Friday, June 14, 2024

ಸತ್ಯ | ನ್ಯಾಯ |ಧರ್ಮ

ಮಹಿಳಾ ಮೀಸಲಾತಿ ಮಸೂದೆ: ನಾಲ್ಕು ದಶಕದ ಇತಿಹಾಸ

ಕಳೆದ ಒಂದು ದಶಕದಿಂದಲೂ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಇದೀಗ ಮತ್ತೆ ಜೀವ ಬಂದಿದೆ. ಸಪ್ಟೆಂಬರ್‌ 18, 2023 ಮಂಗಳವಾರ, ಲೋಕಸಭೆಯಲ್ಲಿ 128ನೇ ತಿದ್ದುಪಡಿ ತಂದು ಸಂವಿಧಾನ ಮಸೂದೆ ಮಹಿಳಾ ಮೀಸಲಾತಿ ವಿಧೆಯಕ ಮಂಡನೆಯಾಗಿದೆ. ಈ ರೀತಿ ಮಹಿಳಾ ಮೀಸಲಾತಿ ಮಸೂದೆ ದೊಡ್ಡ ಸದ್ದು ಮಾಡುತ್ತಾ ಸಂಸತ್ತಿನಲ್ಲಿ ಮಂಡನೆಯಾಗುವುದು ಇದೇನೂ ಮೊದಲಲ್ಲ. ಈಗಲೂ ಎರಡೂ ಸದನಗಳಲ್ಲಿ ಒಪ್ಪಿಗೆಯಾಗಿ ರಾಷ್ಟ್ರಪತಿಯವರ ಅಂಕಿತ ಬಿದ್ದೇ ಬೀಳುತ್ತದೆ ಎಂದು ನಂಬಿ ಕೂರುವ ಸ್ಥಿತಿಯೂ ಇಲ್ಲ. ಆದರೆ ಈಗ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಇರುವುದರಿಂದ ಮಸೂದೆ ಜಾರಿಯೇ ಆಯ್ತೇನೋ ಎನ್ನುವಂತ ಪ್ರಚಾರ ಮಾತ್ರ ಹೊರಗಡೆ ಜೋರಾಗಿದೆ. 

ಮತ್ತೊಮ್ಮೆ ಮಸೂದೆಯನ್ನು ಮಂಡಿಸಿರುವುದಕ್ಕೆ ಇಡೀ ದೇಶದಲ್ಲೇ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿ  ʼನಾರಿ ಶಕ್ತಿ ವಂದನ್ ಅಧಿನಿಯಮ’ ನಮ್ಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತದೆ. ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಹಲವಾರು ಬಾರಿ ಮಂಡಿಸಲಾಯಿತು. ಆದರೆ ಬಹುಮತವಿಲ್ಲದೆ ಆಂಗೀಕಾರವಾಗಲಿಲ್ಲ. ಈಗ ನನಗೆ ಈ ಮಸೂದೆ ಜಾರಿಗೆ ತರಲು ದೇವರು ಅವಕಾಶ ನೀಡಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.

ಈ ನಡುವೆ, ಕಾಂಗ್ರೇಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಹಿಳಾ ಮೀಸಲಾತಿ ಮಸೂದೆಯನ್ನು 2010 ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿಯೇ ತರಲಾಗಿತ್ತು, ಇದರ ಕ್ರೆಡಿಟ್‌ ಕಾಂಗ್ರೇಸ್‌ಗೆ ಕೊಡಬೇಕು ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. 2010 ರಲ್ಲಿ ಯುಪಿಎ ಸರ್ಕಾರ ಮಂಡಿಸಿದ ಮಸೂದೆಯು ಲೋಕಸಭೆ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿಯನ್ನು ನೀಡಿತ್ತು. ಅದರಲ್ಲಿ ಮೂರನೇ ಒಂದು ಭಾಗದಷ್ಟು ಸೀಟುಗಳನ್ನು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರಿಗೆ ಮೀಸಲಿಡಲಾಗಿತ್ತು. 2010ರಲ್ಲಿ ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರವಾದರೂ ಲೋಕಸಭೆಯಲ್ಲಿ ಅಂಗೀಕಾರವಾಗಿರಲಿಲ್ಲ. ಆಗ ಹಿಂದುಳಿದ ವರ್ಗಗಳ ಮಹಿಳಾ ಮೀಸಲಾತಿಯಲ್ಲಿ ಒಳಮೀಸಲಾತಿಗೆ ಆಗ್ರಹಪಡಿಸಿದ್ದ ಕಾರಣ ಮಸೂದೆ ನೆನೆಗುದಿಗೆ ಬಿದ್ದಿತ್ತು.  ಈಗ ಮಂಡಿಸಿರುವ ಮಸೂದೆಯಲ್ಲೂ ಒಬಿಸಿ ಮಹಿಳೆಯರಿಗೆ ಒಳ ಮೀಸಲಾತಿ ಕಲ್ಪಿಸಲಾಗಿಲ್ಲ.

ವಿಡಿಯೋ: ಮಹಿಳಾ ಮೀಸಲಾತಿ ಮಸೂದೆ: ನಾಲ್ಕು ದಶಕದ ಇತಿಹಾಸ!

ಈಗ ಮಂಡಿಸಲಾಗಿರುವ ಮಸೂದೆ ಅಂಗೀಕಾರಕೊಂಡು ಕಾಯ್ದೆಯಾದರೂ ಅದು ಸಧ್ಯದಲ್ಲೇನು ಜಾರಿಯಾಗುವುದಿಲ್ಲ. ಅದು ಜಾರಿಯಾಗುವುದು 2029ಕ್ಕೆ! ಯಾಕೇಂದರೆ, ಈ ಮೀಸಲಾತಿ 2026 ರಲ್ಲಿ ಡಿಲಿಮಿಟೇಶನ್ ಪ್ರಕ್ರಿಯೆ ಮುಗಿದ ನಂತರವೇ ಜಾರಿಗೊಳಿಸುವ ಸಾಧ್ಯತೆಯಿದೆ. ಈ ಮಹಿಳಾ ಮೀಸಲಾತಿಯು ಲೋಕಸಭಾ  ಮತ್ತು ರಾಜ್ಯ ವಿಧಾನಸಭಾ ಸ್ಥಾನಗಳಿಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು ರಾಜ್ಯಸಭೆ ಮತ್ತು ವಿಧಾನ ಪರಿಷತ್ತುಗೆ ಅನ್ವಯಿಸುವುದಿಲ್ಲ ಎಂದೂ ಮಸೂದೆಯಲ್ಲಿ ಹೇಳಲಾಗಿದೆ. ಈಗ ಮೋದಿ ಸರ್ಕಾರ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆ 2010ರಲ್ಲಿ ಮನಮೋಹನ್‌ ಸಿಂಗ್‌ ಸರ್ಕಾರ ಮಂಡಿಸಿದ್ದ ಮಸೂದೆಯ ತದ್ರೂಪವೇ ಆಗಿದೆ.

ಇದರಲ್ಲಿ ಸೇರಿರುವ ಎರಡು ಸಣ್ಣ ಹೊಸ ಅಂಶಗಳು ಏನೆಂದರೆ ಈ

• ಕಾಯ್ದೆ ಜಾರಿಯಾದ 15 ವರ್ಷಗಳವರೆಗೆ ಇರಲಿದ್ದು, ಆನಂತರವೂ  ಅವಧಿಯನ್ನು ವಿಸ್ತರಿಸಬಹುದು.

• ಆಂಗ್ಲೋ-ಇಂಡಿಯನ್ ಸಮುದಾಯಕ್ಕೆ ಮೀಸಲಾತಿಯನ್ನು ಒಳಗೊಂಡಿರುವ ಎರಡು ಆರ್ಟಿಕಲ್‌ಗಳಿಗೆ ತಿದ್ದುಪಡಿಯನ್ನು ಮೋದಿ ಸರ್ಕಾರದ ಮಸೂದೆಯಲ್ಲಿ ಕೈಬಿಡಲಾಗಿದೆ.

ದೇಶದಲ್ಲಿ ಇಂದು ಪಂಚಾಯತ್‌ ರಾಜ್‌ ಸಂಸ್ಥೆಗಳಲ್ಲಿ ಶೇಕಡಾ 50ರ ವರೆಗೂ ಮಹಿಳಾ ಮೀಸಲಾತಿ ಜಾರಿಯಲ್ಲಿದೆ. ಆದರೆ ಪಾರ್ಲಿಮೆಂಟು ಮತ್ತು ವಿಧಾನಸಭೆ ವಿಧಾನ ಪರಿಷತ್ತುಗಳಿಗೂ 33% ಮೀಸಲಾತಿ ಕಲ್ಪಿಸಬೇಕು ಎಂಬ ಒತ್ತಾಯದ ಹೋರಾಟಕ್ಕೆ ಬರೋಬ್ಬರಿ ಮೂರು ದಶಕಗಳ ಇತಿಹಾಸವೇ ಇದೆ. 

ಮಹಿಳಾ ಪ್ರಾತಿನಿಧ್ಯದ ಇತಿಹಾಸ:

ಲೋಕಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ 1970 ರ ದಶಕದವರೆಗೆ 5% ರಷ್ಟಿತ್ತು.  ಅದು ಎರಡಂಕಿಗೆ ಏರಿದ್ದೇ 2009 ರಲ್ಲಿ. ರಾಜ್ಯಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯವು ಲೋಕಸಭೆಗಿಂತ ಕಡಿಮೆಯಾಗಿದೆ. 1951 ರಿಂದ ಇದು ಒಟ್ಟು ಸದಸ್ಯತ್ವದ 13% ನ್ನೂ ದಾಟಿಲ್ಲ. ಅಂದರೆ 545 ರಷ್ಟು ಸಂಸದ ಬಲ ಇರುವ ಲೋಕಸಭೆಯಲ್ಲಿ 50 ಜನ ಮಹಿಳೆಯರೂ ಇಲ್ಲ ಎಂದರೆ ಎಂತಹ ವಿಪರ್ಯಾಸ ನೋಡಿ.

ಇಡೀ ದೇಶದಲ್ಲಿ ಸ್ಥಳೀಯ ಸಂಸ್ಥೆಗಳನ್ನು ಜಾರಿಗೊಳಿಸಿದ್ದು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕ ಎಂಬುದು ನಮಗೆ ಹೆಮ್ಮೆಯ ಸಂಗತಿ. 1983ರಲ್ಲಿ ಜನತಾದಳ ಸರ್ಕಾರ ರಾಜ್ಯದಲ್ಲಿ ಪಂಚಾಯ್ತಿಗಳಲ್ಲಿ 25% ಮೀಸಲಾತಿ ನೀಡುವ ಮೂಲಕ ಇತಿಹಾಸ ಬರೆದಿತ್ತು.

1988ರಲ್ಲಿ ರಚನೆಯಾದ ನ್ಯಾಶನಲ್‌ ವಿಶನ್‌ ಪ್ರೋಗ್ರಾಮ್‌ನಲ್ಲಿ ಪಂಚಾಯ್ತಿಯಿಂದ ಲೋಕಸಭೆಯ ವರೆಗೆ ಮೂರನೇ ಒಂದರಷ್ಟು ಮಹಿಳಾ ಮೀಸಲಾತಿ ನೀಡುವ ಕಾರ್ಯಕ್ರಮ ರೂಪಿಸಲಾಯಿತು. ಇದರಂತೆ ಮರು ವರ್ಷ ಅಂದರೆ, 1989ರಲ್ಲಿ ಅಂದಿನ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು ಮೇ ತಿಂಗಳಿನಲ್ಲಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಯನ್ನು ಒದಗಿಸಲು ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಮಹಿಳಾ ಮೀಸಲಾತಿ ನೀಡುವ ಮೊದಲ ಪ್ರಯತ್ನ ನಡೆಸಿದರು. ಆ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾದರೂ ರಾಜ್ಯಸಭೆಯಲ್ಲಿ ಅಂಗೀಕಾರವಾಗಲಿಲ್ಲ. ಹೀಗಾಗಿ ರಾಜೀವ್‌ ಗಾಂಧಿಯವರ ಪ್ರಯತ್ನಕ್ಕೆ ಹಿನ್ನಡೆಯಾಯ್ತು.

ಮುಂದೆ 1992 ಮತ್ತು 1993ರಲ್ಲಿ ಆಗಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಪಂಚಾಯತ್‌ ರಾಜ್‌ಗೆ 72 ಮತ್ತು 73ನೇ ತಿದ್ದುಪಡಿ ತಂದಿತು. ದೇಶದಾದ್ಯಂತ ಕರ್ನಾಟಕ ಮಾದರಿಯಲ್ಲಿ ಸ್ಥಳೀಯ ಸಂಸ್ಥೆಗಳ ಆಡಳಿತ ಆರಂಭವಾಗುವ ಜೊತೆಯಲ್ಲಿ ಮಹಿಳಾ ಮೀಸಲಾತಿಯೂ ಜಾರಿಗೊಂಡಿತು.  ಇಂದು ಎಲ್ಲಾ ಮೂರು ಹಂತದ ಪಂಚಾಯ್ತಿಗಳಲ್ಲಿ ಮಹಿಳೆಯರಿಗೆ ಎಲ್ಲಾ ಸ್ಥಾನಗಳಲ್ಲಿ ಮತ್ತು ಅಧ್ಯಕ್ಷ ಸ್ಥಾನಗಳಲ್ಲಿ ಮೂರನೇ ಒಂದು ಭಾಗ ಅಂದರೆ (33%) ಸ್ಥಾನಗಳನ್ನು ಮೀಸಲಿಡಲಾಗಿದೆ. ಮಸೂದೆಗಳು ಉಭಯ ಸದನಗಳಿಂದ ಅಂಗೀಕಾರವಾಯಿತು. ಆದರೆ ಸಮಾಜದಲ್ಲಿ ಅರ್ಧದಷ್ಟು ಮಹಿಳೆಯರು ಇರುವುದರಿಂದ ಅಷ್ಟೇ ಪ್ರಮಾಣದ ಮೀಸಲಾತಿ ಇರಬೇಕು ಎಂದು ಪ್ರತಿಪಾದಿಸಿದ ಹಲವು ರಾಜ್ಯಗಳಲ್ಲಿ ಇಂದು ಶೇಕಡಾ 50 ಮಹಿಳಾ ಮೀಸಲಾತಿ ಜಾರಿಯಲ್ಲಿದೆ. ಇದರಲ್ಲಿ ಕರ್ನಾಟಕವೇ ಮುಂದು. ಹೀಗೆ 1988-89 ರಿಂದ 1992-93 ರ ನಡುವೆ ಆದಂತಹ ಒಂದೇ ಒಂದು ಸಂವಿಧಾನ ತಿದ್ದುಪಡಿಯ ಫಲವಾಗಿ ಈಗ ದೇಶಾದ್ಯಂತ ಪಂಚಾಯತ್ ಮತ್ತು ನಗರಪಾಲಿಕೆಗಳಲ್ಲಿ ಸುಮಾರು 15 ಲಕ್ಷ ಚುನಾಯಿತ ಮಹಿಳಾ ಪ್ರತಿನಿಧಿಗಳಿದ್ದಾರೆ.

ಆದರೆ, ಈ ಸನ್ನಿವೇಶ ವಿಧಾನ ಸಭೆ ಲೋಕಗಭೆಗಳಲ್ಲೂ ಆಗಬೇಕೆಂಬ ಪ್ರಯತ್ನವೂ ನಿರಂತರವಾಗಿದೆ.

ಸೆಪ್ಟೆಂಬರ್ 12, 1996 ರಂದು, ನಮ್ಮ ದೇವೇಗೌಡರು ಪ್ರಧಾನಿಯಾಗಿದ್ದ ಸಂಯುಕ್ತ ರಂಗ ಸರ್ಕಾರವು ಮೊದಲ ಬಾರಿಗೆ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿಗಾಗಿ ಲೋಕಸಭೆಯಲ್ಲಿ 81 ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಿತು. ಆದರೆ ಲೋಕಸಭೆಯಲ್ಲಿ ಅನುಮೋದನೆ ಸಿಗಲಿಲ್ಲ. ನಂತರ ಇದನ್ನು  ಕಮ್ಯುನಿಷ್ಟ್‌ ನಾಯಕಿ ಗೀತಾ ಮುಖರ್ಜಿ ಅಧ್ಯಕ್ಷತೆಯ ಜಂಟಿ ಸಂಸದೀಯ ಸಮಿತಿಗೆ ನೀಡಲಾಯಿತು.  ಡಿಸೆಂಬರ್ 1996 ರಂದು ಈ ಸಮಿತಿ ತನ್ನ ವರದಿಯನ್ನು ಮಂಡಿಸಿದರೂ, ಲೋಕಸಭೆಯಲ್ಲಿ ಮಸೂದೆಯು ಬಿದ್ದುಹೋಯಿತು.

ವಿಡಿಯೋ ನೋಡಿ: ಮಹಿಳಾ ಮೀಸಲಾತಿ ಮಸೂದೆ: ನಾಲ್ಕು ದಶಕದ ಇತಿಹಾಸ!

ಎರಡು ವರ್ಷಗಳ ನಂತರ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ NDA ಸರ್ಕಾರವು 1998 ರಲ್ಲಿ 12 ನೇ ಲೋಕಸಭೆಯಲ್ಲಿ WRB ಮಸೂದೆಯನ್ನು ಮಂಡಿಸಿತು. ಆದರೆ ಆಗಲೂ ವಿಫಲವಾಯಿತು. ವಾಜಪೇಯಿ ಸರ್ಕಾರ 1999, 2002 ಮತ್ತು 2003 ರಲ್ಲಿ ಮತ್ತೆ ಮಂಡಿಸಿದರೂ ಯಶಸ್ವಿಯಾಗಲಿಲ್ಲ.

1996 ರ ಮಹಿಳಾ ಮೀಸಲಾತಿ ಮಸೂದೆ ವರದಿ OBC ಮಹಿಳೆಯರಿಗೆ ಒಳಮೀಸಲಾತಿಯನ್ನು ನೀಡಲು ಶಿಫಾರಸ್ಸು ಮಾಡುತ್ತದೆ. ಅಲ್ಲದೇ, ರಾಜ್ಯಸಭೆ ಮತ್ತು ವಿಧಾನ ಪರಿಷತ್ತುಗಳಿಗೂ ಮೀಸಲಾತಿಯನ್ನು ವಿಸ್ತರಿಸುವಂತೆ ಹೇಳುತ್ತದೆ. ಆದರೆ ಎರಡೂ ಶಿಫಾರಸುಗಳನ್ನು 2008ರ  ಮಸೂದೆಯಲ್ಲಿ ಅಳವಡಿಸಿರಲಿಲ್ಲ. ಹೀಗಾಗಿ ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳ, ಬಹುಜನ ಸಮಾಜ ಪಕ್ಷಗಳು ಈ ಮಸೂದೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿದವು.

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-1 ರ ಅವಧಿಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮತ್ತೆ ಚರ್ಚೆಗೆ ಬಂತು. 2004 ರಲ್ಲಿ ಸರ್ಕಾರ ಅದನ್ನು ತನ್ನ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ (Common Minimum Programme)   ಸೇರಿಸಿತು. ಅದನ್ನು 108ನೇ ಸಾಂವಿಧಾನಿಕ ತಿದ್ದುಪಡಿಯನ್ನು ತಂದು 6 ಮೇ 2008 ರಂದು ಮಂಡಿಸಲಾಯಿತು. 1996 ರ ಗೀತಾ ಮುಖರ್ಜಿ ಸಮಿತಿಯು ಮಾಡಿದ ಏಳು ಶಿಫಾರಸುಗಳಲ್ಲಿ ಐದನ್ನು ಈ ಮಸೂದೆಯಲ್ಲಿ ಸೇರಿಸಲಾಯಿತು. ಮಸೂದೆಯನ್ನು ಮೇ 9, 2008 ರಂದು ಸ್ಥಾಯಿ ಸಮಿತಿಗೆ ಕಳುಹಿಸಲಾಯಿತು. ಸ್ಥಾಯಿ ಸಮಿತಿ ಡಿಸೆಂಬರ್ 17, 2009 ರಂದು ತನ್ನ ವರದಿಯನ್ನು ಮಂಡಿಸಿತು. ಇದು ಫೆಬ್ರವರಿ 2010 ರಲ್ಲಿ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆಯನ್ನೂ ಪಡೆಯಿತು. ಅಂತಿಮವಾಗಿ ಮಸೂದೆ ರಾಜ್ಯಸಭೆಯಲ್ಲಿ ಮಾರ್ಚ್ 8ರ ಮಹಿಳಾ ದಿನದಂದು ಮಂಡನೆಗೊಂಡು, ಮಾರ್ಚ್‌ 9, 2010 ರಂದು 186 ಮತಗಳೊಂದಿಗೆ ಸರ್ವಾನುಮತದಿಂದ ಅಂಗೀಕಾರವಾಯಿತು. ಇದು ದೇಶದ ಮಹಿಳಾ ಮೀಸಲಾತಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ ಎಂದರೂ ತಪ್ಪಿಲ್ಲ.

ಆದರೂ ಈ ಮಸೂದೆ ಲೋಕಸಭೆಯಲ್ಲಿ ಮಾತ್ರ ಅಂಗೀಕಾರವಾಗಲೇ ಇಲ್ಲ, 2014 ರಲ್ಲಿ ಲೋಕಸಭೆಯ ವಿಸರ್ಜನೆಯೊಂದಿಗೆ ಬಿಲ್ ಲ್ಯಾಪ್ಸ್ ಆಯಿತು. ರಾಜ್ಯಸಭೆಯಲ್ಲಿ ಮಂಡಿಸಿದ/ಅನುಮೋದಿತವಾದ ಮಸೂದೆಗಳು ಅನೂರ್ಜಿತಗೊಳ್ಳುವುದಿಲ್ಲ, ಆದ್ದರಿಂದ ಮಹಿಳಾ ಮೀಸಲಾತಿ ಮಸೂದೆಯು ಇನ್ನೂ ಹೆಚ್ಚು ಸಕ್ರಿಯವಾಗಿದೆ.

2019 ರ ಚುನಾವಣೆಯಲ್ಲಿ ಲೋಕಸಭೆಗೆ ಆಯ್ಕೆಯಾದ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಹಿಂದಿಗಿಂತ ಹೆಚ್ಚಿದ್ದರೂ, ಅವರ ಪ್ರಮಾಣವು ಒಟ್ಟು ಸದಸ್ಯತ್ವದ ಶೇಕಡಾ 15 ರಷ್ಟು ಮಾತ್ರ ಇದೆ. 2014ರಲ್ಲಿ ರಾಜ್ಯಸಭೆಯಲ್ಲಿ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಶೇಕಡಾ 12.7 ರಷ್ಟಿತ್ತು.

ಲೋಕಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯತೆ:

ಕೃಪೆ: ಭಾರತೀಯ ಚುನಾವಣಾ ಆಯೋಗ

ರಾಜ್ಯಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯತೆ

ಕೃಪೆ: ಭಾರತೀಯ ಚುನಾವಣಾ ಆಯೋಗ

ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ (1957-2019)

ಕೃಪೆ: Statista

ಭೌಗೋಳಿಕತೆಯ ಆಧಾರದಲ್ಲಿ ಮಹಿಳೆಯರ ಸಂಸದೀಯ ಪ್ರಾತಿನಿಧ್ಯ:

ಕೃಪೆ:  IPU Parline: Global Data on National Parliament (as of May 2022) 

ಇದೀಗ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದು 5 ವರ್ಷಗಳ ಅವಧಿಯಲ್ಲಿ ಈ ಕುರಿತು ಚಕಾರವೆತ್ತಲಿಲ್ಲ, ಮತ್ತೆ 2019ರಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳ ಕಾಲವೂ ಈ ಬಗ್ಗೆ ಉಸಿರೇ ಬಿಡಲಿಲ್ಲ. ಇದೀಗ ಇನ್ನೇನು ಚುನಾವಣೆ ಬಂತೆನ್ನುವ ಸಮಯದಲ್ಲಿ ಭಾರೀ ಪ್ರಚಾರದೊಂದಿಗೆ ಮಹಿಳಾ ಮಸೂದೆ ಮಂಡಿಸಲಾಗಿದೆ.

2019ರಲ್ಲಿ ಮೋದಿ ಸರ್ಕಾರ ಮೇಲ್ಜಾತಿಗಳಿಗೆ ಸಂವಿಧಾನಬಾಹಿರವಾಗಿ 10% ಮೀಸಲಾತಿ ನೀಡುವ ಮಸೂದೆ ಮಂಡಿಸಿ ಮೂರೇ ದಿನದಲ್ಲಿ ರಾಷ್ಟ್ಟಪತಿ ಸಹಿಯೂ ಬಿದ್ದು ಕಾಯ್ದೆಯಾಗಿ ಜಾರಿಯೂ ಅಗಿಬಿಟ್ಟಿತು. ಆಗಲೂ ಮಹಿಳಾ ಮೀಸಲಾತಿಯನ್ನು ಮಾತ್ರ ಕಡೆಗಣಿಸಲಾಗಿತ್ತು.

ಕನಿಷ್ಟ ಈಗಲಾದರೂ ಚುನಾವಣಾ ದೃಷ್ಟಿಯಿಂದಲಾದರೂ ಮತ್ತೆ ಇದು ಮುನ್ನೆಲೆಗೆ ಬಂದಿದೆ. ಆದರೆ ಇದರಲ್ಲಿ ಒಬಿಸಿ ಒಳಮೀಸಲಾತಿ ಇಲ್ಲದಿರುವುದು ಮತ್ತು ಇದು ಜಾರಿಯಾಗುವುದೇ 2029ಕ್ಕೆ ಎಂಬುದು ಸಮಸ್ಯಾತ್ಮಕವಾಗಿದೆ.

ಒಳಮೀಸಲಾತಿಯೊಂದಿಗೆ, ತಕ್ಷಣದಲ್ಲೇ ಮಹಿಳಾ ಮೀಸಲಾತಿ ಜಾರಿಗೆ ಬರಲಿ ಎಂಬುದೇ ಎಲ್ಲರ ಆಶಯವಾಗಿದೆ.

ಲೇಖನ: ಚರಣ್‌ ಐವರ್ನಾಡು, ಬೆಂಗಳೂರು

Related Articles

ಇತ್ತೀಚಿನ ಸುದ್ದಿಗಳು