Home ರಾಜ್ಯ ಶಿವಮೊಗ್ಗ ನದಿಯ ಬಳಿ ಬೈಕ್‌ ಬಿಟ್ಟು ನಾಪತ್ತೆಯಾದ ಯುವಕ: ಆತ್ಮಹತ್ಯೆ ಶಂಕೆ

ನದಿಯ ಬಳಿ ಬೈಕ್‌ ಬಿಟ್ಟು ನಾಪತ್ತೆಯಾದ ಯುವಕ: ಆತ್ಮಹತ್ಯೆ ಶಂಕೆ

0

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಪದವಿ ಓದುತ್ತಿದ್ದ ಯುವಕನೋರ್ವ ತುಂಗಾ ನದಿಯ ದಡದಲ್ಲಿ ಬೈಕ್‌ ಬಿಟ್ಟು ಕಣ್ಮರೆಯಾಗಿದ್ದಾನೆ. ಯುವಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಸಂಶಯ ವ್ಯಕ್ತವಾಗುತ್ತಿದೆ.

ತೀರ್ಥಹಳ್ಳಿ ಸಮೀಪದ ಇಂದಾವರ ಗ್ರಾಮದ ಜಯದೀಪ್ (24 ವರ್ಷ) ನಾಪತ್ತೆಯಾಗಿದ್ದು, ಆತನ ವಾಟ್ಸಾಪ್‌ ಸ್ಟೇಟಸ್‌ ನೋಡಿದರೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಬಲವಾಗುತ್ತಿದೆ. ಯುವಕ ಓದಿನಲ್ಲಿ ಚುರುಕಾಗಿದ್ದು ಪರೀಕ್ಷೆಯಲ್ಲಿ ರ್ಯಾಂಕ್‌ ಬರುವ ಸಾಧ್ಯತೆಯಿತ್ತು ಎನ್ನಲಾಗಿದೆ. ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣ ಎಂದು ಮಾಧ್ಯಮಗಳು ವರದಿ ಮಾಡಿವೆ.

ಜಯದೀಪ್‌ ತನ್ನ ವಾಟ್ಸಾಪ್‌ ಸ್ಟೇಟಸ್ಸಿನಲ್ಲಿ “ಇನ್ನು ಸ್ವಲ್ಪ ದಿನದಲ್ಲಿ ಡಿಗ್ರಿ ಮುಗಿಯುತ್ತಿತ್ತು. ನಾನು ಒಳ್ಳೆಯ ವಿದ್ಯಾರ್ಥಿ ಕೂಡ, ರ‍್ಯಾಂಕ್‌ ಬರುವ ಚಾನ್ಸ್ ಕೂಡ ಇತ್ತು. ಆದರೆ ಅದು ನೆನಪು ಮಾತ್ರ. ಅಪ್ಪ ಅಮ್ಮ ಸಂಜಯ್ ನನ್ನನ್ನು ಕ್ಷಮಿಸಿ ಬಿಡಿ ನಿಮ್ಮ ಆಸೆ ನಂಬಿಕೆ ಎಲ್ಲಾ ಹಾಳು ಮಾಡುತ್ತಿದ್ದೀನಿ ಅಂತ ಬೇಜಾರಾಗಬೇಡಿ, ನನ್ನ ಸಾಲ ನಿಮ್ಮ ಮೇಲೆ ಹಾಕುತಿದ್ದೀನಿ ಅಂತ ಸಿಟ್ಟು ಮಾಡಿಕೊಳ್ಳಬೇಡಿ ನನ್ನ ಬೈಕ್ ಮಾರಿ ಸ್ವಲ್ಪ ಅಡ್ಜಸ್ಟ್ ಮಾಡಿ ಎಲ್ಲರಿಗೂ ಕೊಡಿ.

ನನ್ನ ಜೀವನನೇ ಒಂದು ರೀತಿಯ ಉಪ್ಪಿಲ್ಲದ ಊಟದ ರೀತಿ, ಸುಮಾರು 3 ವರ್ಷದಿಂದ ಆಗಿದೆ. ನನ್ನ ಜೀವನದಲ್ಲಿ ವಯಸ್ಸು 24 ಆದರೂ ಹುಡುಗಿ ಅಂತ ಇಲ್ಲ, ಸಣ್ಣ ಸಣ್ಣ ಹುಡುಗರಿಗೆಲ್ಲಾ ಲವರ್ ಇದ್ರೂ ನನಗೆ ಇಲ್ಲ ಅನ್ನೋ ಬೇಜಾರು, ಒನ್ ಸೈಡ್ ನಾನು ಲವ್ ಮಾಡಿದ್ದೆ ಅವಳು ಒಪ್ಪಿಲ್ಲ. ಒಂದು ಸಣ್ಣ ತಪ್ಪು ಇವತ್ತು ನನ್ನ ಸಾವಿನ ಕಡೆ ತಳ್ಳುತ್ತಿದೆ.

ಒಳ್ಳೆ ಕೆಲಸ ಹುಡುಕುವುದರಲ್ಲೂ ವಿಫಲನಾದೆ ಇತ್ತೀಚಿನ ದಿನಗಳಲ್ಲಿ ಬರಿ ಸಾಲ, ಮಾನಸಿಕ ಖಿನ್ನತೆ ನನ್ನ ಎಲ್ಲಾದರೂ ದೂರ ಹೋಗುವಂತೆ ಪ್ರೆರೇಪಿಸಿತು. ಊರು ಬಿಡೋಣ ಅಂತ ಮಾಡಿದೆ ಆದರೆ ಊರು ಬಿಡೊದಕ್ಕಿಂತ ಸಾವೇ ಮುನ್ನುಗ್ಗಿ ಕರೆಯಿತು. ಎಲ್ಲರಿಗೂ ಸಾರೀ ಪ್ಲೀಸ್ ಕ್ಷಮಿಸಿ ಬಿಡಿ ನನ್ನ ಸಾವಿಗೆ ನನ್ನ ಕೆಟ್ಟ ನಿರ್ಧಾರಗಳೇ ಕಾರಣ” ಎಂದು ಬರೆದುಕೊಂಡಿದ್ದಾನೆ.

ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವ ಕಾರಣ ಶವ ಹುಡುಕುವ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಸ್ಥಳೀಯ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಶವ ಹುಡುಕುವಲ್ಲಿ ನಿರತವಾಗಿದೆ. ತೀರ್ಥಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇನ್ನಷ್ಟು ಮಾಹಿತಿಯನ್ನು ಎದುರು ನೋಡಲಾಗುತ್ತಿದೆ.

ನಿಮ್ಮಲ್ಲಿ ಆತ್ಮಹತ್ಯೆಯ ಭಾವನೆ ಮೂಡುತ್ತಿದ್ದಲ್ಲಿ ದಯವಿಟ್ಟು ಕೆಳಗಿನ ಸಹಾಯವಾಣಿಗಳನ್ನು ಸಂಪರ್ಕಿಸಿ. ಜೀವ ಅಮೂಲ್ಯ ದಯವಿಟ್ಟು ದುಡುಕಿ ತೀರ್ಮಾನ ಕೈಗೊಳ್ಳಬೇಡಿ.

ಆತ್ಮಹತ್ಯೆ ತಡೆ ಸಹಾಯವಾಣಿ: ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ ಇಂತಿದೆ 080 – 25497777.

You cannot copy content of this page

Exit mobile version