ಧರ್ಮಸ್ಥಳ ಸರಣಿ ಸಾವಿನ ಪ್ರಕರಣದಲ್ಲಿ ಪ್ರಮುಖ ದೂರುದಾರ ಇದುವರೆಗೆ ತೋರಿಸಿದ್ದ 13ನೇ ಜಾಗವನ್ನು ಹೊರತುಪಡಿಸಿ, ಇಂದು ಮಾತೊಂದು ಜಾಗಕ್ಕೆ ಎಸ್ಐಟಿ ಅಧಿಕಾರಿಗಳನ್ನು ಕರೆದೊಯ್ದ ಸಂಗತಿ ನಡೆದಿದೆ. ಬಹುತೇಕ ಇಂದು ಕಾಡಿನಲ್ಲಿ ಸಾಕ್ಷ್ಯ ಹುಡುಕುವ ಕೆಲಸಕ್ಕೆ ಅಂತ್ಯ ಎಂದೇ ಊಹಿಸಲಾಗಿತ್ತು. ಆದರೆ ದೂರುದಾರ ಬೇರೆ ಜಾಗಕ್ಕೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಉಳಿದೆಲ್ಲ ಜಾಗಗಳಲ್ಲಿ ಎಸ್‌ಐಟಿ ಶೋಧ ಕಾರ್ಯ ಪೂರ್ಣಗೊಳಿಸಿದೆ. ಅಲ್ಲದೇ ಆತ ಮೊದಲ ದಿನ ತೋರಿಸಿದ್ದ ಜಾಗಗಳ ಹೊರತಾಗಿ, ಸೋಮವಾರ ತೋರಿಸಿದ್ದ ಬೇರೆ ಜಾಗದಲ್ಲೂ ಶೋಧ ಕಾರ್ಯ ನಡೆಸಿದೆ.
ನೇತ್ರಾವತಿ ಸ್ನಾನಘಟ್ಟದ ಪಕ್ಕದ ಬಯಲಿನಲ್ಲಿರುವ 13ನೇ ಜಾಗದಲ್ಲಿ ಬುಧವಾರ ಶೋಧ ನಡೆಸಲಾಗುತ್ತದೆ ಎಂದು ಇಂದಿನ ಬೆಳವಣಿಗೆಯಲ್ಲಿ ನಿರೀಕ್ಷಿಸಲಾಗಿತ್ತು. ಆದರೆ, ಎಸ್‌ಐಟಿ ತಂಡವು ಸಾಕ್ಷಿ ದೂರುದಾರ ತೋರಿಸಿದ್ದ, 12ನೇ ಜಾಗವಿರುವ ಕಡೆಯಿಂದ ಕಾಡಿನ ಒಳಗೆ ತೆರಳಿದೆ.
‘ಇದೇ ಕಾಡಿನಲ್ಲಿ ಸಾಕ್ಷಿ ದೂರುದಾರ ಮತ್ತೊಂದು ಜಾಗವನ್ನು ತೋರಿಸಿದ್ದು ಅಲ್ಲಿ ಇಂದು ಶೋಧ ಕಾರ್ಯ ನಡೆಸಲಾಗುತ್ತದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಕಾಡಿನೊಳಗೆ ಅಗೆಯವ ಸ್ಥಳಕ್ಕೆ ಎಸ್‌ಐಟಿ ಅಧಿಕಾರಿಗಳಾದ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ, ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ವಿಧಿವಿಜ್ಞಾನ ತಜ್ಞರು ಹಾಗೂ ಸಾಕ್ಷಿದೂರುದಾರ ಹಾಗೂ ಆತನ ವಕೀಲರು ಸೇರಿದಂತೆ ಅಂದಾಜು 20 ಮಂದಿ ಕಾರ್ಮಿಕರು ಕಾಡಿನೊಳಗೆ ತೆರಳಿದ್ದಾರೆ. ಆದರೆ ಈ ದಿನ ಯಾವುದೇ ನೆಲ ಅಗೆಯುವ ಯಂತ್ರವನ್ನು ಸ್ಥಳಕ್ಕೆ ತರಿಸಿಕೊಂಡಿಲ್ಲ.
ಇಂದು ಎಸ್‌ಐಟಿ ಮುಖ್ಯಸ್ಥರಾಗಿರುವ ಡಿಜಿಪಿ ಪ್ರಣವ್ ಮೊಹಾಂತಿಯವರು ಧರ್ಮಸ್ಥಳಕ್ಕೆ ಬರುವ ಸಾಧ್ಯತೆ ಇದೆ. ಈ ನಡುವೆ ಮೊಹಾಂತಿಯವರು ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಭೇಟಿ ನೀಡಿ, ಅಧಿಕಾರಿಗಳ ಸಭೆ ನಡೆಸಿದ್ದಾರೆ.
ಶೋಧ ಕಾರ್ಯ ಆರಂಭವಾಗುವುದಕ್ಕೂ ಮುನ್ನ ನಡೆದ ಈ ಸಭೆಯಲ್ಲಿ ಎಸ್‌ಐಟಿಯ ಡಿಐಜಿ ಅನುಚೇತ್, ಎಸ್.ಪಿ.ಗಳಾದ ಜಿತೇಂದ್ರ ಕುಮಾರ್ ದಯಾಮ, ಸಿ.ಎ.ಸೈಮನ್ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.