Home ಬ್ರೇಕಿಂಗ್ ಸುದ್ದಿ ಪುರುಷರಿಗಿಂತ ಹೆಚ್ಚು ಜವಾಬ್ದಾರಿ ಮಹಿಳೆಗಿದೆ – ಡಾ. ರಂಗಲಕ್ಷ್ಮಿ

ಪುರುಷರಿಗಿಂತ ಹೆಚ್ಚು ಜವಾಬ್ದಾರಿ ಮಹಿಳೆಗಿದೆ – ಡಾ. ರಂಗಲಕ್ಷ್ಮಿ

ಹಾಸನ : ಬಾಲ್ಯದಿಂದ ಹಿಡಿದು ಪ್ರಾಯಕ್ಕೆ ಬಂದ ನಂತರ ಗೃಹಿಣಿಯಾಗಿ, ಮಕ್ಕಳ ತಾಯಿಯಾಗಿ ವಿವಿಧ ಘಟ್ಟಗಳಲ್ಲಿ ಭಾರತೀಯ ಮಹಿಳೆ ವಿವಾಹದ ನಂತರ ಪುರುಷರಿಗಿಂತ ಹೆಚ್ಚು ಜವಬ್ದಾರಿ ಹೊತ್ತಿರುತ್ತಾಳೆ ಎಂದು ನಗರದ ಪ್ರಖ್ಯಾತ ಪ್ರಸೂತಿ ತಜ್ಞೆ ಡಾ. ರಂಗಲಕ್ಷ್ಮಿ ಅಭಿಪ್ರಾಯಪಟ್ಟರು. ನಗರದ ಕುವೆಂಪು ಮಹಿಳಾ ಸಂಘದ ಮಾಸಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಆರೋಗ್ಯದ ಬಗ್ಗೆ ವಿಶೇಷ ಜಾಗೃತಿಯ ಉಪನ್ಯಾಸದಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಹಿರಿಯ ಕಿರಿಯರ ಬಗ್ಗೆ ವಿಶೇಷ ಕಾಳಜಿ , ಅತ್ತೆ ಮಾವಂದಿರ , ಗಂಡ ಮಕ್ಕಳ ಯೋಗಕ್ಷೇಮ , ಮನೆಗೆ ಬರುವವರಿಗೆ ವಿಶೇಷ ಆತಿಥ್ಯ , ಹಬ್ಬ ಹರಿದಿನಗಳ ಉಸ್ತುವಾರಿ, ಮನೆಯಲ್ಲಿ ವಿಶೇಷ ಕಾರ್ಯಗಳ ಬಗ್ಗೆ ಹೆಚ್ಚು ಕಾಳಜಿಯಿಂದ ತೊಡಗಿಸಿಕೊಳ್ಳುವಿಕೆ , ಮಕ್ಕಳ ಪ್ರಾಥಮಿಕ ವಿದ್ಯಾಭ್ಯಾಸದಿಂದ ಹಿಡಿದು ಕಾಲೇಜು ಶಿಕ್ಷಣದವರೆಗೆ ವಿಶೇಷ ಕಾಳಜಿ , ಅವರನ್ನು ಒಂದು ವ್ಯವಸ್ಥಿತ ಹಂತಕ್ಕೆ ತಂದು ನಿಲ್ಲಿಸುವವರೆಗೂ ತಪ್ಪದ ಜವಬ್ದಾರಿ, ಇವೆಲ್ಲಾ ಕೆಲಸಗಳು ಹೆಣ್ಣನ್ನು ಎಡಬಿಡದಂತೆ ನಿರಂತರ ಕೆಲಸಗಳಲ್ಲಿ ಲೀನವಾಗುವಂತೆ ಮಾಡುತ್ತವೆ. ಈ ಕಾರಣಗಳಿಂದ ಎಷ್ಟೋ ಬಾರಿ ಗೃಹಿಣಿ ತನ್ನ ಆರೋಗ್ಯದ ಬಗ್ಗೆ ಸ್ವಯಂ ನಿಗಾ ವಹಿಸದಂತಹ ವಾತಾವರಣದಲ್ಲಿ ಇದ್ದು ಬಿಡುತ್ತಾಳೆ .ಇದು ತಪ್ಪು. ಇಂಥಹ ದಿವ್ಯ ನಿರ್ಲಕ್ಷದಿಂದಲೆ ಆಕೆ ತನಗರಿವಿಲ್ಲದಂತೆಯೇ ಅನಾರೋಗ್ಯಕ್ಕೆ ತುತ್ತಾಗುತ್ತಾಳೆ ಎಂದು ಅಭಿಪ್ರಾಯಪಟ್ಟರು. ಸ್ತನ ಕ್ಯಾನ್ಸರ್, ಗರ್ಭಕೊರಳಿನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿದರು. ಭಾರತೀಯ ಮಹಿಳೆಯರ ಜೀವನಶೈಲಿಯೇ ವೈವಿದ್ಯಮಯವಾಗಿದೆ. ಗ್ರಾಮೀಣ ಪ್ರದೇಶದ ಮಹಿಳೆಯರು ಕೃಷಿ, ಹೈನುಗಾರಿಕೆ, ಜಾನುವಾರು ಸಾಕಾಣಿಕೆ, ಮನೆಯ ಹಾಗೂ ಹೊಲದ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಇನ್ನು ನಗರಪ್ರದೇಶಗಳಲ್ಲಿ ಕೆಲವು ಮಹಿಳೆಯರು ತಮ್ಮ ಮನೆಯ ಕೆಲಸವಷ್ಟೇ ಅಲ್ಲ ಯಾವುದೇ ಸಂಸ್ಥೆಗಳಲ್ಲಿ ದುಡಿಯುವ ಉದ್ಯೋಗಿಗಳಾಗಿರುತ್ತಾರೆ .ಎಲ್ಲರಿಗೂ ಒತ್ತಡದ ಜೀವನಶೈಲಿ. ಗಂಡ ,ಮನೆ, ಮಕ್ಕಳ ಜವಬ್ದಾರಿ ಯಲ್ಲಿ ತಮ್ಮನ್ನು ತಾವು ಗಮನಿಸಿಕೊಳ್ಳುವ ಗೊಡವೆಗೆ ಹೋಗುವುದೇ ಇಲ್ಲ. ಉತ್ತಮ ಸಮತೋಲನ ಆಹಾರದ ಬಗ್ಗೆ ಅರಿವಿದ್ದರೂ ಸಮಯದ ಒತ್ತಡದಿಂದ ತಮ್ಮ ಅರೋಗ್ಯವನ್ನು ಗಣನೆಗೆ ತೆಗೆದುಕೊಳ್ಳದ ಸ್ಥಿತಿಯಲ್ಲಿರುತ್ತಾರೆ ಎಂದು ಹೇಳಿದರು.


ಅಷ್ಟೇ ಅಲ್ಲ ಪರ‍್ರಿ ಮೆನೋಪಾಸ್ ಅವಧಿಯಲ್ಲಿ ವಿವಿಧ ನೋವುಗಳಿಗೆ, ಜೀವಸತ್ವಗಳ ಕೊರತೆಗಳಿಗೆ ದೈಹಿಕ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ನಲವತ್ತು , ಐವತ್ತು ವರ್ಷ ತುಂಬಿದ ಪ್ರತಿ ಸ್ತ್ರೀ ಶಕ್ತಿ, ಉತ್ಸಾಹ , ಆರೋಗ್ಯ ನಿಧಾನವಾಗಿ ಕ್ಷೀಣಿಸಲು, ಸ್ನಾಯುಗಳ ಬಲ ಕಳೆದುಕೊಳ್ಳಲು ಪ್ರಾರಂಭವಾಗುತ್ತದೆ. ಹೀಗಾಗಿ ವಯಸ್ಸು ಮೂವತ್ತರ ನಂತರ ಪ್ರತಿ ಹೆಣ್ಣು ಸ್ನಾಯುಗಳ ಬಲ ಹೆಚ್ಚಿಸಿಕೊಳ್ಳಬೇಕು. ಉತ್ತಮ ವ್ಯಾಯಾಮ, ಯೋಗ, ಪ್ರಾಣಾಯಾಮ, ಚುರುಕು ನಡಿಗೆ ಹೀಗೇ ಯಾವುದಾದರೊಂದು ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು. ಹಸಿರು ತರಕಾರಿ, ಸೊಪ್ಪು, ಕಾಳುಗಳು, ಹಣ್ಣುಗಳು, ಬೀಜಗಳಿಂದ ಕೂಡಿದ , ಹಾಲಿನ ಉತ್ಪನ್ನಗಳಿಂದ ಕೂಡಿದ ಸಮತೋಲಿತ ಆಹಾರವನ್ನು ಸೇವಿಸಬೇಕೆಂದು ಸಲಹೆ ನೀಡಿದರು.ನಿಗದಿತ ಅವಧಿಯಲ್ಲಿ ಪ್ರತಿಯೊಬ್ಬ ಸ್ತ್ರೀ ಸ್ತನ ಕ್ಯಾನ್ಸರ್, ಗರ್ಭ ಕೊರಳಿನ ಕ್ಯಾನ್ಸರ್ ಗೆ ಸಂಬಂಧಿಸಿದ ಸೂಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದರ ಮೂಲಕ ಮುಂದೆ ಬರುವ ಗಂಭೀರ ಸಮಸ್ಯೆಗಳಿಂದ ಪಾರಾಗಬಹುದು . ಪ್ಯಾಪ್ ಸ್ಮಿಯರ್ , ಮೆಮೊಗ್ರಾಫಿ ಯಂಥಹ ತಪಾಸಣೆಗೆ ನಾಚಿಕೆಯನ್ನು ಸರಿಸಿ ತಮ್ಮನ್ನು ತಾವು ಪರೀಕ್ಷೆಗೆ ಒಳಪಡಿಸಿಕೊಳ್ಳಬೇಕು. ವ್ಯಾಕ್ಸಿನೇಷನ್ ನ್ನು 9-12 ವರ್ಷದ ಎಲ್ಲಾ ಮಕ್ಕಳು, 15 ರಿಂದ 26 ವರ್ಷದ ಯುವ ಗಂಡು ಹಾಗೂ ಹೆಣ್ಣು ಮಕ್ಕಳು, ನಲವತೈದೆನೇ ಪ್ರಾಯದವರೆಗಿನ ಯಾರೇ ಆದರೂ ತೆಗೆದುಕೊಳ್ಳುವುದರ ಮೂಲಕ ಮುಂಬರುವ ಅನೇಕ ರೀತಿಯ ಕ್ಯಾನ್ಸರ್ ಗಳಿಂದ ಮುಕ್ತರಾಗಬಹುದೆಂದು ಹೇಳಿದರು.


ಮಹಿಳೆಯರಷ್ಟೇ ಅಲ್ಲ ಚಿಕ್ಕ ಪ್ರಾಯದ ಮಕ್ಕಳು ,ಯುವಜನಾಂಗ ಕೂಡಾ ಇಂದು ಕ್ಯಾನ್ಸರ್, ಹೃದಯರೋಗ ಮತ್ತಿತರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇಂಥಹ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಜನರನ್ನು ತಲುಪುವಂತಾಗಬೇಕು. ಮೇಲ್ನೋಟಕ್ಕೆ ಆರೋಗ್ಯವಾಗಿ, ಸದೃಢವಾಗಿ ಕಾಣುವಂಥಹ ಯುವ ಜನಾಂಗ ಕೆಲವೊಮ್ಮೆ ತಪ್ಪು ತಿಳುವಳಿಕೆಯಿಂದ ಅಥವಾ ಆಧುನಿಕ ಜೀವನ ಶೈಲಿಯಿಂದ, ಒತ್ತಡದ ಬದುಕಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಿರಬಹುದು. ಹೀಗಾಗಿ ಸೂಕ್ತ ಸಮಯದಲ್ಲಿ ಸೂಕ್ತ ತಪಾಸಣೆಯಿಂದ ಮುಂಬರುವ ಗಂಡಾಂತರದಿಂದ ಪಾರಾಗಬಹುದೆಂದು ಕುವೆಂಪು ಮಹಿಳಾ ಸಂಘದ ಅಧ್ಯಕ್ಷಿಣಿ ಜಯಾರಮೇಶ್ ಅಭಿಪ್ರಾಯಪಟ್ಟರು. ಸಭೆಯಲ್ಲಿ ಪ್ರಾರ್ಥನೆಯನ್ನು ಸುನಂದಕೃಷ್ಣ , ಸ್ವಾಗತವನ್ನು ಸ್ಮಿತಾ ಫಣಿರಾಜ್, ನಿರೂಪಣೆಯನ್ನು ರಾಜೇಶ್ವರಿ, ಅತಿಥಿಗಳ ಪರಿಚಯವನ್ನು ಲತಾ ಜಗದೀಶ್, ವಂದನಾರ್ಪಣೆಯನ್ನು ಸುಜಾತಾ ರಾಜ್ ಮಾಡಿದರು. ಸಭೆಯಲ್ಲಿ ಚೇತನ, ಹೇಮಾ ಕಮಲ್ ಕುಮಾರ್, ಮಾಲಿನಿ ಸ್ವರೂಪ್, ಲೀಲಾವತಿ, ಪದ್ಮಶರ್ಮ, ಸಾವಿತ್ರಿ, ಕಾಮಾಕ್ಷಿ, ಲಕ್ಷಿ÷್ಮನರೇಂದ್ರ, ಭಾಗ್ಯ ಇತರರು ಭಾಗವಹಿಸಿದ್ದರು.

You cannot copy content of this page

Exit mobile version