ರಾಜ್ಯ ಮಾತ್ರವಲ್ಲದೇ ಇಡೀ ದೇಶದಾದ್ಯಂತ ರಣಬಿಸಿಲಿಗೆ ಜನ ಕಂಗೆಟ್ಟಿದ್ದು, ಒಂದು ಸರಿಯಾದ ಮಳೆ ಬಂದು ಇಳೆ ತಂಪಾಗಲಿ ಎಂಬ ನಿರೀಕ್ಷೆಯ ನಡುವೆಯೇ ಹವಾಮಾನ ಇಲಾಖೆ ತಂಪು ಕೊಡುವ ಸುದ್ದಿಯೊಂದನ್ನು ನೀಡಿದೆ. ರಾಜ್ಯಕ್ಕೆ ಭರಣಿ ಮಳೆ ತಂಪೆರುವ ಮುನ್ಸೂಚನೆ ನೀಡುವ ಮೂಲಕ ಕೊಂಚ ಮಟ್ಟಿಗಾದರೂ ಭೂಮಿ ತಂಪು ಕಾಣುವ ಬಗ್ಗೆ ಶುಭ ಸೂಚನೆ ನೀಡಿದೆ.
ಮೇ 4 ರ ಬಳಿಕ ಬೆಂಗಳೂರಿನಲ್ಲಿ ಮಳೆಯಾಗಲಿದ್ದು, ವಾತಾವರಣ ತಂಪಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ. ಮೇ 15ರವರೆಗೆ ರಾಜ್ಯದಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದ್ದು ಮೇ ಮೊದಲ ವಾರ ಕೆಲವು ಜಿಲ್ಲೆಗಳಲ್ಲಿ ಮಳೆಯಾದರೆ, ಎರಡನೇ ವಾರದಲ್ಲಿ ಮಳೆ ಮತ್ತಷ್ಟು ಹೆಚ್ಚಾಗಲಿದೆ.
ಮೇ 1 ರಿಂದ ಮೇ 7 ರವರೆಗೆ ಕೊಡಗು, ಚಿಕ್ಕಮಗಳೂರು, ದ.ಕ-ಉಡುಪಿ ಘಾಟ್‌ಗಳು, ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ ಮತ್ತು ಚಾಮರಾಜನಗರದಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.
ಮೇ 7 ರಿಂದ ಮೇ 15 ರವರೆಗೆ ಮೈಸೂರು, ಹಾಸನ, ಬೆಂಗಳೂರು, ರಾಮನಗರ, ಮಂಡ್ಯ, ಚಾಮರಾಜಮಗರ, ತುಮಕೂರು, ಕೋಲಾರ, ಸಿ.ಬಿ.ಪುರ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ, ಉಡುಪಿ ಘಾಟ್‌ಗಳಲ್ಲಿ ವ್ಯಾಪಕ ಮಳೆಯಾಗಲಿದೆ.
ಮುಂದಿನ 2 ದಿನಗಳಲ್ಲಿ ಕೊಡಗು ಮತ್ತು ಚಾಮರಾಜನಗರ ಮತ್ತು ನೀಲಗಿರಿಯಲ್ಲಿ ತುಂತುರು ಮಳೆ ಆರಂಭವಾಗಲಿದೆ. ಮೇ 5 ರ ನಂತರ ಬೆಂಗಳೂರಿನಲ್ಲಿ ಮಳೆಯಾಗುವುದು ಬಹುತೇಕ ಖಚಿತ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜಧಾನಿ ಬೆಂಗಳೂರು ಈ ಬಾರಿ ಅತ್ಯಧಿಕ ತಾಪಮಾನ ಹೊಂದುವ ಮೂಲಕ ಜನ ಕಂಗೆಟ್ಟಿದ್ದಾರೆ. ಇಂದು ಬೆಂಗಳೂರು 41° ತಾಪಮಾನ ಹೊಂದಿದೆ. ಸಧ್ಯದಲ್ಲೇ ಮಳೆಯ ನಿರೀಕ್ಷೆ ಈಗ ತಾಪಮಾನದ ನಡುವೆಯೂ ಸ್ವಲ್ಪ ತಂಪೆರಚಿದಂತಾಗಿದೆ.