Friday, June 14, 2024

ಸತ್ಯ | ನ್ಯಾಯ |ಧರ್ಮ

  ರೋಹಿಣಾಕ್ಷ ಶಿರ್ಲಾಲುರಿಂದ ಬೌದ್ಧ-ಮುಸ್ಲಿಮರಲ್ಲಿ ಕೋಮುಭಾವನೆ ಕೆರಳಿಸುವ ಬರಹ: ವಿವಿಗೆ ಪತ್ರ ಬರೆಯಲು ನಿರ್ಧಾರ

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರೋಹಿಣಾಕ್ಷ ಶಿರ್ಲಾಲ ಎಂಬುವವರು ಬರೆದಿರುವ ಲೇಖನದಲ್ಲಿ  ಬೌದ್ಧರು, ಮುಸ್ಲಿಮರು, ಅಂಬೇಡ್ಕರ್‌ವಾದಿಗಳಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಲೇಖಕರು ಸುಳ್ಳು ಬರೆದಿದ್ದಾರೆ ಎಂದು ಕಲಬುರಗಿಯ ಸೌಹಾರ್ಧ ಬಳಗದ ದತ್ತಾತ್ರೆಯ ಇಕ್ಕಳಕಿ ಆರೋಪಿಸಿದ್ದಾರೆ.

 ರೋಹಿಣಾಕ್ಷ ಅವರು ‘ಅಂಬೇಡ್ಕರರನ್ನು ಬುದ್ಧನೇಕೆ ಸೆಳೆದ’ ಶಿರ್ಷಿಕೆಯೊಂದಿಗೆ ಇಂದು ಬುಧವಾರ ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಲೇಖನ ಪ್ರಕಟಿಸಿದ್ದಾರೆ. ಈ ಲೇಖನದಲ್ಲಿ ‘ಬೌದ್ಧಧಮ್ಮಕ್ಕೆ ಬಾರಿ ಪೆಟ್ಟು ಬಿದ್ದದ್ದು ಮುಸ್ಲಿಂ ಆಕ್ರಮಣದಿಂದ.  ಮುಸ್ಲಿಮರು ಬೌದ್ಧ ವಿಗ್ರಹಗಳನ್ನು ನಾಶ ಮಾಡಿದರು, ಬಿಕ್ಕುಗಳನ್ನು ಕೊಂದುಬಿಟ್ಟರು, ನಳಂದವನ್ನು ಸುಟ್ಟುಹಾಕಿದರು, ಭಾರತದಲ್ಲಿ ಮಾತ್ರವಲ್ಲ ಇಸ್ಲಾಂ ಹೋದಡೆಯಲ್ಲೆಲ್ಲಾ ನಾಶ ಮಾಡಿತು’ ಎಂಬ ಸತ್ಯವನ್ನು ಅಂಬೇಡ್ಕರ್‌ ಅರ್ಥ ಮಾಡಿಕೊಂಡಿದ್ದರು ಎಂದು ರೋಹಿಣಾಕ್ಷ ಅಂಬೇಡ್ಕರ್‌ ಹೆಸರಲ್ಲಿ ಸುಳ್ಳು ಮಾಹಿತಿಯನ್ನು ಬಿತ್ತುತ್ತಿದ್ದಾರೆ ಎಂದು ಎಂದು ಇಕ್ಕಳಿಕೆ ಆರೋಪಿಸಿದ್ದಾರೆ.

ಬೌದ್ಧ ಧರ್ಮದ ಉದಯವನ್ನು ಒಂದು ಕ್ರಾಂತಿಯೆಂದೂ, ಬ್ರಾಹ್ಮಣರಿಂದ ಪ್ರಾರಂಭವಾದ ಪ್ರತಿಕ್ರಾಂತಿಯು ಬೌದ್ಧಧಮ್ಮದ ಅವನತಿ ಮತ್ತು ಪತನಕ್ಕೆ ಕಾರಣವಾಯಿತು ಎಂದು ಡಾ. ಅಂಬೇಡ್ಕರ್‌ ದಾಖಲಿಸಿರುವುದು (ಸಂ:3/2015, ಪುಟ:163) ಅಂಬೇಡ್ಕರ್‌ ಸಂಪುಟಗಳಲ್ಲಿ ದಾಖಲಾಗಿದೆ. ತಾವು ಬೌದ್ಧ ಧಮ್ಮಕ್ಕೆ ಮತಾಂತರ ಆಗಲು ಹಿಂದೂ ಧರ್ಮದ ಸನಾತನತೆಯೆ ಕಾರಣ ಎಂದು ಅಂಬೇಡ್ಕರ್‌ ಪದೆ ಪದೆ ಹೇಳುತ್ತಿದ್ದರು ಎಂದು ಇಕ್ಕಳಕಿ ತಿಳಿಸಿದ್ದಾರೆ.

3.10.1935 ರಲ್ಲಿ ನಾಸಿಕ್ ಜಿಲ್ಲೆಯ ಯಹೋಲ ಮುನಿಸಿಪಾಲಟಿಯು ಡಾ.ಅಂಬೇಡ್ಕರ್ ಅವರಿಗೆ ಬಿನ್ನವತ್ತಳೆ ಅರ್ಪಿಸಿತು. ಇದಕ್ಕೆ ಉತ್ತರಿಸುತ್ತಾ ಡಾ. ಅಂಬೇಡ್ಕರ್ ‘ಹಿಂದೂಧರ್ಮದಲ್ಲಿ ಬೇರೂರಿದ ಅಸಮಾನತೆಯು ಆ ಧರ್ಮವನ್ನು ತೊರೆಯುವಂತೆ ನನ್ನನ್ನು ಒತ್ತಾಯಿಸುತ್ತಿದೆ. ನನ್ನ ತಪ್ಪಿಲ್ಲದೆ ಇದ್ದರೂ ನಾನು  ಅಸ್ಪೃಶ್ಯನಾಗಿ ಜನಿಸಿದೆ. ಈಗ ನಾನು ಹಿಂದೂವಾಗಿ ಸಾಯಲಾರೆ, ಇದರ ನಿರ್ಧಾರ ನನ್ನ ಕೈಯಲ್ಲಿದೆ’ ಎಂದು ಹೇಳುತ್ತಾರೆ. ಹೀಗೆ ಬೌದ್ಧ ಧರ್ಮ ನಾಶವಾಗಲು ಬ್ರಾಹ್ಮಣರು ಕಾರಣ ಎಂಬ ಸತ್ಯ ಅಂಗೈಯಲ್ಲಿ ಇರುವಾಗ ರೋಹಿಣಾಕ್ಷ ಅವರು ಬೌದ್ಧ ಧರ್ಮದ ನಾಶಕ್ಕೆ ಮುಸ್ಲಿಮರು ಕಾರಣ ಎನ್ನುವ ಮೂಲಕ ಕೋಮು ಬಾವನೆ ಕೆರಳಿಸಲು ಕಾರಣರಾಗಿದ್ದಾರೆ. ಲೇಖಕರು ಇಡೀ ಲೇಖನದಲ್ಲಿ ಒಂದೇ ಒಂದು ಪದವನ್ನು ಹಿಂದೂ ಧರ್ಮದ ಸನಾತನೆಯ ಬಗ್ಗೆ ಉಲ್ಲೇಖ ಮಾಡದೆ ಲೇಖಕರು ದಿಡೀರ್ ‘ಮುಸ್ಲಿಮರೆ ಬೌದ್ಧಧರ್ಮದ ನಾಶಕರು’ ಎಂದು ಬರೆದಿದ್ದಾರೆ ಎಂದು ದೂರಿದ್ದಾರೆ.

ಕಲಬುರಗಿ ಹಿಂದೂ-ಬೌದ್ಧ-ಮುಸ್ಲಿಂ ಧರ್ಮೀಯರು ಸಾಮರಸ್ಯದಿಂದ ಬದುಕುವ ಸೂಫಿ-ಶರಣರ ಸೌಹಾರ್ಧದ ನೆಲೆ. ಇಂತಹ ನೆಲೆಯಲ್ಲಿ ಬೌದ್ಧರು-ಮುಸ್ಲೀಮರ ಮಧ್ಯೆ ಕೋಮು ದ್ವೇಶವನ್ನು ಬಿತ್ತಲು ಈ ಲೇಖಕರು ಪ್ರಯತ್ನಿಸಿದ್ದಾರೆ. ಈ ಮೂಲದ ಸ್ವತಃ ಅಂಬೇಡ್ಕರ್ ಆಲೋಚನೆಗಳನ್ನು ತಪ್ಪಾಗಿ ಅರ್ಥೈಸಲು ಪ್ರಯತ್ನಿಸಿದ್ದಾರೆ. ಈ ಮೂಲಕ ಕಲಬುರಗಿಯ ಅಂಬೇಡ್ಕರ್ ವಾದಿಗಳಿಗೂ ಪರೋಕ್ಷವಾಗಿ ಅವಮಾನ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಜೈಭೀಮ್ ಬಂಧುಗಳು, ಬೌದ್ಧಾನುಯಾಯಿಗಳು, ಮುಸ್ಲೀಂ ಬಂಧುಗಳು ಒಟ್ಟಾಗಿ ಈ ಬರಹವನ್ನೂ, ಈ ಬರಹ ಬರೆದ ಲೇಖಕರಿಗೂ ಕಲಬುರಗಿಯ ಸೌಹಾರ್ಧ ಕದಡುವ ನೀಚತನಕ್ಕೆ ದಿಕ್ಕಾರ ಹೇಳಬೇಕಿದೆ. ಈ ಕುರಿತು ಸೆಂಟ್ರಲ್ ಯುನಿವರ್ಸಿಟಿಯ ಕುಲಪತಿಗಳಿಗೆ ಎಚ್ಚರಿಕೆಯ ಪತ್ರ ನೀಡಲಾಗುವುದು ಎಂದು ದತ್ರಾತ್ರೆಯ ಇಕ್ಕಳಕಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು