ಆರೆಸ್ಸೆಸ್ ನಂಟಿರುವ ಅಮೆರಿಕದ ಎರಡು ದತ್ತಿ ಸಂಸ್ಥೆಗಳಿಂದ ಐದು ವರ್ಷಗಳಲ್ಲಿ ₹926 ಕೋಟಿ ಸಂಗ್ರಹ: ತನಿಖಾ ವರದಿ ಬಹಿರಂಗ
ಲಿಂಕ್ ನಕಲಿಸಲಾಗಿದೆ ✓
ಹ್ಯೂಸ್ಟನ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಜಾಲದೊಂದಿಗೆ ಗುರುತಿಸಿಕೊಂಡಿರುವ ಅಮೆರಿಕ ಮೂಲದ ಎರಡು ಪ್ರಮುಖ ದತ್ತಿ ಸಂಸ್ಥೆಗಳು 2020 ರಿಂದ 2024ರ ಅವಧಿಯಲ್ಲಿ ಒಟ್ಟಾಗಿ ಬರೋಬ್ಬರಿ 117.8 ಮಿಲಿಯನ್ ಡಾಲರ್ (ಅಂದಾಜು ₹926 ಕೋಟಿ) ದೇಣಿಗೆ ಹಾಗೂ ಅನುದಾನಗಳನ್ನು ಸಂಗ್ರಹಿಸಿವೆ ಎಂದು ಸ್ವತಂತ್ರ ಸಂಶೋಧನಾ ಸಂಸ್ಥೆ ಬೆಲ್ಲಿಂಗ್ಕ್ಯಾಟ್ (Bellingcat) ನಡೆಸಿದ ತನಿಖಾ ವರದಿ ತಿಳಿಸಿದೆ.
ಟೆಕ್ಸಾಸ್ನ ಹ್ಯೂಸ್ಟನ್ನಲ್ಲಿ ಪ್ರಧಾನ ಕಚೇರಿ ಹೊಂದಿರುವ ‘ಏಕಲ್ ವಿದ್ಯಾಲಯ ಫೌಂಡೇಶನ್ ಆಫ್ ಯುಎಸ್ಎ’ (ಏಕಲ್ ಯುಎಸ್ಎ) ಮತ್ತು ‘ಸೇವಾ ಇಂಟರ್ನ್ಯಾಷನಲ್ ಇಂಕ್’ (ಸೇವಾ ಯುಎಸ್ಎ) ಸಂಸ್ಥೆಗಳ ತೆರಿಗೆ ಸಲ್ಲಿಕೆ ದಾಖಲೆಗಳನ್ನು ಆಧರಿಸಿ ಈ ವಿವರಗಳನ್ನು ಬಿಡುಗಡೆ ಮಾಡಲಾಗಿದೆ.
ದಾಖಲೆಗಳ ಪ್ರಕಾರ, ಏಕಲ್ ಯುಎಸ್ಎ ಐದು ವರ್ಷಗಳಲ್ಲಿ 48.4 ಮಿಲಿಯನ್ ಡಾಲರ್ಗಿಂತಲೂ (ಸುಮಾರು ₹380 ಕೋಟಿ) ಹೆಚ್ಚಿನ ಹಣ ಸಂಗ್ರಹಿಸಿದ್ದು, ಅದರಲ್ಲಿ 33.7 ಮಿಲಿಯನ್ ಡಾಲರ್ (ಸುಮಾರು ₹265 ಕೋಟಿ) ಮೊತ್ತವನ್ನು ಭಾರತದ ಏಕಲ್ ವಿದ್ಯಾಲಯಕ್ಕೆ ಕಳುಹಿಸಿದೆ.
ಮತ್ತೊಂದೆಡೆ, ಸೇವಾ ಯುಎಸ್ಎ ಸುಮಾರು 69.4 ಮಿಲಿಯನ್ ಡಾಲರ್ (ಸುಮಾರು ₹545 ಕೋಟಿ) ಸಂಗ್ರಹಿಸಿದ್ದು, ಭಾರತ ಹಾಗೂ ದಕ್ಷಿಣ ಏಷ್ಯಾದ ವಿವಿಧ ಯೋಜನೆಗಳಿಗೆ 29.7 ಮಿಲಿಯನ್ ಡಾಲರ್ (ಸುಮಾರು ₹233 ಕೋಟಿ) ವರ್ಗಾಯಿಸಿದೆ.
ಈ ಹಣಕಾಸು ವಹಿವಾಟಿನಲ್ಲಿ ‘ಡೋನರ್-ಅಡ್ವೈಸ್ಡ್ ಫಂಡ್ಸ್’ (ದಾನಿಗಳ ಹೆಸರನ್ನು ಬಹಿರಂಗಪಡಿಸದೆ ಅನುದಾನ ನೀಡುವ ವ್ಯವಸ್ಥೆ) ಪಾತ್ರ ಪ್ರಮುಖವಾಗಿದ್ದು, ಇಂತಹ ನಿಧಿಗಳ ಮೂಲಕವೇ ಎರಡೂ ಸಂಸ್ಥೆಗಳು ಒಟ್ಟು ಆದಾಯದ ಶೇಕಡಾ 20.7 ರಷ್ಟು ಅಂದರೆ ಕನಿಷ್ಠ 24.4 ಮಿಲಿಯನ್ ಡಾಲರ್ ಪಡೆದಿವೆ ಎಂದು ವರದಿ ಬೆಟ್ಟುಮಾಡಿದೆ.
ಏಕಲ್ ವಿದ್ಯಾಲಯವು 1990ರ ದಶಕದ ಕೊನೆಯಲ್ಲಿ ವಿಶ್ವ ಹಿಂದೂ ಪರಿಷತ್ ಆಫ್ ಅಮೆರಿಕ (VHPA) ಯೋಜನೆಯಾಗಿ ಪ್ರಾರಂಭವಾಗಿ ನಂತರ ಸ್ವತಂತ್ರ ಸಂಸ್ಥೆಯಾಗಿ ಬೆಳೆದಿದೆ. ಭಾರತದಲ್ಲಿ ನಡೆಯುವ ಏಕಲ್ ವಿದ್ಯಾಲಯದ ಕಾರ್ಯಕ್ರಮಗಳಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಲವು ನಾಯಕರು ಭಾಗವಹಿಸುತ್ತಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಸೇವಾ ಯುಎಸ್ಎ ತಾನು ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಲ್ಲ ಮತ್ತು ಆರೆಸ್ಸೆಸ್ನ ಶಾಖೆಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.
ಭಾರತದಲ್ಲಿ ವಿದೇಶಿ ದೇಣಿಗೆ ಹಾಗೂ ಎಫ್ಸಿಆರ್ಎ ನಿಯಮಗಳ ಕುರಿತು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ರಾಜಕೀಯ ವಾಕ್ಸಮರ ನಡೆಯುತ್ತಿರುವ ಬೆನ್ನಲ್ಲೇ ಈ ತನಿಖಾ ವರದಿ ಪ್ರಕಟವಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
Peepal Media
Peepal Media · ವಿದೇಶ ವಿಭಾಗ