ಸಂಸತ್ತು ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026’ ಅನ್ನು ಅಂಗೀಕರಿಸಿದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ರಾತ್ರಿ ಹೊಸ ವೀಡಿಯೊ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅವರು, ಈ ಕಾಯಿದೆಯು ಹೆಚ್ಚು ವಿಶ್ವಾಸಾರ್ಹ ಪರೀಕ್ಷಾ ವ್ಯವಸ್ಥೆಯನ್ನು ನಿರ್ಮಿಸುವ ಮತ್ತು ಪೇಪರ್ ಲೀಕ್ ಮಾಫಿಯಾವನ್ನು ಮಟ್ಟಹಾಕುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಕರೆದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ಮಾತನಾಡಿದ ಪಿಎಂ ಮೋದಿ, ನಮ್ಮ ಪರೀಕ್ಷಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವಂತಹ ವಿಧೇಯಕವನ್ನು ಸಂಸತ್ತು ಅಂಗೀಕರಿಸಿದೆ ಎಂದಿದ್ದಾರೆ. ಗುರುವಾರ ರಾಜ್ಯಸಭೆಯಲ್ಲಿ ಪರೀಕ್ಷಾ ತಿದ್ದುಪಡಿ ವಿಧೇಯಕ (ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ, 2026) ಅಂಗೀಕಾರಗೊಂಡಿದೆ.
‘ಆಂಟಿ-ಪೇಪರ್ ಲೀಕ್ ಬಿಲ್’ ಅಂಗೀಕಾರವಾಗಿರುವುದನ್ನು ಶ್ಲಾಘಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, “ವಿಶ್ವಾಸಾರ್ಹ ಪರೀಕ್ಷಾ ಪದ್ಧತಿಯನ್ನು ನಿರ್ಮಿಸಲು ಒಂದರ ನಂತರ ಒಂದರಂತೆ ನಿರಂತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಟಾಸ್ಕ್ ಫೋರ್ಸ್ ರಚನೆಯಾಗಿರಲಿ, ಫಾಸ್ಟ್ ಟ್ರ್ಯಾಕ್ ಕೋರ್ಟ್ ನಿರ್ಮಾಣವಾಗಿರಲಿ ಅಥವಾ ರಾಜ್ಯಗಳ ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳುವುದಾಗಿರಲಿ,” ಎಂದಿದ್ದಾರೆ.
ಕಳೆದ ಕೆಲವು ದಶಕಗಳಿಂದ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರ ಸರ್ಕಾರವು ಇಂತಹ ಪೇಪರ್ ಲೀಕ್ ಸಮಸ್ಯೆಯನ್ನು ಎದುರಿಸುತ್ತಿದೆ. ಇದರಿಂದ ಮಕ್ಕಳ ಭವಿಷ್ಯಕ್ಕೂ ಕಂಟಕ ಎದುರಾಗುತ್ತಿದೆ ಎಂದು ಅವರು ಹೇಳಿದರು. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ದೇಶಾದ್ಯಂತ – ಎಲ್ಲಾ ರಾಜ್ಯಗಳು ಮತ್ತು ಕೇಂದ್ರದ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಅತ್ಯಗತ್ಯವಾಗಿದೆ. ತಂತ್ರಜ್ಞಾನದ ಹೇರಳ ಬಳಕೆಯೂ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಇನ್ನೊಮ್ಮೆ ಯಾವುದೇ ಪೇಪರ್ ಮಾಫಿಯಾ, ಪೇಪರ್ ಲೀಕ್ ಮಾಡುವ ದಂಧೆಕೋರರು, ದೇಶದ ಮಕ್ಕಳ ಭವಿಷ್ಯದ ಜೊತೆ ಆಟವಾಡುವ ಗ್ಯಾಂಗ್‌ಗಳನ್ನು ಬಿಡುವುದಿಲ್ಲ ಎಂದು ಪ್ರಧಾನಿ ಎಚ್ಚರಿಸಿದ್ದಾರೆ. “ಈಗ ಇವರನ್ನು ಮಟ್ಟಹಾಕಲು ಕಠಿಣ ಕಾನೂನುಗಳ ಅಗತ್ಯವೂ ನಮಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಸಂಸತ್ತಿನಲ್ಲಿ ವಿಧೇಯಕವನ್ನು ಮಂಡಿಸಿದೆವು ಮತ್ತು ನಿಮಗೆ ಮಾತು ನೀಡಿದಂತೆ, ಸಂಸತ್ತಿನ ಉಭಯ ಸೌಧಗಳಲ್ಲಿ ಗರಿಷ್ಠ ಸಂಖ್ಯೆಯ ಸಂಸದರು ಇದರ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಸಮ್ಮತಿ ಸೂಚಿಸಿದ್ದಾರೆ. ಇಂದು ಉಭಯ ಸದನಗಳು ಈ ಕಠಿಣ ಕಾನೂನು ಮತ್ತು ನಿಬಂಧನೆಗಳಿರುವ ವಿಧೇಯಕವನ್ನು ಅಂಗೀಕರಿಸಿವೆ,” ಎಂದು ಪಿಎಂ ಮೋದಿ ತಿಳಿಸಿದ್ದಾರೆ.
