ಲೈಂಗಿಕ ಕಿರುಕುಳ ಕೇಸ್: ಬ್ರಿಜ್ ಭೂಷಣ್ ಸಿಂಗ್ ಖುಲಾಸೆ ಪ್ರಶ್ನಿಸಿ ಸೆಷನ್ಸ್ ಕೋರ್ಟ್‌ ಮೆಟ್ಟಿಲೇರಿದ ಮಹಿಳಾ ಕುಸ್ತಿಪಟುಗಳು

ದೆಹಲಿ: ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯೂಎಫ್‌ಐ) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಲೈಂಗಿಕ ಕಿರುಕುಳ ಪ್ರಕರಣದಿಂದ ಖುಲಾಸೆಗೊಳಿಸಿ ನೀಡಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ನಾಲ್ವರು ಮಹಿಳಾ ಕುಸ್ತಿಪಟುಗಳು ದೆಹಲಿಯ ರೌಸ್ ಅವೆನ್ಯೂ ಸೆಷನ್ಸ್ ಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದಾರೆ.

ಬ್ರಿಜ್ ಭೂಷಣ್ ಜೊತೆಗೆ ಅವರ ಸಹಾಯಕ ಹಾಗೂ ಡಬ್ಲ್ಯೂಎಫ್‌ಐ ಮಾಜಿ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರ ಖುಲಾಸೆಯನ್ನೂ ಈ ಮೇಲ್ಮನವಿಯಲ್ಲಿ ಪ್ರಶ್ನಿಸಲಾಗಿದೆ.ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ತಿಳಿಸಿ ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ಎಸಿಜೆಎಂ) ನ್ಯಾಯಾಲಯವು ಕಳೆದ ಆಗಸ್ಟ್ 3 ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಈ ಅರ್ಜಿಯು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಲಿದೆ.

ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿರುವ ತೀರ್ಪು ಕಾನೂನುಬಾಹಿರವಾಗಿದ್ದು, ದಾಖಲೆಯಲ್ಲಿರುವ ಸಾಕ್ಷ್ಯಗಳನ್ನು ಸಮಗ್ರವಾಗಿ ಪರಿಶೀಲಿಸದೆ ಕೇವಲ ಆಯ್ದ ಭಾಗಗಳನ್ನು ಮತ್ತು ಊಹಾಪೋಹಗಳನ್ನು ಆಧರಿಸಿ ತೀರ್ಪು ನೀಡಲಾಗಿದೆ ಎಂದು ಕುಸ್ತಿಪಟುಗಳು ತಮ್ಮ ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ.ನ್ಯಾಯಾಲಯವು ನಿಗದಿತ ಮತ್ತು ಸ್ಥಾಪಿತ ಕಾನೂನು ತತ್ವಗಳನ್ನು ಗಾಳಿಗೆ ತೂರಿದೆ ಎಂದು ಅವರು ದೂರಿದ್ದಾರೆ.

ಮುಖ್ಯವಾಗಿ, ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆ ಹೇಗೆ ವರ್ತಿಸಬೇಕು ಎಂಬ ಕುರಿತು ಸಮಾಜದಲ್ಲಿರುವ ಹಳೆಯ ಮತ್ತು ಸಾಂಪ್ರದಾಯಿಕ ಪೂರ್ವಾಗ್ರಹ ಪೀಡಿತ ಮಾನದಂಡಗಳನ್ನೇ ಆಧರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪು ಬರೆದಿದೆ ಎಂದು ಅರ್ಜಿದಾರರು ತೀವ್ರ ಆಕ್ಷೇಪ ಎತ್ತಿದ್ದಾರೆ.ಘಟನೆ ನಡೆದ ಸ್ಥಳ, ವರ್ಷ ಅಥವಾ ವಿವರಗಳನ್ನು ನಿಖರವಾಗಿ ನೆನಪಿನಲ್ಲಿಡದ ಮಾತ್ರಕ್ಕೆ ಅಥವಾ ಕ್ರೀಡಾ ಭವಿಷ್ಯವನ್ನು ನಿಯಂತ್ರಿಸುತ್ತಿದ್ದ ಪ್ರಭಾವಿ ವ್ಯಕ್ತಿಯೊಂದಿಗೆ ವೃತ್ತಿಪರ ಸಂಬಂಧ ಮುಂದುವರಿಸಿದ ಮಾತ್ರಕ್ಕೆ ಕಿರುಕುಳವೇ ನಡೆದಿಲ್ಲ ಎಂದು ನಿರ್ಧರಿಸಲು ಸಾಧ್ಯವಿಲ್ಲ;ನೈಜ ಪರಿಸ್ಥಿತಿಯಲ್ಲಿ ಸಂತ್ರಸ್ತೆಯರು ಎದುರಿಸುವ ಒತ್ತಡವನ್ನು ನ್ಯಾಯಾಲಯ ಪರಿಗಣಿಸಿಲ್ಲ ಎಂದು ಮೇಲ್ಮನವಿಯಲ್ಲಿ ಪ್ರತಿಪಾದಿಸಲಾಗಿದೆ.ಈ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ, ಸೂಕ್ತ ವಿಚಾರಣೆ ನಡೆಸಬೇಕೆಂದು ಕುಸ್ತಿಪಟುಗಳು ಮನವಿ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು