Thursday, April 17, 2025

ಸತ್ಯ | ನ್ಯಾಯ |ಧರ್ಮ

ನ್ಯಾಯಾಲಯಗಳು ರಾಷ್ಟ್ರಪತಿ, ರಾಜ್ಯಪಾಲರಿಗೆ ನಿರ್ದೇಶನ ನೀಡುವುದು ತಪ್ಪು : ಉಪರಾಷ್ಟ್ರಪತಿ ಜಗದೀಪ್ ಧನಕರ್

ಸುಪ್ರೀಂ ಕೋರ್ಟ್ ಮೊದಲ ಬಾರಿಗೆ, ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳಿಗೆ ಮಸೂದೆಗಳ ಅಂಕಿತಕ್ಕೆ ಗಡುವು ನೀಡಿದ ಬಗ್ಗೆ ಪ್ರತಿಕ್ರಿಯಿಸಿರುವ ಉಪರಾಷ್ಟ್ರಪತಿ ಜಗದೀಪ್ ದನಕರ್, ನ್ಯಾಯಾಲಯಗಳು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಗಡುವು ನೀಡುವುದನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಇಂದು ರಾಜ್ಯಸಭೆಯ ಇಂಟರ್ನ್‌ಗಳನ್ನು ಉದ್ದೇಶಿಸಿ ಮಾತನಾಡಿದ ಉಪ ರಾಷ್ಟ್ರಪತಿ ಧನಕರ್, “ನ್ಯಾಯಾಲಯಗಳು ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ” ಎಂದು ನ್ಯಾಯಾಲಯಗಳ ಮೇಲೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಇತ್ತೀಚಿನ ತೀರ್ಪಿನಿಂದ ರಾಷ್ಟ್ರಪತಿಗಳಿಗೆ ನಿರ್ದೇಶನವಿದೆ. ನಾವು ಎಲ್ಲಿಗೆ ಹೋಗುತ್ತಿದ್ದೇವೆ? ದೇಶದಲ್ಲಿ ಏನು ನಡೆಯುತ್ತಿದೆ? ನಾವು ಅತ್ಯಂತ ಸೂಕ್ಷ್ಮವಾಗಿರಬೇಕು. ಯಾರಾದರೂ ಟೀಕಿಸುತ್ತಾರೋ ಇಲ್ಲವೋ ಎಂಬ ಪ್ರಶ್ನೆಯಲ್ಲ. ರಾಷ್ಟ್ರಪತಿಗಳಿಗೆ ಗಡುವು ನೀಡಲಾಗಿದೆ ಮತ್ತು ಆ ಗಡುವು ಮೀರಿದರೆ ಅದು ಕಾನೂನಾಗುತ್ತದೆ” ಎಂದು ಧನಕರ್ ಹೇಳಿದರು.

“ನಮ್ಮಲ್ಲಿ ಶಾಸನ ರಚಿಸುವ, ಕಾರ್ಯಕಾರಿ ಕಾರ್ಯಗಳನ್ನು ನಿರ್ವಹಿಸುವ, ಸೂಪರ್ ಪಾರ್ಲಿಮೆಂಟ್ ಆಗಿ ಕಾರ್ಯನಿರ್ವಹಿಸುವ ನ್ಯಾಯಾಧೀಶರು ಇದ್ದಾರೆ ಮತ್ತು ಅವರಿಗೆ ಯಾವುದೇ ಹೊಣೆಗಾರಿಕೆ ಇಲ್ಲ. ಏಕೆಂದರೆ ಈ ನೆಲದ ಕಾನೂನು ಅವರಿಗೆ ಅನ್ವಯಿಸುವುದಿಲ್ಲ” ಎಂದು ವಾಗ್ದಾಳಿ ನಡೆಸಿದರು.

ಅಷ್ಟೇ ಅಲ್ಲದೆ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ನಿವಾಸದಲ್ಲಿ ಸುಟ್ಟುಹೋದ ಹಣ ಪತ್ತೆ ಪ್ರಕರಣದಲ್ಲಿ ಎಫ್‌ಐಆ‌ರ್ ಏಕೆ ದಾಖಲಿಸಿಲ್ಲ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕ‌ರ್ ಪ್ರಶ್ನಿಸಿದ್ದಾರೆ. ಅದು ‘ಕಾನೂನಿಗೆ ಮೀರಿದ ವರ್ಗವೇ?, ವಿಚಾರಣೆಯಿಂದ ವಿನಾಯಿತಿ ಪಡೆದಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ಈ ವಿಷಯದ ಬಗ್ಗೆ ಆಂತರಿಕ ತನಿಖೆ ನಡೆಸುತ್ತಿರುವ ಮೂವರು ನ್ಯಾಯಮೂರ್ತಿಗಳ ಸಮಿತಿಯ ಕಾನೂನು ಸ್ಥಿತಿಯನ್ನು ಧನಕರ್‌ ಪ್ರಶ್ನಿಸಿದ್ದಾರೆ. ಪ್ರಕರಣವನ್ನು ಉಲ್ಲೇಖಿಸಿ, ಪ್ರತಿಯೊಬ್ಬ ಭಾರತೀಯನೂ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಘಟನೆ ಸಾಮಾನ್ಯ ವ್ಯಕ್ತಿಯ ಮನೆಯಲ್ಲಿ ನಡೆದಿದ್ದರೆ, ತನಿಖೆಯ ವೇಗವು ರಾಕೆಟ್ ವೇಗದಲ್ಲಿರುತ್ತಿತ್ತು. ಈಗ ಅದು ಎತ್ತಿನಗಾಡಿಯೂ ಅಲ್ಲ ಎಂದಿದ್ದಾರೆ.

“ಸಂವಿಧಾನವು ಭಾರತದ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರಿಗೆ ಮಾತ್ರ ಪ್ರಾಸಿಕ್ಯೂಷನ್‌ನಿಂದ ರಕ್ಷಣೆ ಒದಗಿಸಿದೆ. ಹಾಗಾದರೆ, ಒಂದು ವರ್ಗವು ಈ ಕಾನೂನನ್ನು ಮೀರಿ ರಕ್ಷಣೆ ಪಡೆದಿರುವುದಾದರೂ ಹೇಗೆ? ಇದರ ದುಷ್ಪರಿಣಾಮಗಳು ಪ್ರತಿಯೊಬ್ಬರ ಮೇಲೂ ಆಗುತ್ತಿದೆ. ಇದರಿಂದಾಗಿ ಪ್ರತಿ ಭಾರತೀಯರು, ಹಿರಿಯ ನಾಗರಿಕರು ಹಾಗೂ ಯುವಕರು ಕಳವಳಗೊಂಡಿದ್ದಾರೆ” ಎಂದು ಅವರು ಆತಂಕ ವ್ಯಕ್ತಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page