ಪಾಕಿಸ್ತಾನ ಸರ್ಕಾರ ಮತ್ತು ಸೇನೆಗೆ ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ ಆರೋಪದ ಮೇಲೆ ಹರಿಯಾಣದ ಟ್ರಾವೆಲ್ ಬ್ಲಾಗರ್ ಸೇರಿದಂತೆ ಆರು ಭಾರತೀಯರನ್ನು ಪೊಲೀಸರು ಬಂಧಿಸಿದ್ದಾರೆ.
ಇವರ ಜಾಲವು ಹರಿಯಾಣ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಹರಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆರೋಪಿಗಳಲ್ಲಿ “ಟ್ರಾವೆಲ್ ವಿಥ್ ಜ್ಯೋ” ಎನ್ನುವ ಯೂಟ್ಯೂಬ್ ಚಾನೆಲ್ ನಡೆಸುವ ಯುವತಿಯೂ ಸೇರಿದ್ದಾಳೆ.
ಜ್ಯೋತಿ ಕಮಿಷನ್ ಏಜೆಂಟ್‌ಗಳ ಮೂಲಕ ವೀಸಾ ಪಡೆದು 2023ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಭೇಟಿಯ ಸಮಯದಲ್ಲಿ, ಆಕೆ ಹೊಸದೆಹಲಿಯ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಜೊತೆ ನಿಕಟ ಸಂಬಂಧವನ್ನು ಬೆಳೆಸಿಕೊಂಡಿದ್ದಳು.
ಈ ನಡುವೆ, ಸರ್ಕಾರವು ಡ್ಯಾನಿಶ್‌ನನ್ನು ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಿ, ಮೇ 13, 2025ರಂದು ದೇಶದಿಂದ ಹೊರಹಾಕಿತ್ತು. ಡ್ಯಾನಿಶ್ ಜ್ಯೋತಿಯನ್ನು ಪಾಕಿಸ್ತಾನಿ ಗುಪ್ತಚರ ಕಾರ್ಯಾಚರಣೆಗಳಿಗೆ (PIO) ಪರಿಚಯಿಸಿದ ಎಂಬ ಆರೋಪಗಳಿವೆ. ದೆಹಲಿಯಲ್ಲಿದ್ದ ಸಮಯದಲ್ಲಿ ಜ್ಯೋತಿ ಡ್ಯಾನಿಶ್ ಜೊತೆ ಆತ್ಮೀಯಳಾಗಿದ್ದಳು. ಇದು ಇನ್ನಷ್ಟು ಅನುಮಾನಗಳಿಗೆ ಕಾರಣವಾಯಿತು.
ಜ್ಯೋತಿ ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಎನ್‌ಕ್ರಿಪ್ಟ್ ಮಾಡಲಾಗಿರುವ ಪ್ಲಾಟ್‌ಫಾರ್ಮ್‌ಗಳ ಮೂಲಕ ಈ ಏಜೆಂಟ್‌ಗಳೊಂದಿಗೆ ಸಂವಹನ ನಡೆಸುವುದನ್ನು ಮುಂದುವರಿಸಿದ್ದಳು. ಅವಳು ಸಾಮಾಜಿಕ ಮಾಧ್ಯಮದಲ್ಲಿ ಪಾಕಿಸ್ತಾನದ ಬಗ್ಗೆ ಸಕಾರಾತ್ಮಕ ಚಿತ್ರಣವನ್ನು ಪ್ರಸ್ತುತಪಡಿಸಿದ್ದಲ್ಲದೆ, ದೇಶದ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನದೊಂದಿಗೆ ಹಂಚಿಕೊಂಡಿದ್ದಳು.
ಜ್ಯೋತಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 152 ಮತ್ತು 1923 ರ ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ 3, 4 ಮತ್ತು 5 ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಇದನ್ನು ಆಕೆಯೇ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಲ್ಲದೆ, ಈ ಪ್ರಕರಣದಲ್ಲಿ ಪಂಜಾಬ್‌ನ ಮಲೇರ್‌ಕೋಟ್ಲಾದ 32 ವರ್ಷದ ವಿಧವೆ ಗುಜಲಾ, ಯಮೀನ್ ಮೊಹಮ್ಮದ್, ದೇವಿಂದರ್ ಸಿಂಗ್ ಧಿಲ್ಲೋನ್, ಅರ್ಮಾನ್ ಮತ್ತು ಬಾನು ನಸ್ರಿನಾ ಕೂಡ ಸೇರಿದ್ದಾರೆ. ಇವರು ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಗೆ ಸೇರಿದವರು.