ಸಮಸ್ಯೆಗೆ ರಾಜಕೀಯ ಪರಿಹಾರ ಬೇಕು. ಮಣಿಪುರದಲ್ಲಿ ಸರ್ವ ಪಕ್ಷ ಸಭೆ ನಡೆಸಬೇಕು, ಮನೆ ತೊರೆದ ಐವತ್ತು ಸಾವಿರ ಮಂದಿಯನ್ನು ಮರಳಿ ಮನೆ ಸೇರಿಸಬೇಕು, ಒಂದು ಸಮುದಾಯವನ್ನು ದೂರುವುದನ್ನು, ಟಾರ್ಗೆಟ್ ಮಾಡುವುದನ್ನು ನಿಲ್ಲಿಸಬೇಕು. ಇವುಗಳಿಂದ ಸಮಸ್ಯೆ ಪರಿಹಾರವಾಗುವುದೋ ಗೊತ್ತಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿಯವರೇ, ಮೌನವಂತೂ ಯಾವುದಕ್ಕೂ ಪರಿಹಾರವಲ್ಲ – ಶ್ರೀನಿವಾಸ ಕಾರ್ಕಳ
ಮೂವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಒಬ್ಬರ ತಲೆ ಕತ್ತರಿಸಲಾಗಿದೆ (ಕತ್ತರಿಸಿ ಬಿದಿರಿನ ಕಂಬಕ್ಕೆ ನೇತುಹಾಕಲಾಗಿದೆ). ಮೂವರು ಗಾಯಗೊಂಡಿದ್ದಾರೆ. ಐವರನ್ನು ಒತ್ತೆ ಸೆರೆ ಇರಿಸಿಕೊಳ್ಳಲಾಗಿದೆ…
ಇದು ಗಲಭೆಗ್ರಸ್ತ ಮಣಿಪುರದ ಈ ಬೆಳಗಿನ ಸುದ್ದಿ. ಇಂದಿಗೆ ಸರಿಯಾಗಿ ಎರಡು ತಿಂಗಳ ಹಿಂದೆ, ಅಂದರೆ ಮೇ 3, 2023 ರಂದು ಶುರುವಾದ ಮೈತೆಯಿ ಮತ್ತು ಕುಕಿ ಬುಡಕಟ್ಟು ಸಮುದಾಯಗಳ ನಡುವಿನ ಭೀಕರ ಸಂಘರ್ಷ ಈಗಲೂ ಮುಂದುವರಿದಿದ್ದು, ಇದುವರೆಗೆ 130 ಕ್ಕೂ ಅಧಿಕ ಮಂದಿ ಸತ್ತಿದ್ದಾರೆ. 1000 ಕ್ಕೂ ಅಧಿಕ ಮನೆಗಳನ್ನು ಸುಟ್ಟು ಹಾಕಲಾಗಿದೆ (ಇದರಲ್ಲಿ ಶಾಸಕರು, ಮಂತ್ರಿಗಳು, ಕೇಂದ್ರ ಮಂತ್ರಿಗಳ ಮನೆಗಳೂ ಸೇರಿವೆ). 50,000 ಕ್ಕೂ ಅಧಿಕ ಮಂದಿ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಎಂದಿನಂತೆ ಈಶಾನ್ಯ ರಾಜ್ಯಗಳ ಬಗ್ಗೆ ಉದಾಸೀನ ಧೋರಣೆ ಹೊಂದಿರುವ ಭಾರತದ ಮುಖ್ಯ ಭೂಭಾಗದ ಸುದ್ದಿ ಮಾಧ‍್ಯಮಗಳು ಮಣಿಪುರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಆಸಕ್ತಿಯಿಂದ ವರದಿ ಮಾಡುತ್ತಿಲ್ಲ. ಪಕ್ಷಪಾತಿ ಮಾಧ್ಯಮಗಳ ನಿಲುವಿನಿಂದಾಗಿ ಪ್ರಭುತ್ವದ ಮೇಲೆ ತೀವ್ರ ಒತ್ತಡವೂ ನಿರ್ಮಾಣವಾಗುತ್ತಿಲ್ಲ. ತಮ್ಮ ಹೊಣೆಗಾರಿಕೆಯನ್ನು ಮರೆತು ಡಬಲ್ ಎಂಜಿನ್ ಸರಕಾರಗಳು ಹಾಯಾಗಿವೆ.
ರಾಹುಲ್ ಗಾಂಧಿ ಭೇಟಿ
ಇಂತಹ ಹೊತ್ತಿನಲ್ಲಿ, ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಣಿಪುರಕ್ಕೆ ನೀಡಿದ ಭೇಟಿ ಭಾರೀ ಚರ್ಚೆಗೆ ಕಾರಣವಾಯಿತು. ಅವರ ಭೇಟಿಗೆ ಸರಕಾರ ಸಾಧ್ಯವಿರುವ ಎಲ್ಲ ತಡೆ ಒಡ್ಡಿತು. ಆದರೆ ಅಲ್ಲಿನ ಕೆಲವು ನಿರಾಶ್ರಿತ ಶಿಬಿರಗಳಿಗೆ ಭೇಟಿ ನೀಡಿದ ರಾಹುಲ್ ಅಲ್ಲಿನ ಜನರನ್ನು ಮಾತನಾಡಿಸಿ ಸಮಸ್ಯೆಯನ್ನು ಅರಿತುಕೊಳ್ಳಲು ಯತ್ನಿಸಿದರು. ಮಾತ್ರವಲ್ಲ ಶಾಂತಿಯ ಕರೆ ನೀಡಿದರು.
ರಾಹುಲ್ ಭೇಟಿಯ ಸಮಯದಲ್ಲಿ ಒಂದು ವಿಷಯವಂತೂ ಸ್ಪಷ್ಟವಾಯಿತು. ತಮ್ಮ ಕಣ್ಣೀರೊರೆಸುವ ನಾಯಕರಿಗಾಗಿ ಅಲ್ಲಿನ ಜನ ಕಾತರದಿಂದ ಕಾಯುತ್ತಿದ್ದಾರೆ. ಭಾರತ ಸರಕಾರದ ಉದಾಸೀನ ನಿಲುವಿನ ಬಗ್ಗೆ ಅವರಲ್ಲಿ ಬೇಸರ ಮತ್ತು ಆಕ್ರೋಶವಿದೆ. ಆದ್ದರಿಂದಲೇ ಅವರು ರಾಹುಲ್ ರನ್ನು ಪ್ರೀತಿಯಿಂದ ಸ್ವಾಗತಿಸಿದರು. ಒಬ್ಬ ನಾಯಕನಾದರೂ ತಮ್ಮ ಅಳಲು ಆಲಿಸಲು ಬಂದನಲ್ಲ ಎಂದು ಸಮಾಧಾನಪಟ್ಟರು.
ಈ ನಡುವೆ ಅಮೆರಿಕಾ ಪ್ರವಾಸದಿಂದ ಬಂದ ಪ್ರಧಾನಿ ನರೇಂದ್ರ ಮೋದಿಯವರು ವಿಮಾನದಿಂದ ಇಳಿಯುತ್ತಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬಳಿ ‘ಭಾರತದಲ್ಲಿ ಏನು ನಡೆಯುತ್ತಿದೆ?’ ಎಂದು ಕೇಳಿದರಂತೆ. ‘ಇಲ್ಲಿ ಎಲ್ಲವೂ ಚೆನ್ನಾಗಿದೆ’ ಎಂದು ನಡ್ಡಾ ಉತ್ತರಿಸಿದರಂತೆ. ಆನಂತರ ಎಂದಿನಂತೆ ಪ್ರಧಾನಿಗಳು ಹೊಸ ರೈಲಿಗೆ ಹಸಿರು ಬಾವುಟ ಬೀಸುವುದು, ಚುನಾವಣಾ ಪ್ರಚಾರ ಭಾಷಣ ಮಾಡುವುದು ಇತ್ಯಾದಿಗಳಲ್ಲಿ ತೊಡಗಿಕೊಂಡರು.
ಇಷ್ಟೊಂದು ಅಸಂವೇದನಾಶೀಲ ಪ್ರಧಾನಿಯನ್ನು ಪ್ರಾಯಶಃ ದೇಶ ಹಿಂದೆ ಎಂದೂ ಕಂಡದ್ದಿಲ್ಲ. ಮೇ 3 ರಂದು ಗಲಭೆ ಸ್ಫೋಟಗೊಂಡಾಗಲೇ ಪ್ರಧಾನಿಗಳು ಮಣಿಪುರಕ್ಕೆ ಧಾವಿಸಬೇಕಿತ್ತು. ಆದರೆ ಪ್ರಧಾನಿಗಳು ತಮ್ಮ ಮೇಲೆ 40 ಟನ್ ಹೂಪಕಳೆಗಳ ಸುರಿಮಳೆ ಮಾಡಿಸಿಕೊಳ್ಳುತ್ತಾ, ಕರ್ನಾಟಕ ಚುನಾವಣೆಯಲ್ಲಿ ವ್ಯಸ್ತರಾಗಿದ್ದರು. ಗಲಭೆ ನಡೆಯುತ್ತಿದ್ದ ದಿನಗಳಲ್ಲಿಯೇ ಅಮೇರಿಕಾ ಯಾತ್ರೆಯನ್ನೂ ನಡೆಸಿ ಬಂದರು. ಆದರೆ ಇಂದಿನ ತನಕ ಮಣಿಪುರ ಸಮಸ್ಯೆ ಬಗೆಹರಿಸಲು ಯತ್ನಿಸುವ ಮಾತಂತಿರಲಿ, ಮಣಿಪುರದ ಬಗ್ಗೆ ಒಂದೇ ಒಂದು ಟ್ವೀಟ್ ಮಾಡಿಲ್ಲ (ಉಕ್ರೇನ್ ಬಗ್ಗೆ ಟ್ವೀಟ್ ಮಾಡಿದ್ದಾರೆ!). ಇದೇ ಕಾರಣದಿಂದ ಕರಣ್ ಥಾಪರ್ ಶೋದಲ್ಲಿ ಸಾಮಾಜಿಕ ಹೋರಾಟಗಾರ್ತಿ ಬೀನಾ ಲಕ್ಷ್ಮಿ ನೆಪ್ರಾಂ ಅವರು ಬೇಸರ ಮತ್ತು ಆಕ್ರೋಶದೊಂದಿಗೆ “How dare you keep silent Mr. Prime Minister? how can you keep silent? …. this doesn’t behove the positon of a Prime Minister. Take moral responsibility of what is happening in Manipur and resign yourself” ಎಂದಿದ್ದಾರೆ. ಆದರೂ ಮೋದಿ ಸಾಹೇಬರು ಮೌನ ಮುರಿದಿಲ್ಲ. ಮಣಿಪುರ ಹೊತ್ತಿ ಉರಿಯುತ್ತಲೇ ಇದೆ.
ಮಣಿಪುರದ ಗಲಭೆಯ ಹಿನ್ನೆಲೆ ಏನು?
ಇಷ್ಟಕ್ಕೂ ಸದ್ಯದ ಮಣಿಪುರ ಗಲಭೆಯ ಬೇರು ಇರುವುದಾದರೂ ಎಲ್ಲಿ ಎಂಬುದನ್ನು ತಿಳಿಯಬೇಕಾದರೆ ನಾವು ಮಣಿಪುರದ ಭೂಪ್ರದೇಶ, ಅದರ ಜನಸಂಖ್ಯಾ ಸ್ವರೂಪ ಮತ್ತು ಇತಿಹಾಸವನ್ನು ಪರಾಂಬರಿಸಬೇಕಾಗುತ್ತದೆ.
ಈಶಾನ್ಯ ರಾಜ್ಯಗಳ ಪೈಕಿ ಪೂರ್ವಕ್ಕೆ ಅತ್ಯಂತ ಅಂಚಿನಲ್ಲಿರುವ ರಾಜ್ಯ ಮಣಿಪುರ. ಮಯನ್ಮಾರ್ (ಬರ್ಮಾ) ಗಡಿಗೆ ಅದು ತಾಗಿಕೊಂಡಿದೆ. ಮಣಿಪುರದಲ್ಲಿ ತೀರಾ ಭಿನ್ನ ಸ್ವರೂಪದ ಎರಡು ಭೂಪ್ರದೇಶಗಳಿವೆ. ಮಧ್ಯದಲ್ಲಿ ಕಣಿವೆ ಇದೆ. ಸುತ್ತ ಮುತ್ತ ಬೆಟ್ಟ ಪ್ರದೇಶವಿದೆ. ರಾಜ್ಯದ 10% ಕಣಿವೆ ಭಾಗ. 90% ಬೆಟ್ಟ ಪ್ರದೇಶಗಳು. 10% ಇರುವ ಈ ಇಂಫಾಲ್ ಕಣಿವೆಯಲ್ಲಿ 57% ಜನ ಸಂಖ್ಯೆ ಇದ್ದರೆ, 90% ಇರುವ ಬೆಟ್ಟ ಪ್ರದೇಶಗಳಲ್ಲಿ 43% ಜನಸಂಖ್ಯೆ ಇದೆ. ಸ್ವಚ್ಛ ಕುಡಿನೀರು, ಇಂಧನ, ಆರೋಗ್ಯ ಸೇವೆ, ಉದ್ಯಮಗಳು, ಟೂರಿಸಂ ಹೀಗೆ ಎಲ್ಲ ಅವಕಾಶಗಳು ಇರುವುದು ಇಂಫಾಲ್ ಕಣಿವೆಯಲ್ಲಿ. ಈ ಆರ್ಥಿಕ ಕಂದರವು ಸಾಮಾಜಿಕ ಕಂದರಕ್ಕೂ ಕಾರಣವಾಗಿದೆ.
ದೇಶದ ಜನಸಂಖ್ಯೆಯಲ್ಲಿ ಮೈತೆಯಿಗಳು 60% ಇದ್ದಾರೆ. ನಾಗಾ ಮತ್ತು ಕುಕಿಗಳು 40%. ಇಂಫಾಲ್ ಕಣಿವೆಯಲ್ಲಿ 90-95% ಇರುವುದು ಮೈತೆಯಿಗಳು. ಗುಡ್ಡಗಾಡುಗಳಲ್ಲಿ 90-95% ಇರುವುದು ಕುಕಿ ನಾಗಾ ಸಮುದಾಯಗಳು. ಮೈತೆಯಿಗಳ ಬಳಿ ಹೆಚ್ಚು ಉತ್ತಮ ಸವಲತ್ತುಗಳಿವೆ, ಉದ್ಯೋಗಾವಕಾಶ ಇದೆ, ಎಲ್ಲಕ್ಕಿಂತಲೂ ಮುಖ್ಯವಾಗಿ ರಾಜಕೀಯ ಅಧಿಕಾರ ಇದೆ. 60 ಸದಸ್ಯ ಬಲದ ಮಣಿಪುರ ಅಸೆಂಬ್ಲಿಯಲ್ಲಿ 40 ಮಂದಿ ಮೈತೇಯಿಗಳು ಮತ್ತು 20 ಮಂದಿ ಕುಕಿಗಳು.
ಇತಿಹಾಸ
ಹೀಗಾದುದು ಹೇಗೆ ಎಂದು ತಿಳಿಯಲು ಚರಿತ್ರೆಯ ಪುಟಗಳನ್ನು ತಿರುವಿಹಾಕೋಣ. ಸಾವಿರ ವರ್ಷಗಳ ಹಿಂದೆ ಮೈತೆಯಿಗಳು ಉತ್ತರ ಮಯನ್ಮಾರ್ ನಿಂದ ಬಂದು ಇಂಫಾಲ್ ಕಣಿವೆಯಲ್ಲಿ ನೆಲೆ ನಿಂತರು, ಶತಮಾನಗಳಿಂದ ಇಂಫಾಲ್ ಕಣಿವೆಯಲ್ಲಿ ರಾಜ್ಯಭಾರ ನಡೆಸಿದರು, ತಮ್ಮದೇ ರಿಲೀಜನ್ ‘ಸೆನೆಮಹಿ’ಯನ್ನು ಅನುಸರಿಸಿದರು. ಮಣಿಪುರದ ರಾಜ ಸ್ವತಃ ಹಿಂದೂ ಧರ್ಮ ಅಪ್ಪಿಕೊಂಡಾಗ 1730 ರಲ್ಲಿ ಮೈತೆಯಿಗಳನ್ನೂ ಆ ಧರ್ಮಕ್ಕೆ ಮತಾಂತರ ಮಾಡಲಾಯಿತು. 1800 ರ ಆರಂಭದಲ್ಲಿ ಬರ್ಮಾ ಮಣಿಪುರದ ಮೇಲೆ ಆಕ್ರಮಣ ನಡೆಸಿದಾಗ ಅವರನ್ನು ಸೋಲಿಸಿ ಬ್ರಿಟಿಷರು ಮಣಿಪುರವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡರು. 1949 ರಲ್ಲಿ ಮಣಿಪುರದ ರಾಜ ಭಾರತವನ್ನು ಸೇರಿಕೊಳ್ಳುವ ಕಡತಕ್ಕೆ ಸಹಿ ಹಾಕಿದಾಗ ಮಣಿಪುರವು ಭಾರತದ ಕೇಂದ್ರಾಡಳಿತ ಪ್ರದೇಶವಾಯಿತು. ರಾಜ ಇದಕ್ಕೆ ಅಲ್ಲಿನ ಜನಪ್ರತಿನಿಧಿಗಳ ಅನುಮತಿ ಪಡೆಯಲಿಲ್ಲ ಎಂಬ ಆರೋಪವಿದೆ. ಈ ಕಾರಣದಿಂದ ಅಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆಗಳು ಗರಿಗೆದರಿದವು. ಮಿಲಿಟೆನ್ಸಿ ಎನ್ನುವುದು ಅಲ್ಲಿನ ಪ್ರತಿಯೊಂದು ಸಮುದಾಯದ ಭಾಗವೇ ಆಗಿಹೋಗಿದೆ.
ಇಂಫಾಲ್ ಕಣಿವೆಯಲ್ಲಿ ಮೈತೆಯಿಗಳ ರಾಜಕೀಯ ನಿಯಂತ್ರಣ ಇದೆ ಮತ್ತು ಸುತ್ತಲ ಗುಡ್ಡಗಾಡುಗಳ ಮೇಲೂ ತಮ್ಮ ನಿಯಂತ್ರಣ ಇರಬೇಕು ಎಂಬುದು ಅವರ ಹೆಬ್ಬಯಕೆ. ಇದೇ ಕಾರಣದಿಂದ ಅಲ್ಲಿ ಕಣಿವೆಯ ಮೈತೆಯಿಗಳು ಮತ್ತು ಗುಡ್ಡಗಾಡುಗಳ ಕುಕಿಗಳ ನಡುವೆ ವೈಮನಸ್ಯ ಸ್ವಾತಂತ್ರ್ಯಪೂರ್ವದಿಂದಲೂ ಇದೆ.
ಮಣಿಪುರದ ಗುಡ್ಡಪ್ರದೇಶಗಳಲ್ಲಿ ಇರುವುದು ಒಂದು ಬುಡಕಟ್ಟು ಸಮುದಾಯವಲ್ಲ. ಅಲ್ಲಿ ಅಂತಹ 33 ಸಮುದಾಯಗಳು ಅಧಿಕೃತ ಮಾನ್ಯತೆ ಹೊಂದಿವೆ. ಅದರಲ್ಲಿ ಸರ್ವೇಸಾಮಾನ್ಯವಾಗಿ ಎರಡನ್ನು ವರ್ಗೀಕರಿಸಲಾಗುತ್ತದೆ. ನಾಗಾ ಮತ್ತು ಕುಕಿ-ಝೋಮಿ-ಮಿಜೋ-ಚಿನ್. ಕುಕಿ-ಝೋಮಿ-ಮಿಜೋ-ಚಿನ್ ಗಳನ್ನು ಸಾಮಾನ್ಯವಾಗಿ ಕುಕಿ ಸಮುದಾಯ ಎಂದೇ ಗುರುತಿಸುತ್ತಾರೆ. ನಾಗಾಗಳು ಉತ್ತರ ಭಾಗದಲ್ಲಿದ್ದರೆ ಕುಕಿಗಳು ದಕ್ಷಿಣದಲ್ಲಿ ಇರುತ್ತಾರೆ. ಇವರಿಬ್ಬರೂ 150 ವರ್ಷಗಳ ಹಿಂದೆ ಕ್ರೈಸ್ತ ಮತಕ್ಕೆ ಮತಾಂತರಗೊಂಡವರು. ಇವರು ಬೆಟ್ಟಗಳನ್ನು ತಮ್ಮದು ಎಂದು ಭಾವಿಸುತ್ತಾರೆ.
ಆದರೆ, ‘ತಮ್ಮ ಪ್ರಭಾವ ಕಡಿಮೆಯಾಗುತ್ತಿದೆ, ತಮ್ಮದೇ ರಾಜ್ಯದಲ್ಲಿ ತಾವು ಅಲ್ಪಸಂಖ್ಯಾತರಾಗುತ್ತಿದ್ದೇವೆ, ತಮ್ಮ ಜಮೀನು ಕಿರಿದಾಗುತ್ತಿದೆ, ಕುಕಿಗಳಿಗೆ ಪರಿಶಿಷ್ಟ ವರ್ಗದ ಸ್ಥಾನಮಾನ ಇರುವುದರಿಂದ ಅವರ ಬೆಟ್ಟ ಪ್ರದೇಶಗಳಲ್ಲಿ ತಾವು ಮುಕ್ತವಾಗಿ ಜಮೀನು ಖರೀದಿಸುವಂತಿಲ್ಲ, ವ್ಯಾಪಾರ ವಹಿವಾಟು ನಡೆಸುವಂತಿಲ್ಲ, ಆದರೆ ಇಂಫಾಲ್ ಕಣಿವೆಯಲ್ಲಿ ಭಾರತದ ಯಾರು ಬೇಕಾದರೂ ಜಮೀನು ಖರೀದಿಸಬಹುದು, ವ್ಯಾಪಾರ ಮಾಡಬಹುದು, ತಮ್ಮ 10% ಪ್ರದೇಶವೂ ತಮ್ಮ ಕೈ ಜಾರುತ್ತಿದೆ’ ಎಂಬುದು ಮೈತೆಯಿಗಳ ಅಳಲು. ಮಯನ್ಮಾರ್ ನಿಂದ ಕುಕಿಗಳು ವಲಸೆ ಬರುತ್ತಿದ್ದಾರೆ. ಇಡೀ ದೇಶದ ಜನಸಂಖ್ಯಾ ಸ್ವರೂಪ (ಡೆಮಾಗ್ರಫಿ) ಬದಲಾಗುತ್ತಿದೆ. ಈ ವಲಸಿಗರು ರಿಸರ್ವ್ ಅರಣ್ಯಗಳಲ್ಲಿ ನೆಲೆಯೂರುತ್ತಿದ್ದಾರೆ, ಅಕ್ರಮ ಪಾಪ್ಪಿ ಬೆಳೆ ಬೆಳೆಯುತ್ತಿದ್ದಾರೆ ಎಂಬುದು ಮೈತೆಯಿಗಳ ಆರೋಪ; ಕ್ರಮ ಜರುಗಿಸಬೇಕು ಎಂಬುದು ಅವರ ಆಗ್ರಹ.
ಇಂತಹ ಹೊತ್ತಿನಲ್ಲಿ ಕೆಲವು ಮೈತೆಯಿ ಗುಂಪುಗಳು ಮಣಿಪುರ ಹೈಕೋರ್ಟ್ ನಲ್ಲಿ ಎಸ್ ಟಿ ಸ್ಥಾನಮಾನಕ್ಕಾಗಿ ದಾವೆ ಹೂಡಿದರು. ಅದು ಸಿಕ್ಕಿದರೆ ಮೀಸಲಾತಿ ಸಿಗುವುದು ಮಾತ್ರವಲ್ಲ, ಕುಕಿ ಪ್ರದೇಶಗಳಲ್ಲಿ ಜಮೀನು ಖರೀದಿಸಬಹುದು, ವ್ಯಾಪಾರ ವಹಿವಾಟು ನಡೆಸಬಹುದು ಎನ್ನುವುದು ಅವರ ಆಸೆ.
ಹೈಕೋರ್ಟ್ ತೀರ್ಪು ಹಾರಿಸಿದ ಕಿಡಿ
ಹೈಕೋರ್ಟ್ ನಿಂದ ಒಂದು ಆಘಾತಕಾರಿ ತೀರ್ಪು ಬರುತ್ತದೆ. ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ನ್ಯಾಯಾಧೀಶ ಎಂ ವಿ ಮುರಳೀಧರನ್ ಅವರು ಮೈತೆಯಿಗಳಿಗೆ ಅನುಕೂಲಕರವಾದ ಒಂದು ತೀರ್ಪು ನೀಡುತ್ತಾರೆ. ಮೈತೆಯಿಗಳಿಗೂ ಎಸ್ ಟಿ ಸ್ಥಾನಮಾನ ನೀಡುವಂತೆ ಕೇಂದ್ರವನ್ನು ಕೇಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸುತ್ತಾರೆ (ಹೈಕೋರ್ಟ್ ಗೆ ಹೀಗೆ ಹೇಳುವ ಅಧಿಕಾರವೇ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ).
ಹೈಕೋರ್ಟ್ ನ ಈ ಒಂದು ತೀರ್ಪಿನಿಂದ ಅದಾಗಲೇ ಇದ್ದ ಅಸಮಾಧಾನದ ಬೆಂಕಿಗೆ ತುಪ್ಪ ಎರೆದಂತಾಗುತ್ತದೆ. ಕುಕಿ ಪ್ರದೇಶವಾದ ಚುರಾಚಂದಪುರದಲ್ಲಿ ಶುರುವಾದ ಧರಣಿ ಪ್ರದರ್ಶನ ಹಿಂಸಾತ್ಮಕ ಸ್ವರೂಪ ಪಡೆಯುತ್ತದೆ. ‘ಮೈತೆಯಿಗಳಲ್ಲಿ ಈಗಾಗಲೇ ಉತ್ತಮತರ ಸೌಲಭ್ಯ ಇದೆ, ರಾಜಕೀಯ ನಿಯಂತ್ರಣ ಇದೆ, ಇಬ್ಬರನ್ನು ಹೊರತುಪಡಿಸಿ ಇದುವರೆಗೆ ಆದ ಎಲ್ಲ ಮುಖ್ಯಮಂತ್ರಿಗಳೂ ಮೈತೆಯಿಯವರೇ, ಅಸೆಂಬ್ಲಿಯಲ್ಲಿ ಮೈತೆಯಿಗಳದೇ ಪ್ರಾಬಲ್ಯ, ಮೈತೆಯಿ ಭಾಷೆಯನ್ನು ಎಂಟನೇ ಪರಿಚ್ಛೇದದಲ್ಲಿ ಸೇರಿಸಲಾಗಿದೆ, ಬೆಟ್ಟವನ್ನು ಬಿಟ್ಟು ನಮ್ಮಲ್ಲಿ ಏನಿದೆ? ಈಗ ಎಸ್ ಟಿ ಸ್ಥಾನಮಾನದ ಮೂಲಕ ನಮ್ಮನ್ನು ಬೆಟ್ಟಗಳಿಂದ, ನಮ್ಮ ಜಮೀನುಗಳಿಂದಲೂ ಹೊರದಬ್ಬುತ್ತಾರೆ’ ಎಂಬುದು ಕುಕಿಗಳ ಆತಂಕ. ಸಂಘರ್ಷದ ಕಿಡಿಹೊತ್ತಲು ಮೂಲ ಇದುವೇ.
ಈಗ ಮೈತೆಯಿ ಮತ್ತು ಕುಕಿ ಗುಂಪುಗಳ ನಡುವೆ ಉಗ್ರ ಸಂಘರ್ಷ ನಡೆಯುತ್ತಿದೆ. ಪರಿಣಾಮವಾಗಿ ಕುಕಿ ಬೆಟ್ಟಗಳಲ್ಲಿದ್ದ ಮೈತೆಯಿಗಳು ಇಂಫಾಲ್ ಕಣಿವೆಗೆ ಬಂದಿದ್ದಾರೆ, ಇಂಪಾಲ್ ಕಣಿವೆಯ ಕುಕಿಗಳು ಕುಕಿ ಜಿಲ್ಲೆಗಳಿಗೆ ಮರಳಿದ್ದಾರೆ.
ಮುಖ್ಯಮಂತ್ರಿಯ ಪಾತ್ರ
ಪರಿಸ್ಥಿತಿ ಬಿಗಡಾಯಿಸುವಲ್ಲಿ ಅಲ್ಲಿನ ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಿರೇನ್ ಸಿಂಗ್ ಪಾತ್ರವೂ ಇದೆ. ಕುಕಿಗಳ ಪ್ರಕಾರ ಬಿರೇನ್ ಸಿಂಗ್ ಮೈತೆಯಿ ಪ್ರಾಬಲ್ಯದ ಸರಕಾರ ನಡೆಸುತ್ತಿದ್ದಾರೆ. ಕುಕಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ರಿಸರ್ವ್ ಅರಣ್ಯದ ಹೆಸರಿನಲ್ಲಿ ಕುಕಿಗಳನ್ನು ಹೊರದಬ್ಬಲಾಗುತ್ತಿದೆ. ಕುಕಿ ಸಮುದಾಯಗಳ ವಿರುದ್ಧ ಮುಖ್ಯಮಂತ್ರಿಗಳು ನಾರ್ಕೋ ಟೆರರಿಸಂ ಆರೋಪ ಮಾಡಿದ್ದಾರೆ. ಬರ್ಮಾ ಭಾರತ ಗಡಿಯಲ್ಲಿ ನಾರ್ಕೋ ಬೆಳೆಗಳ ವಹಿವಾಟು ನಡೆಯುತ್ತಿದೆ ನಿಜ. ಆದರೆ ಇದನ್ನು ತಡೆಯಲು ಸಾಮಾಜಿಕ ಆರ್ಥಿಕ ಮಾರ್ಗೋಪಾಯದ ಅಗತ್ಯ ಇದೆಯೇ ಹೊರತು, ಒಂದು ಸಮುದಾಯವನ್ನು ಟಾರ್ಗೆಟ್ ಮಾಡುವುದರಿಂದ ಸಾಧ್ಯವೇ?
ಮಯನ್ಮಾರ್ ನಿಂದ ಅಕ್ರಮ ವಲಸೆ ನಡೆಯುತ್ತಿದೆ, ಹಾಗಾಗಿ ಎನ್ ಆರ್ ಸಿ ತರಹದ ಪ್ರಕ್ರಿಯೆ ಅಗತ್ಯ ಎಂದು ಬಿರೇನ್ ಸರಕಾರ ಹೇಳುತ್ತಿದೆ. ಆದರೆ ಭಾರತದ ಗಡಿ ರೇಖೆ ಎಳೆಯುವ ಮೊದಲಿನಿಂದಲೂ ವಲಸೆ ನಡೆಯುತ್ತಿದೆ. ಕುಕಿಗಳಿಗೆ ತಮ್ಮ ಕುಲಸಂಬಂಧ ಮುಖ್ಯ. ಅಲ್ಲದೆ ವಲಸೆ ಹೆಚ್ಚಲು 2021 ರಿಂದ ನಡೆಯುತ್ತಿರುವ ನಾಗರಿಕ ಯುದ್ಧವೂ ಕಾರಣ. ಮಿಜೋರಂ ನಲ್ಲಿ ದೊಡ್ಡ ಸಂಖ್ಯೆಯ ವಲಸಿಗರಿಗೆ ಅಲ್ಲಿನ ಸರಕಾರ ಆಶ್ರಯ ಕೊಟ್ಟಿದೆ. ‘ಬರ್ಮಾದಿಂದ ಬಂದ ಚಿನ್ ಗಳು ಮಿಜೋಗಳ ಸಹೋದರ ಸಹೋದರಿಯರು, ಗಡಿರೇಖೆ ಎಳೆದ ತಕ್ಷಣ ಕಷ್ಟದ ದಿನಗಳಲ್ಲಿ ನಮ್ಮ ಸಹೋದರ ಸಹೋದರಿಯರಿಗೆ ನಾವು ಸಹಾಯ ಮಾಡದೆ ಸುಮ್ಮನಿರಲಾಗದು’ ಎಂದು ಅಲ್ಲಿನ ಗೃಹಮಂತ್ರಿ ಹೇಳಿದ್ದಾರೆ.
ಮಣಿಪುರ ಸರಕಾರ ಅಂತಹ ನಿರ್ಧಾರ ಮಾಡಿಲ್ಲ. ಆದರೂ ಕುಕಿಗಳು ಬಹಳ ಮಂದಿ ವಲಸಿಗರಿಗೆ ಆಶ್ರಯ ಕೊಟ್ಟಿದ್ದಾರೆ. ‘ಅವರು ಯಾರೂ ಅಕ್ರಮ ವಲಸಿಗರಲ್ಲ. ನಮ್ಮ ಸಹೋದರ ಸಹೋದರಿಯರು’ ಎನ್ನುವುದು ಅವರ ವಾದ. ಬಿರೇನ್ ಗೆ ಈ ಕುಲ ಬಾಂಧವ್ಯದ ಶಕ್ತಿ ಅರ್ಥವಾಗಿಲ್ಲ. ಮಾಡಬೇಕಾದುದುನ್ನು ಬಿಟ್ಟು ಮೈತೆಯಿಗಳ ಪರ ನಿಂತರು. ಹಾಗಾಗಿ ‘ರಾಜ್ಯ ಸರಕಾರ ನಮ್ಮ ವಿರುದ್ಧವಿದೆ, ನಮ್ಮನ್ನು ಅತಿಕ್ರಮಣಕೋರರು ಎನ್ನುತ್ತಿದೆ, ಡ್ರಗ್ ಟ್ರೇಡರ್ ಎನ್ನುತ್ತಿದೆ, ನಮ್ಮನ್ನು ಟಾರ್ಗೆಟ್ ಮಾಡುತ್ತಿದೆ’ ಎನ್ನುವುದು ಕುಕಿಗಳ ಆರೋಪ.
ಒಕ್ಕೂಟ ಸರಕಾರದ ಹೊಣೆಗೇಡಿತನ
ಮೋದಿ ನೇತೃತ್ವದ ಒಕ್ಕೂಟ ಸರಕಾರವೂ ತನ್ನ ಹೊಣೆಗೇಡಿತನವನ್ನು ಪ್ರದರ್ಶಿಸಿತು. ಮತೀಯ ನೆಲೆಯಲ್ಲಿ ಒಡೆದು ಆಳುವ ನೀತಿಯನ್ನು ಇಲ್ಲೂ ಪ್ರಯೋಗಿಸಲು ಯತ್ನಿಸಿತು. ಶಾಂತಿ ನೆಲೆಸಲು ಒಂದು ಅಡ್ಡಿಯೇ ಆಗಿರುವ ಮುಖ್ಯಮಂತ್ರಿ ಬಿರೇನ್ ಸಿಂಗ್ ರನ್ನು ಅಧಿಕಾರದಿಂದ ಇಳಿಸಲಿಲ್ಲ. ಸಮಸ್ಯೆಯ ದೀರ್ಘಾವಧಿ ಪರಿಹಾರಕ್ಕೆ ಅದು ಯಾವ ಒಂದು ಕಾರ್ಯ ನೀತಿಯನ್ನೂ ಹೊಂದಿದಂತೆ ಕಾಣಿಸುತ್ತಿಲ್ಲ.
ಈಗಾಗಲೇ ಪರಿಸ್ಥಿತಿ ಕೈಮೀರಿ ಹೋಗಿದೆ. ಆಸ್ತಿಪಾಸ್ತಿ ನಷ್ಟ, ಮಾರಣ ಹೋಮ ಮುಂದುವರಿದಿದೆ. ಸರಕಾರಿ ಶಸ್ತ್ರಾಸ್ತ್ರ ಭಂಡಾರಗಳಿಂದ ಶಸ್ತ್ರಾಸ್ತ್ರಗಳನ್ನು ಅಪಹರಿಸಲಾಗಿದೆ. ದೇಶದ ಸೇನೆ ಕೈ ಚೆಲ್ಲಿ ಕೂತಿದೆ. ಮಣಿಪುರವು ಕೇವಲ ಇಬ್ಬರು ಸಂಸದರನ್ನು ಹೊಂದಿರಬಹುದು. ಈ ಕಾರಣಕ್ಕೆ ಅದನ್ನು ಕಡೆಗಣಿಸುವುದು ಸರಿಯಲ್ಲ. ಸಮಸ್ಯೆಗೆ ರಾಜಕೀಯ ಪರಿಹಾರ ಬೇಕು. ಮಣಿಪುರದಲ್ಲಿ ಸರ್ವ ಪಕ್ಷ ಸಭೆ ನಡೆಸಬೇಕು, ಮನೆ ತೊರೆದ ಐವತ್ತು ಸಾವಿರ ಮಂದಿಯನ್ನು ಮರಳಿ ಮನೆ ಸೇರಿಸಬೇಕು, ಒಂದು ಸಮುದಾಯವನ್ನು ದೂರುವುದನ್ನು, ಟಾರ್ಗೆಟ್ ಮಾಡುವುದನ್ನು ನಿಲ್ಲಿಸಬೇಕು. ಇವುಗಳಿಂದ ಸಮಸ್ಯೆ ಪರಿಹಾರವಾಗುವುದೋ ಗೊತ್ತಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿಯವರೇ, ಮೌನವಂತೂ ಯಾವುದಕ್ಕೂ ಪರಿಹಾರವಲ್ಲ.
ಶ್ರೀನಿವಾಸ ಕಾರ್ಕಳ
ಚಿಂತಕರೂ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡವರು.
ಇದನ್ನೂ ಓದಿ-<strong>ಶಸ್ತ್ರ ಕೈಗೆತ್ತಿಕೊಳ್ಳುತ್ತಿರುವ ಜನರು | ಇದರಲ್ಲಿ ಪ್ರಭುತ್ವದ ಪಾಲು ಎಷ್ಟು?</strong>