ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ ಎರಡನೇ ವಾರದಲ್ಲಿ ಆರಂಭವಾಗಲಿದೆ ಎಂದು ವರದಿಯಾಗಿದೆ. ಈ ನಡುವೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಡಿಸೆಂಬರ್ 3 ರಂದು ಪ್ರಕಟವಾಗಲಿದೆ.
ಸಂಸತ್ತಿನ ಅಧಿವೇಶನಗಳು ಕೆಲವು ದಿನಗಳ ನಂತರ ಪ್ರಾರಂಭವಾಗಲಿದ್ದು, ಕ್ರಿಸ್‌ಮಸ್‌ಗಿಂತ ಮೊದಲು ಡಿಸೆಂಬರ್ ಮೂರನೇ ವಾರದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಕೋಡ್ ಮತ್ತು ಎವಿಡೆನ್ಸ್ ಆಕ್ಟ್ ಬದಲಿಗೆ ಸ್ಥಾಯಿ ಸಮಿತಿಯು ಅಂಗೀಕರಿಸಿದ ಹೊಸ ಕಾನೂನುಗಳು ಈ ಅಧಿವೇಶನಗಳಲ್ಲಿ ಸಂಸತ್ತಿನ ಮುಂದೆ ಬರಲಿವೆ. ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರ ನೇಮಕದ ಮಸೂದೆ ಕೂಡ ಸಂಸತ್ತಿನಲ್ಲಿ ಬಾಕಿ ಉಳಿದಿದೆ. ಚಳಿಗಾಲದ ಅವಧಿಗಳು ಸಾಮಾನ್ಯವಾಗಿ ನವೆಂಬರ್ ಮೂರನೇ ವಾರದಲ್ಲಿ ಪ್ರಾರಂಭವಾಗುತ್ತವೆ ಮತ್ತು ಕ್ರಿಸ್ಮಸ್ ಮೊದಲು ಕೊನೆಗೊಳ್ಳುತ್ತವೆ.
ಇದು ಮೋದಿ 2.0 ಸರ್ಕಾರದ ಕೊನೆಯ ಚಳಿಗಾಲದ ಅಧಿವೇಶನವಾಗಲಿದೆ. ದುರ್ಬಲ ವಿರೋಧ ಪಕ್ಷದ ನಡುವೆಯೂ ಸಂಸತ್ತಿನಲ್ಲಿ ಅಬ್ಬರಿಸುತ್ತಿದ್ದ ಮಹುವಾ ಮೊಯಿತ್ರಾ ಅವರನ್ನು ಬಿಜೆಪಿ ನೈತಿಕವಾಗಿ ಕಟ್ಟಿ ಹಾಕುವ ಯತ್ನದಲ್ಲಿ ಹೊರಿಸಿದ್ದ ಆರೋಪದ ಕುರಿತು ಇಂದು ಸಂಸತ್ತಿನ ನೈತಿಕ ಸಮಿತಿಯೆದುರು ವಿಚಾರಣೆ ನಡೆಯಲಿದೆ.