Home Uncategorized ವಿಕಲಾಂಗ ಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಎಲ್ಲವೂ ಸರಿಯಿಲ್ಲ: ಮೋದಿ ಕುರಿತು ಪೋಸ್ಟ್‌ ಹಾಕಿದ ಪ್ರಕಾಶ್ ರಾಜ್‌

ವಿಕಲಾಂಗ ಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಎಲ್ಲವೂ ಸರಿಯಿಲ್ಲ: ಮೋದಿ ಕುರಿತು ಪೋಸ್ಟ್‌ ಹಾಕಿದ ಪ್ರಕಾಶ್ ರಾಜ್‌

0

ಬೆಂಗಳೂರು: ವಿಕಲಾಂಗ ಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಹೇಳುವ ಮೂಲಕ ಚಿತ್ರನಟ ಪ್ರಕಾಶ್ ರಾಜ್ ಅವರು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ವ್ಯಂಗ್ಯವಾಡಿದ್ದಾರೆ.

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಭೆಯಲ್ಲಿ ಹಾಜರಾಗಿದ್ದ ಬಿಜೆಪಿ ನಾಯಕರ ಫೋಟೊವನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ಪ್ರಕಾಶ್ ರಾಜ್, ‘ವಿಕಲಾಂಗ ಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಎಲ್ಲವೂ ಸರಿಯಿಲ್ಲ. ಖಚಿತವಾಗಿ ಏನೋ ಪಿತೂರಿ ನಡೆಯುತ್ತಿದೆ. ಎಲ್ಲರಿಗೂ ವಾರಾಂತ್ಯದ ಶುಭಾಶಯಗಳು.. #justasking’ ಎಂದು ಪೋಸ್ಟ್‌ ಮಾಡಿದ್ದಾರೆ.

ಈಚೆಗೆ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರಕಾಶ ರಾಜ್‌, ‘ಕೇಂದ್ರದಲ್ಲಿ ಆತಂಕವಾದಿಗಳ ಸರ್ಕಾರ ಇದೆ. ಈಗ ಧರ್ಮ, ಜಾತಿ, ಮಂದಿರ ಹಾಗೂ ಮಾಂಗಲ್ಯದ ಬಗ್ಗೆ ಮಾತನಾಡುತ್ತಾರೆ. ಈ ಸರ್ವಾಧಿಕಾರಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು’ ಎಂದು ಹೇಳಿದ್ದರು.

‘ಕೇಂದ್ರ ಸರ್ಕಾರದ ನಾಯಕರು ರಾಜರಂತೆ ಓಡಾಡುತ್ತಾರೆ. ಈಗಿನ ಮಹಾಪ್ರಭು‌ ಕೈ ಮಾಡಿಕೊಂಡು ಓಡಾಡುತ್ತಿದ್ದಾರೆ. ಪುಷ್ಪಕ ವಿಮಾನದಲ್ಲಿ ಓಡಾಡುತ್ತಿದ್ದಾರೆ. ನಮ್ಮನ್ನು ಸ್ಪರ್ಶಿಸದ ವ್ಯಕ್ತಿ ನಮ್ಮ ಸಮಸ್ಯೆ ಅರ್ಥ ಮಾಡಿಕೊಳ್ಳುತ್ತಾರಾ’ ಎಂದು ಪ್ರಧಾನಿ ಮೋದಿ ಅವರನ್ನು ಪರೋಕ್ಷವಾಗಿ ಟೀಕಿಸಿದ್ದರು.

ಕೇಂದ್ರ ಸರ್ಕಾರದಿಂದ ಉದ್ಯೋಗದ ಗ್ಯಾರಂಟಿ ಇಲ್ಲ. ಕಳೆಪೆ ಮಟ್ಟದ ಆಹಾರ ನೀಡುತ್ತಿದೆ. ಎಲ್ಲಾ ಕೆಲಸಕ್ಕೆ ಅಂಗನವಾಡಿ ಕಾರ್ಯಕರ್ತೆಯರನ್ನು ಹಚ್ಚಲಾಗುತ್ತಿದೆ. ಆಗಾಗ ಬಿಟ್ಟಿ ಭಾಗ್ಯ ಕೊಡುವುದು, ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಬೆಂಬಲ ಬೆಲೆ ಕೇಳಿದರೆ ರಸ್ತೆ ಅಗೆದು, ವಾಟರ್ ಗನ್ ಹೊಡೆಯುತ್ತಾರೆ. ಈ ಬಗ್ಗೆ ಮಾತನಾಡಿದರೆ ‘ತುಕಡೇ ತುಕಡೇ ಗ್ಯಾಂಗ್’ ಅಂತಾರೆ. ಚುನಾವಣೆಯ ಚಾಣಕ್ಯ ಈ ಬಗ್ಗೆ ಮಾತನಾಡಲಿ ಎಂದು ಹೇಳಿದ್ದರು.

ಎನ್‌ಡಿಎ ನಾಯಕನನ್ನಾಗಿ ನರೇಂದ್ರ ಮೋದಿ ಅವರನ್ನು ಎನ್‌ಡಿಎ ಸಂಸದರು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ದೇಶ ವಿದೇಶದ ಗಣ್ಯರ ಸಮ್ಮುಖದಲ್ಲಿ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ನಾಳೆ ಭಾನುವಾರ ರಾತ್ರಿ 7.15ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಕಾಶ್‌ ರಾಜ್‌ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

You cannot copy content of this page

Exit mobile version