ “ರಾಷ್ಟ್ರೀಯ” ಅಲ್ಲ? ಬರೇ “ಸೇವಿಕಾ” ಯಾಕೆ? “ಸ್ವಯಂ” ಯಾಕಿಲ್ಲ? ನೀವಿಷ್ಟು ಸೂಕ್ಷ್ಮವಾಗಿ ಯೋಚಿಸಿರಲಾರಿರಿ ಅಲ್ಲವೆ? ಆದರೆ, ಆರೆಸ್ಸೆಸ್ ಯೋಚಿಸುತ್ತದೆ.
ಸಾಮಾಜಿಕ ಸಮಾನತೆಯ ಬದಲು ಸಾಮಾಜಿಕ ಸಮರಸತೆ!
ನಾವು ಬಳಸುವ ‘ದಲಿತ’, ‘ಜಾತಿ ದೌರ್ಜನ್ಯ’ ಅಥವಾ ‘ಜಾತಿ ಸಂಘರ್ಷ’ ಎಂಬ ಪದಗಳ ಬದಲಿಗೆ ‘ಸಾಮಾಜಿಕ ಸಮರಸತೆ’ ಮತ್ತು ‘ಹರಿಜನ’ ಅಥವಾ ‘ಬಂಧುಗಳು’ ಮುಂತಾದ ತೋರಿಕೆ ಪದಗಳನ್ನು ಬಳಸುತ್ತದೆ. ಈ ವಿಚಾರಧಾರೆಯ ಉದ್ದೇಶವೆಂದರೆ, ಸಮಾಜದಲ್ಲಿ ಜಾತಿ ಆಧಾರಿತ ಸಂಘರ್ಷಗಳಾಗಬಾರದು, ಹಿಂದೂ ಸಮಾಜ ಒಗ್ಗಟ್ಟಾಗಿರಬೇಕು. ಅಂದರೆ, ಕೆಳಜಾತಿಯವರು ತಗ್ಗಿಬಗ್ಗಿ, ಸಹಿಸಿಕೊಂಡು ಬಾಳಬೇಕು ಎಂಬುದು. ’ದಲಿತ’ ಎಂಬ ಪದವು ಐತಿಹಾಸಿಕ ಶೋಷಣೆ ಮತ್ತು ಶೋಷಣೆಯ ವಿರುದ್ಧದ ಸ್ವಾಭಿಮಾನಿ ಹೋರಾಟದ ಸಂಕೇತವಾಗಿದೆ, ಹೆಗ್ಗುರುತಾಗಿದೆ. ಆರೆಸ್ಸೆಸ್ಸಿನ ’ಸಮರಸತೆ’ ಎಂಬ ಪದವು ಜಾತಿ ವ್ಯವಸ್ಥೆಯ ತಾರತಮ್ಯದ ಮೂಲ ರಚನೆಯನ್ನು ಪ್ರಶ್ನಿಸುವುದಿಲ್ಲ; ಸಮಾನತೆಯ ಕುರಿತು ಮಾತನಾಡುವುದಿಲ್ಲ. ಬದಲಿಗೆ “ಎಲ್ಲರೂ ಅಣ್ಣ-ತಮ್ಮಂದಿರಂತೆ ಇರಬೇಕು” ಎನ್ನುವ ಮೂಲಕ ಐತಿಹಾಸಿಕ ಅಸಮಾನತೆ ಮತ್ತು ಹಕ್ಕುಗಳ ಹೋರಾಟವನ್ನು ಭಾವನಾತ್ಮಕವಾಗಿ ಮರೆಮಾಚುತ್ತದೆ.
ಅಲ್ಪಸಂಖ್ಯಾತರ ಬದಲು ಮುಸ್ಲಿಂ-ಕ್ರೈಸ್ತ ಮತ ಅಥವಾ ಪಂಥ!
ಧಾರ್ಮಿಕ ‘ಅಲ್ಪಸಂಖ್ಯಾತ’ ಎಂಬ ರಾಜ್ಯಾಂಗಬದ್ಧ ಪದದ ಬದಲಿಗೆ “ಪೂಜಾ ಪದ್ಧತಿ” (ವಿಭಿನ್ನ ರೀತಿಯಲ್ಲಿ ಪೂಜಿಸುವವರು) ಅಥವಾ “ಸಂಸ್ಕೃತಿಯಿಂದ ಹಿಂದೂಗಳು”, ಇಸ್ಲಾಂ, ಕ್ರೈಸ್ತ ಮತ ಅಥವಾ ಪಂಥ ಎಂಬ ಪದಗಳನ್ನು ಆರೆಸ್ಸೆಸ್ ಬಳಸುತ್ತದೆ. ಅದರ ಪ್ರಕಾರ ಹಿಂದೂ ಮಾತ್ರವೇ ಧರ್ಮ; ಉಳಿದವುಗಳು ಕೇವಲ ಪಂಥ ಅಥವಾ ಮತ (ಅಭಿಪ್ರಾಯ ಎಂಬ ಅರ್ಥವೂ ಇದೆ). “ಎಲ್ಲರ ಡಿಎನ್ಎ ಒಂದೇ, ಧರ್ಮ ಅಥವಾ ಪೂಜಾ ಪದ್ಧತಿ ಮಾತ್ರ ಬೇರೆ” ಎಂಬ ವಾದವನ್ನು ಮುಸ್ಲಿಂ ರಾಷ್ಟ್ರೀಯ ಮಂಚ್ ಪ್ರತಿಪಾದಿಸುತ್ತದೆ. ಸಾಂವಿಧಾನಿಕವಾಗಿ ಅಲ್ಪಸಂಖ್ಯಾತರಿಗೆ ಸಿಗುವ ವಿಶೇಷ ಹಕ್ಕುಗಳು ಮತ್ತು ಭದ್ರತೆಯನ್ನು ಇಲ್ಲದಂತೆ ಮಾಡುವ ಹುನ್ನಾರದಿಂದ ಈ ಪರಿಭಾಷೆ ಬಳಕೆಯಾಗುತ್ತದೆ. ಮುಸ್ಲಿಮರು ನಮ್ಮವರೇ, ಭಾರತೀಯರೇ, ಅವರಿಗೇಕೆ ವಿಶೇಷ ಸವಲತ್ತು ಎಂಬ ವಾದಕ್ಕೆ ಇದು ಅವಕಾಶ ಕೊಡುತ್ತದೆ. ಒಂದು ಕಡೆ “ಎಲ್ಲರೂ ಒಂದೇ” ಎಂದು ಹೇಳುತ್ತಲೇ, ಇನ್ನೊಂದೆಡೆ ರಾಜಕೀಯ ಅಗತ್ಯಕ್ಕೆ ತಕ್ಕಂತೆ ಅವರನ್ನು “ಹೊರಗಿನವರು” ಅಥವಾ “ಸಂಸ್ಕೃತಿಗೆ ಧಕ್ಕೆ ತರುವವರು”, “ಮುಸ್ಲಿಮರೆಲ್ಲಾ ಭಯೋತ್ಪಾದಕರಲ್ಲ; ಭಯೋತ್ಪಾದಕರೆಲ್ಲಾ ಮುಸ್ಲಿಮರು” ಎಂದು ಚಿತ್ರಿಸುವ ದ್ವಂದ್ವ ಸ್ಥಿತಿ ಇಲ್ಲಿದೆ. ಅದೇ ಹೊತ್ತಿಗೆ ಆರೆಸ್ಸೆಸ್ ವಿರೋಧಿಸುವುದು ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನವನ್ನು ಮಾತ್ರ. ದಲಿತ, ಹಿಂದುಳಿದವರ ಮೀಸಲಾತಿಯನ್ನು ವಿರೋಧಿಸುವ ಆರೆಸ್ಸೆಸ್ ಆರಾಧಕಿ ಸಂಧ್ಯಾ ಪೈ ಅವರು ತನ್ನ ಕುಟುಂಬದ ಶೈಕ್ಷಣಿಕ ಸಂಸ್ಥೆಗಳು ಕೊಂಕಣಿ ಭಾಷಾ ಅಲ್ಪಸಂಖ್ಯಾತ ಸೌಲಭ್ಯ ಪಡೆಯುತ್ತಿರುವ ಕುರಿತು ಮಾತನಾಡುವುದಿಲ್ಲ! ಆಂತರ್ಯದಲ್ಲಿ ಆರೆಸ್ಸೆಸ್ ಆರಾಧಕರಾದ ಸಂತೋಷ್ ಹೆಗ್ಡೆಯವರ ಕುಟುಂಬದ ನಿಟ್ಟೆ, ಮೋಹನ ಆಳ್ವರ ಆಳ್ವಾಸ್‌ನಂತ ಶೈಕ್ಷಣಿಕ ಸಂಸ್ಥೆಗಳು ತುಳು ಭಾಷಾ ಅಲ್ಪಸಂಖ್ಯಾತರ ಸೌಲಭ್ಯ ಪಡೆಯುವುದಕ್ಕೆ ಆರೆಸ್ಸೆಸ್ ಆಕ್ಷೇಪ ಇಲ್ಲ. ಕಣ್ಣಿಗೆ ಕುಕ್ಕುವುದು ಮುಸ್ಲಿಮರು ಪಡೆಯುವ ಸೌಲಭ್ಯಗಳಷ್ಟೇ! ಅದರೆ, ರಾಜಕೀಯ ವಿಷಯ ಬಂದಾಗ ಮಾತ್ರ ಆರೆಸ್ಸೆಸ್ ಮತ್ತದರ ಹಿಂಬಾಲಕರು”ಅಲ್ಪಸಂಖ್ಯಾತರ ಓಲೈಕೆ”, “ಅಲ್ಪಸಂಖ್ಯಾತ ಮತ ಬ್ಯಾಂಕ್” ಇತ್ಯಾದಿ ಪದಗಳನ್ನು ಎಗ್ಗಿಲ್ಲದೇ ಯದ್ವಾತದ್ವಾ ಬಳಸುತ್ತಾರೆ!
ಜಾತ್ಯತೀತತೆ, ಧರ್ಮ ನಿರಪೇಕ್ಷತೆ ಬದಲು ಪಂಥ ನಿರಪೇಕ್ಷತೆ, ಧರ್ಮವಿರೋಧ!
ಜಾತ್ಯಾತೀತತೆ ಅಥವಾ ಧರ್ಮನಿರಪೇಕ್ಷತೆ (Secularism) ಎಂದರೆ, ಸರಕಾರ ಅಥವಾ ಪ್ರಭುತ್ವದಲ್ಲಿ ಧಾರ್ಮಿಕತೆ, ಧರ್ಮಗಳ ಪ್ರಭಾವ ಇಲ್ಲದಿರುವುದು ಮತ್ತು ಅದರಲ್ಲಿ ಧರ್ಮದ ಕುರಿತ ಒಲವು ಅಥವಾ ತಾರತಮ್ಯ ಇಲ್ಲದಿರುವುದು ಎಂದು ಅರ್ಥ. ಆದರೆ, ಆರೆಸ್ಸೆಸ್ ಅದನ್ನು ‘ಸಂಪ್ರದಾಯ ವಿರೋಧಿ’ ಅಥವಾ ‘ಹಿಂದೂ ವಿರೋಧಿ’ ಎಂದು ಬಿಂಬಿಸುತ್ತದೆ. ’ಧರ್ಮ’ ಎಂದರೆ ಕೇವಲ religion ಅಲ್ಲ, ಅದು ಕರ್ತವ್ಯ/ನ್ಯಾಯ ಎಂಬ ವ್ಯಾಖ್ಯಾನ ನೀಡುವ ಇನ್ನೊಂದು ವಾದವನ್ನು ಅದು ಮಂಡಿಸುತ್ತದೆ. ಈ ಪದಗಳ ಮರುವ್ಯಾಖ್ಯಾನದ ಮೂಲಕ, ಭಾರತದ ಬಹುಸಾಂಸ್ಕೃತಿಕ ಮತ್ತು ಜಾತ್ಯತೀತ ತತ್ವಗಳನ್ನು “ಅಲ್ಪಸಂಖ್ಯಾತರ ಓಲೈಕೆ” (Appeasement) ಎಂದು ಅದು ನಿರಂತರವಾಗಿ ಮುನ್ನೆಲೆಗೆ ತರುತ್ತದೆ. ಸಂವಿಧಾನದಿಂದ ಜಾತ್ಯಾತೀತ ಪದ ಕೈಬಿಡಲು ಅದು ಹೆಣಗುತ್ತಿದೆ.
ಆರ್‌ಎಸ್‌ಎಸ್‌ನ ಭಾಷಾ ಶೈಲಿಯ ಮುಖ್ಯ ತಂತ್ರವೆಂದರೆ, “ಸಂಘರ್ಷವನ್ನು ಮರೆಮಾಚಿ, ತಾರತಮ್ಯ ಉಳಿಸಿಕೊಂಡು, ಕೃತಕ ಏಕತೆಯನ್ನು ಸ್ಥಾಪಿಸುವುದು”. ಹಕ್ಕುಗಳ ಆಧಾರಿತ ಹೋರಾಟಗಳನ್ನು (ಉದಾ: ದಲಿತ ಚಳುವಳಿ, ಮಹಿಳಾ ಚಳುವಳಿ, ಆದಿವಾಸಿ ಹಕ್ಕುಗಳ ಹೋರಾಟ, ರೈತ, ಕಾರ್ಮಿಕರ ಹೋರಾಟ)- ಸಾಂಸ್ಕೃತಿಕ, ಧಾರ್ಮಿಕ ಕರ್ತವ್ಯದ ಚೌಕಟ್ಟಿಗೆ ತರುವುದು. ಸಮಾಜದಲ್ಲಿರುವ ಐತಿಹಾಸಿಕ ಅಸಮಾನತೆ, ಶೋಷಣೆ ಮತ್ತು ಸಂಘರ್ಷಗಳನ್ನು ಕಾಲಡಿಗೆ ತಳ್ಳಿ, ಒಂದು ಬೃಹತ್ “ಹಿಂದೂ ರಾಷ್ಟ್ರ” ಅಥವಾ “ಏಕರೂಪಿ ಸಮಾಜ”ದ ಪರಿಕಲ್ಪನೆಗೆ ಜನರನ್ನು ತರುವುದು ಈ ಸಮಾನಾಂತರ ಪರಿಭಾಷೆಗಳ ಮೂಲ ಉದ್ದೇಶವಾಗಿದೆ. ಇಲ್ಲಿ ಎಲ್ಲವೂ ಒಂದೇ- ಭಾಷೆ, ಧರ್ಮ, ಚುನಾವಣೆ, ಶಿಕ್ಷಣ ಪದ್ಧತಿ, ನಾಯಕ….ಇತ್ಯಾದಿ. ಸ್ಥಾನಮಾನ ಮಾತ್ರ ಒಂದೇ ಅಲ್ಲ! ಬಹುತ್ವ ಮತ್ತು ಸಮಾನತೆಗೆ ಈ ಹಿಂದೂತ್ವದ ರಾಷ್ಟ್ರದಲ್ಲಿ ಅವಕಾಶವಿಲ್ಲ! ಅದು ವಿವಿಧತೆಯಲ್ಲಿ ಏಕತೆಯಲ್ಲ! ಏಕರೂಪಿ ಅಸಮಾನತೆಯಲ್ಲಿ ಏಕತೆ! ಇದು ನಮ್ಮ ದೇಶ; ನಮ್ಮದೇ ದೇಶದಲ್ಲಿ ನೀವು ಭಿನ್ನಮತ ಎತ್ತಿದರೆ, ಪ್ರತಿಭಟಿಸಿದರೆ, ನೀವು ದೇಶದ್ರೋಹಿ
