ಕೆಟ್ಟ ವಾಸನೆ ಬರ್ತಿದೆ.. ನಾವು ಅಲ್ಲಿ ಹೋಗಲ್ಲ ರೀ ಮೇಡಮೋರೆ.. ನಾವು ಬಯಲಿಗಿ ಹೋಗಿ ಬರ್ತಿವಿ ಅಂತ ತರಬೇತಿಗೆ ಬಂದ ಹೆಂಗಸರು ಹೊಂಟೆ ಬಿಟ್ಟರು ಎಂದು ತಮ್ಮ ಅನುಭವವನ್ನು ವಿಶ್ವ ಶೌಚಾಲಯದ ದಿನದಂದು ಬಿಚ್ಚಿಡುತ್ತಾ ಹೈದ್ರಾಬಾದ್ ಕರ್ನಾಟಕದ ಶೌಚಾಲಯ ದುಸ್ಥಿತಿಯತ್ತ ಬೆಳಕು ಚೆಲ್ಲಿದ್ದಾರೆ ಕಲಬುರಗಿಯ ಯುವ ಲೇಖಕಿ ಪ್ರಿಯಾಂಕಾ ಮಾವಿನಕರ್
ನವೆಂಬರ್ 19 ವಿಶ್ವ ಶೌಚಾಲಯ ದಿನ. ಶೌಚಾಲಯ ಬಳಸದ ಜನರಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸುವ ದಿನವಾಗಿದೆ. ಸರಿಯಾದ ನೀರು ಮತ್ತು ನೈರ್ಮಲ್ಯವನ್ನು ಹೊಂದುವುದು ಜೀವಿಸುವ ಹಕ್ಕಿನಿಂದ ಜನತೆಗೆ ಸಿಕ್ಕಿರುವ ಸಾಂವಿಧಾನಿಕ ಹಕ್ಕುಗಳು. 2017-18ರ ರಾಷ್ಟ್ರೀಯ ವಾರ್ಷಿಕ ಗ್ರಾಮೀಣ ನೈರ್ಮಲ್ಯ ಸರ್ವೆಯು ದೇಶದ ಶೇ.70ರಷ್ಟು ಹಳಿಗಳಲ್ಲಿ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯು ಅಸ್ತಿತ್ವದಲ್ಲಿದೆಯೆಂದು ವರದಿ ಮಾಡಿದೆ. ಆದರೆ ಮತ್ತೊಂದೆಡೆ 2017ರ ವಾಟರ್‌ಏಯ್ಡ್ ವರದಿ ಮತ್ತು ವಿಶ್ವ ಆರೋಗ್ಯ ಸಂಸ್ಥೆ/ ವಿಶ್ವ ಸಂಸ್ಥೆಯ ಮಕ್ಕಳ ನಿಧಿಯ 2015ರ ವರದಿಗಳು ಗ್ರಾಮೀಣ ಪ್ರದೇಶದ ಕೇವಲ ಶೇ.30ರಷ್ಟು ಮತ್ತು ನಗರ ಪ್ರದೇಶದ ಶೇ.9ರಷ್ಟು ಜನಸಂಖ್ಯೆಯು ಮಾತ್ರ ಸುರಕ್ಷಿತ ಮಲತ್ಯಾಜ್ಯ ವಿಸರ್ಜನಾ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆಂದು ಹೇಳುತ್ತವೆ. ಅಂದರೆ ಪ್ರತಿಯೊಂದು ಮನೆಗೂ ಶೌಚಾಲಯ ಸೌಲಭ್ಯಗಳ ಸಹಿತವಾದ ಸರಕಾರದ ಯೋಜನೆಗಳು ಮಾಡುತ್ತಿರುವ ಕ್ರಾಂತಿ ಶ್ಲಾಘನೀಯವಾದುದಾದರೂ ಇಲ್ಲಿ ಆಗಬೇಕಾದುದು ಬಹಳಷ್ಟಿದೆ ಎನ್ನುವುದನ್ನು ಇದು ಒತ್ತಿ ಹೇಳುತ್ತದೆ. ಶೌಚಾಲಯಗಳ ಕೊರತೆ ಬಹುವಾಗಿ ಕಾಡುವುದು ಮಹಿಳೆಯರನ್ನು. ಇಲ್ಲಿ ಹೈದ್ರಾಬಾದ್ ಕರ್ನಾಟಕದ ಪರಿಸ್ಥಿತಿ ಒಂದು ಉದಾಹರಣೆಯಷ್ಟೆ.
ಹೈದ್ರಾಬಾದ್ ಕರ್ನಾಟಕದ ಶೌಚಾಲಯ ದುಸ್ಥಿತಿ
ಹೈದ್ರಾಬಾದ್ ಕರ್ನಾಟಕಕ್ಕೆ ಸೇರಿದ ಪ್ರತಿಯೊಂದು ಹಳ್ಳಿಗಳಲ್ಲಿಯೂ ಮಹಿಳೆಯರು ಶೌಚಕ್ಕೆ ಸಂಬಂಧಿಸಿದಂತೆ ಹಿಂಸೆ, ಅವಮಾನ ಮತ್ತು ಕಿರಿಕಿರಿಯನ್ನು ಅನುಭವಿಸುತ್ತಾರೆ. ಹೆಣ್ಣುಮಕ್ಕಳು ಶೌಚಾಲಯಕ್ಕೆ ಹೋಗಬೇಕೆಂದರೆ ಬಯಲಿಗೇ ಹೋಗಬೇಕು. ಅದೂ ಒಂದೋ ಸೂರ್ಯ ಹುಟ್ಟುವ ಮೊದಲೇ ಹೋಗಬೇಕು ಅಥವಾ ಸೂರ್ಯ ಮುಳಗಿದ ಮೇಲೆ ಅಂದ್ರೆ ಕತ್ತಲಾದಾಗ ಹೋಗಬೇಕು. ಸೂರ್ಯ ಮುಳುಗಿದ ಮೇಲೆ ಹೋದರೂ ಇವರಿಗೆ ಸಮಸ್ಯೆ ತಪ್ಪಿದ್ದಲ್ಲ. ರಾತ್ರಿ ವೇಳೆ ರಸ್ತೆಯಲ್ಲಿ ಬಸ್, ಲಾರಿ, ಗಾಡಿಗಳು ಬರುವಾಗ ಈ ಹೆಣ್ಣುಮಕ್ಕಳು ತಲೆ ತಗ್ಗಿಸಿ ನಾಚಿಕೆ ಮತ್ತು ಅವಮಾನದಿಂದ ಎದ್ದು ನಿಲ್ಲಬೇಕು. ಇವರನ್ನು ನೋಡಿದ ಕೆಲವು ಮಾನವೀಯ ಮನಸುಗಳು ತಮ್ಮ ಗಾಡಿಯ ಹೆಡ್ ಲೈಟ್ ಆಫ್ ಮಾಡ್ಕೊಂಡು ಮುಂದೆ ಹೋದರೆ, ಇನ್ನು ಕೆಲವು ಪುಡಾರಿಗಳು ಬೇಕು ಬೇಕಂತಲೇ ಹೆಡ್ ಲೈಟಿನ ಬೆಳಕು ಅವರ ಮುಖದ ಮೇಲೆ ಬೀಳುವಂತೆ ಗಾಡಿ ಓಡಿಸ್ಕೊಂಡು ಹೋಗುತ್ತಾರೆ. ಇದು ಪುಡಾರಿ ಗಂಡಸರಿಗೆ ಮಜಾ ಆದ್ರೆ ಎಲ್ಲ ಹೆಂಗಸರಿಗೂ ಇದೊಂದು ರೀತಿಯ ಸಜೆಯಾಗಿದೆ. ಇಂತಹ ಅನಿಷ್ಟ ಪದ್ಧತಿಯನ್ನು ನಮ್ಮ ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಮಾತ್ರ ಅತಿ ಹೆಚ್ಚಾಗಿ ನೋಡಬಹುದಾಗಿದೆ.
ಇವು ಸಮಾಜಕ್ಕೆ ನಾಚಿಕೆಯ ಸಂಗತಿ!
ಹೀಗೆ, ಪ್ರತಿಯೊಂದು ಹಳ್ಳಿಗಳಲ್ಲಿಯೂ ಸಾಲು ಸಾಲಾಗಿ ನಾಚಿಕೆಯಿಂದ ತಲೆ ತಗ್ಗಿಸಿ ಎದ್ದು ನಿಲ್ಲುವ ಹೆಣ್ಣುಮಕ್ಕಳು ಇಂದಿನ ಆಧುನಿಕ ವ್ಯವಸ್ಥೆಯಲ್ಲಿ ಬದುಕುತ್ತಿದ್ದಾರೆ ಎಂಬುದು ಸಮಾಜಕ್ಕೆ ನಾಚಿಕೆಯ ಸಂಗತಿಯೇ ಸರಿ. ಮಹಿಳೆಯರು ನಸುಕಿನಲ್ಲೊ ಅಥವಾ ರಾತ್ರಿ ವೇಳೆಯಲ್ಲೊ ಬಯಲು ಶೌಚಾಲಯಕ್ಕೆ ಹೋದಾಗ ಕತ್ತಲಲ್ಲಿ ಹಾವು ಕಚ್ಚಿ ಸತ್ತಿರುವ ಅನೇಕ ಘಟನೆಗಳು ನಡೆದಿವೆ. ಹಾಗೆ ಹಂದಿಗಳ ದಾಳಿ ಒಳಗಾಗಿ ಗಾಯಗೊಂಡ ಮಹಿಳೆಯರೂ ಇದ್ದಾರೆ. ಮೊನ್ನೆ ಆಳಂದ ತಾಲೂಕಿನ ಕೊರಳ್ಳಿ ಗ್ರಾಮದಲ್ಲಿ 14 ವರ್ಷದ ಹುಡುಗಿಯೊಬ್ಬಳು ಬಯಲು ಶೌಚಾಲಯಕ್ಕೆ ಹೋದಾಗ ಕೆಲ ನೀಚ ಮನಸ್ಥಿತಿಯ ಹುಡುಗರು ಅವಳ ಮೇಲೆ ಅತ್ಯಾಚಾರ ಮಾಡಿ ಅವಳ ದುಪ್ಪಟ್ಟಾದಿಂದ ಕತ್ತು ಹಿಸುಕಿ ಕೊಲೆ ಮಾಡಿ ಕಬ್ಬಿನ ಗದ್ದೆಯಲ್ಲಿ ಎಸೆದು ಹೋಗಿದ್ದಾರೆ. ಈಗ ಆ ಹುಡುಗಿಯ ಸೋದರತ್ತೆಯ ರೋಧನೆ ಕೇಳಲಾಗದು. “ನನ್ನ ತಮ್ಮ ಬಡತನದಲ್ಲಿ ಸಂಸಾರ ನಡಿಸ್ಕೊಂಡು ಹೋಗುತ್ತಿದ್ದನು ಅಂತ (ಸೋದರ ಸೊಸೆಗೆ) ತಮ್ಮನ ಮಗಳಿಗಿ ಮನಿಗಿ ಕರಕೊಂಡು ಬಂದು ನಮ್ಮೂರಿನ ಸಾಲಿಗಿ ಹಾಕಿದ್ದೆ ರೀ… ಪಾಪಿಗಳು ಸಾಯಿಸಿ ಬಿಟ್ಟರು” ಅಂತ ಆ ಜೀವ ಅಳುವಾಗ ಹೃದಯವೇ ಬಾಯಿಗೆ ಬಂದಂತಾಗುತ್ತದೆ. ನಮ್ಮ ದೇಶದಲ್ಲಿ ಅತಿ ಹೆಚ್ಚು ಅತ್ಯಾಚಾರ ಆಗಿದ್ದು ಹೆಣ್ಣುಮಕ್ಕಳು ಬಯಲು ಶೌಚಾಲಯಕ್ಕೆ ಹೋದಾಗ. ಮತ್ತೆ ಅಕ್ಷರದಿಂದ ವಂಚಿತರಾಗುವುದು ಕೂಡ ಶೌಚಾಲಯ ಇಲ್ಲದೆ ಇರುವ ಕಾರಣಕ್ಕೆ!
ಶಾಲೆಯಿಂದ ದೂರ ಉಳಿಯುವ ಹೆಣ್ಣು ಮಕ್ಕಳು
ಹಳ್ಳಿಗಾಡಿನಲ್ಲಿ ಹೆಣ್ಣುಮಕ್ಕಳು ಮೈನೆರೆದರೆ ಸಾಕು, ಎಲ್ಲ ತಂದೆ ತಾಯಿಯರು ಅವಳನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಅವಳು ಭಾರವಾಗಿಯೆ ಕಾಣುತ್ತಾಳೆ. ನೀನು ಜೋರ ಜೋರಾಗಿ ನಗಬೇಡ, ಮಾತಾಡಬೇಡ, ಜೋರಾಗಿ ಹೆಜ್ಜೆ ಹಾಕಬೇಡ, ತಲೆ ತಗ್ಗಿಸಿ ನಡೆ ಎಂಬ ಕಟ್ಟುಪಾಡುಗಳಿಗೆ ಒಳ ಮಾಡುತ್ತಲೆ ಇದ್ದಾರೆ. ಇಂತಹ ಕಟ್ಟುಪಾಡುಗಳಿಗೆ ಒಳಗಾದ ಆ ಹೆಣ್ಣು ಮಗು ಮುಟ್ಟಾದರೆ ಶೌಚಾಲಯ ಇಲ್ಲದ ಶಾಲೆಯಲ್ಲಿ ಇನ್ನಷ್ಟೂ ಮುಜುಗರಕ್ಕೆ ಒಳಗಾಗುತ್ತೇನೆಂಬ ಭಯಕ್ಕೆ ಶಾಲೆಯನ್ನು ಬಿಟ್ಟು ಬಿಡುತ್ತಾಳೆ. ಹೀಗೆ ಶೌಚಾಲಯ ಇಲ್ಲದ ಕಾರಣಕ್ಕೆ ಪ್ರತಿಯೊಂದು ಹಂತದಲ್ಲೂ ಹೆಣ್ಣು ಮುಜುಗರ ಮತ್ತು ಅವಮಾನವನ್ನು ಅನುಭವಿಸಬೇಕಾಗುತ್ತದೆ. ಇವೆಲ್ಲಾ ಕಾರಣಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಶೇ 100ಕ್ಕೆ ಶೇ.60 ಹೆಣ್ಣು ಮಕ್ಕಳು ಶಾಲೆಯಿಂದ ದೂರವೇ ಉಳಿಯುತ್ತಾರೆ.
ಸ್ವಚ್ಛ ಭಾರತ ಅಭಿಯಾನದ ಯೋಜನೆ ಉಪಯೋಗವಾಗಿದೆಯೇ?
ಭಾರತ ಸರ್ಕಾರದ ಸ್ವಚ್ಛ ಭಾರತ ಅಭಿಯಾನದ ಯೋಜನೆಯಡಿ ” ಮನೆಗೊಂದು ಶೌಚಾಲಯ” ಎಂಬ ಧ್ಯೇಯ ವಾಕ್ಯವೇನೋ ಎಲ್ಲೆಡೆಯೂ ಮೊಳಗಿತು. ಆದರೆ ಇದರಿಂದ ಹೆಣ್ಣುಮಕ್ಕಳಿಗೆ ಎಷ್ಟು ಉಪಯೋಗವಾಗಿದೆ? 2014 ರಿಂದ ೨೦17 ರ ವರೆಗೂ ಶೇ. 42ರಿಂದ ಶೇ.64 ಶೌಚಾಲಯಗಳು ತಲೆ ಎತ್ತಿ ನಿಂತವೆ ಎಂಬ ವರದಿ ಬಂದಿದೆ. ಆದರೆ ಅವುಗಳ ಬಳಕೆ ಎಷ್ಟರ ಮಟ್ಟಿಗೆ ಆಗುತ್ತಿವೆ..?
25 ರಾಜ್ಯದ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನೊಳಗೊಂಡಂತೆ 5 ಲಕ್ಷಕ್ಕೂ ಹೆಚ್ಚು ಹಳ್ಳಿಗಳನ್ನು ಬಯಲು ಶೌಚ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ. ಇನ್ನು ಕರ್ನಾಟಕಕ್ಕೆ ಬಂದರೆ ” ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಒಟ್ಟು 22.40 ಲಕ್ಷ ಶೌಚಾಲಯ ನಿರ್ಮಿಸಲಾಗಿದೆ ಎಂದು ರಾಷ್ಟ್ರೀಯ ಗ್ರಾಮೀಣ ನೈರ್ಮಲ್ಯ ಸಮೀಕ್ಷೆ ವರದಿ ಏನೋ ಮಾಡಿದೆ. ಆದರೆ, ಎಷ್ಟು ಹಳ್ಳಿಗಳಲ್ಲಿ ಶೌಚಾಲಯ ಬಳಸುತ್ತಿದ್ದಾರೆ? ಎಷ್ಟು ಹಳ್ಳಿಗಳಲ್ಲಿ ನೀರಿನ ವ್ಯವಸ್ಥೆ ಇದೆ? ನೀರಿನ ಸೌಲಭ್ಯ ಇದ್ದೂ ಬಳಸಲಾಗುತ್ತಿರುವ ಶೌಚಾಲಯ ಸಂಖ್ಯೆ ಎಷ್ಟು…?
ಅಲ್ಲಿ ಹೋಗಲ್ಲ ರೀ ಮೇಡಮೋರೆ… ನಾವು ಬಯಲಿಗಿ ಹೋಗಿ ಬರ್ತಿವಿ…
ಶೌಚಾಲಯಗಳಿಲ್ಲದೆ ಇರುವುದು ಒಂದು ಸಮಸ್ಯೆಯಾದರೆ ಶೌಚಾಲಯಗಳಿದ್ದು ಬಳಸಲು ಗೊತ್ತಿಲ್ಲದಿರುವುದೂ ಒಂದು ಸಮಸ್ಯೆಯೇ. ಶೌಚಕ್ಕೆ ವ್ಯವಸ್ಥೆ ಇದ್ದರೂ ನಮ್ಮಲ್ಲಿ ಎಷ್ಟೋ ಜನರು ಬಯಲು ಶೌಚಾಲಯವನ್ನೆ ಅವಲಂಬಿಸಿದ್ದಾರೆ.! ಹಳ್ಳಿಯ ಜನರಿಗೆ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಭಾರತ ಸರ್ಕಾರ ಇನ್ನೂ ಹೆಚ್ಚಾಗಿ ಮಾಡಬೇಕಿದೆ. ಮೊನ್ನೆ ಕೊಪ್ಪಳ ಜಿಲ್ಲೆಯಲ್ಲಿ ದೇವದಾಸಿ ಸಮುದಾಯದ ತಾಯಿಯರಿಗೆ ಎರಡು ದಿನದ ಕಾರ್ಯಗಾರವಿತ್ತು. ಬೇರೆ ಬೇರೆ ಹಳ್ಳಿಗಳಿಂದ ಬಂದ ತಾಯಂದಿರು ಅಲ್ಲಿರುವ ಶೌಚಾಲಯ ಬಳಸಲು ಹಿಂಜರಿಯುತ್ತಿದ್ದರು. ಅವರಿಗೆ ಶೌಚಾಲಯ ಬಳಸಿ ಅಭ್ಯಾಸವಿಲ್ಲ ಮತ್ತು “ಕೆಟ್ಟ ವಾಸನೆ ಬರ್ತಿದೆ ನಾವು ಅಲ್ಲಿ ಹೋಗಲ್ಲ ರೀ ಮೇಡಮೋರೆ.. ನಾವು ಬಯಲಿಗಿ ಹೋಗಿ ಬರ್ತಿವಿ” ಅಂತ ಹೊಂಟೆ ಬಿಟ್ಟರು. ಅವರಿಗೆ ಶೌಚಾಲಯ ಬಳಸುವ ವಿಧಾನ ಗೊತ್ತಿಲ್ಲ. ನೀರು ಹೆಚ್ಚಿಗೆ ಹಾಕಿದ್ರೆ ವಾಸನೆ ಬರಲ್ಲ, ಶೌಚಾಲಯ ಬಳಸುವುದರಿಂದ ಆರೋಗ್ಯ ಕೂಡ ಕಾಪಾಡಿಕೊಳ್ಳಬಹುದು ಎಂದು ಪ್ರತಿ ಹಳ್ಳಿಯ ಜನರಿಗೆ ತಿಳುವಳಿಕೆ ಮೂಡಿಸುವುದು ಮುಖ್ಯ.
ಶೌಚ ಸೌಲಭ್ಯಗಳು ನಮ್ಮ ನಿತ್ಯದ ಬದುಕಿನಲ್ಲಿ ಗರಿಷ್ಠ ಅಗತ್ಯದ ಒಂದು ಸಂಗತಿಯಾದರೂ ಅದಕ್ಕೆ ನೀಡಲಾಗಿರುವ ಪ್ರಾಶಸ್ತ್ಯ ಅತ್ಯಂತ ಕನಿಷ್ಠ ಎಂಬುದು ಆಶ್ಚರ್ಯಕರ. ಅದೇ ಹೊತ್ತಿನಲ್ಲಿ ನೈರ್ಮಲ್ಯ ಎನ್ನುವುದು ಒಂದು ಸಂಸ್ಕೃತಿಯಂತೆ ನಮ್ಮಲ್ಲಿ ಬೆಳೆಯುವ ಅಗತ್ಯವೂ ಇದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ.
ಪ್ರಿಯಾಂಕಾ ಮಾವಿನಕರ್, ಕಲಬುರಗಿ
ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ಇವರಿಗೆ ಬರವಣಿಗೆಯಲ್ಲಿ ವಿಶೇಷ ಆಸಕ್ತಿ.