ಹೌದು, ಇದು ಗಂಡಸರ ಸಾಮ್ರಾಜ್ಯ. ಯಾವುದೇ ಡೌಟ್ ಬೇಡ!

“..ಭಾರತದಂತಹ ದೇಶದ ರಾಜಕೀಯದಲ್ಲಿ ಹೆಣ್ಣುಗಳಿಗೆ ಪ್ರವೇಶವಿಲ್ಲ ಅಂತೇನಿಲ್ಲ. ಪ್ರವೇಶ ಖಂಡಿತ ಇದೆ. ಆದ್ರೆ, ಅಧಿಕಾರದ ಬಾಗಿಲಿನಿಂದ ಅಲ್ಲ — ಗಂಡಸರ ಸೇವೆಗೆ ಮೀಸಲಿಟ್ಟಿರುವ ಬಾಗಿಲುಗಳಿಂದ…” ಸುರಭಿ ರೇಣುಕಾಬಿಕೆ ಅವರ ವಿಡಂಬನಾತ್ಮಕ ಬರಹ

ಒಬ್ಬ ರಾಜಕಾರಣಿಯ ಮಗಳಾಗಿದ್ದರೆ, ಅಪ್ಪ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸಬೇಕು. ಅಪ್ಪನ ರಾಜಕೀಯವೇ ತನ್ನ ರಾಜಕೀಯ, ಅಪ್ಪನ ಅಭಿಪ್ರಾಯವೇ ತನ್ನ ಅಭಿಪ್ರಾಯ. ಸ್ವಂತ ಧ್ವನಿ, ಸ್ವಂತ ನಿಲುವು, ಸ್ವಂತ ವ್ಯಕ್ತಿತ್ವ ಇವೆಲ್ಲ ಇದ್ದುಬಿಟ್ರೆ ಕಷ್ಟ ಕಷ್ಟ. ಯಾಕೆಂದ್ರೆ, ರಾಜಕಾರಣಿಯ ಮಗಳು ಪ್ರಶ್ನೆ ಕೇಳುವುದಕ್ಕಿಂತ ವಿಧೇಯಳಾಗಿರುವುದನ್ನೇ ನಮ್ಮ ಸಮಾಜ ಇಷ್ಟ ಪಡುತ್ತೆ ಕಣ್ರೀ .

ಇನ್ನು ರಾಜಕಾರಣಿಯ ಪ್ರೇಯಸಿಯಾಗಿದ್ದರೆ, ಆಕೆಯ ಪಾತ್ರ ಇನ್ನೂ ಸಿಂಪಲ್ಲು. ಪ್ರೇಮಿಯ ಪಕ್ಕ ಚೆನ್ನಾಗಿ ಡ್ರೆಸ್ ಮಾಡಿಕೊಂಡು ನಿಲ್ಲಬೇಕು. ನಗಬೇಕು. ಅಗತ್ಯವಿದ್ದಾಗ ಫೋಟೋಗೆ ಪೋಸ್ ಕೊಡಬೇಕು. ಆಕೆಗೆ ರಾಜಕೀಯ ತಿಳಿದಿದೆಯೇ, ಅಭಿಪ್ರಾಯವಿದೆಯೇ, ಸಾಮರ್ಥ್ಯವಿದೆಯೇ ಎಂಬುದು ಯಾರಿಗೂ ಬೇಕಿಲ್ಲ. ನೋಡಲು ಚೆನ್ನಾಗಿರುವ ‘ಗೊಂಬೆ’ಯಾಗಿದ್ರೆ ಸಾಕು! ಹಾ.., ಅವ್ರ ಬಾಯಿ ಮುಚ್ಚಿಸೋದು ಕೂಡ ಅಷ್ಟೇ ಸಿಂಪಲ್.‌ ಅವಗವಾಗ ರೇಷ್ಮೆ ಸೀರೆನೋ, ಗೋಲ್ಡ್‌ ರಿಂಗೋ ಪಂಗೋ, ಒಂದು ಟ್ರಿಪ್ಪಿಗೋ ಕರೆದುಕೊಂಡ್ರೆ ಬೇಜಾನ್‌ ಆಗೋಯ್ತು.

ಹೆಂಡತಿಯಾಗಿಬಿಟ್ಟರಂತೂ ಪಾತ್ರವೇ ಬೇರೆ ಲೆವೆಲ್ ಬಿಡಿ. ಮನೆಗೆ ಬರೋ ಅತಿಥಿಗಳಿಗೆ ಮೂರು ಹೊತ್ತು ಕಾಫಿ, ತಿಂಡಿ ಕೊಡಬೇಕು; ಎಲ್ಲರಿಗೂ ಸ್ಮೈಲ್ ಕೊಡಬೇಕು; ಕೈಮುಗಿದು ನಮಸ್ಕಾರ ಮಾಡಬೇಕು; ಕಾರ್ಯಕ್ರಮಗಳಲ್ಲಿ ಗಂಡನ ಹಿಂದೆ ಎರಡು ಹೆಜ್ಜೆ ಅಂತರ ಕಾಯ್ದುಕೊಂಡು ನಡೆಯಬೇಕು. ನಂತರ ಮತ್ತೆ ಪರದೆಯ ಹಿಂದೆ ಸರಿದುಕೊಳ್ಳಬೇಕು.

ಎಷ್ಟೇ ಆಗಲಿ, ಗಂಡ ರಾಜಕಾರಣಿ ಅಲ್ಲವೇ! ಹೆಂಡತಿ ಅವನ ಪಕ್ಕ ಬಂದು ಸಮಾನವಾಗಿ ಕುಂತುಬಿಟ್ರೆ, ಗಂಡನ ಮರ್ಯಾದೆ ಏನಾಗ್ಬೇಡ?‌ ಚೇ ಬಿಡ್ತು ಅನ್ನಿ. ಆಕೆನೂ ರಾಜಕೀಯದ ಬಗ್ಗೆ ಮಾತನಾಡಲು ಶುರು ಮಾಡಿಬಿಟ್ರೆ ಇನ್ನೂ ಡೇಂಜರ್ರು. ಜನ ಸುಮ್ನೆ ಬಿಡ್ತಾರ ? ಆ ಹೆಂಗ್ಸಿಗೆ ಅದೆಷ್ಟು ಸೊಕ್ಕು ಕಣ್ರೀ ‘ಗಂಡಗಿಂತ ಜಾಸ್ತಿ ಮಾತಾಡ್ತಾಳೆ’ ಅಂದುಬಿಟ್ರೆ ? ಅಲ್ವುರ ?

ಆದ್ರೆ ಡೋಂಟ್‌ ವರಿ ಮಾಡ್ಕೊಬೇಡಿ. ಇಷ್ಟೆಲ್ಲ ರೂಲ್ಸುಗಳನ್ನ ಸರಿಯಾಗಿ ಪಾಲಿಸಿಬಿಟ್ರೆ…, ಸಮಾಜದಿಂದ ಆಕೆಗೆ ‘ಗಂಡನಿಗೆ ತಕ್ಕ ಹೆಂಡತಿ’ ಎಂಬ ಅದೃಶ್ಯ ಅವಾರ್ಡ್‌ ಅಂತೂ ಗ್ಯಾರಂಟಿ. ಅದಕ್ಕೇನು loss ಇಲ್ಲ!

ಇನ್ನು ರಾಜಕಾರಣಿಯ ತಾಯಿಯಾಗಿಬಿಟ್ಟರೆ — ಓಹ್! ಆ ಗೌರವವೇ ಬೇರೆ ಬಿಡಿ. ನೆನಸ್ಕೊಂಡ್ರೆ, ಕಣ್ಣಲ್ಲಿ ಆನಂದ ಭಾಷ್ಪ ಉಕ್ಕಿ ಉಕ್ಕೀ ಹರೀತದೆ. ಇಡೀ ಊರು ಆಕೆಯನ್ನು ‘ಮಾದರಿ ಹೆಣ್ಣು’ ಎಂದು ಗುರುತಿಸುತ್ತೆ. ಇನ್ನೊಂದು ಹೆಜ್ಜೆ ಮುಂದೆ ಹೋಗಿ ‘ಊರಿಗೇ ತಾಯಿ’ ಎಂದು ಗೌರವಿಸುತ್ತದೆ. ಮಗ ಅಧಿಕಾರದಲ್ಲಿದ್ದರೆ ತಾಯಿಯ ತ್ಯಾಗದ ಕಥೆಗಳೂ, ಅವರ ಹೆಸರಲ್ಲಿ ಪುಸ್ತಕಗಳೂ ಹುಟ್ಟಿಕೊಳ್ಳುತ್ತವೆ. ಒಂದೊಂದ್ಸಲ ಲಕ್‌ ಇದ್ರೆ, ಸ್ಟಾಚ್ಯೂ ಕೂಡ.

ಆದ್ರೆ ಅದೇ ತಾಯಿ, ಅದೇ ಹೆಂಡತಿ, ಅದೇ ಮಗಳು, ಅದೇ ಪ್ರೇಯಸಿ ಸ್ವತಃ ಅಧಿಕಾರದ ಕುರ್ಚಿಯ ಕಡೆ ನಡೆಯೋಕೆ ಶುರು ಮಾಡಿದ್ರೆ ಮಾತ್ರ Storyಯಲ್ಲಿ twist !!!

“ಅವಳ್ಗೇನ್‌ ಗೊತ್ತು ರಾಜಕೀಯ. ಹೋಗಿ ಹೋಗಿ ಕಸಮುಸ್ರೆ ತಿಕ್ಕೋರನ್ನ ಅಧಿಕಾರದಲ್ಲಿ ಕೂರಿಸಿದ್ರೆ ಹೀಗೆ ಆಗೋದು ನೋಡಿ?”
“ಓ ಇವ್ಳಿಗೆ ಈ ಪೋಸ್ಟಾ ? ನೋಡ್ರಪ್ಪ…ಸೊಂದಿಪಂದಿಲಿ ಯಾವ ಮಿನಿಸ್ಟ್ರುನ ಅಡ್ಜಸ್ಟ್‌ ಮಾಡಿಕೊಂಡು, ಯಾರ ಸಪೋರ್ಟ್‌ ಪಡೆದು ಇಲ್ಲಿಗೆ ಬಂದವ್ಳೋ ಆವಮ್ಮ, ಯಾವನಿಗ್ಗೊತ್ರೋ”
“ ಅಯ್ಯಾ..,ಮನೆ ನೋಡಿಕೊಂಡಿದ್ರೆ ಸಾಕಿತ್ತಲ್ವೇ. ಯಾವನ್‌ ಇವಳನ್ನ ಆಚೆ ಬಿಟ್ಟೋನು. ಗಂಡ್ಸಾ ಅವ್ನು?”
“ಇವಳಿಗ್ಯಾಕೆ ಅಧಿಕಾರದ ಆಸೆ ಯಾಕೆ. ಹೆಣ್ಮಕ್ಕಳು ಎಲ್ಲಿ ಬಿದ್ದಿರ್ಬೇಕೋ, ಅಲ್ಲೇ ಬಿದ್ದಿರ್ಬೇಕು. ಸದ್ರ ಕೊಟ್ರೆ ನೋಡಿ, ಏನೇನು ಡಿಮ್ಯಾಂಡ್‌ ಇಡ್ತಾರೆ?”
ಅಲ್ಲಿಂದ ನೆಕ್ಟ್ಸ್‌, ಹೆಣ್ಣಿನ ಸಾಮರ್ಥ್ಯಕ್ಕಿಂತ ಅವಳ ಖಾಸಗಿ ಬದುಕಿನ ತನಿಖೆಯೇ ದೊಡ್ಡ ರಾಜಕೀಯ ಚರ್ಚೆಯಾಗುತ್ತದೆ.

ಹಾಗಾದ್ರೆ ಹೆಣ್ಣುಗಳಿಗೆ ಸಾಮಾಜಿಕ ಬದುಕಿನಲ್ಲಿ, ರಾಜಕೀಯದಲ್ಲಿ ಚಾನ್ಸೇ ಇಲ್ವಾ?
ಯಾಕಿಲ್ಲ! ಧಾರಾಆಆಆಆಆಆಳವಾಗಿ ಇದೆ!
ಎಲೆಕ್ಷನ್ ಟೈಮಲ್ಲಿ, ಮನೆಮನೆಗೆ ಹೋಗಿ ಕ್ಯಾಂಪೇನ್ ಮಾಡೋಕೆ ಹೆಣ್ಮಕ್ಕಳು ಬೇಡ್ವೇ ? ಬಿಸಿಲಲ್ಲಿ ಬೀದಿ ಬೀದಿ ತಿರುಗಿ, ಇವ್ರ ಪರವಾಗಿ “ ಅಣ್ಣಾ ವೋಟ್‌ ಹಾಕಿ, ಅಕ್ಕಾ ವೋಟ್‌ ಹಾಕಿ, ಬ್ರದರ್‌ ನಮ್‌ ನಾಯಕರಿಗೇ ವೋಟ್‌ ಹಾಕಿ ಪ್ಲೀಸ್‌ ಅಂತ ಕ್ಯಾಂಪೇನ್‌ ಮಾಡಬೇಡ್ವೇ ?. ಪಕ್ಷದ ಬಾವುಟ ಹಿಡ್ಕೊಂಡು ಬೀದಿ ಬೀದಿ ಸುತ್ಲಿಲ್ಲ ಅಂದ್ರೆ ಹೆಂಗ್ಹೇಳಿ ? . ಜನರನ್ನು ಸಭೆಗೆ ಕರ್ಕೊಂಡು ಬರೋಕೆ ಹೆಣ್ಮಕ್ಕಳೇ ಸರಿ. ಅವ್ರುದ್ದು ಸ್ವೀಟ್‌ ವಾಯ್ಸ್‌ ಇರ್ತದೆ. ಫೋನ್‌ ಮಾಡಿದ್ರೆ ಜನ ಹಂಗೇ ಕರಗಿ ಡುಬುಕ್‌ ಅಂತ ಹಳ್ಳಕ್‌ ಬಿದ್ದುಬಿಡ್ತರೆ. ದಿನಗೂಲಿ ಕೊಟ್ಟರೆ, ಗಂಡಸ್ರಿಗಿಂತ, ಹೆಂಗಸ್ರೇ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಾರೆ ಅಲ್ವುರಾ ?

ಸೋಷಿಯಲ್ ಮೀಡಿಯಾದಲ್ಲಿ ಏನ್‌ ಕಮ್ಮಿ ಇದಾವ ಹೆಣ್ಣೈಕ್ಳು ? ಯಪ್ಪಾ…,ಅವ್ರವ್ರ ನಾಯಕರ ಪರ ಜೈಕಾರ ಹಾಕೋದಿಕ್ಕೆ, ಪೋಸ್ಟ್ ಶೇರ್ ಮಾಡೋದಕ್ಕೆ, ಕಾಮೆಂಟ್ ಮಾಡೋಕೆ, ಗಂಡಸ್ರಷ್ಟೇ ಇಕ್ವಲ್ಲಾಗಿ ಬಕೇಟು ಹಿಡಿಯೋಕೆ, ಆಪೋಸಿಟ್‌ ಪಾರ್ಟಿ ವಾಲೆಂಟಿಯರ್ಸ್‌ ಜೊತೆ, ಬೆಂಬಲಿಗರ ಜೊತೆ ಜಗಳ ಮಾಡೋಕೆ, ಹಲ್ಕಲ್ಕ ಬೈಸ್ಕೊಳ್ಳೋದಕ್ಕೆ, ಟ್ರೋಲ್‌ ಆಗೋದಕ್ಕೆ ಕೂಡ ಹೆಣ್ಮಕ್ಕಳೇ ಬೇಕು. ಅಲ್ಲಿ ಗಂಡಸ್ರು ಮಜ ಅನ್ನಿಸೋದಿಲ್ಲ.

ಸಭೆ-ಸಮಾರಂಭಗಳಲ್ಲಂತೂ ಹೆಣ್ಣುಮಕ್ಕಳು ಕಡ್ಡಾಯ. ಇಲ್ಲದಿದ್ದರೆ ಕಾರ್ಯಕ್ರಮಕ್ಕೆ ‘ಕಳೆ’ ಹೇಗೆ ಬರುತ್ತೆ ನೀವೇ ಹೇಳಿ? ಅಚ್ಕಟ್ಟಾಗಿ ಸೀರೆ ಉಟ್ಕೊಂಡು, ಹೂ ಮುಡ್ಕೊಂಡು, ಲಿಪ್‌ಸ್ಟಿಕ್ ಹಾಕಿಕೊಂಡು, ಮೊದಲ ಸಾಲಿನಲ್ಲಿ ಕುಳಿತ್ರೇನೆ, ಆ ವೇದಿಕೆಗೂ ಒಂದ್ ಕಳೆ, ನಾಯಕರ ಫೋಟೋಗಳಿಗೂ ಕಳೆ. ಕ್ಯಾಮೆರಾ ತಿರುಗಿದಾಗ ಮಹಿಳೆಯರು‌ ಸುಂದ್ರುವಾಗಿ ಕಾಣ್ಬೇಕು‌ ಅಷ್ಟೇ; ಪಕ್ಷಕ್ಕೆ ಮಹಿಳಾ ಪರ ಕಾಳಜಿ ಇದೆ ಎಂದು ತೋರಿಸ್ಕೋಬೇಕಲ್ವೇ ?

ಆದ್ರೆ ಅಧಿಕಾರ?

ಅಯ್ಯೋ, ಅದು ಮಾತ್ರ ನಮ್‌ ತಾಯಾಣೆಗೂ ಕೇಳ್ಬೇಡಿ!
ಪಕ್ಷದ ಬಾವುಟ ಹೊರೋದಕ್ಕೆ ಹೆಣ್ಣು ಬೇಕು;
ಆ ಬಾವುಟದ ಕೆಳಗಿನ ಅಧಿಕಾರದ ಕುರ್ಚಿಗೆ ಮಾತ್ರ ಗಂಡು ಬೇಕು.
ಮತ ಕೇಳೋಕೆ ಹೆಣ್ಣು ಬೇಕು;
ಮತಗಳಿಂದ ಬಂದ ಅಧಿಕಾರ ಹಂಚಿಕೊಳ್ಳುವಾಗ ಮಾತ್ರ ಗಂಡಸರೇ ಬೇಕು.
ವೇದಿಕೆಯ ಮುಂದೆ ಜನ ತುಂಬಿಸೋದಕ್ಕೆ ಹೆಣ್ಣು ಬೇಕು;
ವೇದಿಕೆಯ ಮಧ್ಯದ ಕುರ್ಚಿಯಲ್ಲಿ ಕುಳಿತು ನಿರ್ಧಾರ ತೆಗೆದುಕೊಳ್ಳೋದಕ್ಕೆ ಮಾತ್ರ ಗಂಡು ಬೇಕು.
ಮಹಿಳಾ ಮತದಾರರು ಬೇಕು. ಮಹಿಳಾ ಕಾರ್ಯಕರ್ತರು ಬೇಕು. ಮಹಿಳಾ ಅಭಿಮಾನಿಗಳು ಬೇಕು. ಮಹಿಳಾ ಪ್ರಚಾರಕರು ಬೇಕು. ಮಹಿಳಾ ಮುಖಗಳು ಪೋಸ್ಟರ್‌ಗಳಲ್ಲಿ ಲಕ ಲಕ ಅಂತ ಹೊಳೀತಿರ್ಬೇಕು. ಆದ್ರೆ, ಅಧಿಕಾರದ ಕೇಂದ್ರದಲ್ಲಿ ಸ್ವತಂತ್ರವಾಗಿ ನಿಲ್ಲುವ ಮಹಿಳೆ ಮಾತ್ರ ಬೇಡ ಗುರೂ ಬೇಡ….!

ಆ ವಿಷ್ಯಕ್ಕೆ ಬಂದಾಗ ಪಕ್ಷಗಳ ಸಿದ್ಧಾಂತಗಳು ಬೇರೆಬೇರೆಯಾಗಿರಬಹುದು, ಬಾವುಟಗಳ ಬಣ್ಣ ಬೇರೆ ಇರಬಹುದು, ಘೋಷಣೆಗಳು ಬೇರೆ ಇರಬಹುದು. ಆದರೆ ಹೆಣ್ಣನ್ನು ನೋಡುವ ದೃಷ್ಟಿಯಲ್ಲಿ ಮಾತ್ರ ಭಾರತೀಯ ಗಂಡಸರು ಒಗ್ಗಟ್ಟಾಗಿ ಒಮ್ಮತ ಒಂದ್ಕಡೆ ಸೇರಿಬಿಡ್ತದೆ. ಹೆಣ್ಣು ಅಂದುಬಿಟ್ರೆ ಸಾಕು, ಒಂತರ ವಿಚಿತ್ರವಾದ ಪಕ್ಷಾತೀತ ಒಗ್ಗಟ್ಟು ಉದ್ಭವ ಆಗಿಬಿಡುತ್ತೆ.

ಯಾಕೆಂದ್ರೆ, ಇದು ಇನ್ನೂ ಪುರುಷಾಧಿಪತ್ಯವನ್ನು ಸಂಪ್ರದಾಯದ ಹೆಸರಿನಲ್ಲಿ ಹೊತ್ತುಕೊಂಡು ನಡೆಯುತ್ತಿರುವ ಸಮಾಜ sorry, ತೆವಳುತ್ತಿರುವ ಸಮಾಜ.

ಇಲ್ಲಿ ಹೆಣ್ಣು ಗಂಡಿನ ಜೊತೆ ನಡೆಯಬಹುದು — ಆದ್ರೆ ಅವನಿಗಿಂತ ಮುಂದೆ ನಡೆಯಬಾರದು.
ಅವನಿಗಾಗಿ ಕೆಲಸ ಮಾಡಬಹುದು — ಆದ್ರೆ ಅವನ ಅಧಿಕಾರವನ್ನು ಪ್ರಶ್ನಿಸಬಾರದು.
ಅವನ ಗೆಲುವಿಗಾಗಿ ಹೋರಾಡಬಹುದು — ಆದ್ರೆ ಗೆದ್ದ ನಂತರ ಅಧಿಕಾರದಲ್ಲಿ ಸಮಪಾಲು ಕೇಳ್ಬಾರದು.
ಗಂಡಸಿನ ರಾಜಕೀಯವನ್ನು ಬೆಳೆಸಬಹುದು — ಆದರೆ ತನ್ನದೇ ರಾಜಕೀಯ ಅಸ್ತಿತ್ವವನ್ನು ಕಟ್ಟಿಕೊಳ್ಳಲು ಹೊರಟ್ರೆ, ಅವಳ ‘ಮಿತಿ’ ನೆನಪಿಸಲಾಗುತ್ತದೆ.
ಅವಳು ವಿಧೇಯಳಾಗಿರುವವರೆಗೆ ‘ಸಂಸ್ಕಾರವಂತ ಹೆಣ್ಣು’.
ಪ್ರಶ್ನೆ ಕೇಳಿದ ಕ್ಷಣ ‘ಅಹಂಕಾರಿ, ದುರಹಂಕಾರಿ, ಜಾಸ್ತಿ ಮಾತಾಡಿದ್ರೆ ನಡತೆಗೆಟ್ಟವಳುʼ
ಸ್ವಂತ ನಿರ್ಧಾರ ತೆಗೆದುಕೊಂಡರೆ ‘ಹಠಮಾರಿ’.
ಅಧಿಕಾರ ಕೇಳಿದ್ರೆ ‘ಅಧಿಕಾರದ ಆಸೆ’.
ಗಂಡಿನ ಸಮಾನವಾಗಿ ನಿಂತರೆ — ಸಮಾಜಕ್ಕೆ ಅದೇ‌ ದೇಶದ ಅತ್ಯಂತ ದೊಡ್ಡ ಸಮಸ್ಯೆ!

ಒಟ್ಟಿನಲ್ಲಿ ವ್ಯವಸ್ಥೆಯ ಸಂದೇಶ ಬಹಳ ಸಿಂಪಲ್ಲು ಕಣ್ರೀ

“ಹೆಣ್ಣೇ, ರಾಜಕೀಯಕ್ಕೆ ಬಾ. ನಮ್ಮ ಪರ ಪ್ರಚಾರ ಮಾಡು. ನಮ್ಮ ಬಾವುಟ ಹೊತ್ತುಕೋ. ನಮ್ಮ ಗೆಲುವಿಗೆ ದುಡಿ. ನಮ್ಮ ಸಭೆಗೆ ಕಳೆ ತಂದುಕೊಡು. ನಮ್ಮ ನಾಯಕನಿಗಾಗಿ ಜೈಕಾರ ಹಾಕು. ಬೇಕಾದರೆ ನಮ್ಮ ವೋಟ್‌ಬ್ಯಾಂಕ್ ಕೂಡ ಆಗು. ಆದರೆ ಅಧಿಕಾರದ ಕುರ್ಚಿಯ ವಿಷಯಕ್ಕೆ ಮಾತ್ರ ಬರಬೇಡ. ನಿಂಗೆ ಒಳ್ಳೇದಲ್ಲ. ಇದು ಇನ್ನೂ ಗಂಡಸರ ಸಾಮ್ರಾಜ್ಯ!”

Related Articles

ಇತ್ತೀಚಿನ ಸುದ್ದಿಗಳು