Friday, April 26, 2024

ಸತ್ಯ | ನ್ಯಾಯ |ಧರ್ಮ

ಮಹಿಳಾ ಜನಪ್ರತಿನಿಧಿ ಅಸ್ಮಿತೆ ಮತ್ತು ಮಹುವಾ ಮೊಯಿತ್ರಾ ಪ್ರಕರಣ

ಮಹುವಾ ಮೊಯಿತ್ರಾ, ಸಾಂಪ್ರದಾಯಿಕ ಮಹಿಳಾ ಜನಪ್ರತಿನಿಧಿಯ ಚೌಕಟ್ಟಿನಿಂದ ಭಿನ್ನವಾಗಿ ಒಬ್ಬ ಸ್ವತಂತ್ರ ಮನೋಭಾವದ ಆಧುನಿಕ ಮಹಿಳೆಯಾಗಿ ಕಾಣಿಸುತ್ತಾರೆ. ಭಾರತೀಯ ಪುರುಷರು, ವಿಶೇಷವಾಗಿ ರಾಜಕಾರಣಿಗಳು, ಬುದ್ಧಿಶಕ್ತಿಯಿರುವ, ಸ್ವಂತ ನಿರ್ಧಾರ ತೆಗೆದುಕೊಳ್ಳುವ ಮತ್ತು ನಿಭಾಯಿಸಿಕೊಳ್ಳುವ ಮಹಿಳಾ ರಾಜಕಾರಣಿಗಳ ಯಶಸ್ಸನ್ನು ಸಹಿಸುವುದಿಲ್ಲ. ಹಾಗಾಗಿ,ಮಹುವಾ, ಲೋಕಸಭೆಯಲ್ಲಿ ಪುರುಷ ಜನಪ್ರತಿನಿಧಿಗಳಿಗೆ ದೊಡ್ಡ ಸವಾಲಾಗಿ ಕಾಣಿಸುತ್ತಾರೆಡಾ. ಜ್ಯೋತಿ, ಸಹಾಯಕ ಪ್ರಾಧ್ಯಾಪಕರು, ತುಮಕೂರು ವಿವಿ.

ಎಲ್ಲಾ ತರಹದ ಜನಾಕರ್ಷಕ ಅಭಿವೃದ್ಧಿ ಮಂತ್ರಗಳು ಹಾಗು ಲೈಂಗಿಕ ಸಮಾನತೆಯ ಉಧ್ಘೋಷಗಳ ನಡುವೆಯೂ, ನಮಗಿನ್ನೂ ಮಹಿಳೆಯರು ಕೇವಲ ಕಾಣುವುದಕ್ಕಷ್ಟೇ ಸ್ಮಾರ್ಟ್ ಆಗಿರಬೇಕು, ಬುದ್ಧಿಮಟ್ಟದಲ್ಲಿ ಅಲ್ಲ ಎನ್ನುವಂತೆಯೇ ನಾವು ಬಹುತೇಕ ನಡೆದು ಕೊಳ್ಳುತ್ತೇವೆ. ಅದಕ್ಕಾಗಿಯೇ, ನಮಗೆ ಸ್ಮಾರ್ಟಾಗಿ ನಡೆದುಕೊಳ್ಳುವ ಮತ್ತು ಸ್ಪಷ್ಟವಾಗಿ ಮಾತನಾಡುವ ಮಹಿಳೆಯರು ಭಯ ಹುಟ್ಟಿಸುತ್ತಾರೆ. ನಾವಿಂದು, ರಾಜಕೀಯ ಪ್ರಾತಿನಿಧ್ಯದಲ್ಲಿ ಮಹಿಳೆಯರಿಗೆ 33% ಮೀಸಲಾತಿ ಕಲ್ಪಿಸುತ್ತಿದ್ದೇವೆಯೆಂದು ಹೆಮ್ಮೆಯಿಂದ ಹೇಳಿಕೊಂಡು ಮಹಿಳೆಯರ ಮತಯಾಚಿಸುತ್ತೇವೆ, ಆದರೆ, ವರ್ತಮಾನದ ಸಂಸತ್ತಿನಲ್ಲಿ ಅಧಿಕಾರ ಕೇಂದ್ರವನ್ನು ಕಟುವಾಗಿ ಪ್ರಶ್ನಿಸಿದ ವಿದ್ಯಾವಂತ, ಬುದ್ಧಿವಂತ, ನಿರ್ಭಯದ, ಆಧುನಿಕ ಭಾರತೀಯ ಮಹಿಳೆಯ ಪ್ರತೀಕವಾದ ಜನಪ್ರತಿನಿಧಿ ಮಹುವಾ ಮೊಯಿತ್ರಾರನ್ನು ಸಂಸತ್ತಿನಿಂದ ಆಚೆಗೆ ದಬ್ಬುತ್ತಿದ್ದೇವೆ. 

ಫೊಟೋ : ಗೂಗಲ್

ನಮ್ಮ ದೇಶದಲ್ಲಿ ಜನಪ್ರತಿನಿಧಿಗಳು ಸಾರ್ವಜನಿಕವಾಗಿ ಹೀಗೆಯೇ ಕಾಣಿಸಿ ಕೊಳ್ಳುತ್ತಾರೆ ಮತ್ತು ವರ್ತಿಸುತ್ತಾರೆ ಎನ್ನುವ ಕೆಲವು ವಿಶಿಷ್ಟ ರೂಪಕಗಳಿವೆ. ನಮ್ಮ ದೇಶದಲ್ಲಿ ಇದೊಂದು ಪರಂಪರೆಯಾಗಿ ಇನ್ನೂ ಮುಂದುವರಿದಿದೆ. ಉದಾಹರಣೆಗೆ, ಗಂಡಸರಾದರೆ, ಬಾಹ್ಯ ವೇದಿಕೆಗಳಲ್ಲಿ ಬಿಳಿ ಬಟ್ಟೆಯನ್ನೇ ಧರಿಸುತ್ತಾರೆ, ಸರಳತೆಯ ಮೂರ್ತಿಯಂತೆ ಕಾಣಿಸುತ್ತಾರೆ, ಎಲ್ಲರೊಂದಿಗೆ ನಗುಮುಖದಲ್ಲಿಯೇ ಮಾತನಾಡಿಸುತ್ತಾರೆ, ಜನರ ಕುರಿತು ಅಪಾರ ಕಾಳಜಿ ಇರುವಂತೆ ನಡೆದು ಕೊಳ್ಳುತ್ತಾರೆ ಮತ್ತು ಜನರಿಗೆ ಇಷ್ಟವಾಗುವಂತೆ ಮಾತನಾಡುತ್ತಾರೆ. ಮಹಿಳೆಯರಾದರೆ, ಸರಳವಾಗಿ ಸೀರೆ ಉಡುತ್ತಾರೆ, ಕಡಿಮೆ ಆಭರಣ ಧರಿಸುತ್ತಾರೆ, ಒಟ್ಟಿನಲ್ಲಿ ಆದರ್ಶ ಮತ್ತು ಸಂಪ್ರದಾಯಸ್ಥ ಭಾರತೀಯ ಮಹಿಳೆಯ ಪ್ರತೀಕವಾಗಿ ಗೋಚರಿಸುತ್ತಾರೆ. ವಿಶೇಷವಾಗಿ, ಈ ಪರಿಧಿಯಿಂದ ಹೊರಗಿರುವ ಮಹಿಳೆಯರು ನಮ್ಮಲ್ಲಿ ಅನಗತ್ಯ ಕುತೂಹಲ ಮತ್ತು ಅಸಹನೆ ಮೂಡಿಸುತ್ತಾರೆ. ಇಂತಹ ಅಸಾಮಾನ್ಯ ಮಹಿಳಾ ಜನಪ್ರತಿನಿಧಿಗಳು, ವಿಚ್ಛೇದನ ಪಡೆಯುವುದು, ಒಂಟಿಯಾಗಿರುವುದು, ಬಹಿರಂಗವಾಗಿ ಡೇಟಿಂಗ್ ಮಾಡುವುದು, ಮದ್ಯಪಾನ ಅಥವಾ ಧೂಮಪಾನ ಮಾಡುವುದು ಇತ್ಯಾದಿಗಳನ್ನು ಮಾಡಿದಲ್ಲಿ ನಮಗೆ ಇಷ್ಟವಾಗುವುದಿಲ್ಲ. ಏನಿದ್ದರೂ ನಮ್ಮದು ಮುಚ್ಚುಮರೆಯ ಜೀವನ.

ಈ ಹಿನ್ನೆಲೆಯಲ್ಲಿ, ತೃಣಮೂಲ ಕಾಂಗ್ರೆಸ್ ಪಕ್ಷದ  ಸಂಸದೆ ಮಹುವಾ ಮೊಯಿತ್ರಾ ನಮ್ಮ ನಿರೀಕ್ಷೆಯ ವ್ಯಾಪ್ತಿ ಮೀರಿದ ಮಹಿಳಾ ಜನಪ್ರತಿನಿಧಿಯಾಗಿ ಕಾಣಿಸುತ್ತಾರೆ. ಯಾಕೆಂದರೆ, ಅವರೊಬ್ಬ ವಿಚ್ಛೇದಿತೆ, ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಾರೆ, ದುಬಾರಿ ಚಪ್ಪಲಿ, ಬ್ಯಾಗುಗಳನ್ನು ಉಪಯೋಗಿಸುತ್ತಾರೆ, ತನಗನ್ನಿಸಿದನ್ನು ಫಿಲ್ಟರ್ ಮಾಡದೇ ಸಾರ್ವಜನಿಕವಾಗಿ ಹಂಚಿಕೊಳ್ಳುತ್ತಾರೆ (ಉದಾಹರಣೆಗೆ, ಕಾಳಿ ದೇವತೆ ಕುರಿತು ಅವರ ಹೇಳಿಕೆ). ಹಾಗಾಗಿ, ಜನಪ್ರತಿನಿಧಿಗಳ ಬಾಹ್ಯ ರೂಪವೊಂದು, ಆಂತರಿಕ ಜೀವನ ಇನ್ನೊಂದು ಎನ್ನುವಂತೆ ಬದುಕುವವರ ಮಧ್ಯೆ, ಇವರೊಂದು ಸೋಜಿಗದಂತೆ ಕಾಣಿಸುವುದು ಮಾತ್ರವಲ್ಲ, ಸರಕಾರದ ಪರವಾಗಿ ಕೆಲಸ ಮಾಡುವ ಮಾಧ್ಯಮಗಳು ಅವರನ್ನು ಟ್ರೋಲ್ ಮಾಡುವುದು ಸಾಮಾನ್ಯ ಸಂಗತಿ. ವಿಸ್ಮಯವೆಂದರೆ, ಅವರು ತನ್ನ ಕ್ಷೇತ್ರದಲ್ಲಿ ಮಾಡುತ್ತಿರುವ ಜನಪರ ಕಾರ್ಯಕ್ರಮಗಳು ಮಾಧ್ಯಮದ ಗಮನ ಸೆಳೆಯುವುದಿಲ್ಲ. ಅಕಸ್ಮಾತ್, ಅವರು ಸರಕಾರದ ವಿರುದ್ಧ ಕಟುವಾಗಿ ಟೀಕೆ ಮಾಡದಿದ್ದಲ್ಲಿ, ಅವರನ್ನು ಸುಮ್ಮನೆ ಬಿಡುತ್ತಿದ್ದಿರಬಹುದು. ಆದರೆ, ಅವರು ಸಂಸತ್ತಿನಲ್ಲಿ ಆರೋಪ ಮಾಡಿದ್ದು ಉದ್ಯಮಿ ಗೌತಮ್ ಅದಾನಿ ವಿರುದ್ಧ. ಇದರಿಂದಾಗಿ, ಅವರನ್ನು ಹೇಗಾದರೂ ಮಾಡಿ ಬಾಯಿಮುಚ್ಚಿಸಲೇ ಬೇಕೆಂದು ಕೊಂಡವರಿಗೆ  ಕಾರಣವೊಂದು ದೊರೆತು, ಅವರ ಲೋಕಸಭೆ ಸದಸ್ಯತ್ವಕ್ಕೆ ಕಂಟಕ ಎದುರಾಗಿದೆ.

ಮಹುವಾ ಮೊಯಿತ್ರಾ, ಸಾಂಪ್ರದಾಯಿಕ ಮಹಿಳಾ ಜನಪ್ರತಿನಿಧಿಯ ಚೌಕಟ್ಟಿನಿಂದ ಭಿನ್ನವಾಗಿ ಒಬ್ಬ ಸ್ವತಂತ್ರ ಮನೋಭಾವದ ಆಧುನಿಕ ಮಹಿಳೆಯಾಗಿ ಕಾಣಿಸುತ್ತಾರೆ. ಅವರು, ಮಹಿಳೆಯರು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಹಿಂದಿನ ಪಂಕ್ತಿಯ ಮೌನಿ ಹೆಣ್ಣುಮಗಳಲ್ಲ. ಮಹುವಾ ಲೋಕಸಭೆಯಲ್ಲಿ ಇದ್ದಾರೆಂದರೆ, ಮಿಂಚಿನ ಸಂಚಾರವಿರುತ್ತದೆ. ವಿರೋಧ ಪಕ್ಷದಲ್ಲಿರುವ ಅವರು, ನಿರರ್ಗಳವಾಗಿ ಸ್ಪಷ್ಟ ಮಾತಿನಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ತಮ್ಮ ಪ್ರಶ್ನೆಗಳಿಗೆ ಪೂರಕ ವಿಷಯ ಮಂಡನೆ ಮಾಡುತ್ತಾರೆ, ಅಂಕಿ ಅಂಶಗಳನ್ನು ನೀಡುತ್ತಾರೆ, ಸಾಕಷ್ಟು ಪೂರ್ವ ತಯಾರಿಯೊಂದಿಗೆ ಬರುತ್ತಾರೆ. ಈ ಮಹಿಳಾ ಪ್ರತಿನಿಧಿಯ ಪ್ರಶ್ನೆಗಳನ್ನು ಎದುರಿಸಲು ಸರಕಾರವೇಕೆ ಇರಿಸುಮುರಿಸಾಗುತ್ತದೆ? ಈ ಪ್ರಕರಣದಲ್ಲಿ, ವ್ಯವಸ್ಥೆಯಲ್ಲಿ ಪಳಗಿದ ರಾಜಕಾರಣಿಗಳು ಮತ್ತು ಅವರನ್ನು ಬೆಂಬಲಿಸುವ ಉದ್ಯಮಿಗಳನ್ನು ಎದುರು ಹಾಕಿಕೊಳ್ಳುವಾಗ ಸಾಕಷ್ಟು ಮುನ್ನೆಚ್ಚರಿಕೆ ಅಗತ್ಯವಿದೆ. ಆಳುವವರು ತನ್ನ ಕಟು ವಿಮರ್ಶಕರನ್ನು ಹೇಗೆ ತೀವ್ರವಾಗಿ ಗಮನಿಸುತ್ತಿದ್ದಾರೆ ಹಾಗು ಅವರ  ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಕೆಲಸವನ್ನು ಬಹಳ ಚೆನ್ನಾಗಿ ನಿರ್ವಹಿಸಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.

ಚಿತ್ರ: ಗೂಗಲ್

ಮಹುವಾ ಮೇಲಿರುವ ಆರೋಪವೆಂದರೆ- ಅವರು ಸಂಸತ್ತಿನಲ್ಲಿ ಉದ್ಯಮಿ ಅದಾನಿ ಕುರಿತಂತೆ ಸರಕಾರವನ್ನು ಪ್ರಶ್ನಿಸುವುದಕ್ಕಾಗಿ, ತನ್ನ ಸ್ನೇಹಿತ ಉದ್ಯಮಿ ದರ್ಶನ್ ಹಿರಾನಂದಾನಿ ಅವರೊಂದಿಗೆ ತಮ್ಮ ಸಂಸತ್ತಿನ ಲಾಗಿನ್ ವಿವರಗಳನ್ನು  ಹಂಚಿಕೊಂಡಿದ್ದಾರೆ. ಇದೊಂದು, ‘ಪ್ರಶ್ನೆಗಾಗಿ ನಗದು’ ಹಗರಣ. ಯಾಕೆಂದರೆ, ಹಿರಾನಂದಾನಿ ಉದ್ಯಮ ಕ್ಷೇತ್ರದಲ್ಲಿ ಅದಾನಿಗೆ ಸ್ಪರ್ಧಿ. ಹಾಗಾಗಿ, ಅವರಿಗೆ ಅನುಕೂಲವಾಗಲೆಂದೇ ಮಹುವಾ ಪ್ರಶ್ನೆ ಕೇಳುತ್ತಿದ್ದಾರೆಯೇ ಹೊರತು, ಇದರಲ್ಲಿ ದೇಶದ ಹಿತರಕ್ಷಣೆಯೇನಿಲ್ಲ. ಜೊತೆಗೆ, ಹಿರಾನಂದಾನಿ ದುಬೈಯಲ್ಲಿ ನೆಲೆಸಿರುವುದರಿಂದ, ಅಲ್ಲಿಂದ ಪ್ರಶ್ನೆಗಳನ್ನು ಕಳುಹಿಸುವುದೆಂದರೆ, ದೇಶದ ಗೌಪ್ಯತೆ ಮತ್ತು ಹಿತರಕ್ಷಣೆಯೊಂದಿಗೆ ರಾಜಿ ಮಾಡಿಕೊಂಡಂತೆ.

ಖಂಡಿತವಾಗಿಯೂ, ಲಾಗಿನ್ ವಿವರ ಹಂಚಿಕೊಂಡಿರುವುದು ಮಹುವಾ ಮಾಡಿರುವ ತಪ್ಪು. ಆದರೆ, ನಮ್ಮ ಹೆಚ್ಚಿನ ಜನಪ್ರತಿನಿಧಿಗಳ ಪ್ರಶ್ನೆಗಳನ್ನು ಅವರ ಸಹಾಯಕರೇ ಸಿದ್ಧಪಡಿಸುತ್ತಾರೆ ಮತ್ತು ಲಾಗಿನ್ ಮಾಡಿ ಕಳುಹಿಸುತ್ತಾರೆ ಎನ್ನುವುದೂ ಸತ್ಯ. ಆದರೆ, ಮಹುವಾ ಅವರ ಬಾಯಿ ಮುಚ್ಚಿಸುವುದೇ ಇಲ್ಲಿನ ಮೂಲ ಉದ್ದೇಶವಾಗಿರುವಂತೆ ಕಾಣಿಸುವುದರಿಂದ, ಈ ಪ್ರಕರಣವನ್ನು ಸಾರ್ವಜನಿಕ ಗೊಳಿಸಲಾಗಿದೆ. ಆದರೆ, ಅವರು ಹಣಕ್ಕಾಗಿ ತನ್ನ ಹುದ್ದೆಯನ್ನು ಹರಾಜಿಗಿಟ್ಟಿದ್ದಾರೆ ಎನ್ನುವುದನ್ನು, ವಸ್ತುಸ್ಥಿತಿಯ ಸಂಪೂರ್ಣ  ತನಿಖೆಯಾಗದೆ ತಪ್ಪಿತಸ್ಥರೆನ್ನಲಾಗದು.

ಇದರೊಂದಿಗೆ, ಜೂನ್ 2012ರ ವಿದೇಶಿ ಉಡುಗೊರೆ ನಿಯಂತ್ರಣ ಕಾಯ್ದೆಯಡಿಯಲ್ಲಿ, ಜನಪ್ರತಿನಿಧಿಗಳು ಉಡುಗೊರೆ ಸ್ವೀಕರಿಸಿದ ಮೂವತ್ತು ದಿನದೊಳಗೆ ಅದರ ವಿವರಣೆಯನ್ನು ಸರಕಾರಕ್ಕೆ ನೀಡಬೇಕು ಮತ್ತು ಉಡುಗೊರೆಯ ಮೌಲ್ಯವು 5,000 ರೂ ಗಿಂತ ಹೆಚ್ಚಿದ್ದಲ್ಲಿ  ಅದನ್ನು ಸರಕಾರಕ್ಕೆ ಒಪ್ಪಿಸಬೇಕು. ಸ್ವತಃ ಮಹುವಾ ಉಡುಗೊರೆ ಪಡೆದಿದ್ದನ್ನು ಒಪ್ಪಿಕೊಂಡಂತೆ, ಅಕಸ್ಮಾತ್, ಹಿರಾನಂದಾನಿಯಿಂದ ಪಡೆದ ಉಡುಗೊರೆಗಳ ಮೊತ್ತ 5,000ಕ್ಕಿಂತ ಹೆಚ್ಚಿದ್ದಲ್ಲಿ, ಅವರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆಯಿದೆ. ನಾವು ಗಮನಿಸಿದಂತೆ, ನಮ್ಮ ಹೆಚ್ಚಿನ ಜನಪ್ರತಿನಿಧಿಗಳು ತಾವು ಸ್ವೀಕರಿಸಿದ ದುಬಾರಿ ಉಡುಗೊರೆಗಳನ್ನೆಂದೂ ಬಹಿರಂಗ ಗೊಳಿಸುವುದಿಲ್ಲ, ಆದರೂ ಲೆಕ್ಕಕ್ಕೆ ಸಿಗದ/ಕೊಡದ ಸಂಪತ್ತನ್ನು ನಿರಂತರವಾಗಿ ಕ್ರೋಡೀಕರಿಸುತ್ತಾ ಇರುತ್ತಾರೆ ಎನ್ನುವುದು ಸತ್ಯ. ಹಾಗಾಗಿ, ಪಾರದರ್ಶಕ ಜೀವನ ನಡೆಸಿದವರಷ್ಟೇ, ಆಳುವವರ ಕೆಂಗಣ್ಣಿಗೆ ಗುರಿಯಾದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ.

ಸ್ವತಃ, ಮಹುವಾ ಹೇಳುವಂತೆ, ‘ನಾನು ರಾಜಕೀಯ ಪ್ರವೇಶ ಮಾಡಲೆಂದು ಉತ್ತಮ ಸಂಬಳದ ಉದ್ಯೋಗ ಬಿಟ್ಟು ಭಾರತಕ್ಕೆ ಹಿಂದಿರುಗುತ್ತೇನೆಂದು ನಿಶ್ಚಯಿಸಿದಾಗಲೇ, ಸಾರ್ವಜನಿಕ ಜೀವನದಲ್ಲಿ ನಾನು ನಾನಾಗಿಯೇ ಇರಲು ಬಯಸುತ್ತೇನೆಂದು ನಿರ್ಧರಿಸಿದ್ದೆ.’

ಈ ರೀತಿ, ಬಾಹ್ಯವಾಗಿ ಸಜ್ಜನ, ಏಕ ಪತಿ/ಪತ್ನಿ ವ್ರತಸ್ಥ, ಬಡವರ ಪರ ಎನ್ನುವ ಚಿತ್ರಣ ನೀಡುತ್ತಾ, ಖಾಸಗಿಯಾಗಿ ಅಕ್ರಮ ಸಂಬಂಧಗಳು, ಆಸ್ತಿಪಾಸ್ತಿಗಳು ಹೊಂದಿರುವ  ಸಾಕಷ್ಟು  ಜನಪ್ರತಿನಿಧಿಗಳ ನಡುವೆ, ತನ್ನ ಸಂಬಂಧಗಳು ಮತ್ತು ವಸ್ತುಗಳನ್ನು ಸಾರ್ವಜನಿಕ ಗೊಳಿಸಿ ಬದುಕುತ್ತಿರುವ ಮಹುವಾ ವಿಭಿನ್ನವಾಗಿ ಕಾಣಿಸುತ್ತಾರೆ. ಒಬ್ಬ ಸ್ಪಷ್ಟ ಮಾತಿನ, ದಿಟ್ಟ ನಿಲುವಿನ, ಆಧುನಿಕ ಮಹಿಳಾ ಜನಪ್ರತಿನಿಧಿಯನ್ನು ವ್ಯವಸ್ಥಿತವಾಗಿ ಬಾಯಿ ಮುಚ್ಚಿಸುತ್ತಿರುವುದು ದುರಂತವೆನ್ನಬಹುದು.

ಭಾರತೀಯ ಪುರುಷರು, ವಿಶೇಷವಾಗಿ ರಾಜಕಾರಣಿಗಳು, ಬುದ್ಧಿಶಕ್ತಿಯಿರುವ, ಸ್ವಂತ ನಿರ್ಧಾರ ತೆಗೆದುಕೊಳ್ಳುವ ಮತ್ತು ನಿಭಾಯಿಸಿಕೊಳ್ಳುವ ಮಹಿಳಾ ರಾಜಕಾರಣಿಗಳ ಯಶಸ್ಸನ್ನು ಸಹಿಸುವುದಿಲ್ಲ. ಹಾಗಾಗಿ, ಉತ್ತಮ ಶಿಕ್ಷಣ ಪಡೆದಿರುವ, ಕೆಲಸದ ಅನುಭವವಿರುವ, ಆರ್ಥಿಕವಾಗಿ ಸಧೃಡವಾಗಿರುವ, ಆತ್ಮವಿಶ್ವಾಸದಿಂದ ಕೂಡಿದ, ಸ್ವಂತ ನಿರ್ಧಾರ ತೆಗೆದುಕೊಳ್ಳುವ ಮತ್ತು ಸಮಾನ ಮನಸ್ಕ ಗಂಡಸರನ್ನು ಸ್ನೇಹಿತರಂತೆ ಕಂಡು ಮುಕ್ತವಾಗಿ ಬೆರೆಯುವ ಮಹುವಾ, ಲೋಕಸಭೆಯಲ್ಲಿ ಪುರುಷ ಜನಪ್ರತಿನಿಧಿಗಳಿಗೆ ದೊಡ್ಡ ಸವಾಲಾಗಿ ಕಾಣಿಸುತ್ತಾರೆ. ಸಾಮಾನ್ಯವಾಗಿ, ಹೆಣ್ಣುಮಕ್ಕಳ ಸದ್ದಡಗಿಸಬೇಕೆಂದರೆ ಅವರ ಚಾರಿತ್ರ್ಯಹರಣ ಮಾಡುತ್ತಾರೆ. ಇದೇ ಪ್ರಕರಣದಲ್ಲಿ, ಸಂಸದೀಯ ಸಮಿತಿಯ ಮುಂದೆ ಹಾಜರಾದಾಗ, ಅವರನ್ನು ಮುಜುಗರಗೊಳಿಸಿ, ಧೈರ್ಯ ಕುಗ್ಗಿಸಲೆಂದೇ ಸಾಕಷ್ಟು ವೈಯಕ್ತಿಕ ಪ್ರಶ್ನೆಗಳನ್ನು ಕೇಳಲಾಯಿತು-‘ನೀವು ತಡರಾತ್ರಿ ಯಾರೊಂದಿಗೆ ಮತ್ತು ಎಷ್ಟು ಬಾರಿ ಫೋನಿನಲ್ಲಿ ಮಾತನಾಡುತ್ತಿದ್ದಿರಿ? ಇದು, ಅವರ ಹೆಂಡತಿಗೆ ತಿಳಿದಿದೆಯೇ? ನೀವು ಯಾವ ಹೋಟೆಲುಗಳಲ್ಲಿ ಮತ್ತು ಯಾರೊಂದಿಗೆ ಉಳಿದುಕೊಳ್ಳುತ್ತೀರಿ?’… ಇತ್ಯಾದಿ. ಬಹುಶಃ, ಪುರುಷರನ್ನು ಪ್ರಶ್ನಿಸುವಾಗ ಇಂತಹ ಪ್ರಶ್ನೆಗಳನ್ನು ಕೇಳಬೇಕೆನ್ನುವ ಯೋಚನೆಯೂ ಬರಲಾರದು. ಆದರೆ, ಧೈರ್ಯಗುಂದದ ಮಹುವಾ ‘ ಅಂದರೆ, ನೀವು ನನ್ನನ್ನು ಪರೋಕ್ಷವಾಗಿ, ವೇಶ್ಯೆಯೇ ಎಂದು ಕೇಳುತ್ತಿದ್ದೀರಾ?’ ಎಂದು ಮರು ಸವಾಲು ಹಾಕಿದರು. ‘ಒಂದು ಸಂಸದೀಯ ಸಮಿತಿಯ ಅಧ್ಯಕ್ಷರು ಸಾರ್ವಜನಿಕವಾಗಿ ಈ ರೀತಿ ಪ್ರಶ್ನಿಸಿದರು’ ಎಂದು ಮಹುವಾ ಆಘಾತ ವ್ಯಕ್ತಪಡಿಸುತ್ತಾರೆ. ವರ್ತಮಾನದ ಮಹಿಳಾ ಜನಪ್ರತಿನಿಧಿಗಳಿಗೆ ಹೊಸ ಮಾದರಿಯ ಅಗತ್ಯವಿದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ.

ನಾವಿಂದು, ಮಹಿಳಾ ಮೀಸಲಾತಿ ಜಾರಿಗೆ ತಂದಿರುವುದರ ಕುರಿತು ಹೆಮ್ಮೆ ಪಡುತ್ತಿದ್ದೇವೆ. ಆದರೆ, ನಿರ್ಭಯವಾಗಿ ಮಾತನಾಡುವ ಮಹಿಳಾ ಪ್ರತಿನಿಧಿಯನ್ನು ನಿಂದನೀಯವಾಗಿ ಪ್ರಶ್ನೆ ಕೇಳುತ್ತಿರುವುದನ್ನು ನೋಡಿದರೆ, ಆಳುವವರಿಗೆ ಬೇಕಾಗಿರುವುದು ಸಾಂಪ್ರದಾಯಿಕ ಮೌನಶಿಖಾಮಣಿಗಳೇ ಹೊರತು, ಅವರದ್ದೇ ಧ್ವನಿ ಹೊಂದಿದ, ಪ್ರಶ್ನಿಸುವ ಮಹಿಳೆಯರಲ್ಲ, ಎನ್ನುವುದು ಸ್ಪಷ್ಟವಾಗುತ್ತದೆ. ಮಹುವಾ, ಯಾವುದೇ ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವರಲ್ಲ. ವಿದೇಶದಲ್ಲಿ ಚೆನ್ನಾಗಿ ಸಂಪಾದಿಸುವ ಕೆಲಸ ಬಿಟ್ಟು ದೇಶದ ರಾಜಕೀಯದಲ್ಲಿ ತನ್ನ ಅಸ್ಮಿತೆ ಕಟ್ಟಿಕೊಳ್ಳ ಬಯಸಿದವರು. ಇಂತಹ ಮಹಿಳೆಯರ ಸದ್ದಡಗಿಸಿದಲ್ಲಿ, ಸಂಸತ್ತಿನಲ್ಲಿ ಮೌನವಾಗಿ ಕುಳಿತುಕೊಳ್ಳುವ, ಆದರೆ ಲೆಕ್ಕಕ್ಕೆ  33%  ಮಹಿಳೆಯರನ್ನು ನಾವು ನೋಡಲಿದ್ದೇವೆ.

 ಡಾ. ಜ್ಯೋತಿ

ಇಂಗ್ಲಿಷ್‌ ಸಾಹಿತ್ಯದಲ್ಲಿ ಡಾಕ್ಟರೇಟ್‌ ಪಡೆದಿರುವ ಇವರು ಪ್ರಸಕ್ತ, ತುಮಕೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ವೈಚಾರಿಕ ಲೇಖನಗಳು, ಸಣ್ಣ ಕಥೆಗಳು, ವಿಮರ್ಶಾ ಬರಹಗಳು ಮತ್ತು ಅನುವಾದಗಳನ್ನು ಬರೆದು ಪ್ರಕಟಿಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು