Home ರಾಜಕೀಯ ಭ್ರಷ್ಟಾಚಾರ ಆರೋಪದ ಮೇಲೆ ಯಡಿಯೂರಪ್ಪ ವಿಚಾರಣೆ ಆದೇಶ ; ಬಿಜೆಪಿ ತಂತ್ರಗಾರಿಕೆಯ ಭಾಗ.!

ಭ್ರಷ್ಟಾಚಾರ ಆರೋಪದ ಮೇಲೆ ಯಡಿಯೂರಪ್ಪ ವಿಚಾರಣೆ ಆದೇಶ ; ಬಿಜೆಪಿ ತಂತ್ರಗಾರಿಕೆಯ ಭಾಗ.!

0

ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ಆರೋಪದ ಮೇಲಿನ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ಸೂಚಿಸಿರುವುದು ಒಂದು ಬೆಳವಣಿಗೆ ಆದರೆ ರಾಜಕೀಯ ದೃಷ್ಟಿಯಿಂದ ಈ ಬೆಳವಣಿಗೆ ಹಲವಷ್ಟು ಅನುಮಾನ ಹುಟ್ಟಲು ನಾಂದಿ ಹಾಡಿದೆ. ಅದರಲ್ಲೂ ಇದು ಬಿಜೆಪಿ ಮೇಲಿನ ಯಡಿಯೂರಪ್ಪ ಮತ್ತು ಕುಟುಂಬದ ಹಿಡಿತ ತಪ್ಪಿಸಲು ಬಿಜೆಪಿ ಹೂಡಿರುವ ತಂತ್ರಗಾರಿಕೆ ಎಂಬುದು ಬಿಜೆಪಿ ಪಡಸಾಲೆಯಲ್ಲೇ ಕೇಳಿಬಂದಿರುವ ಮಾತಾಗಿದೆ.

ಬಿಡಿಎ ವಸತಿ ಯೋಜನೆಯ ಅನುಷ್ಠಾನದಲ್ಲಿ ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರು ಲಂಚ ಪಡೆದಿದ್ದಾರೆ ಎನ್ನುವ ಆರೋಪದ ಮೇಲೆ ಹೈಕೋರ್ಟ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆಗೆ ಅಸ್ತು ಎಂದಿದೆ. ಇಲ್ಲಿಯವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಾಲಯ ನಿನ್ನೆಯ ದಿನ ಪ್ರಕಟಿಸಲಾಗಿದೆ.

ಕ್ರಿಮಿನಲ್ ಪ್ರಕರಣದ ಅಡಿಯಲ್ಲಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್.ಸುನೀಲ್ ದತ್ ಯಾದವ್ ಅವರ ನ್ಯಾಯಪೀಠ ಪರಿಶೀಲಿಸಿ ನಂತರ ಪ್ರಕರಣದ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ಸೂಚಿಸಿದೆ. ಪ್ರಕರಣದ ಅಡಿಯಲ್ಲಿ ಈ ಬೆಳವಣಿಗೆ ಸಹಜ ಎನಿಸಿದರೂ ರಾಜಕೀಯವಾಗಿ ಯಡಿಯೂರಪ್ಪ ಮತ್ತು ಕುಟುಂಬದವರನ್ನು ಕಟ್ಟಿ ಹಾಕುವ ತಂತ್ರ ಬಿಜೆಪಿಯಿಂದಲೇ ನಡೆದಿದೆ ಎಂಬ ಅನುಮಾನ ದಟ್ಟವಾಗಿದೆ.

ರಾಜ್ಯ ವಿಧಾನಸಭಾ ಚುನಾವಣೆ ಇನ್ನೇನು ಕೆಲವೇ ತಿಂಗಳಲ್ಲಿ ಶುರುವಾಗುವ ಈ ಹಂತದಲ್ಲಿ ಯಡಿಯೂರಪ್ಪ ಮೇಲಿನ ಈ ಪ್ರಕರಣ ಮುಂದಿನ ದಿನಗಳಲ್ಲಿ ಬಹುತೇಕ ಪರಿಣಾಮಕಾರಿ ತಿರುವು ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ಯಡಿಯೂರಪ್ಪ ಅವರನ್ನು ಬಿಜೆಪಿ ಸಂಸದೀಯ ಮಂಡಳಿಗೆ ಆಯ್ಕೆ ಮಾಡಿದ್ದರೂ ಅದೊಂದು ಮೂಗಿನ ಮೇಲೆ ತುಪ್ಪ ಸವರುವ ಕೆಲಸ ಎಂಬುದು ಮೇಲ್ನೋಟಕ್ಕೇ ಸಾಭೀತಾಗಿದೆ. ಆ ಮೂಲಕ ಯಡಿಯೂರಪ್ಪರಿಗೆ ಸ್ಥಾನಮಾನವೂ ಕೊಟ್ಟಂತಾಗಬೇಕು, ಇನ್ನೊಂದು ಕಡೆಯಲ್ಲಿ ನ್ಯಾಯಾಂಗದ ವಿಚಾರಣೆ ಮೂಲಕ ಇಕ್ಕಟ್ಟಿಗೂ ಸಿಕ್ಕಿಸಿದಂತಾಗಬೇಕು ಎಂಬುದು ಬಿಜೆಪಿ ಒಳ ಲೆಕ್ಕಾಚಾರ ಎನ್ನಲಾಗಿದೆ.

ಇಡೀ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ನಾಯಕರ ಮೇಲಿನ ವ್ಯಾಪಕ ಭ್ರಷ್ಟಾಚಾರ, ವಿವಿಧ ಪ್ರಕರಣದ ಮೇಲೆ ಅವರ ಮೇಲಿರುವ ದೂರುಗಳ ಹಿನ್ನೆಲೆಯಲ್ಲಿ ಎಷ್ಟೇ ಆರೋಪ ಕೇಳಿ ಬಂದರೂ ಸಧ್ಯದ ವ್ಯವಸ್ಥೆಯಲ್ಲಿ ಅವರನ್ನು ಮುಟ್ಟದಂತೆ ತನಿಖೆಗಳನ್ನು ರಾಜಕೀಯ ಪ್ರಭಾವ ಬಳಸಿ ತಡೆ ಹಿಡಿಯಲಾಗುತ್ತಿದೆ. ಸಧ್ಯಕ್ಕೆ ದೇಶದ ಆಡಳಿತ ಪರಿಸ್ಥಿತಿಯನ್ನು ಮೇಲ್ನೋಟಕ್ಕೆ ಗಮನಿಸಿದರೂ ಐಟಿ, ಇಡಿ, ಸಿಬಿಐ ಯಂತಹ ಸರ್ಕಾರಿ ತನಿಖಾ ಸಂಸ್ಥೆಗಳು ಕೇವಲ ಬಿಜೆಪಿಯೇತರ ಪಕ್ಷಗಳ ನಾಯಕರ ಮೇಲಿನ ತನಿಖೆಗಷ್ಟೇ ಸೀಮಿತವಾಗಿವೆ. ಅಷ್ಟರ ಮಟ್ಟಿಗೆ ಬಿಜೆಪಿ ತನ್ನೆಲ್ಲಾ ಪ್ರಭಾವವನ್ನು ರಾಜಕೀಯವಾಗಿ ಬಳಸಿದೆ. ಅಂತಹದ್ದರಲ್ಲಿ ಯಡಿಯೂರಪ್ಪ ಮೇಲಿನ ಭ್ರಷ್ಟಾಚಾರ ಆರೋಪದ ವಿಚಾರಣೆಗೆ ಹೈಕೋರ್ಟ್ ಸೂಚಿಸಿದ ಬೆನ್ನಲ್ಲೇ ಯಡಿಯೂರಪ್ಪ ಬಣದಲ್ಲೇ ಈ ರೀತಿಯಾಗಿ ಅನುಮಾನ ಹುಟ್ಟುವಂತಾಗಿದೆ.

ಮುಂದಿನ ದಿನಗಳಲ್ಲಿ ಇದೇ ಪ್ರಕರಣ ಯಡಿಯೂರಪ್ಪ ಅವರ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂಬುದೂ ರಾಜಕೀಯ ಪಂಡಿತರ ಲೆಕ್ಕಾಚಾರ. ಈ ರೀತಿಯಾಗಿ ಬಿಜೆಪಿ ಹಂತಹಂತವಾಗಿ ಯಡಿಯೂರಪ್ಪ ಮೇಲಿನ ಹಿಡಿತವನ್ನು ಸಡಿಲಗೊಳಿಸುತ್ತಿರುವುದು ಯಡಿಯೂರಪ್ಪ ಬಣ್ಣಕ್ಕೆ ನುಂಗಲಾರದ ತುತ್ತಾಗಿದೆ.

You cannot copy content of this page

Exit mobile version