ಯಾದಗಿರಿ: ರಸ್ತೆ ಅಪಘಾತದಲ್ಲಿ ಮೂವರು ಮಹಿಳಾ ಕೃಷಿ ಕಾರ್ಮಿಕರ ಸಾವು, ಎಂಟು ಮಂದಿಗೆ ಗಂಭೀರ ಗಾಯ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮದ್ನಾಳ ಗ್ರಾಮದ ಬಳಿ ಭಾನುವಾರ ಬೊಲೆರೊ ಪಿಕ್-ಅಪ್ ವಾಹನವೊಂದು ರಸ್ತೆಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳಾ ಕೃಷಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮದ್ನಾಳ ಮತ್ತು ಹಾಳಿಸಾಗರ ಗ್ರಾಮಗಳ 20ಕ್ಕೂ ಹೆಚ್ಚು ಕೃಷಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಈ ವಾಹನ, ಹತ್ತಿ ಹೊಲದಲ್ಲಿ ಕಳೆ ತೆಗೆಯುವ ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ವೇಳೆ ಅಪಘಾತಕ್ಕೀಡಾಗಿದೆ.

ಮೃತರನ್ನು ಪಿಕ್-ಅಪ್ ವಾಹನದ ಚಾಲಕ ಶೇಖಪ್ಪ ಅವರ ಪತ್ನಿ ಸೌಭಾಗ್ಯ (25), ಹೊನ್ನನಿಂಗಮ್ಮ (18) ಮತ್ತು ಸತ್ಯಮ್ಮ ಕುಂಬಾರ (35) ಎಂದು ಗುರುತಿಸಲಾಗಿದೆ. ಗಾಯಾಳುಗಳಿಗೆ ಶಹಾಪುರ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿದ ಬೊಲೆರೊ ಪಿಕ್-ಅಪ್ ವಾಹನ ರಸ್ತೆಯಿಂದ ಪಕ್ಕಕ್ಕೆ ಸರಿದು ವಿದ್ಯುತ್ ಕಂಬಕ್ಕೆ ರಭಸವಾಗಿ ಅಪ್ಪಳಿಸಿದ್ದರಿಂದ ಈ ದುರಂತ ಸಂಭವಿಸಿದೆ.

Related Articles

ಇತ್ತೀಚಿನ ಸುದ್ದಿಗಳು