ಬೆಂಗಳೂರು: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಿಳೆಯೊಬ್ಬರ ಹಿಜಾಬ್ ಹಿಡಿದು ಎಳೆಯುತ್ತಿರುವ ದೃಶ್ಯ ಕಂಡುಬಂದ ಹಿನ್ನೆಲೆಯಲ್ಲಿ, ಅವರ ವಿರುದ್ಧ ಜೀರೋ ಎಫ್‌ಐಆರ್ (Zero FIR) ದಾಖಲಿಸುವಂತೆ ಕೋರಿ ಬೆಂಗಳೂರು ಮೂಲದ ವಕೀಲರೊಬ್ಬರು ಮಂಗಳವಾರ ಪೊಲೀಸ್ ಮಹಾನಿರ್ದೇಶಕ ಮತ್ತು ಐಜಿಪಿ (DG&IGP) ಎಂ.ಎ. ಸಲೀಂ ಅವರಿಗೆ ದೂರು ನೀಡಿದ್ದಾರೆ.
ವಕೀಲ ಓವೈಸ್ ಹುಸೇನ್ ಎಸ್. ಅವರು ಈ ದೂರನ್ನು ಬೆಂಗಳೂರು ಪೊಲೀಸ್ ಕಮಿಷನರ್ ಮತ್ತು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೂ ಸಲ್ಲಿಸಿದ್ದಾರೆ.
“ಲೈಂಗಿಕ ದೌರ್ಜನ್ಯ, ಸಮ್ಮತಿಯಿಲ್ಲದ ದೈಹಿಕ ಹಸ್ತಕ್ಷೇಪ, ಮಹಿಳೆಯ ಘನತೆಗೆ ಚ್ಯುತಿ ತರುವುದು, ಸಾರ್ವಜನಿಕ ಅವಮಾನ ಮತ್ತು ಧಾರ್ಮಿಕ ಘನತೆಯ ಉಲ್ಲಂಘನೆ” ಆರೋಪದ ಮೇಲೆ ನಿತೀಶ್ ಕುಮಾರ್ ವಿರುದ್ಧ ದೂರು ನೀಡಲಾಗಿದೆ ಎಂದು ಹುಸೇನ್ ತಿಳಿಸಿದ್ದಾರೆ. ಈ ದೂರನ್ನು ಸ್ವೀಕರಿಸಲಾಗಿದೆ.
ಸೋಮವಾರ ಬಿಹಾರದಲ್ಲಿ ಈ ಘಟನೆಯ ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ನಿತೀಶ್ ಕುಮಾರ್ ಅವರು ಮಹಿಳಾ ವೈದ್ಯೆಯೊಬ್ಬರಿಗೆ ಪ್ರಮಾಣಪತ್ರ ನೀಡುವಾಗ ಹಿಜಾಬ್ ತೆಗೆಯುವಂತೆ ಸನ್ನೆ ಮಾಡುವುದು ಕಂಡುಬಂದಿದೆ. ಆ ಮಹಿಳೆ ಪ್ರತಿಕ್ರಿಯಿಸುವ ಮೊದಲೇ, ಕುಮಾರ್ ಅವರು ಹಿಜಾಬ್ ಹಿಡಿದು ಕೆಳಕ್ಕೆ ಎಳೆಯುವುದು ವಿಡಿಯೋದಲ್ಲಿದೆ.
