ಬೆಂಗಳೂರು: ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ನಟ ದರ್ಶನ್ ಅಭಿಮಾನಿಗಳ ವಿರುದ್ಧ ಸೋಮವಾರ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಸಂಜೆ 5 ಗಂಟೆ ಸುಮಾರಿಗೆ ಇನ್‌ಫೆಂಟ್ರಿ ರಸ್ತೆಯಲ್ಲಿರುವ ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ ರಮ್ಯಾ, ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರನ್ನು ಭೇಟಿಯಾಗಿ ಐದು ಪುಟಗಳ ದೂರು ಸಲ್ಲಿಸಿದರು. ಅಶ್ಲೀಲ ಸಂದೇಶಗಳನ್ನು ಕಳುಹಿಸಿದ 43 ಇನ್‌ಸ್ಟಾಗ್ರಾಮ್ ಪುಟಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ, ಸೀಮಂತ್ ಕುಮಾರ್ ಸಿಂಗ್ ಅವರು ನಗರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಕಾನೂನು ಕ್ರಮಕ್ಕೆ ರಮ್ಯಾ ಆಗ್ರಹ
ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕೆ ನಟ ದರ್ಶನ್ ಅಭಿಮಾನಿಗಳು ಅಶ್ಲೀಲವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ರಮ್ಯಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಇದು ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿದ್ದು, ಅವಾಚ್ಯ ಶಬ್ದಗಳಿಂದ ಬೆದರಿಕೆ ಹಾಕಲಾಗಿದೆ. ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಮ್ಯಾ ಒತ್ತಾಯಿಸಿದ್ದಾರೆ.
ಅಶ್ಲೀಲ ಮೆಸೇಜ್‌ಗೆ ರಮ್ಯಾ ಕೆಂಡಾಮಂಡಲ
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ರಮ್ಯಾ, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ಸಂಬಂಧಿಸಿ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂದು ನಾನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದೆ. ಈ ಪೋಸ್ಟ್ ಆಧರಿಸಿ ಕೆಲವರು ಟ್ರೋಲ್ ಮಾಡಿದ್ದರು. ಇನ್ನೂ ಕೆಲವರು ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾರೆ. ಸೆಲೆಬ್ರಿಟಿಗಳಾದ ನಮಗೆ ಟ್ರೋಲ್ ಇರುವುದು ಸಹಜ. ಆದರೆ ಈ ಮಟ್ಟಿಗೆ ನನಗೆ ಎಂದಿಗೂ ಅನುಭವವಾಗಿರಲಿಲ್ಲ. ಹಾಗಾದರೆ ರೇಣುಕಾಸ್ವಾಮಿ ಕಳುಹಿಸಿದ ಮೆಸೇಜ್‌ಗೂ, ನೀವು ಕಳುಹಿಸಿದ ಮೆಸೇಜ್‌ಗೂ ಏನು ವ್ಯತ್ಯಾಸ ಎಂದು ಪೋಸ್ಟ್ ಮಾಡಿದ ಕಿಡಿಗೇಡಿಗಳ ವಿರುದ್ಧ ರಮ್ಯಾ ಕೆಂಡಾಮಂಡಲವಾದರು.
ಮಹಿಳೆಯರ ಗೌರವಕ್ಕೆ ಚ್ಯುತಿ
ಅಸಭ್ಯ ಸಂದೇಶಗಳು ಮಹಿಳೆಯರ ಗೌರವಕ್ಕೆ ಚ್ಯುತಿ ತರುತ್ತಿವೆ. ಇಂತಹ ಮನಸ್ಥಿತಿಯಿಂದಲೇ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಇದು ಸಮಾಜಕ್ಕೆ ಮಾರಕವಾಗಿದೆ. ಹೆಣ್ಣು ಮಕ್ಕಳ ಪರವಾಗಿ ನಾನು ಇಂದು ಧ್ವನಿ ಎತ್ತಿದ್ದೇನೆ. ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದಾಗ ಕೋಪಗೊಳ್ಳುವ ದರ್ಶನ್ ಫ್ಯಾನ್ಸ್, ಬೇರೆ ಹೆಣ್ಣು ಮಕ್ಕಳಿಗೆ ಕಳುಹಿಸಬಹುದಾ? ಮಹಿಳೆಯರ ಹೆಸರು ಹಾಗೂ ಫೋಟೋ ಬಳಸಿ ಕೆಲವರು ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದಾರೆ. ಇಂತಹ ವಿಷಯಗಳಿಗೆ ಹೆಣ್ಣು ಮಕ್ಕಳು ಹೆದರುತ್ತಾರೆ. ಯಾಕೆಂದರೆ, ಅವರ ಚಾರಿತ್ರ್ಯವಧೆಗೆ ಮುಂದಾಗುತ್ತಾರೆ ಎಂದು ರಮ್ಯಾ ಹೇಳಿದರು.
ನನ್ನ ನ್ಯಾಯಯುತ ಹೋರಾಟಕ್ಕೆ ಚಿತ್ರರಂಗ ಸೇರಿದಂತೆ ಹಲವರಿಂದ ಬೆಂಬಲ ದೊರೆತಿದೆ. ಪ್ರಥಮ್ ಮತ್ತು ವಿನಯ್ ರಾಜ್‌ಕುಮಾರ್ ನೇರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ರಾಜ್ಯ ಮಹಿಳಾ ಆಯೋಗ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವುದು ಹೋರಾಟಕ್ಕೆ ಬಲ ತುಂಬಿದೆ. ಜತೆಗೆ ‘ಫಿಲಂ ಇಂಡಸ್ಟ್ರೀಸ್ ಫಾರ್ ರೈಟ್ಸ್ ಅಂಡ್ ಈಕ್ವಾಲಿಟಿ’ (FIRE) ಬೆಂಬಲ ವ್ಯಕ್ತಪಡಿಸಿರುವುದಕ್ಕೂ ರಮ್ಯಾ ಧನ್ಯವಾದ ತಿಳಿಸಿದ್ದಾರೆ.
ಮಹಿಳಾ ಆಯೋಗದಿಂದ ಪೊಲೀಸ್ ಆಯುಕ್ತರಿಗೆ ದೂರು
ಮತ್ತೊಂದೆಡೆ, ನಟಿ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿರುವ ಸಂಬಂಧ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿ, ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.