ಶಿವಮೊಗ್ಗ, ಜುಲೈ 20: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕರಾದ ಬಿಎಸ್ ಯಡಿಯೂರಪ್ಪ ಅವರಿಗೆ ಶಿವಮೊಗ್ಗದ ಇರುವಕ್ಕಿ ಕೆಳದಿ ಶಿವಪ್ಪ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.
ರಾಜ್ಯದ ನಿಕಟ ಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮಾನ್ಯ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ಹಾಗಾಗಿ ಇವತ್ತು ಅಧಿಕೃತವಾಗಿ ಯಡಿಯೂರಪ್ಪನವರಿಗೆ ಡಾಕ್ಟರೇಟ್ ನೀಡಲು ಅನುಮತಿ ದೊರೆತಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಹೇಳಿದರು.
ಯಡಿಯೂರಪ್ಪ ರೈತ ನಾಯಕ, ಇಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಗೆ ಕೂಡಾ ಅವರೇ ಕಾರಣ. ಕಳೆದ ಸರ್ಕಾರದಲ್ಲಿ ಕೆಳದಿ ಶಿವಪ್ಪ ನಾಯಕ ವಿಶ್ವವಿದ್ಯಾಲಯ ಎಂದು ನಾಮಕರಣವನ್ನೂ ಮಾಡಿದ್ದಾರೆ. ಕೃಷಿ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರ.ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ನೀರಾವರಿ, ಕೃಷಿ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಅವರ ಒಟ್ಟಾರೆ ಕೃಷಿ ಸಾಧನೆ ನೋಡಿಕೊಂಡು ಗೌರವ ಡಾಕ್ಟರೇಟ್ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಈ ಹಿಂದೆ 2009ರಲ್ಲಿ ಅಮೆರಿಕದ ಮಿಶಿಗನ್‌ನ ಪ್ಯಾಗಿನ ವ್ಯಾಲಿ ಸ್ಟೇಟ್ ಯುನಿವರ್ಸಿಟಿ ಕೂಡಾ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.