Monday, July 28, 2025

ಸತ್ಯ | ನ್ಯಾಯ |ಧರ್ಮ

ಕೇಜ್ರೀವಾಲ್‌ ಬಂಧನವಾದರೆ ಜೈಲಿನಿಂದಲೇ ಸಂಪುಟ ಸಭೆ!

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರೀವಾಲ್ ಒಂದು ವೇಳೆ EDಯಿಂದ ಬಂಧನಕ್ಕೆ ಒಳಗಾದರೆ, ಜೈಲಿನಿಂದಲೇ ಕೆಲಸ ಮಾಡಲು ನ್ಯಾಯಾಲಯದ ಅನುಮತಿ ಕೇಳಲಾಗುವುದು ಎಂದು ಆಮ್‌ ಆದ್ಮಿ ಪಾರ್ಟಿ ಹೇಳಿದೆ. ಕೇಂದ್ರ ತನಿಖಾ ಸಂಸ್ಥೆಗಳಿಂದ ಕೇಜ್ರೀವಾಲ್‌ ಬಂಧನಕ್ಕೆ ಒಳಗಾದರೆ, ಜೈಲಿನಿಂದಲೇ ಕಾರ್ಯನಿರ್ವಹಿಸುವಂತೆ ಆಪ್‌ ಶಾಸಕರು ಸೂಚಿಸಿದ್ದಾರೆ.

ಈ ಬಗ್ಗೆ ದೆಹಲಿ ಸಚಿವೆ ಅತಿಶಿ ಮರ್ಲೇನಾ, “ನಾವು ಜನರ ಮಧ್ಯೆ ಹೋಗುತ್ತಿದ್ದೇವೆ. ಆಮ್ ಆದ್ಮಿ ಪಾರ್ಟಿ ಮತ್ತು ಅರವಿಂದ್ ಕೇಜ್ರೀವಾಲ್ ವಿರುದ್ಧ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಜನರು ಹೇಳುತ್ತಿದ್ದಾರೆ. ಒಂದು ವೇಳೆ ಮುಖ್ಯಮಂತ್ರಿಯೇನಾದರೂ ಜೈಲಿಗೆ ಹೋದರೂ, ಅವರೇ ಮುಖ್ಯಮಂತ್ರಿಯಾಗಿ ಉಳಿಯಬೇಕು ಎಂದು ಎಲ್ಲ ಶಾಸಕರು ಮನವಿ ಮಾಡಿದ್ದಾರೆ. ದಿಲ್ಲಿಯ ಜನ ಇವರನ್ನು ಮುಖ್ಯಮಂತ್ರಿಯನ್ನಾಗಿ ಚುನಾಯಿಸಿದ್ದಾರೆ. ಹಾಗಾಗಿ, ಅವರೇ ಮುಖ್ಯಮಂತ್ರಿಯಾಗಿ ಉಳಿಯಬೇಕು,” ಎಂದು ಹೇಳಿದ್ದಾರೆ.

“ನಾವು ನ್ಯಾಯಾಲಯಕ್ಕೆ ಹೋಗಿ, ಜೈಲಿನಲ್ಲೇ ಸಂಪುಟ ಸಭೆ ನಡೆಸಲು ಅನುಮತಿ ಕೊಡಬೇಕು ಎಂದು ವಿನಂತಿಸುತ್ತೇವೆ,” ಎಂದು ಅತಿಶಿ ತಿಳಿಸಿದ್ದಾರೆ.

ಅಬಕಾರಿ ನೀತಿ ಹಗರಣವನ್ನು ಅಕ್ರಮ ಹಣ ವರ್ಗಾವಣೆಯ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಕೇಜ್ರೀವಾಲ್‌ರಿಗೆ ನವೆಂಬರ್‌ 2ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಮಾಡಿತ್ತು. ಈ ಸಮನ್ಸ್‌ನಿಂದ ತಪ್ಪಿಸಿಕೊಂಡು ವಿಚಾರಣೆಗೆ ಹಾಜರಾಗದ ಕೇಜ್ರೀವಾಲ್‌ ಅವರನ್ನು ಬಂಧಿಸುವ ಸಾಧ್ಯತೆ ಇದೆ.

ಸದ್ಯ, ದೆಹಲಿ ಉಪ ಮುಖ್ಯಮಂತ್ರಿ ಮಮೀಶ್‌ ಸಿಸೋಡಿಯಾ ಫೆಬ್ರವರಿಯಲ್ಲಿ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿದ್ದು, ಕಳೆದ ವಾರ ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಇವರ ಅರ್ಜಿ ತಿರಸ್ಕೃತವಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page