ವಿಜಯಪುರ: “ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ತೀವ್ರ ಸ್ಪರ್ಧೆ ಒಡ್ಡುತ್ತಿದ್ದು, ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ, ಬಿ.ವೈ. ವಿಜಯೇಂದ್ರ ಅವರ ಬದಲಾವಣೆ ಖಚಿತ. ನಾವೆಲ್ಲರೂ ಸಂತೋಷದಿಂದ ಬಿಜೆಪಿಗೆ ಸೇರುವುದು ಉಚಿತ,” ಎಂದು ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವಿಜಯೇಂದ್ರ ಅವರನ್ನು ಬದಲಾಯಿಸಬೇಕು ಎಂಬ ಕಾರಣಕ್ಕಾಗಿಯೇ ಹೊಸ ಅಧ್ಯಕ್ಷರ ಘೋಷಣೆ ವಿಳಂಬವಾಗುತ್ತಿದೆ. ಬಲಿಷ್ಠ ಹೈಕಮಾಂಡ್ ಇದ್ದಾಗಲೂ ಕರ್ನಾಟಕದಲ್ಲಿ ಈ ವಿಳಂಬವಾಗುತ್ತಿದೆ ಎಂದರೆ ವಿಜಯೇಂದ್ರಗೆ ವ್ಯಾಪಕ ವಿರೋಧವಿದೆ ಎಂದರ್ಥ. ಅಲ್ಲದೆ, ಸೋಮಣ್ಣ ಕೇಂದ್ರ ಸಚಿವರಾಗಿರುವುದರಿಂದ ಅಮಿತ್ ಶಾ ಅವರನ್ನು ಪದೇ ಪದೇ ಭೇಟಿ ಮಾಡುತ್ತಿರಬಹುದು,” ಎಂದರು.
“ನಾನಿಲ್ಲದ ಕಾರಣ ವಿಜಯಪುರಕ್ಕೆ ವಿಜಯೇಂದ್ರ ಬರುತ್ತಿದ್ದಾನೆ. ಆಗಸ್ಟ್ 2 ರಂದು ಬಿಜೆಪಿ ವಿಭಾಗ ಮಟ್ಟದ ಕಾರ್ಯಕ್ರಮದ ಹೆಸರಿನಲ್ಲಿ ವಿಜಯೇಂದ್ರ ವಿಜಯಪುರಕ್ಕೆ ಭೇಟಿ ನೀಡುತ್ತಿದ್ದಾನೆ. ನಾನು ಪಕ್ಷದಿಂದ ಹೊರಗಿರುವ ಕಾರಣಕ್ಕಾಗಿಯೇ ವಿಜಯಪುರವನ್ನು ವಿಜಯೇಂದ್ರ ಈ ಸಭೆ ಮಾಡಲು ಆಯ್ಕೆ ಮಾಡಿಕೊಂಡಿದ್ದಾನೆ,” ಎಂದು ಯತ್ನಾಳ್ ತಿಳಿಸಿದರು.