Saturday, June 15, 2024

ಸತ್ಯ | ನ್ಯಾಯ |ಧರ್ಮ

ಉತ್ತರಕನ್ನಡ | ರಾಜ್ಯೋತ್ಸವ ಪ್ರಶಸ್ತಿ ನಿರಾಕರಿಸಿದ ಯಮುನಾ ಗಾಂವ್ಕರ್‌

ಕಾರವಾರ: ನಿನ್ನೆ ಸಂಜೆಯಿಂದ ಎಲ್ಲೆಡೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯದೇ ಸುದ್ದಿ. ರಾಜ್ಯ ಮತ್ತು ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳ ಸುರಿಮಳೆಯೇ ಸುರಿಯುತ್ತಿದೆ. ಈ ನಡುವೆ ಉತ್ತರಕನ್ನಡ ಜಿಲ್ಲಾಡಳಿತ ಸಾಮಾಜಿಕ ಹೋರಾಟಗಾರರಾದ ಯಮುನಾ ಗಾಂವ್ಕರ್‌ ಅವರಿಗೂ ಪ್ರಶಸ್ತಿಯನ್ನು ಘೋಷಿಸಿತ್ತು.

ಆದರೆ ನಿನ್ನೆ ಸಂಜೆಯ ನಂತರ ಅವರು ತಾನು ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿಲ್ಲವೆಂದು ಜಿಲ್ಲಾಡಳಿತಕ್ಕೆ ಪತ್ರವನ್ನು ಬರೆದು ತಿಳಿಸಿದ್ದಾರೆ. ಪ್ರಶಸ್ತಿಗಳಿಗಾಗಿ ಜನರು ಬಾಯಿಬಿಟ್ಟುಕೊಂಡು ಕುಳಿತಿರುವ ಹೊತ್ತಿನಲ್ಲಿ ಯಮುನಾ ಅವರ ಈ ನಡೆ ಜನರ ಅಚ್ಚರಿ ಮತ್ತು ಮೆಚ್ಚುಗೆಗೆ ಪಾತ್ರವಾಗಿದೆ.

ಎಡಪಂಥೀಯ ಸಾಮಾಜಿಕ ಹೋರಾಟಗಳ ಮುಂಚೂಣಿಯಲ್ಲಿರುವ ಯಮುನಾ ಗಾಂವ್ಕರ್‌ ಅವರು ಸದಾ ಒಂದಿಲ್ಲೊಂದು ಹೋರಾಟಗಳ ಮೂಲಕವೇ ಜನರಿಗೆ ಪರಿಚಿತರು. ಅವರು ಖಂಡಿತವಾಗಿಯೂ ಈ ಪ್ರಶಸ್ತಿಗೆ ಅರ್ಹರೂ ಆಗಿದ್ದರು. ಆದರೆ ತಾನು ಸಂಘಟನೆಯ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿರುವುದರಿಂದ ಹಾಗೂ ವೈಯಕ್ತಿಕವಾಗಿಯೂ ಸರ್ಕಾರಿ ಪ್ರಶಸ್ತಿಗಳನ್ನು ತೆಗೆದುಕೊಳ್ಳದಿರಲು ನಿರ್ಧರಿಸಿರುವುದರಿಂದಾಗಿ ತಾನು ಈ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು

“ನಾನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಜಿಲ್ಲಾ ಕಾರ್ಯದರ್ಶಿ ಯಾಗಿ, ಸಿಐಟಿಯು ರಾಜ್ಯ ಕಾರ್ಯದರ್ಶಿ ಯಾಗಿ, ಅಖಿಲ ಭಾರತ ಜನರಲ್ ಕೌನ್ಸಿಲ್ ಸದಸ್ಯೆಯಾಗಿ ಹಾಗೂ ಜಿಲ್ಲೆಯ ಅಂಗನವಾಡಿ, ಅಕ್ಷರದಾಸೋಹ, ಪಂಚಾಯತ್ ಹಾಗೂ ಪೌರ, ಇನ್ನಿತರೇ ಸಂಘಟಿತ ಅಸಂಘಟಿತ ಕಾರ್ಮಿಕರ ಮತ್ತು ರೈತ ಕೂಲಿಕಾರರ, ಆದಿವಾಸಿಗಳ ಸಂಘಟನೆಯಲ್ಲಿ ಕಮ್ಯುನಿಸ್ಟ್ ಮೌಲ್ಯಗಳೊಂದಿಗೆ ಬದ್ಧತೆಯಿಂದ ತೊಡಗಿಸಿಕೊಂಡಿದ್ದೇನೆ. ಅಲ್ಲದೇ ಮಾನ್ಯ ಡಿಸಿಯವರ ಅಧ್ಯಕ್ಷತೆಯ ನಿಯಮ 17ರ ಸಮಿತಿಯಲ್ಲಿ (SCST ಜನರ ಮೇಲಿನ ದೌರ್ಜನ್ಯ ವಿರೋಧಿ ಸಮಿತಿ) ಸದಸ್ಯೆಯಾಗಿದ್ದೇನೆ. ಸರ್ಕಾರದ ಎದುರು ಅನೇಕ ಸಮಸ್ಯೆಗಳ ವಿರುದ್ಧ ಪರಿಹಾರಕ್ಕೆ ಪ್ರತಿನಿತ್ಯ ಹೋರಾಟದ ಮಾರ್ಗದಲ್ಲಿದ್ದೇನೆ. ಹೀಗೆ ಸಂಘಟನಾ ಚೌಕಟ್ಟಿನಲ್ಲಿ ಇರುವುದರಿಂದಲೂ, ವೈಯಕ್ತಿಕ ವಾಗಿಯೂ ಸರ್ಕಾರ ಕೊಡಮಾಡುವ ಈ ಪ್ರಶಸ್ತಿಯನ್ನು ನಾನು ಸ್ವೀಕರಿಸುವುದಿಲ್ಲವೆಂದು ಗೌರವಯುತವಾಗಿ ತಿಳಿಸುತ್ತಿದ್ದೇನೆ.” ಎಂದು ಪತ್ರದಲ್ಲಿ ಬರೆದಿದ್ದಾರೆ.

https://www.facebook.com/photo.php?fbid=6738601869563514&set=a.460014637422300&type=3&ref=embed_post

ಮುಂದುವರೆದು, “ಪ್ರಶಸ್ತಿಗಾಗಿ ನಾನು ಎಲ್ಲಿಯೂ ಅರ್ಜಿ ಹಾಕಿಲ್ಲ ಎಂದೂ ಕೂಡ ಸ್ಪಷ್ಟಪಡಿಸುತ್ತಿದ್ದೇನೆ. ಸಮಾಜದಲ್ಲಿ ಇನ್ನಷ್ಟೂ ಉತ್ತಮ ಸಾಧನೆ ಮಾಡಿದ ಇನ್ನೋರ್ವರನ್ನು ಅವರ ಒಪ್ಪಿಗೆಯೊಂದಿಗೆ ಪ್ರಶಸ್ತಿಗೆ ಆಯ್ಕೆ ಮಾಡಿ ನೀಡಬೇಕೆಂದು ತಮ್ಮಲ್ಲಿ ವಿನಂತಿಸುತ್ತಿದ್ದೇನೆ. ದುಡಿಯುವ ಜನತೆಯ ಬೇಡಿಕೆಗಳಿಗೆ ನಡೆಯುವ ಚಳುವಳಿಗೆ ತಮ್ಮೆಲ್ಲರ ಸಹಾಯ ಸಹಕಾರ ಕೋರುತ್ತೇನೆ” ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು