Home ಅಂಕಣ ಸಂಸತ್ತಿನ ಪೂರ್ವಸೂರಿಗಳು – 4 : ಕಮ್ಯುನಿಸ್ಟ್ ನಾಯಕಿ ಗೀತಾ ಮುಖರ್ಜಿ; ಮಹಿಳಾ ಮೀಸಲಾತಿಯ ಆರಂಭಿಕ...

ಸಂಸತ್ತಿನ ಪೂರ್ವಸೂರಿಗಳು – 4 : ಕಮ್ಯುನಿಸ್ಟ್ ನಾಯಕಿ ಗೀತಾ ಮುಖರ್ಜಿ; ಮಹಿಳಾ ಮೀಸಲಾತಿಯ ಆರಂಭಿಕ ಪ್ರತಿಪಾದಕಿ

0

ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ನಾಲ್ಕನೇ ಲೇಖನ

ಗೀತಾದೀ ಎಂದೇ ಜನಪ್ರಿಯರಾಗಿದ್ದ ಗೀತಾ ಮುಖರ್ಜಿ, ಪಶ್ಚಿಮ ಬಂಗಾಳದ ಪನ್ಸ್‌ಕುರಾ ಕ್ಷೇತ್ರದಿಂದ ಏಳು ಬಾರಿ ಲೋಕಸಭೆಗೆ ಆಯ್ಕೆಯಾದವರು. 1980 ರಿಂದ 2000 ದವರೆಗೆ ಅವರು ನಿಧನರಾಗುವ ತನಕ ಸಂಸದರಾಗಿ ಸೇವೆ ಸಲ್ಲಿಸಿದವರು. ಈ ಕಾಲಾವಧಿಯಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲಿಯೂ ಅವರು ಗೆದ್ದಿದ್ದರು.

ಹಿರಿಯ ಕಮ್ಯುನಿಸ್ಟ್ ನಾಯಕಿ ಗೀತಾ ಮುಖರ್ಜಿ ಒಬ್ಬ ಸಮರ್ಥ ಸಂಸದೀಯ ಪಟು ಮತ್ತು ಸಮಾಜ ಸೇವಕಿಯಾಗಿದ್ದರು. ರೈತರ ಮತ್ತು ಮಹಿಳೆಯರ ಹಕ್ಕುಗಳ ಬಗೆಗಿನ ಅವರ ಬದ್ಧತೆಯಿಂದಾಗಿ ಅತ್ಯಂತ ಗೌರವಕ್ಕೆ ಪಾತ್ರರಾದವರು.

ಸುಮಾರು ಐದೂವರೆ ದಶಕಗಳ ಕಾಲ ಗೀತಾ ಮುಖರ್ಜಿಯವರ ರಾಜಕೀಯ ಬದುಕು ಮುಂದುವರಿದಿತ್ತು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಮಸೂದೆಯ ಪ್ರಚಾರದಲ್ಲಿ ಅವರು ವಹಿಸಿದ ಪಾತ್ರ ಅವರನ್ನು ಜನಮನದಲ್ಲಿ ನೆಲೆಸುವಂತೆ ಮಾಡಿತ್ತು. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಒದಗಿಸುವ ಮಸೂದೆಯ ಜಂಟಿ ಸಮಿತಿ ಅಧ್ಯಕ್ಷರಾಗಿ ಅವರು ಕಾರ್ಯ ನಿರ್ವಹಿಸಿದ್ದರು. ಇದೇ ಜಂಟಿ ಸಂಸದೀಯ ಸಮಿತಿಯು ಮಹಿಳಾ ಮೀಸಲಾತಿ ಮಸೂದೆಯನ್ನು ರಚಿಸಿತ್ತು. ಆ ಮೂಲಕ ತನ್ನ ಮುಂದಾಳುತ್ವದ ಕೆಲಸದಲ್ಲಿ ಹೆಸರುವಾಸಿಯಾದವರು.

1980 ರ ದಶಕದ ಮಧ್ಯಭಾಗದಲ್ಲಿ ತನ್ನ ಹೃದಯದ ಶಸ್ತ್ರಚಿಕಿತ್ಸೆ ನಡೆದು ಅನಾರೋಗ್ಯದಿಂದಿದ್ದಾಗಲೂ, ಚುನಾಯಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಗಳಿಸಿಕೊಳ್ಳುವಲ್ಲಿ ಅವರು ಸಕ್ರಿಯರಾಗಿ ಕೆಲಸ ಮಾಡಿದ್ದರು. ಅವರು ಸಿಪಿಐ ಪಕ್ಷದ ಮಹಿಳಾ ಮೀಸಲಾತಿ ಆಯೋಗದ ನೇತೃತ್ವ ವಹಿಸಿದ್ದರು. ಪಕ್ಷವು ಅದನ್ನು ಶಾಸನವಾಗಿ ರೂಪಿಸಲು ಕೆಲಸ ಮಾಡುತ್ತಿತ್ತು.

ಗೀತಾದೀ ಎಂದೇ ಜನಪ್ರಿಯರಾಗಿದ್ದ ಗೀತಾ ಮುಖರ್ಜಿ, ಪಶ್ಚಿಮ ಬಂಗಾಳದ ಪನ್ಸ್‌ಕುರಾ ಕ್ಷೇತ್ರದಿಂದ ಏಳು ಬಾರಿ ಲೋಕಸಭೆಗೆ ಆಯ್ಕೆಯಾದವರು. 1980 ರಿಂದ 2000 ದವರೆಗೆ ಅವರು ನಿಧನರಾಗುವ ತನಕ ಸಂಸದರಾಗಿ ಸೇವೆ ಸಲ್ಲಿಸಿದವರು. ಈ ಕಾಲಾವಧಿಯಲ್ಲಿ ನಡೆದ ಎಲ್ಲ ಚುನಾವಣೆಗಳಲ್ಲಿಯೂ ಅವರು ಗೆದ್ದಿದ್ದರು.

ಅವರು 1947 ರಿಂದ 1951 ರವರೆಗೆ ಬಂಗಾಳ ಪ್ರಾಂತೀಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿದ್ದರು. 1942 ರಲ್ಲಿ ಬಂಗಾಳದ ಪ್ರಮುಖ ಕಮ್ಯುನಿಸ್ಟ್‌ ನಾಯಕ ಬಿಸ್ವನಾಥ್‌ ಮುಖರ್ಜಿ ಅವರನ್ನು ವಿವಾಹವಾಗಿದ್ದರು.

ಗೀತಾ ಮುಖರ್ಜಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಕೂಡ ಭಾಗವಹಿಸಿದ್ದರು. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜನಚಳುವಳಿಗಳಲ್ಲಿ ಭಾಗವಹಸಿದ ಕಾರಣಕ್ಕೆ ಹಲವು ಬಾರಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು. ನಂತರ ಅವರು ಮಿಡ್ನಾಪುರ ಜಿಲ್ಲೆಯ ತಮ್ಲುಕ್‌ ಎಂಬಲ್ಲಿ, ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಅವಿಶ್ರಾಂತ ಕೆಲಸ ಮಾಡಿದರು. 1967 ರಲ್ಲಿ ಮೊದಲ ಬಾರಿಗೆ ಮತ್ತು 1972 ರಲ್ಲಿ ಎರಡನೇ ಬಾರಿಗೆ ರಾಜ್ಯ ವಿಧಾನಸಭೆಗೆ ಚುನಾಯಿತರಾಗಿದ್ದರು.

1924 ಜನವರಿ 8 ರಂದು ಕಲ್ಕತ್ತಾದಲ್ಲಿ ಮುಖರ್ಜಿಯವರ ಜನನ. ಕಲ್ಕತ್ತಾದ ಆಶುತೋಶ್‌ ಕಾಲೇಜಿನಿಂದ ಬಂಗಾಳಿ ಸಾಹಿತ್ಯದಲ್ಲಿ ಬ್ಯಾಚುಲರ್‌ ಆಫ್‌ ಆರ್ಟ್ಸ್‌ ಪದವಿಯನ್ನು ಪಡೆಯುತ್ತಾರೆ. ಆಶುತೋಷ್‌ ಕಾಲೇಜಿನಲ್ಲಿ ಓದುತ್ತಿದ್ದ ಕಾಲದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತೆಯಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುತ್ತಾರೆ. ತನ್ನ 15 ನೇ ವಯಸ್ಸಿನಲ್ಲಿ ಸಿಪಿಐ ಪಕ್ಷದ ಸದಸ್ಯರೂ ಆಗುತ್ತಾರೆ.

1940 ರಲ್ಲಿ ಈಗ ಬಾಂಗ್ಲಾದೇಶದ ಭಾಗವಾಗಿರುವ ಜೆಸ್ಸೋರ್‌ ಎಂಬಲ್ಲಿ ವಿದ್ಯಾರ್ಥಿ ನಾಯಕಿಯಾಗಿ ತನ್ನ ರಾಜಕೀಯ ಜೀವನವನ್ನು ಆರಂಭಿಸುತ್ತಾರೆ. ಅವರು ಬಂಗಾಳ ಪ್ರಾಂತೀಯ ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. 1946 ರಲ್ಲಿ ಬಂಗಾಳದಲ್ಲಿ ಸಿಪಿಐನ ರಾಜ್ಯ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗುತ್ತಾರೆ. 1947 ರಿಂದ 1951 ರವರೆಗೆ ಬಂಗಾಳ ಪ್ರಾಂತೀಯ ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಾರೆ. 1978 ರಿಂದ ಸಿಪಿಐ ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿದ್ದರು. ಮೂರು ವರ್ಷಗಳ ನಂತರ ಅದರ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಸೇರ್ಪಡೆಗೊಳ್ಳುತ್ತಾರೆ. ಲೋಕಸಭೆಯಲ್ಲಿ ಪಕ್ಷದ ಉಪ ನಾಯಕಿಯೂ ಆಗಿದ್ದರು.

ಯುದ್ಧಾ ನಂತರದ ದಿನಗಳಲ್ಲಿ ಬ್ರಿಟಿಷರ ವಿರುದ್ಧ ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ದಂಗೆಯೆದ್ದಿದ್ದರು. “ರಶೀದ್‌ ಅಲಿ” ದಿನದಂದು ನಡೆದ ಇಂತಹದ್ದೊಂದು ಬ್ಯಾರಿಕೇಡ್‌ ಹೋರಾಟದಲ್ಲಿ ಗೀತಾ ಮುಖರ್ಜಿ ಸಕ್ರಿಯರಾಗಿ ಪಾಲ್ಗೊಂಡಿದ್ದರು. 1946 ರಲ್ಲಿ ನಡೆದ ಅಂಚೆ ಮತ್ತು ಟೆಲಿಗ್ರಾಫ್‌ ಮುಷ್ಕರದಲ್ಲಿಯೂ ಅವರು ಭಾಗವಹಿಸಿದ್ದರು. ಕಲ್ಕತ್ತಾದಲ್ಲಿ ನಡೆದ ರ್ಯಾಲಿಯಲ್ಲಿ ಅವರು ಭಾಷಣವನ್ನೂ ಮಾಡಿದ್ದರು. ಆಗ ಅವರ ಪ್ರಾಯ ಕೇವಲ 22.

1948 ರಲ್ಲಿ ಕಾಂಗ್ರೆಸ್‌ ಸರಕಾರವು ಸಿಪಿಐ ಪಕ್ಷವನ್ನು ನಿಷೇಧಿಸಿದಾಗ ಗೀತಾ ಮತ್ತು ಅವರ ಪತಿ ಬಿಸ್ವನಾಥ್‌ ಅವರನ್ನು ಪ್ರಸಿಡೆನ್ಸಿ ಜೈಲಿನಲ್ಲಿ ಆರು ತಿಂಗಳುಗಳ ಕಾಲ ವಿಚಾರಣೆಯಿಲ್ಲದೆ ಬಂಧಿಸಿಡಲಾಗಿತ್ತು. ಬಿಡುಗಡೆಯ ನಂತರ ಸುಮಾರು ಮೂರು ವರ್ಷಗಳ ಕಾಲ ಭೂಗತರಾಗಿದ್ದರು. ನ್ಯಾಯಾಲಯವು ಆ ನಿಷೇಧವನ್ನು ತೆರವುಗೊಳಿಸಿದ ನಂತರವೇ ಅವರು ಮತ್ತೆ ಕಾಣಿಸಿಕೊಳ್ಳುವುದು.

1967 ರಿಂದ 1977 ರ ತನಕ ಸಿಪಿಐ ಪಕ್ಷದಿಂದ ನಾಲ್ಕು ಬಾರಿ ಪನ್ಸ್‌ಕುರಾ ಪುರ್ಬಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು ಗೀತಾ. ನ್ಯಾಷನಲ್‌ ಫೆಡರೇಷನ್‌ ಆಫ್‌ ಇಂಡಿಯನ್‌ ವುಮೆನ್‌ ಎಂಬ ಸಿಪಿಐ ಪಕ್ಷದ ಮಹಿಳಾ ಘಟಕದ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು.

ರಾಷ್ಟ್ರೀಯ ಗ್ರಾಮೀಣ ಕಾರ್ಮಿಕ ಆಯೋಗ, ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಮಕ್ಕಳ ಮಂಡಳಿ, ಪತ್ರಿಕಾ ಮಂಡಳಿಗಳಲ್ಲಿ ಸದಸ್ಯರಾಗಿದ್ದರು. ರಾಷ್ಟ್ರೀಯ ಮಹಿಳಾ ಒಕ್ಕೂಟದ ಉಪಾಧ್ಯಕ್ಷರಾಗಿದ್ದರು.‌ ಬರ್ಲಿನ್‌ನಲ್ಲಿರುವ ವುಮೆನ್ಸ್‌ ಇಂಟರ್ನ್ಯಾಷನಲ್‌ ಡೆಮಾಕ್ರಟಿಕ್‌ ಫೆಡರೇಷನ್‌ ಸಂಘಟನೆಯ ಕಾರ್ಯದರ್ಶಿ ಸದಸ್ಯರೂ ಆಗಿದ್ದರು.

ರಾಜಕೀಯದಾಚೆಗೆ ಅವರು ಮಕ್ಕಳ ಸಾಹಿತ್ಯದಲ್ಲೂ ತೊಡಗಿಸಿಕೊಂಡಿದ್ದರು. ಭಾರತ್ ಉಪಕಥಾ (ಭಾರತದ ಜಾನಪದ ಕಥೆಗಳು), ಛೋಟೋಡರ್ ರವೀಂದ್ರನಾಥ್ (ಮಕ್ಕಳಿಗಾಗಿ ಟ್ಯಾಗೋರ್) ಮತ್ತು ಹಿ ಅತಿತ್ ಕಥಾ ಕಾವೊ ಮೊದಲಾದ ಮಕ್ಕಳ ಪುಸ್ತಕಗಳನ್ನು ಬರೆದಿದ್ದರು. ಅವರು ಬ್ರೂನೋ ಅಪಿಟ್ಜ್ ಅವರ 1958 ರ ಕ್ಲಾಸಿಕ್ ನೇಕೆಡ್ ಅಮಂಗ್ ವುಲ್ವ್ಸ್ ಅನ್ನು ಬಂಗಾಳಿ ಭಾಷೆಗೆ ಅನುವಾದಿಸಿದ್ದರು.

4 ಮಾರ್ಚ್ 2000 ರಂದು ಅವರು ಹೃದಯಾಘಾತದಿಂದ ಮರಣ ಹೊಂದಿದರು. ಅಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ ಸಿಪಿಐ(ಎಂ) ನಾಯಕ ಸೋಮನಾಥ ಛಟರ್ಜಿ ಗೀತಾರನ್ನು ಪ್ರೀತಿಯಿಂದ ನೆನೆಯುತ್ತಾರೆ. “ಗೀತಾದೀ ಇನ್ನು ಮುಂದೆ ನಮ್ಮ ಜೊತೆಗಿಲ್ಲ, ಅವರು ನಮ್ಮೊಟ್ಟಿಗೆ ಜೊತೆಗೆ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಮಹಿಳಾ ಸಬಲೀಕರಣಕ್ಕಾಗಿ ಅವರು ಮಾಡಿದ ಕೆಲಸಗಳನ್ನು ನಾವಿಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾಗಿದೆ. ಅವರು ಮಹಿಳೆಯರ ಅಗತ್ಯತೆಗಳ ಬಗ್ಗೆ ದೇಶಕ್ಕೆ ಅರಿವು ಮೂಡಿಸಿದವರು.  ಸದನದಲ್ಲಿ ಮತ್ತು ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಳ್ಳಲು ಅವರು ನಡೆಸಿದ ಪ್ರಯತ್ನಗಳು ಕೇವಲ ರಾಜಕೀಯ ನಡೆಗಳು ಮಾತ್ರವಾಗಿರಲಿಲ್ಲ. ಆ ಮಸೂದೆ ಅಂಗೀಕಾರವಾದರೆ, ನಮ್ಮ ದೇಶದ ಮಹಿಳೆಯರು ಮುಂದೆ ಬರುತ್ತಾರೆ, ಅವರಿಗೆ ರಾಜಕಾರಣದಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಳ್ಳಲು ಮತ್ತು ಅದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ನಿಜವಾದ ಅವಕಾಶ ದೊರೆಯುತ್ತದೆ. ಆ ಮೂಲಕ ಉತ್ತಮ ದೇಶ ಮತ್ತು ಉತ್ತಮ ನಾಳೆಯು ಬರಲಿದೆ ಎಂದು ಅವರು ನಮ್ಮೆಲ್ಲರಂತೆ ಆಳವಾಗಿ ನಂಬಿಕೆಯಿಟ್ಟಿದ್ದರು.”

ರಾಷ್ಟ್ರಪತಿ, ಪ್ರಧಾನ ಮಂತ್ರಿ, ಉಪ ರಾಷ್ಟ್ರಪತಿ ಮತ್ತು ಲೋಕಸಭಾ ಸ್ಪೀಕರ್ ಸೇರಿದಂತೆ ಅನೇಕ ನಾಯಕರು ಅವರ ನಿಧನಕ್ಕೆ ಸಂತಾಪ ಸೂಚಿಸಿ, ಅವರ ನೆನಪನ್ನು ತಂದುಕೊಂಡು ಶ್ರದ್ಧಾಂಜಲಿ ಸಲ್ಲಿಸಿದರು. ಅವರ ಸ್ನೇಹಪರ ವ್ಯಕ್ತಿತ್ವ, ಸರಳತೆ, ನಿಷ್ಕಪಟತೆ, ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಕೊಂಡಾಡಿದರು.

ಆಗಿನ ವಿರೋಧ ಪಕ್ಷದ ನಾಯಕಿ ಸೋನಿಯಾ ಗಾಂಧಿ ತಮ್ಮ ಶ್ರದ್ಧಾಂಜಲಿಯಲ್ಲಿ ಹೀಗೆ ಹೇಳಿದರು: “ಶ್ರೀಮತಿ ಗೀತಾ ಮುಖರ್ಜಿಯವರ ನಿಧನದೊಂದಿಗೆ, ನಮ್ಮ ದೇಶವು ತನ್ನ ರಾಷ್ಟ್ರೀಯ ರಾಜಕಾರಣದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಯೊಬ್ಬರನ್ನು ಕಳೆದುಕೊಂಡಿದೆ. ಸಂಸತ್ತು ತನ್ನ ಅತ್ಯಂತ ಸಕ್ರಿಯ, ಪ್ರೀತಿಯ ಮತ್ತು ಅಚ್ಚುಮೆಚ್ಚಿನ ಸದಸ್ಯರನ್ನು ಕಳೆದುಕೊಂಡಿದೆ. ಅವರ ಸಮರ್ಪಣೆ, ಬದ್ಧತೆ ಮತ್ತು ವ್ಯಕ್ತಿತ್ವಗಳು ಕಳೆದ ಇಪ್ಪತ್ತು ವರ್ಷಗಳಿಂದ ಈ ಸದನಕ್ಕೆ ಸ್ಪೂರ್ತಿಯಾಗಿದ್ದವು. ಒಬ್ಬ ಪುಟ್ಟ ಹುಡುಗಿಯಾಗಿದ್ದ ಆಕೆ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಹಲವು ಬಾರಿ ಬಂಧನಕ್ಕೊಳಗಾದಾಗಲೂ, ಅವರು ಅದಮ್ಯ ಚೈತನ್ಯ, ಅಪ್ರತಿಮ ಧೈರ್ಯ ಮತ್ತು ದೃಢ ಸಂಕಲ್ಪಗಳನ್ನು ಹೊಂದಿದ್ದರು. ಜಾತ್ಯತೀತತೆಯ ಬಗೆಗಿನ ಉತ್ಕಟ ನಂಬಿಕೆ, ಸಾಮಾಜಿಕ ನ್ಯಾಯಕ್ಕಾಗಿನ ಹೋರಾಟ, ಬಡತನದ ವಿರುದ್ಧದ ಹೋರಾಟ ಮತ್ತು ಮಹಿಳಾಪರ ಬದ್ಧತೆಗಳು ಪಶ್ಚಿಮ ಬಂಗಾಳದಲ್ಲಿ ಅವರು ಮೂಡಿಸಿದ ಛಾಪುಗಳಾಗಿವೆ. ಅಲ್ಲಿ ಅವರು ಹತ್ತು ವರ್ಷಗಳ ಕಾಲ ಶಾಸಕರಾಗಿ ಮತ್ತು ನಂತರ ಸಂಸದರಾಗಿಯೂ ಸೇವೆ ಸಲ್ಲಿಸಿದರು. ಒಮ್ಮೆಯೂ ಚುನಾವಣೆಯಲ್ಲಿ ಸೋಲದಿರುವುದು ಅವರು ತಮ್ಮ ಪಕ್ಷ ಮತ್ತು ಅವರ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯ ವಿಧಾನಕ್ಕೆ ಸಿಕ್ಕ ಅತ್ಯುನ್ನತ ಗೌರವವೆಂದೇ ಪರಿಗಣಿಸಬೇಕು.”

ಗೀತಾ ಅವರ ಹಿರಿಯ ಸಹೋದ್ಯೋಗಿ ಮತ್ತು ಹಿರಿಯ ಸಂಸದ ಇಂದ್ರಜಿತ್ ಗುಪ್ತಾ ಶ್ರದ್ಧಾಂಜಲಿ ಸಲ್ಲಿಸುತ್ತಾ ಹೀಗೆ ಹೇಳಿದರು: “ಆಕೆ ನನ್ನ ಸಹೋದರಿ. ಇಷ್ಟು ಕಾಲವೂ ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರನ್ನು ಒಬ್ಬ ರಾಜಕಾರಣಿ ಅಥವಾ ಜನನಾಯಕಿ ಎಂದು ಮಾತ್ರ ಗುರುತಿಸುವುದು ನನಗೆ ಕಷ್ಟದ ಸಂಗತಿ. ಅವರು ಹೃದಯ ರೋಗಿಯಾಗಿದ್ದರು. ಹೃದಯದ ಶಸ್ತ್ರ ಚಿಕಿತ್ಸೆಯನ್ನೂ ಮಾಡಿಸಿಕೊಂಡಿದ್ದರು. ಇತ್ತೀಚೆಗೆ ಸರಿಯಾದ ತಪಾಸಣೆಗೆ ಮತ್ತೆ ಆಸ್ಪತ್ರೆಗೆ ದಾಖಲಾಗಬೇಕು ಎಂದು ವೈದ್ಯರು ಒತ್ತಾಯ ಮಾಡುತ್ತಲೇ ಇದ್ದರು. ಆದರೆ ಆಕೆ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ನಮಗೆ ಆಕೆಯನ್ನು ಮನವೊಲಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಆ ಮಾರಕ ಖಾಯಿಲೆ ಆಕೆಯನ್ನು ಬಲಿ ಪಡೆಯಿತು. ನನ್ನ ಪಕ್ಷಕ್ಕೆ ಅವರ ಅಗಲಿಕೆಯಿಂದ ತೀವ್ರ ಹೊಡೆತ ಬಿದ್ದಿದೆ. ಸದನಕ್ಕೂ ಅದೊಂದು ತುಂಬಲಾರದ ನಷ್ಟ. ಆದರೆ ಸಾವು ನಿಶ್ಚಿತ. ನಾವು ಯಾರು ಕೂಡ ಅದಕ್ಕೆ ಹೊರತಲ್ಲ. ಈ ಸದನದಲ್ಲಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಬೇಕು.”

ಗೀತಾ ಮುಖರ್ಜಿಯವರು ತನ್ನ ಕ್ಷೇತ್ರದ ಮೇಲೆ ಇಟ್ಟಿದ್ದ ಪ್ರೀತಿ, ಆಳವಾದ ಬದ್ಧತೆ, ಆಕೆಯ ಸರಳ ವ್ಯಕ್ತಿತ್ವ ಮೊದಲಾದ ಕಾರಣಗಳಿಂದ ಈಗಲೂ ಅಲ್ಲಿ ಸ್ಮರಣೀಯರು. ತಮ್ಮ ಕ್ಷೇತ್ರಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಾ ಅದನ್ನು ಪೋಷಿಸಿ ಬೆಳೆಸಿದರು. ಕೆಲವೊಮ್ಮೆ ಅದಕ್ಕಾಗಿ ವೈದ್ಯರ ಸಲಹೆಯನ್ನೂ ಕೂಡ ಅವರು ನಿರ್ಲಕ್ಷಿಸುತ್ತಿದ್ದರು. ಏಳು ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದರೂ, ಅವರು ಕಲ್ಕತ್ತಾದಲ್ಲಿ ಎರಡು ಕೋಣೆಗಳ ಸಾಧಾರಣ ಫ್ಲಾಟ್ ಮತ್ತು ದೆಹಲಿಯ ವಿಠ್ಠಲಭಾಯಿ ಪಟೇಲ್ ಮನೆಯಲ್ಲಿಯೇ ವಾಸಿಸುತ್ತಿದ್ದರು.

ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.

You cannot copy content of this page

Exit mobile version