Monday, March 16, 2026

ಸತ್ಯ | ನ್ಯಾಯ |ಧರ್ಮ

ವಿದ್ಯಾರ್ಥಿನಿಯರಿಗೆ ತಪ್ಪು ಪ್ರಶ್ನೆ ಪತ್ರಿಕೆ – ಪಿಯು ಪರೀಕ್ಷೆಯಲ್ಲಿ ಎಡವಟ್ಟು

ಬೇಲೂರು: ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗಂಭೀರ ಎಡವಟ್ಟು ನಡೆದಿದ್ದು, ಪರೀಕ್ಷೆ ಬರೆಯಲು ಬಂದಿದ್ದ ಆರು ವಿದ್ಯಾರ್ಥಿನಿಯರಿಗೆ ತಪ್ಪು ಪ್ರಶ್ನೆ ಪತ್ರಿಕೆ ನೀಡಿದ ಘಟನೆ ಬೆಳಕಿಗೆ ಬಂದಿದೆ.

ಇಂದು ನಡೆದ ಕಂಪ್ಯೂಟರ್ ಸೈನ್ಸ್ ವಿಷಯದ ಪರೀಕ್ಷೆಯ ವೇಳೆ ಪರೀಕ್ಷಾ ಮೇಲ್ವಿಚಾರಕರು, ಕಾಲೇಜಿನ ಪ್ರಾಂಶುಪಾಲರು, ಮುಖ್ಯ ಅಧೀಕ್ಷಕರು ಹಾಗೂ ಸಹ ಮುಖ್ಯ ಅಧೀಕ್ಷಕರ ನಿರ್ಲಕ್ಷ್ಯದಿಂದಾಗಿ ಈ ಎಡವಟ್ಟು ಸಂಭವಿಸಿದೆ ಎಂದು ತಿಳಿದುಬಂದಿದೆ. ಪರೀಕ್ಷಾ ಕೇಂದ್ರದ ಅಧಿಕಾರಿಗಳು ರಿಪಿಟರ್ಸ್‌ಗಳಿಗೆ ನೀಡಬೇಕಿದ್ದ ಪ್ರಶ್ನೆ ಪತ್ರಿಕೆಯನ್ನು ಸಾಮಾನ್ಯ ವಿದ್ಯಾರ್ಥಿನಿಯರಿಗೆ ನೀಡಿದ್ದು, ಅದನ್ನೇ ಆರು ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುವ ವೇಳೆ ಬಳಸಿದ್ದಾರೆ. ಬೇಲೂರು ಜ್ಯೂನಿಯರ್ ಕಾಲೇಜು ಹಾಗೂ ಸರ್ವೋದಯ ಕಾಲೇಜಿನ ಆರು ವಿದ್ಯಾರ್ಥಿನಿಯರು ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದರು. ಕಳೆದ ವರ್ಷ ಹಾಗೂ ಈ ವರ್ಷದ ಪಠ್ಯಕ್ರಮದಲ್ಲಿ ಬದಲಾವಣೆಗಳಿರುವುದರಿಂದ ವಿದ್ಯಾರ್ಥಿನಿಯರಿಗೆ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ತೊಂದರೆ ಎದುರಾಯಿತು ಎನ್ನಲಾಗಿದೆ.

ಪರೀಕ್ಷೆ ಮುಗಿಸಿ ಹೊರಬಂದ ಬಳಿಕ ಇತರ ವಿದ್ಯಾರ್ಥಿನಿಯರ ಪ್ರಶ್ನೆ ಪತ್ರಿಕೆಗಳನ್ನು ನೋಡಿದಾಗ ಈ ಎಡವಟ್ಟು ಬಯಲಾಗಿದೆ. ಇದರಿಂದ ಅಂಕ ಕಡಿಮೆಯಾಗುವ ಭೀತಿಯಿಂದ ವಿದ್ಯಾರ್ಥಿನಿಯರು ಕಣ್ಣೀರಿಟ್ಟಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ನಂತರ ಪೋಷಕರು ಹಾಗೂ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕ್ರಮ ಕೈಗೊಳ್ಳಬೇಕು ಹಾಗೂ ವಿದ್ಯಾರ್ಥಿನಿಯರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page