ದೆಹಲಿ: ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ಮಹಿಳೆಯರ ಮಂಗಳಸೂತ್ರ ಮತ್ತು ಜನರ ಸಂಪತ್ತು ನಷ್ಟವಾಗುತ್ತದೆ ಎಂದು ಪ್ರಧಾನಿ ಮೋದಿ ಪ್ರಚಾರ ಮಾಡಿದ್ದನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಮತ್ತೊಮ್ಮೆ ನೆನಪಿಸಿದ್ದಾರೆ. ಈಗ ಅವರ ಆಳ್ವಿಕೆಯಲ್ಲಿ ಮಹಿಳೆಯರು ತಮ್ಮ ಮಂಗಳಸೂತ್ರಗಳು ಮತ್ತು ಆಭರಣಗಳನ್ನು ಗಿರವಿ ಇಡುವ ದುಸ್ಥಿತಿ ಬಂದಿದೆ ಎಂದು ಅವರು ಹೇಳಿದ್ದಾರೆ.
2019-2024ರ ನಡುವೆ ನಾಲ್ಕು ಕೋಟಿ ಮಹಿಳೆಯರು ಚಿನ್ನ ಅಡಮಾನವಿಟ್ಟು ಮಾಡಿಕೊಳ್ಳುವ ಮೂಲಕ 4.7 ಲಕ್ಷ ಕೋಟಿ ರೂ. ಮೌಲ್ಯದ ಸಾಲವನ್ನು ಪಡೆದಿದ್ದಾರೆ ಎಂದು ಅವರು ವಿವರಿಸಿದರು. ಭಾರತೀಯ ರಿಸರ್ವ್ ಬ್ಯಾಂಕ್ ಫೆಬ್ರವರಿಯಲ್ಲಿ ಚಿನ್ನದ ಮೇಲಿನ ಸಾಲ ಒಂದೇ ವರ್ಷದಲ್ಲಿ ಶೇ. 71.3 ರಷ್ಟು ಹೆಚ್ಚಾಗಿದೆ ಎಂದು ಹೇಳಿತ್ತು.
ಮೋದಿ ಮೊದಲು ಹೆಚ್ಚಿನ ಮೌಲ್ಯದ ನೋಟುಗಳನ್ನು ರದ್ದುಗೊಳಿಸಿ ಮಹಿಳೆಯರ ಸಂಪತ್ತನ್ನು ನಾಶಪಡಿಸಿದರು, ಮತ್ತು ಈಗ ಬೆಲೆ ಏರಿಕೆಯೊಂದಿಗೆ ಉಳಿತಾಯ ಕಡಿಮೆಯಾಗುತ್ತಿದೆ ಮತ್ತು ಮಹಿಳೆಯರು ಆಭರಣಗಳನ್ನು ಅಡಮಾನ ಇಡಬೇಕಾದ ಅನಿವಾರ್ಯತೆಗೆ ಒಳಗಾಗುತ್ತಿದ್ದಾರೆ ಎಂದು ಖರ್ಗೆ ಹೇಳಿದರು.
ದೇಶದಲ್ಲಿ ಶೇ. 76 ರಷ್ಟು ಜನರು ಸಾಲದ ಮೇಲೆ ದ್ವಿಚಕ್ರ ವಾಹನಗಳನ್ನು ಖರೀದಿಸುತ್ತಾರೆ ಮತ್ತು ಆರ್ಥಿಕ ಬಿಕ್ಕಟ್ಟಿನಿಂದಾಗಿ ಅವರು ಆ ಸಾಲಗಳನ್ನು ಮರುಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು. ಈ ವರ್ಷದ ಫೆಬ್ರವರಿಯಲ್ಲಿ ದ್ವಿಚಕ್ರ ವಾಹನಗಳ ಮಾರಾಟವು ಶೇಕಡಾ 6ರಷ್ಟು ಕುಸಿದಿದೆ. ವಾಹನ ಮಾಲೀಕರು ಸಾಲದಿಂದ ತಪ್ಪಿಸಿಕೊಳ್ಳುತ್ತಿರುವುದರಿಂದ 2019 ರ ನಂತರ ಮೊದಲ ಬಾರಿಗೆ ವಾಹನ ಸಾಲಗಳು ಕಡಿಮೆಯಾಗಿವೆ ಎಂದು ಖರ್ಗೆ ಹೇಳಿದರು.