ಐಪಿಎಲ್ ಗೆಲುವಿನ ಸಂಭ್ರಮಾಚರಣೆ ವೇಳೆ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬನಿಗೆ ಚಾಕು ಇರಿತದ ಘಟನೆ ನಡೆದಿದೆ. ಗೆಲುವಿನ ಸಂಭ್ರಮದಲ್ಲಿ ಇರುವಾಗ ಹಿಂಬದಿಯಲ್ಲಿ ಬಂದು ಯುವಕನೊಬ್ಬನಿಗೆ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾಗಿದ್ದಾರೆ.
ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಸಂಭ್ರಮಾಚರಣೆ ಮಾಡುತ್ತಾ ಯುವಕ ಬಾರ್ ಗೆ ತೆರಳುತ್ತಿರುವಾಗ ದುಷ್ಕರ್ಮಿಗಳು ಚಾಕು ಇರಿದಿದ್ದಾರೆ.ಆದರೆ ಚಾಕು ಇರಿತಕ್ಕೆ ಒಳಗಾಗಿರುವ ಯುವಕ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಯುವಕ ಪ್ರತಿರೋಧ ತೋರಿದ ಬಳಿಕ ಘಟನಾ ಸ್ಥಳದಿಂದ ದುಷ್ಕರ್ಮಿಗಳ ಗ್ಯಾಂಗ್ ಪರಾರಿಯಾಗಿದೆ. ಹಲ್ಲೆಗೆ ನಿಖರ ಕಾರಣ ಏನು ಎಂದು ತಿಳಿದು ಬಂದಿಲ್ಲ. ತಕ್ಷಣ ಹಲ್ಲೆಗೆ ಒಳಗಾದಂತಹ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತಂತೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.