Home ಬ್ರೇಕಿಂಗ್ ಸುದ್ದಿ ಹುಡಾ ಅಧ್ಯಕ್ಷ ಸ್ಥಾನ ಮುಸ್ಲಿಮರಿಗೆ ನೀಡಲು ಆಗ್ರಹಿಸಿ ಹಾಸನದಲ್ಲಿ ಒಗ್ಗಟ್ಟಿನ ಶಕ್ತಿ ಪ್ರದರ್ಶನ

ಹುಡಾ ಅಧ್ಯಕ್ಷ ಸ್ಥಾನ ಮುಸ್ಲಿಮರಿಗೆ ನೀಡಲು ಆಗ್ರಹಿಸಿ ಹಾಸನದಲ್ಲಿ ಒಗ್ಗಟ್ಟಿನ ಶಕ್ತಿ ಪ್ರದರ್ಶನ

ಹಾಸನ : ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಸೈಯದ್ ತಾಜಿಂ ಇವರಿಗೆ ನೀಡಲು ಜಿಲ್ಲೆಯ ಸಾವಿರಾರು ಜನ ಮುಸ್ಲಿಂ ಬಾಂಧವರು ನಗರದ ಹೇಮಾವತಿ ಪ್ರತಿಮೆಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆಯ ಮೂಲಕ ಬಂದು ಶಕ್ತಿ ಪ್ರದರ್ಶಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಂಜುನಾಥ್ ರವರಿಗೆ ಮನವಿ ಸಲ್ಲಿಸಿದರು.

  ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಕಾಂಗ್ರೆಸ್ ಕಾರ್ಯಕರ್ತ ಕಬೀರ್ ಅಹಮದ್ ಮಾತನಾಡಿ, ಮುಸ್ಲಿಂ ಸಮುದಾಯವು ರಾಜಕೀಯ ಮತ್ತು ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಗಣನೀಯವಾಗಿ ಹಿಂದುಳಿದಿದೆ. ಈ ಸಮುದಾಯವು ಸಮಾಜದ ಮುಖ್ಯವಾಹಿನಿಯಲ್ಲಿ ಸಮಾನ ಭಾಗವಹಿಸಲು ಮತ್ತು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಏಳಿಗೆಯನ್ನು ಸಾಧಿಸಲು ರಾಜಕೀಯ ಅಧಿಕಾರವು ಅತ್ಯಗತ್ಯವಾಗಿದೆ. ಅಧಿಕಾರವಿಲ್ಲದ ಸಮುದಾಯವು ತನ್ನ ಧ್ವನಿಯನ್ನು ಪರಿಣಾಮಕಾರಿಯಾಗಿ ಎತ್ತಲು ಸಾಧ್ಯವಾಗದಿರುವುದರಿಂದ, ನಾಯಕತ್ವದ ಕೊರತೆಯಿಂದಾಗಿ ಹಲವು ತೊಡಕುಗಳನ್ನು ಎದುರಿಸುತ್ತಿದೆ. ಈ ಕಾರಣಕ್ಕಾಗಿಯೇ ಅಧಿಕಾರ ವಿಕೇಂದ್ರೀಕರಣ ಮತ್ತು ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ, ಇದು ಸಮುದಾಯವನ್ನು ಸಬಲಗೊಳಿಸಿ, ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದರು.

ವೀರ ಕನ್ನಡಿಗ ಟಿಪ್ಪು ಸೇನೆಯ ರಾಜ್ಯಾಧ್ಯಕ್ಷ ಅಕ್ಮಲ್ ಜಾವಿದ್ ಮಾತನಾಡಿ, ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯವು ರಾಜಕೀಯವಾಗಿ ನಿರಾಸಕ್ತಿಯ ಸ್ಥಿತಿಯಲ್ಲಿದೆ. ಕಾಂಗ್ರೆಸ್ ಪಕ್ಷಕ್ಕೆ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಸ್ಥಿರವಾದ ಬೆಂಬಲವನ್ನು ನೀಡಿದ್ದರೂ, ದುರದೃಷ್ಟವಶಾತ್, ಈ ಸಮುದಾಯಕ್ಕೆ ಜಿಲ್ಲೆಯಲ್ಲಿ ಯಾವುದೇ ಉನ್ನತ ರಾಜಕೀಯ ಅಥವಾ ಆಡಳಿತಾತ್ಮಕ ಹುದ್ದೆಗಳನ್ನು ನೀಡಲಾಗಿಲ್ಲ ಎಂದರು.

ವಕೀಲ ಹಾಗೂ ಜನಪರ ಸಂಘಟನೆಯ ಮುಖಂಡ ಅನ್ಸದ್ ಪಾಳ್ಯ ಮತ್ತು ಸಾಮಾಜಿಕ ಕಾರ್ಯಕರ್ತ ಚಾಂದ್ ಪಾಷಾ ಮಾತನಾಡಿ, ಮುಸ್ಲಿಮರಿಗೆ ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದ, ಶಾಸಕ ಅಥವಾ ವಿಧಾನ ಪರಿಷತ್ ಸದಸ್ಯ ಆಗುವ ಅವಕಾಶವನ್ನು ಒದಗಿಸಲಾಗಿಲ್ಲ. ಇದರಿಂದ ಸಮುದಾಯದ ರಾಜಕೀಯ ಧ್ವನಿಯು ದುರ್ಬಲವಾಗಿದ್ದು, ಆತ್ಮವಿಶ್ವಾಸ ಮತ್ತು ಭಾಗವಹಿಸುವಿಕೆಯ ಮೇಲೆ ಗಂಭೀರ ಪರಿಣಾಮ ಬೀರಿದೆ ಮುಸ್ಲಿಂ ವ್ಯಕ್ತಿಗೆ ಅಧಿಕಾರ ನೀಡಬೇಕು ಎಂದು ಹೇಳಿದರು. ಸೈಯದ್ ತಾಜಿಂ ಬಿನ್ ಸೈಯದ್ ಅಸ್ಲಂ (ವಯಸ್ಸು ೪೩, ವಿಜಯನಗರ ಬಡಾವಣೆ, ಎರಡನೇ ಹಂತ, ಹಾಸನ) ಇವರಿಗೆ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ಮುಸ್ಲಿಂ ಸಮುದಾಯಕ್ಕೆ ರಾಜಕೀಯ ಶಕ್ತಿಯನ್ನು ಒದಗಿಸಬೇಕೆಂದು ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರಲ್ಲಿ ವಿನೀತವಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.

  ಸೈಯದ್ ತಾಜಿಂ ಇವರು ಸಮಾಜದ ಎಲ್ಲ ವರ್ಗಗಳೊಂದಿಗೆ ಸಾಮರಸ್ಯದಿಂದ ಬೆರೆತು, ಸಮಾಜಕ್ಕೆ ಮಾದರಿಯಾಗಿ ನಿಂತಿದ್ದಾರೆ. ಶೋಷಿತ ಮತ್ತು ನಿರ್ಲಕ್ಷಿತರ ಪರವಾಗಿ ಧ್ವನಿಯಾಗಿ, ಸಾಮಾಜಿಕ ನ್ಯಾಯಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು, ತಮ್ಮ ತನು-ಮನ-ಧನದಿಂದ ಸಮಾಜಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಯಶಸ್ವೀ ಉದ್ಯಮಿಯಾಗಿರುವ ಇವರು, ಉತ್ತಮ ನಡತೆ, ಸಮರ್ಪಣೆ ಮತ್ತು ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ. ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು, ಸಮುದಾಯದ ಒಳಿತಿಗಾಗಿ ತಮ್ಮ ಆರ್ಥಿಕ ಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಂಡಿದ್ದಾರೆ ಎಂದರು. ಮುಖ್ಯಮಂತ್ರಿಗಳ ಸರ್ಕಾರವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಒತ್ತು ನೀಡುವ ದೃಷ್ಟಿಯನ್ನು ಹೊಂದಿದೆ. ಈ ದೃಷ್ಟಿಯನ್ನು ಮತ್ತಷ್ಟು ಬಲಪಡಿಸಲು, ಶ್ರೀ ಸೈಯದ್ ತಾಜಿಂ ಇವರಿಗೆ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ, ಮುಸ್ಲಿಂ ಸಮುದಾಯಕ್ಕೆ ರಾಜಕೀಯವಾಗಿ ಶಕ್ತಿ ತುಂಬಿ, ಸಮಾಜದ ಮುಖ್ಯವಾಹಿನಿಯಲ್ಲಿ ಸಕ್ರಿಯ ಭಾಗವಹಿಸುವ ಅವಕಾಶವನ್ನು ಕಲ್ಪಿಸಬೇಕೆಂದು ಕೋರಿಕೊಳ್ಳುತ್ತೇವೆ ಎಂದರು. ಇದು ಕೇವಲ ಒಬ್ಬ ವ್ಯಕ್ತಿಯ ಗೌರವವಲ್ಲ, ಬದಲಿಗೆ ಒಂದು ಸಮುದಾಯದ ಸಬಲೀಕರಣಕ್ಕೆ, ಸಾಮಾಜಿಕ ನ್ಯಾಯಕ್ಕೆ ಮತ್ತು ರಾಜ್ಯದ ಒಗ್ಗಟ್ಟಿಗೆ ದೊಡ್ಡ ಕೊಡುಗೆಯಾಗಲಿದೆ. ಜಿಲ್ಲೆಯಲ್ಲಿ ಮುಸ್ಲಿಮರಿಗೆ ಚುನಾಯಿತ ಹುದ್ದೆಗಳಲ್ಲಿ ಪ್ರಾತಿನಿಧ್ಯ ಸಿಗದಿರುವುದರಿಂದ,  ಹುಡಾ ಅದ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನವು ಸಮುದಾಯಕ್ಕೆ ರಾಜಕೀಯ ಗುರುತಿಸುವಿಕೆಯನ್ನು ಒದಗಿಸುವ ಮಹತ್ವದ ಕ್ರಮವಾಗಿರುತ್ತದೆ ಎಂದು ಕೋರಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸೈಯದ್ ಇಲ್ಯಾಸ್, ಸರದಾರ್ ಪಾಶ, ಕಾಂಗ್ರೆಸ್ ಕಾರ್ಯಕರ್ತರ ರಘು, ವಿವಿಧ ಸಂಘಟನೆಯ ಮುಖಂಡರು, ಮಹಿಳಾ ಕಾರ್ಯಕರ್ತರು ಸಾವಿರಾರು ಜನರು ಭಾಗವಹಿಸಿದ್ದರು.

You cannot copy content of this page

Exit mobile version