ಮಂಡ್ಯ :- ಮಂಡ್ಯಲೋಕಸಭಾ ಚುನಾವಣೆಗೆ ಈ ಬಾರಿ ಸ್ಪರ್ಧಿಸುವುದಿಲ್ಲ, ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಸಂಸದೆ ಸುಮಲತಾ ಅಂಬರೀಶ್ ಘೋಷಿಸಿದರು.
ನಗರದ ಕಾಳಿಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಕಳೆದ ಬಾರಿ ಪಕ್ಷೇತರರಾಗಿ ಗೆಲುವು ಸಾಧಿಸಿ ಸಂಸದೆಯಾಗಿದ್ದ ನಾನು ಇದೀಗ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಚುನಾವಣಾ ಕಣಕ್ಕೆ ಇಳಿಯದಿರಲು ನಿರ್ಧರಿಸಿದ್ದೇನೆ ಎಂದು ಹೇಳಿದರು,
ಕಳೆದ ಬಾರಿಯ ಚುನಾವಣೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ನನಗೆ ಮತ ನೀಡುವಂತೆ ಕೋರಿದ್ದರು, ಬಿಜೆಪಿ ಪಕ್ಷ ಬಾಹ್ಯ ಬೆಂಬಲ ನೀಡಿತ್ತು,ಅದೇ ರೀತಿ ಗೆದ್ದ ನಂತರ ಪ್ರಧಾನಿ ನನ್ನನ್ನು ಪ್ರೀತಿಯಿಂದ ಆಹ್ವಾನಿಸಿ ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದಾರೆ, ಅದೇ ರೀತಿ ಬಿಜೆಪಿ -ಜೆಡಿಎಸ್ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾದಾಗ ನನಗೆ ಬೆಂಗಳೂರು ಉತ್ತರ, ಮೈಸೂರು ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಎಂದು ಬಿಜೆಪಿ ಆಹ್ವಾನಿಸಿತ್ತು, ಆದರೆ ರಾಜಕಾರಣ ಮಾಡುವುದಾದರೆ ಮಂಡ್ಯ ಕ್ಷೇತ್ರದಲ್ಲಿ ಮಾತ್ರ ಎಂದು ತಿಳಿಸಿದ್ದೆ, ಸ್ವಾರ್ಥ ರಾಜಕಾರಣ ನನಗೆ ಗೊತ್ತಿಲ್ಲ, ಅಂಬರೀಶ್ ಅಧಿಕಾರಕ್ಕೆ ಆಸೆ ಪಟ್ಟವರಲ್ಲ ಅದೇ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ನಾನು ಎಂದಿಗೂ ಮಂಡ್ಯ ಬಿಟ್ಟು ರಾಜಕಾರಣ ಮಾಡಲ್ಲ ಎಂದರು.
ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರು ನನ್ನೊಂದಿಗೆ ಮಾತನಾಡಿ ನಮ್ಮೊಂದಿಗೆ ನೀವೀರಿ, ಎಲ್ಲರೂ ಒಟ್ಟಿಗೆ ಹೋಗೋಣ,ನಿಮಗೆ ಗೌರವ ಸಿಗಲಿದೆ ಎಂದು ಹೇಳಿದ ಹಿನ್ನೆಲೆಯಲ್ಲಿ ಗೌರವ ಇರುವ ಕಡೆ ನಾವು ಇರಬೇಕು ಎಂದು ಬಿಜೆಪಿ ಪಕ್ಷವನ್ನ ಸೇರ್ಪಡೆ ಯಾಗಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರೊಬ್ಬರು ಸುಮಲತಾ ಅಂಬರೀಶ್ ಪಕ್ಷಕ್ಕೆ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ ಹಾಗಾಗಿ ಗೌರವ ಇಲ್ಲದ ಕಡೆ ಹೋಗಲು ಸಾಧ್ಯವೇ,ಖಂಡಿತ ನಾನು ಅಲ್ಲಿಗೆ ಹೋಗುವುದಿಲ್ಲ, ಅಲ್ಲಿಗೆ ಹೋಗಿ ಎಂದು ಯಾರು ಒತ್ತಾಯಿಸಬೇಡಿ, ಅಂಬರೀಶ್ ಸ್ವಾಭಿಮಾನದ ಸಂಕೇತ ಅವರ ಜೊತೆ ಜೀವನ ನಡೆಸಿದ ನನಗೆ ಸ್ವಾಭಿಮಾನವೇ ಮುಖ್ಯ ಎಂದರು.
ಸಂಸತ್ ಸದಸ್ಯ ಸ್ಥಾನ ಹೋಗಬಹುದು, ಮತ್ತೊಂದು ಅಧಿಕಾರ ಬರಬಹುದು, ಆದರೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದ ಮಾತ್ರಕ್ಕೆ ಮಂಡ್ಯದಿಂದ ನಿರ್ಗಮಿಸುತ್ತಿದ್ದೇನೆ ಎಂದು ತಿಳಿದುಕೊಳ್ಳಬಾರದು, ಮಂಡ್ಯ ಬಿಡುವ ಪ್ರಶ್ನೆಯೇ ಇಲ್ಲ,ಇವತ್ತು ಸೋತಕ್ಷೇತ್ರವನ್ನು ಬಿಡಲು ಸಿದ್ದರಿಲ್ಲದ ಜನರೇ ಹೆಚ್ಚು ಶಾಸಕ, ಸಂಸದರ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕಿಲ್ಲ ಎಂದು ಪಕ್ಷಾಂತರ ಮಾಡುತ್ತಾರೆ ಆದರೆ ನಾನು ಐತಿಹಾಸಿಕ ಗೆಲುವು ತಂದುಕೊಟ್ಟ ಗೆದ್ದ ಕ್ಷೇತ್ರವನ್ನ ಬಿಟ್ಟುಕೊಡುತ್ತಿದ್ದೇನೆ, ಲೋಕಸಭೆ ಚುನಾವಣೆ ಟಿಕೆಟ್ ಬಿಟ್ಟು ಕೊಟ್ಟಿದ್ದೇನೆ, ಮಂಡ್ಯದ ಋಣ ಮತ್ತು ಜನರನ್ನ ಎಂದೆಂದಿಗೂ ಬಿಡುವುದಿಲ್ಲ ಎಂದು ಪ್ರಮಾಣ ಮಾಡುತ್ತೇನೆ ಎಂದರು.
ನನಗೆ ತಾಯಿ ಸ್ಥಾನ ನೀಡಿದ್ದೀರಿ, ಯಾವ ತಾಯಿ ಮಕ್ಕಳನ್ನು ಬಿಟ್ಟು ಕೊಡುವುದಿಲ್ಲ ಅದೇ ರೀತಿ ನಾನು ಸದಾ ಕಾಲ ನಿಮ್ಮೊಂದಿಗೆ ಇರುತ್ತೇನೆ,ಅಧಿಕಾರ ಇರುತ್ತದೆ ಹೋಗುತ್ತದೆ, ಮಂಡ್ಯದ ಸೊಸೆ ಎಂಬುದನ್ನು ಯಾವ ಕಾಲಕ್ಕೂ ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಹಠಕ್ಕೆ ಬಿದ್ದು,ದ್ವೇಷ ಸಾಧನೆಗಾಗಿ ಚುನಾವಣೆಗೆ ನಿಲ್ಲಬೇಕೆ, ಇದರಿಂದ ಏನು ಸಾಧಿಸಬಹುದು, ಏನು ಪ್ರಯೋಜನ ಎಂಬುದನ್ನಲ್ಲ ಯೋಚನೆ ಮಾಡಿದ್ದೇನೆ,ರಾಜಕಾರಣದಲ್ಲಿ ನಾನು ತೆಗೆದುಕೊಂಡಿರುವ ನಿರ್ಧಾರದ ಹಿಂದೆ ಸಾಕಷ್ಟು ಆಲೋಚನೆ ಇದೆ ಎಲ್ಲಕ್ಕಿಂತ ಹೆಚ್ಚಾಗಿ ಸುದೀರ್ಘ ಚರ್ಚೆ ನಂತರ ತೀರ್ಮಾನ ಕೈಗೊಂಡಿದ್ದೇನೆ ಎಂದರು.
ಪಕ್ಷೇತರ ಸಂಸದಯಾದರೂ ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ, ನಾನು ಸಾಕಷ್ಟು ಕೆಲಸ ಮಾಡಿದ್ದರು ಏನು ಮಾಡಿಲ್ಲ ಎಂದು ಟೀಕಾ ಕಾರರು ಸುಳ್ಳು ಹೇಳುತ್ತಿದ್ದಾರೆ, ನಾನು ಏನು ಮಾಡಿದ್ದೇನೆ ಎಂಬುದನ್ನು ನಿಮಗೆ ತೋರಿಸಿದ್ದೇನೆ, ನೀವೆಲ್ಲರೂ ಜನರ ಮುಂದೆ ಸತ್ಯ ಮುಂದಿಡಿ ಎಂದು ಮನವಿ ಮಾಡಿದರು.
ಸಂಸದರಾಗಿ ಮಂಡ್ಯ ಜಿಲ್ಲೆ ಘನತೆಯನ್ನು ಇಂಡಿಯಾದಲ್ಲಿ ಎತ್ತಿ ಹಿಡಿದ ಕೆಲಸ ಮಾಡಿದ್ದೇನೆ, ಅಂಬರೀಶ್ ಎಂದಿಗೂ ತಾವು ಮಾಡಿದ ಕೆಲಸವನ್ನು ಹೇಳಿಕೊಂಡವರಲ್ಲ, ಅದೇ ರೀತಿ ನಾನು ಯಾರನ್ನು ಇಂತಹ ಕೆಲಸ ಮಾಡಿದ್ದೇನೆ ಎಂದು ಹೇಳಿಕೊಂಡಿಲ್ಲ, ನಾನು ಮಾತನಾಡಬಾರದು ಸಾಧನೆಗಳೆ ಮಾತನಾಡಬೇಕು ಎಂದ ಅವರು ಕೋವಿಡ್ ನಿಂದ ಎರಡು ವರ್ಷ ಸಂಸದರ ಅನುದಾನ ಸಿಗಲಿಲ್ಲ, ಮೂರು ವರ್ಷದ ಅನುದಾನದಲ್ಲಿ ಎಷ್ಟು ಕೆಲಸ ಮಾಡಿದ್ದೇನೆ ಎಂದು ಸಾಧನೆಗಳ ವಿವರ ತಿಳಿಸಿದರು.
ಕಳೆದ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದ ಸಮಸ್ತ ಜನತೆಗೆ ಧನ್ಯವಾದಗಳು, ಮುಂದೆಯೂ ನಾನು ಮಂಡ್ಯ ಜಿಲ್ಲೆಯ ಜನರ ಜೊತೆ ಇರುತ್ತೇನೆ, ನಿಮ್ಮಗಳ ಆಶೀರ್ವಾದ ಇರಲಿ ಎಂದು ಆಶಿಸಿದರು.
ಚಿತ್ರನಟ ದರ್ಶನ್, ಅಭಿಷೇಕ್ ಅಂಬರೀಶ್, ರಾಕ್ ಲೈನ್ ವೆಂಕಟೇಶ್ ಇತರರಿದ್ದರು.