Home ದೇಶ ಟಿಎಂಸಿ ತೊರೆದ 2 ತಿಂಗಳಲ್ಲೇ ಯೂಸುಫ್ ಪಠಾಣ್‌ಗೆ ವಿವಾದಿತ ಜಮೀನು ಮಂಜೂರು: ಗುಜರಾತ್ ಸರ್ಕಾರದ ನಿರ್ಧಾರ

ಟಿಎಂಸಿ ತೊರೆದ 2 ತಿಂಗಳಲ್ಲೇ ಯೂಸುಫ್ ಪಠಾಣ್‌ಗೆ ವಿವಾದಿತ ಜಮೀನು ಮಂಜೂರು: ಗುಜರಾತ್ ಸರ್ಕಾರದ ನಿರ್ಧಾರ

0

ವಡೋದರಾ: ತೃಣಮೂಲ ಕಾಂಗ್ರೆಸ್ (TMC) ಪಕ್ಷವನ್ನು ತೊರೆದ ಎರಡು ತಿಂಗಳ ನಂತರ, ಮಾಜಿ ಕ್ರಿಕೆಟಿಗ ಹಾಗೂ ಸಂಸದ ಯೂಸುಫ್ ಪಠಾಣ್ ಅವರಿಗೆ ವಡೋದರಾ ಮಹಾನಗರ ಪಾಲಿಕೆಯ (VMC) ವಿವಾದಿತ 978 ಚದರ ಮೀಟರ್ ನಿವೇಶನವನ್ನು ಮಂಜೂರು ಮಾಡಲು ಗುಜರಾತ್ ಸರ್ಕಾರ ನಿರ್ಧರಿಸಿದೆ. ಎರಡು ವರ್ಷಗಳ ಹಿಂದೆ ಇದೇ ಜಮೀನಿನ ಅಕ್ರಮ ಒತ್ತುವರಿ ಆರೋಪದ ಮೇಲೆ ಪಾಲಿಕೆಯು ಅವರಿಗೆ ನೋಟಿಸ್ ನೀಡಿತ್ತು.

ಗುಜರಾತ್ ಸರ್ಕಾರದ ಆದೇಶದ ಅನ್ವಯ ವಡೋದರಾ ಮಹಾನಗರ ಪಾಲಿಕೆಯ ಭೂ ಆಸ್ತಿ ವಿಭಾಗವು ಈ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು, ಪಾಲಿಕೆಯ ಸ್ಥಾಯಿ ಸಮಿತಿಯ ಮುಂದೆ ಅನುಮೋದನೆಗಾಗಿ ಇರಿಸಿದೆ. ಸರ್ಕಾರದ ಆದೇಶದ ಪ್ರಕಾರ, 978 ಚದರ ಮೀಟರ್ ವಿಸ್ತೀರ್ಣದ ಈ ನಿವೇಶನದಲ್ಲಿ 500 ಚದರ ಮೀಟರ್ ಜಾಗವನ್ನು ವಸತಿ ಬಳಕೆಗಾಗಿ ಯೂಸುಫ್ ಪಠಾಣ್‌ಗೆ ಉಡುಗೊರೆಯಾಗಿ ನೀಡಲಾಗುತ್ತದೆ.

ಉಳಿದ 478 ಚದರ ಮೀಟರ್ ಜಾಗವನ್ನು ವಡೋದರಾ ನಗರಾಭಿವೃದ್ಧಿ ಪ್ರಾಧಿಕಾರವು (VUDA) ನಿಗದಿಪಡಿಸಿದ್ದ ದರದ ಶೇಕಡಾ 55ರಷ್ಟು ರಿಯಾಯಿತಿ ದರದಲ್ಲಿ ಅವರಿಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಈ ನಿರ್ಧಾರವನ್ನು ಯಾವುದೇ ಮುಂದಿನ ನಿದರ್ಶನಗಳಿಗೆ ಪರಿಗಣಿಸಬಾರದು ಹಾಗೂ ಪಾಲಿಕೆಗೆ ಸಮಾನ ಮೌಲ್ಯದ ಪರ್ಯಾಯ ಜಮೀನನ್ನು ರಾಜ್ಯ ಕಂದಾಯ ಇಲಾಖೆ ಒದಗಿಸಲಿದೆ ಎಂದು ಷರತ್ತು ವಿಧಿಸಲಾಗಿದೆ.

ಈ ನಿವೇಶನವು ತಾಂಡಲ್ಜಾ ಪ್ರದೇಶದ ಟೌನ್ ಪ್ಲಾನಿಂಗ್ ಸ್ಕೀಮ್ ನಂ. 22ರಲ್ಲಿ ಪಠಾಣ್ ಕುಟುಂಬದ ನಿವಾಸಕ್ಕೆ ಹೊಂದಿಕೊಂಡಂತಿದೆ. 2012ರಲ್ಲಿ ಯೂಸುಫ್ ಪಠಾಣ್ ಸಾರ್ವಜನಿಕ ಹರಾಜಿಲ್ಲದೆ 99 ವರ್ಷಗಳ ಗುತ್ತಿಗೆಗೆ ಈ ಜಾಗವನ್ನು ಕೋರಿದ್ದರು. ಆದರೆ, 2014ರಲ್ಲಿ ರಾಜ್ಯ ನಗರಾಭಿವೃದ್ಧಿ ಇಲಾಖೆಯು ಈ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಆದಾಗ್ಯೂ, ಜಾಗಕ್ಕೆ ಬೇಲಿ ಹಾಕಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ 2024ರಲ್ಲಿ ಬಿಜೆಪಿ ಆಡಳಿತದ ಪಾಲಿಕೆಯು ಪಠಾಣ್‌ಗೆ ನೋಟಿಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಪಠಾಣ್ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಆದರೆ, ನ್ಯಾಯಾಲಯದ ಹೊರಗೆ ಪ್ರಕರಣ ಇತ್ಯರ್ಥಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 31ರಂದು ಪಠಾಣ್ ತಮ್ಮ ಅರ್ಜಿಯನ್ನು ಹಿಂಪಡೆದುಕೊಂಡಿದ್ದರು. ಇದೀಗ ಪಾಲಿಕೆಯ ಸಾಮಾನ್ಯ ಸಭೆ ಹಾಗೂ ಸ್ಥಾಯಿ ಸಮಿತಿಯ ಔಪಚಾರಿಕ ಅನುಮೋದನೆಯ ಬಳಿಕ ಈ ಜಮೀನು ಅಧಿಕೃತವಾಗಿ ಪಠಾಣ್ ಅವರ ಪಾಲಾಗಲಿದೆ.

You cannot copy content of this page

Exit mobile version