Sunday, June 16, 2024

ಸತ್ಯ | ನ್ಯಾಯ |ಧರ್ಮ

ನಮ್ಮ ಹುಡುಗ ಯತೀಂದ್ರನನ್ನು ನಾಯಕನನ್ನಾಗಿ ಬೆಳೆಸುತ್ತಿದ್ದಾರೆ, ಆರೋಪ ಮಾಡಲಿ ಬಿಡಿ: ಡಿಸಿಎಂ ಡಿ.ಕೆ.ಶಿವಕುಮಾರ್

“ಯತೀಂದ್ರ ಅವರು ಯಾವ ಅಧಿಕಾರಿ ಹೆಸರು, ಯಾವ ಹುದ್ದೆ, ಎಷ್ಟು ಲಂಚ ಎಂದು ಎಲ್ಲಿ ಹೇಳಿದ್ದಾರೆ. ಕುಮಾರಸ್ವಾಮಿ ಸುಮ್ಮನೆ ಪ್ರಚಾರ ಮಾಡಿ ನಮ್ಮ ಹುಡುಗನನ್ನು (ಯತೀಂದ್ರ) ನಾಯಕನ್ನನ್ನಾಗಿ ಬೆಳೆಸುತ್ತಿದ್ದಾರೆ. ಆರೋಪ ಮಾಡಲಿ ಬಿಡಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಗುರುವಾರ ಉತ್ತರಿಸಿದರು.

ಯತೀಂದ್ರ ಅವರು “ನಾನು ಹೇಳಿದ್ದು ಕ್ಲಿಯರ್ ಮಾಡಿ ಅಪ್ಪ” ಎಂದು ಹೇಳಿರುವ ವಿಡಿಯೋ ವೈರಲ್ ಆಗಿದ್ದು, ಇದು ವರ್ಗಾವಣೆ ದಂಧೆಯ ಪಟ್ಟಿ ಎಂದು ಬಿಜೆಪಿ- ಜೆಡಿಎಸ್ ಆರೋಪ ಮಾಡಿರುವ ಬಗ್ಗೆ ಕೇಳಿದಾಗ ಅವರು ಈ ರೀತಿ ಉತ್ತರಿಸಿದರು:

“ಮಾಜಿ ಶಾಸಕ ತಂದೆಯ ಜವಾಬ್ದಾರಿ ತೆಗೆದುಕೊಂಡು ತಮ್ಮ ಕ್ಷೇತ್ರದ ಶಾಲೆಗಳ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. ನಾನು ಬೆಳಿಗ್ಗೆಯೇ ಆ ವಿಡಿಯೋ ನೋಡಿದೆ. ವರ್ಗಾವಣೆ ದಂಧೆ ಎನ್ನಲು ಅವರು ಯಾವ ಅಧಿಕಾರಿ, ಯಾವ ಹುದ್ದೆ ಎಂದು ಉಲ್ಲೇಖವನ್ನೇ ಮಾಡಿಲ್ಲವಲ್ಲ. ಮಾಜಿ ಶಾಸಕರಾಗಿ ಯತೀಂದ್ರ ಅವರು ಒಂದು ವೇಳೆ ತಮ್ಮ ಕ್ಷೇತ್ರಕ್ಕೆ ಬೇಕಾದ 4-5 ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿಕೊಂಡರೆ ಅದರಲ್ಲಿ ತಪ್ಪೇನಿದೆ?

ಬಿಜೆಪಿ- ಜೆಡಿಎಸ್ ನವರಿಗೆ ಮಾಡಲು ಕೆಲಸವಿಲ್ಲ. ಯತೀಂದ್ರ ಅವರು ಆಶ್ರಯ ಸಮಿತಿ ಅಧ್ಯಕ್ಷರು. ಒಂದಷ್ಟು ಶಾಲೆಗಳಿಗೆ ಸಿಎಸ್ಆರ್ ಅನುದಾನದ ಅಡಿಯಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ವಿವೇಕಾನಂದ ಅಥವಾ ಮಹದೇವಪ್ಪ ಎನ್ನುವ ಅಧಿಕಾರಿಗೆ ಶಾಲೆಗಳನ್ನು ಗುರುತಿಸುವ ಜವಾಬ್ದಾರಿ ನೀಡಿದ್ದಾರೆ. ಯಾರೋ ಒಂದಷ್ಟು ಶಾಲೆಗಳ ಹೆಸರನ್ನು ಬದಲಾಯಿಸಿದ ಕಾರಣ, ಸ್ಥಳೀಯರು ದೂರು ನೀಡಿದ್ದರು. ಅದಕ್ಕೆ ಯತೀಂದ್ರ ಅವರು ಇಂತಿಷ್ಟು ಹಳ್ಳಿಗಳ ಶಾಲೆಗಳಿಗೆ ಸೌಲಭ್ಯ ನೀಡುತ್ತೇವೆ ಎಂದು ಮಾತುಕೊಟ್ಟಿದ್ದು, ಅದರಂತೆ ಜನ ಸಂಪರ್ಕ ಸಭೆಯಲ್ಲಿಯೇ ಕರೆ ಮಾಡಿ ಮಾತನಾಡಿದ್ದಾರೆ. ಆಶ್ರಯ ಸಮಿತಿ ಅಧ್ಯಕ್ಷರಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರವಿರುತ್ತದೆ.

ನಾನು ಅನೇಕ ಕೆಲಸಗಳನ್ನು ನನ್ನ ಕ್ಷೇತ್ರಗಳಲ್ಲಿ ಮಾಡಲು ಆಗುವುದಿಲ್ಲ, ಅವುಗಳನ್ನು ನನ್ನ ಸಹೋದರ, ಸಂಸದ ಸುರೇಶ್ ನೋಡಿಕೊಳ್ಳುತ್ತಾರೆ. ನಮ್ಮ ಕ್ಷೇತ್ರದ ಜನ ಮನೆ, ಹಸು, ಕುರಿ ಬೇಕು ಎಂದು ಮನವಿ ಸಲ್ಲಿಸಿರುತ್ತಾರೆ. ಆ ಅರ್ಜಿಗಳನ್ನು ನೋಡಿ ಸಹಿ ಹಾಕಿ ಕಳಿಸುತ್ತೇನೆ. ನನ್ನ ಕ್ಷೇತ್ರಗಳ ಕೆಲಸಗಳನ್ನು ಹೀಗೆಯೇ ಮಾಡುವುದು. ಬಗರ್ ಹುಕುಂ ಸಮಿತಿಗೆ ನಾನು ಅಧ್ಯಕ್ಷನಾಗಲು ಆಗುವುದಿಲ್ಲ, ಅದರ ಬದಲು ಸ್ಥಳೀಯ ನಾಯಕರಿಗೆ ಜವಾಬ್ದಾರಿ ನೀಡುತ್ತೇವೆ.”

ಪ್ರಶ್ನೋತ್ತರ

ಕುಮಾರಸ್ವಾಮಿ ಅವರು ತಮ್ಮ ʼಎಕ್ಸ್ʼ ಖಾತೆಯಲ್ಲಿ ಕಲೆಕ್ಷನ್ ಕಿಂಗ್ ಅಪ್ಪ, ಕಲೆಕ್ಷನ್ ಪ್ರಿನ್ಸ್ ಮಗ ಎಂದು ಆರೋಪ ಮಾಡಿದ್ದಾರೆ ಎಂದು ಕೇಳಿದಾಗ, “ಕುಮಾರಸ್ವಾಮಿ ಅದೇ ಧ್ಯಾನದಲ್ಲಿ ಇದ್ದು, ತಮ್ಮದೇ ಅನುಭವ, ಆಚಾರ, ವಿಚಾರದ ಬಗ್ಗೆಯೇ ಮಾತನಾಡುತ್ತಾರೆ” ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ವರ್ಗಾವಣೆ ದಂಧೆ ನಡೆಯುತ್ತಲೇ ಇದೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ “ವರ್ಗಾವಣೆ ಪ್ರಕ್ರಿಯೆ ನಿಂತು ಎಷ್ಟು ದಿನಗಳಾದವು, ಎಲ್ಲಿ ನಡೆಯುತ್ತಿದೆ ವರ್ಗಾವಣೆ? ಯತೀಂದ್ರ ವರ್ಗಾವಣೆ ಬಗ್ಗೆ ಮಾತನಾಡಿದ್ದಾರೆಯೇ?” ಎಂದು ಮರು ಪ್ರಶ್ನಿಸಿದರು.

ಹೊಸ ಅಧ್ಯಕ್ಷರ ಕೈ, ಕಾಲು ಹಿಡಿದುಕೊಂಡು ಪಕ್ಷ ಕಟ್ಟಲಿ

ಸಿಎಂ ಹುದ್ದೆ ಖಾಲಿಯಿದ್ದು, ಅದನ್ನು ಸಿಎಂ ಅವರ ಮಗನೇ ನೋಡಿಕೊಳ್ಳುತ್ತಾನೆ ಎಂದು ಬಿಜೆಪಿ ಹೇಳಿರುವ ಬಗ್ಗೆ ಕೇಳಿದಾಗ “ಅವರೆಲ್ಲಾ ಹತಾಶೆಯ ಸ್ಥಿತಿಯಲ್ಲಿದ್ದಾರೆ. ಏನು ಬೇಕಾದರೂ ಹೇಳಿಕೊಳ್ಳಲಿ ಬಿಡಿ. ಹೊಸದಾಗಿ ಅಧ್ಯಕ್ಷರಾಗಿರುವವರ ಬಳಿ ರಾಜಿ ಮಾಡಿಕೊಂಡು, ಅವರ ಕೈ, ಕಾಲು ಕಟ್ಟಿಕೊಂಡು ಬಿಜೆಪಿಯವರು ಪಕ್ಷ ಕಟ್ಟಲಿ. ಹೊಸ ಅಧ್ಯಕ್ಷರಿಗೂ ಒಳ್ಳೆಯದಾಗಲಿ” ಎಂದು ಕುಹಕವಾಡಿದರು.

ಕುಮಾರಸ್ವಾಮಿ ಈ ಕೆಲಸ ಮಾಡಿದ್ದಾರೆ ಎಂದು ನಾನು ಹೇಳಿಲ್ಲ

ವಿದ್ಯುತ್ ಕಳ್ಳ ಎಂದು ಹೇಳಿ ಕುಮಾರಸ್ವಾಮಿ ಅವರ ವಿರುದ್ದ ಕೀಳು ಮಟ್ಟದ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ ಎನ್ನುವ ಬಗ್ಗೆ ಕೇಳಿದಾಗ “ಈ ವಿಚಾರವಾಗಿ ತಲೆಹಾಕಬೇಡಿ ಎಂದು ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ. ಕುಮಾರಸ್ವಾಮಿ ಈ ಕೆಲಸ ಮಾಡಿದ್ದಾರೆ ಎಂದು ನಾನು ಹೇಳಿಲ್ಲ, ಯಾರೋ ಗುತ್ತಿಗೆದಾರನಿಗೆ ಅಲಂಕಾರ ಮಾಡು ಎಂದು ಹೇಳಿರುತ್ತಾರೆ, ಅವರು ಮಾಡಿರುವ ಕೆಲಸವಾಗಿರುತ್ತದೆ.

ನನ್ನ ಕಾರನ್ನು ಚಾಲಕನೊಬ್ಬ ಅಪಘಾತ ಮಾಡುತ್ತಾನೆ. ಆಗ ಜನ ಡಿ.ಕೆ.ಶಿವಕುಮಾರ್ ಕಾರು ಅಪಘಾತವಾಯಿತು ಎನ್ನುತ್ತಾರೆ ಹೊರತು, ಚಾಲಕನ ತಪ್ಪು ಎಂದು ಯಾರೂ ಹೇಳುವುದಿಲ್ಲ. ನಾನು ಸಹ 25 ವರ್ಷಗಳ ಹಿಂದೆ ಸಿನಿಮಾದವರಿಗೆ ಒಂದು ಮನೆಯನ್ನು ಬಾಡಿಗೆ ಕೊಟಿದ್ದೆ, ಒಂದಷ್ಟು ತೊಂದರೆಗಳಾಗಿ ಅದರ ಮೂಲ ಮಾಲೀಕನ ಮೇಲೆ ಪ್ರಕರಣ ದಾಖಲಾಗಿತ್ತು. ಆದರೆ ಆ ಮನೆಯನ್ನು ಮೂಲ ಮಾಲೀಕ ಮಾರಾಟ ಮಾಡಿಬಿಟ್ಟಿದ್ದರು ಹೀಗೆ ನಮಗೆ ಗೊತ್ತಿಲ್ಲದೆ ಒಂದಷ್ಟು ತೊಂದರೆಗಳು ಆಗುತ್ತವೆ.

ಕುಮಾರಸ್ವಾಮಿ ಅವರು ಬಹಳ ದೊಡ್ಡ ತನದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಒಂದಷ್ಟು ಜನ ನನ್ನ ಬಗ್ಗೆಯೂ ಬೇಲಿ ಹಾಕಿಕೊಂಡಿದ್ದಾನೆಂದು ಆರೋಪ ಮಾಡುತ್ತಾರೆ. ಬೇಲಿ, ಬಂಡೆ ಎಂದು ಮಾತನಾಡುವವರು ಅದು ಯಾವುದು ಎಂದು ತೋರಿಸಲಿ. ರಾಜಕಾರಣದಲ್ಲಿ ಇದನ್ನೆಲ್ಲಾ ನಾವು ಅರಗಿಸಿಕೊಳ್ಳುತ್ತೇವೆ” ಎಂದು ಹೇಳಿದರು.

ಬುಧವಾರ ರಾತ್ರಿ ಜೆಡಿಎಸ್ ಎಂಎಲ್ಎ ನಿಮ್ಮನ್ನು ಭೇಟಿಯಾಗಿದ್ದಾರೆಯೇ ಎಂದಾಗ “ಯಾವುದೇ ಜೆಡಿಎಸ್ ಶಾಸಕರು ನನ್ನನ್ನು ಭೇಟಿಯಾಗಿಲ್ಲ, ಮಾತನಾಡಿಲ್ಲ. ಅವರುಗಳು ಏನಾದರೂ ಸಣ್ಣ- ಪುಟ್ಟ ಕೆಲಸಗಳು ಇದ್ದರೆ ಬರುತ್ತಾರೆ. ಅವರ ಕೆಲಸ ಮಾಡಿ ಕಳಿಸುತ್ತೇನೆ. ಆದರೆ ಯಾರ ಬಳಿಯೂ ನಾನು ಮಾತನಾಡಿಲ್ಲ. ಸದ್ಯಕ್ಕೆ ಯಾವುದೇ ಶಾಸಕರು ಬರುತ್ತಿಲ್ಲʼ ಎಂದರು.

ಗೋಪಾಲಯ್ಯ ಮತ್ತು ಎಸ್.ಟಿ.ಸೋಮಶೇಖರ್ ನಿಮಗೆ ಮುಂಬೈನಿಂದ ಕರೆ ಮಾಡಿದ್ದರು ಎಂದು ಕೇಳಿದಾಗ “ಇದರ ಬಗ್ಗೆ ಕುಮಾರಣ್ಣನ ಬಳಿ ಕೇಳಿ” ಎಂದು ಉತ್ತರಿಸಿದರು.

ಸಿಎಂ ಮಗನ ವಿಚಾರವಾಗಿ ವಿರೋಧ ಪಕ್ಷಗಳು ದಾರಿ ತಪ್ಪಿಸುತ್ತಿದ್ದಾರೆಯೇ ಎಂದು ಕೇಳಿದಾಗ “ಸಿದ್ದರಾಮಯ್ಯ ಅವರಿಗೆ 40 ವರ್ಷಗಳ ರಾಜಕೀಯ ಅನುಭವವಿದೆ. ಜೆಡಿಎಸ್- ಬಿಜೆಪಿಯವರನ್ನು ಕೇಳಿ ರಾಜಕಾರಣ ಮಾಡುವ ಅವಶ್ಯಕತೆ ಅವರಿಗಿಲ್ಲ” ಎಂದು ಉತ್ತರಿಸಿದರು.

Related Articles

ಇತ್ತೀಚಿನ ಸುದ್ದಿಗಳು