ಸದಾ ಚಪ್ಪಾಳೆ, ಹೊಗಳಿಕೆಯನ್ನು ಆನಂದಿಸುತ್ತ ಆತ್ಮರತಿಯಲ್ಲಿ ಸುಖಿಸುವ ಸಾಮ್ರಾಟ ನಮೋಗೆ ಬಹುಮತವಿಲ್ಲದ ಅಧಿಕಾರ ಹಿಡಿದಂದಿನಿಂದ ಖಿನ್ನತೆ ಆವರಿಸಿತ್ತು. ವಿಜ್ಞಾನ, ಗಣಿತ ಜ್ಞಾನವನ್ನೆಲ್ಲ ಅರೆದು ಕುಡಿದವನಂತೆ ಬೂಸಿ ಬಿಟ್ಟರೂ ಲೈಕ್ ಒತ್ತಿ, ಫಾರ್ವಡ್ ಮಾಡಿ ಹಾಡಿ ಹೊಗಳುತ್ತಿದ್ದ ಭಕ್ತರೇ ಹಾದಿಬೀದಿಯಲ್ಲಿ ನಿಂತು ಫೇಕು ಮಾಸ್ಟರ್, ಕಿಂಗ್ ಆಫ್ ಕರಪ್ಷನ್ ಎಂದು ಮುಖಕ್ಕೆ ಮಂಗಳಾರತಿ ಎತ್ತುತ್ತಿರುವ ರೀಲ್ಸ್ ಗಳು ನಮೋವನ್ನು ಕಂಗೆಡಿಸಿತ್ತು.
ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮಗಳನ್ನು ಮಾಡಿ ಲೈಮ್ ಲೈಟಿನಲ್ಲಿರೋಣವೆಂದರೆ – ತಾನೇ ಉದ್ಘಾಟಿಸಿದ, ಪಾರ್ಟಿಯ ಖಜಾನೆ ತುಂಬಿಸಿದ ಏರ್ ಪೋರ್ಟಿನ ಚಾವಣಿಗಳು ಆಕಾಶಕ್ಕೆ ಹಾರಿ ಹೋಗುತ್ತಿದ್ದರೆ, ಹೈವೇಗಳು ಒಂದೇ ಮಳೆಗೆ ಬಿರುಕು ಬಿಟ್ಟು ಬಾಯ್ತೆರೆದಿದ್ದವು. ಒಂದು ವರ್ಷವೂ ತುಂಬಿರದ ಹೊಸ, ನಿರ್ಮಾಣ ಹಂತದ ಸೇತುವೆಗಳು ಸ್ಪರ್ಧೆಗೆ ಬಿದ್ದಂತೆ ಸಾಲುಸಾಲಾಗಿ ಧರೆಗುರುಳುತ್ತಿದ್ದವು. ಇನ್ನು ಪರೀಕ್ಷೆ ಹೊತ್ತಲ್ಲಿ ವಿದ್ಯಾರ್ಥಿಗಳನ್ನು ಗುಡ್ಡೆ ಹಾಕಿ ʼಎಕ್ಸಾಮ್ ಪೇ ಚರ್ಚಾʼ ಮಾಡಿ ಪುಕ್ಕಟೆ ಸಲಹೆ ಕೊಡೋಣವೆಂದರೆ ಪ್ರಶ್ನೆಪತ್ರಿಕೆಗಳು ಸೋರಿ ಹೋಗಿ ವಿದ್ಯಾರ್ಥಿಗಳು ರೊಚ್ಚಿಗೆದ್ದು ಬೀದೀಲಿ ಗಲಾಟೆ ಮಾಡುತ್ತಿದ್ದರು. ಮನೆಯಿಂದ ಹೊರ ಹೋಗುವ ಹಾಗೆ ಇರಲಿಲ್ಲ.
ರೂಮಲ್ಲೇ ಕೂತು – ಕಾಂತಿಯಿಂದ ಹೊಳೆಯುತ್ತಿದ್ದ ಮುಖಾರವಿಂದವು ಕಪ್ಪುಗಟ್ಟಿ, ಕನ್ನಡಿಯಲ್ಲಿನ ಪ್ರತಿಬಿಂಬ ನಮೋನನ್ನು ʼಗೆದ್ದು ಸೋತ ಸಾಮ್ರಾಟʼ ಎಂದು ಅಣಕಿಸುತ್ತಿತ್ತು. ಕಾರಿನಲ್ಲಿ ಮುಂದೆ ಆಸೀನವಾದರೆ ಪ್ರಭಾವಳಿಯಾಗಿದ್ದ ಚಾವಣಿ ಲೈಟನ್ನು ತೆಗೆಸಿ, ಜನರಿಗೆ ಹ್ಯಾಪು ಮೋರೆ ತೋರಿಸಲಾಗದೆ ಹಿಂಬದಿಗೆ ಕೂರುವ ದುರ್ದೆಶೆಯನ್ನು ಶಪಿಸುವುದು ಬಿಟ್ಟು ನಮೋಗೆ ಬೇರೆ ಪರಿಹಾರ ಕಾಣಲಿಲ್ಲ.
ಮನೆಯಲ್ಲೇ ಕೂತರೆ ಹುಚ್ಚು ಹಿಡಿಯುತ್ತದೆಂದು ಫಾರಿನ್ ಟೂರ್ ಹೊರಟರೆ ಅಲ್ಲೂ ನಿರಾಶೆ. ಏರ್ ಪೋರ್ಟಲ್ಲಿ ಸ್ವಾಗತ ಕೋರಲು ವಿದೇಶದಲ್ಲಿ ಗಣ್ಯರು ನಾಪತ್ತೆ. ಇನ್ನು ಸ್ವದೇಶಕ್ಕೆ ಮರಳಿದರೆ ತನ್ನ ಪಾರ್ಟಿಯ ಕಮಲಿಗಳೇ ಬೊಕ್ಕೆ ಹಿಡಿದು ನಿಲ್ಲಲು ಅಸಡ್ಡೆ ತೋರಿ ನೊಣ ಹೊಡೆಯುವುದಕ್ಕೂ ಯಾರೂ ಇರುತ್ತಿರಲಿಲ್ಲ.
ಯಾವುದಾದರೂ ಸನ್ನಿವೇಶವನ್ನು ಸೃಷ್ಟಿಸಿ ನಂದಿ ಹೋಗಿದ್ದ ಲೈಮ್ ಲೈಟನ್ನು ಹೇಗೆ ಹೊತ್ತಿಸುವುದೆಂಬ ದೇಶೋದ್ಧಾರದ ಚಿಂತನೆಯಲ್ಲಿ ಮುಳುಗಿದ್ದ ನಮೋಗೆ ಯಾರೋ ಕೂಗಿದಂತಾಯಿತು. “ವಿಶ್ವಗುರು ಚಿರಾಯುವಾಗಲಿ” ಎಂದು ಮುಖ್ಯ ಆಪ್ತಕಾರ್ಯದರ್ಶಿ ಸಂಘೀ ಸಲಾಮು ಮಾಡುತ್ತ ಎದುರಿಗೆ ನಿಂತಿದ್ದ.
“ಮಹಾಸ್ವಾಮಿಗಳೇ…ತಮಗೆ ಸಂತೋಷ ಸುದ್ದಿ. ಲೈಮ್ ಲೈಟಿಗೆ ಮತ್ತೆ ಬರಲು ಸುವರ್ಣಾವಕಾಶ!”
ತನ್ನ ಮನದ ತಳಮಳ ತಿಳಿದದ್ದು ಹೇಗೆ ಎಂದು ಅಚ್ಚರಿಗೊಂಡರೂ “ಲೈಮ್ ಲೈಟಲ್ಲಿ ಇರೋದೆ ನಂಗೆ ಕೆಲ್ಸನಾ? ಜನರೋದ್ಧಾರದ ವಿಚಾರಗಳು ಇಲ್ವಾ? ಅಧಿಕಪ್ರಸಂಗಿ…ಸರಿ…ಏನದು ಸಮಾಚಾರ?” ಎಂದು ಹುಸಿ ಕೋಪ ಪ್ರದರ್ಶಿಸಿದ.
“ಸ್ವಾಮಿಗಳೇ…ಒಲಂಪಿಕ್ ಗೇಮ್ಸ್ ಶೂಟಿಂಗಲ್ಲಿ ನಮಗೆ ಬ್ರಾಂಜ್ ಮೆಡಲ್ ಬಂದಿದೆ!”
“ಓಹ್…ಹೌದಾ! ಒಳ್ಳೆಯ ಸುದ್ದಿ ತಂದಿದ್ದೀಯ. ಇಷ್ಟು ವರ್ಷ ನಾನು ಕಷ್ಟಪಟ್ಟಿದ್ದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ತಗೋ…” ಎಂದು ಕುತ್ತಿಗೆಯಲ್ಲಿದ್ದ ಕಂಠೀಹಾರವನ್ನು ಅವನತ್ತ ಒಗೆದು “ಬೇಗ ಕ್ಯಾಮೆರಾಮೆನ್ನ ಕರೆಸು. ಹಾಗೆ ಆ ಸ್ಪರ್ಧಿಗೆ ಫೋನು ಮಾಡು”
“ಹಲೋ…”
“ಹಲೋ…ಯಾರು?”
“ನಾನಮ್ಮ…ವಿಶ್ವಗುರು…ಭರತಖಂಡದಿಂದ”
“ಹ!…ಖಂಡ?…ಯಾವ ಆಶ್ರಮಕ್ಕೂ ನಾನು ಭಕ್ತೆಯಾಗಿಲ್ಲ….ರಾಂಗ್ ನಂಬರ್”
ಆ ಕಡೆಯಿಂದ ಫೋನ್ ಕಟ್ ಮಾಡಿದ್ದು ನಮೋಗೆ ಕಪಾಳಮೋಕ್ಷ ಆದಂತಾಯಿತು.
“ಮೇಡಮ್…ಪ್ರಧಾನಿ ನಮೋ ಮಾತಾಡ್ತಿರೋದು. ನಿಮ್ಗೆ ಕಂಗ್ರಾಟ್ಸ್ ಹೇಳೋಕೆ” ಮತ್ತೆ ಆಪ್ತಕಾರ್ಯದರ್ಶಿ ಕರೆ ಮಾಡಿದ.
“ಓಹ್…ಸಾರಿ ಸರ್, ಗೊತ್ತಾಗ್ಲಿಲ್ಲ. ಥ್ಯಾಂಕ್ಯು ಸರ್”
“ಪರವಾಗಿಲ್ಲ. ಶೂಟಿಂಗ್ ಅಂದ್ರೆ…ರೀಲ್ಸ… ಶಾರ್ಟ್ ಫಿಲ್ಮಾ ಅಥ್ವಾ ಫೂಚರ್ ಫಿಲ್ಮಾ?”
“ಇಲ್ಲಾ ಸಾರ್…ಅದು ಪಿಸ್ತೂಲ್ ಶೂಟಿಂಗ್….ಟೆನ್ ಮೀಟರ್ ರೇಂಜು”
“ಗನ್ ಶೂಟಿಂಗಾ…ಒಳ್ಳೇದು. ನಮ್ಮ ದೇಶಕ್ಕೆ ಮೆಡಲ್ ತಂದು ವರ್ಲ್ಡ್ ಫೇಮಸ್ ಮಾಡಿದ್ದೀಯ…ಬದಾಯಿ”
“ಥ್ಯಾಂಕ್ಯು ವೆರಿ ಮಚ್…ಸರ್”
“ಬೇಟಿ ಪಡಾವ್…ಬೇಟಿ ಬಚಾವ್…ನನ್ನ ಸ್ಲೋಗನ್ ಸಾರ್ಥಕ ಆಯ್ತು ನೋಡು, ವೆಲ್ ಡನ್…ಹ…ಒಂದ್ ವಿಷ್ಯ ನಿಂಗೆ ಗೊತ್ತಾ? ನಾನೂ ಒಲಂಪಿಕ್ಸ್ ನಲ್ಲಿ ಗೋಲ್ಡ್ ಮೆಡಲ್ ವಿನ್ನರ್!”
“ಗ್ರೇಟ್ ಸರ್…ಗೊತ್ತೇ ಇರಲಿಲ್ಲ!”
“ಹಳೇ ಮಾತು…ಯಂಗ್ ಆಗಿದ್ದಾಗ, ನನ್ನ ಪೂರ್ವಾಶ್ರಮ ಮಾ.ಕೃಪಾಕಟಾಕ್ಷ ಕುಟೀರದ ಅಂತರರಾಷ್ಟ್ರೀಯ ಚಡ್ಡಿ ಒಲಂಪಿಕ್ಸ್ ಕ್ರೀಡಾಸ್ಪರ್ಧೆಯಲ್ಲಿ ನಮ್ಮ ತಾಲ್ಲೂಕಿಗೆ ನಾನೇ ಮೂರು ಬಾರಿ ಗೋಲ್ಡ್ ಮೆಡಲ್ ಗೆದ್ದಿದ್ದೆ”
“ಸೂಪರ್…ಯಾವ ಗೇಮಲ್ಲಿ ಸರ್”
“ಬಹಳ ಟಫ್ ಗೇಮ್…ಹಳಿ ಇಲ್ಲದೆ ಬುಲೆಟ್ ಟ್ರೈನ್ ಬಿಡೋದು…”
ಬುರುಡೆ ಬಿಡುತ್ತಿದ್ದ ನಮೋನ ನಾನ್ ಸ್ಟಾಪ್ ಮಾತಿಗೆ ಆ ತುದಿಯಿಂದ ಪ್ರತಿಕ್ರಿಯೆ ಬರುವುದು ನಿಂತಾಗ, ಸಾಕಷ್ಟು ರೀಲು ಸುತ್ತಿಕೊಂಡ ಡೈರೆಕ್ಟರ್ ಕೊನೆಗೆ ʼಕಟ್…ಕಟ್ʼ ಎಂದಾಗಲೇ ನಮೋ ಮಾತು ನಿಲ್ಲಿಸಿದ.
ಬದಾಯಿ ಹೇಳಿದ ನಮೋನ ರೀಲ್ಸ್ ಸಿಕ್ಕಿದ್ದೇ ತಡ ವೈರಲ್ ಮಾಡಲು ಅಮಿತ ಮನೆಹಾಳ, ರಾಗಾನ ಸಂಸತ್ತು ಭಾಷಣ ನೋಡುವುದರಲ್ಲಿ ಮಗ್ನರಾಗಿದ್ದ ಕೇಸರಿ ಐಟಿ ಸೆಲ್ಲಿನ ಟು ರುಪೀಸ್ ಕೂಲಿಗಳನ್ನು ಕೆಲಸಕ್ಕೆ ಹಚ್ಚಿದ.
ಕನ್ನಡಿ ಮುಂದೆ ನಿಂತಾಗ ಮೈಮೇಲೆ ಮಂದ ಬೆಳಕು ಚೆಲ್ಲಿದ್ದನ್ನು ಕಂಡು ಮುಖವರಳಿಸಿ ʼಬ್ಯಾಕ್ ಟು ಲೈಮ್ ಲೈಟುʼ ಎಂದು ನಮೋ ಗಡ್ಡ ನೀವಿಕೊಳ್ಳುವ ಹೊತ್ತಿಗೆ, ಆಪ್ತಕಾರ್ಯದರ್ಶಿ “ಸ್ವಾಮಿಗಳೇ…. ಮತ್ತೊಂದು ಶುಭ ಸಮಾಚಾರ. ಕುಸ್ತಿಯಲ್ಲಿ ಗೋಲ್ಡ್ ಮೆಡಲ್ ಮಿಸ್ಸಾದರೆ….ಸಿಲ್ವರ್ ಮೆಡಲ್ ಅಂತೂ ಗ್ಯಾರಂಟಿ” ಅಂದ.
“ಕುಸ್ತಿ!” ಶಬ್ಧ ಕಿವಿಗೆ ಬಿದ್ದದ್ದೇ ಅರಳಿದ ನಮೋ ಮುಖ ಕಿವುಚಿದ ಹುಣಸೇ ಹಣ್ಣಾಯಿತು. ಕೈ ಸನ್ನೆ ಮಾಡಿ ಹೊರಡು ಎಂದದ್ದು ಆಪ್ತಕಾರ್ಯದರ್ಶಿಗೆ ʼತೊಲಗಾಚೆ!ʼ ಎನ್ನುವಂತಿತ್ತು.
ತನ್ನ ಬಲಗೈಬಂಟ, ಕುಖ್ಯಾತ ಕಚ್ಚೆಹರುಕ – ತ್ಯಾಜ್ಯ ಅವಲಕ್ಷಣ್ ವಿರುದ್ಧ ಮಹಿಳಾ ಲೈಂಗಿಕ ಶೋಷಣೆ ಆರೋಪ ಮಾಡಿದ್ದೇ ಅಲ್ಲದೇ ರಾಜಧಾನಿಯ ಮೈನ್ ರೋಡಲ್ಲಿ ಟೆಂಟಾಕಿ “ರೇಪಿಸ್ಟ್ ಅನ್ನು ಫೆಡರೇಷನ್ ನಿಂದ ಹೊರ ಹಾಕಿ, ಬೇಟಿ ಬಚಾವ್ ಮಾತನ್ನು ಉಳಿಸಿಕೊಳ್ಳಿ. ಇಲ್ಲಾ ಒಲಂಪಿಕ್ಸ್ ನಲ್ಲಿ ಗೆದ್ದು ನಿಮ್ಮ ಹಿಪಾಕ್ರಸಿಯನ್ನು, ದುರಹಂಕಾರವನ್ನು ಸೋಲಿಸಿಯೇ ಸೋಲಿಸುತ್ತೇನೆ” ಎಂದು ತನಗೆ ಸವಾಲು ಹಾಕಿದ ಮಹಿಳಾ ಪೈಲ್ವಾನರ ಪ್ರತಿಭಟನೆ ನಮೋನ ಕಣ್ಮುಂದೆ ಹಾದು ಹೋಗಿ, ದೇಹ ಬೆಂಕಿಯಾಗಿ, ಉರಿ ಅಸಹನೀಯವಾಯಿತು.
“ನನ್ನನ್ನು ಬೆದರಿಸುವಷ್ಟು ಧೈರ್ಯದ ವೈರಿಗೆ ಪದಕ ಸನ್ಮಾನವೇ? ಅದನ್ನು ತಡೆಯುವುದು ಹೇಗೆ? ಇಲ್ಲಿಯೇ ಆಗಿದ್ದರೆ ಕುತಂತ್ರಿಗೆ ಹೇಳಿ ಇಡಿ, ಐಟಿ, ಸಿಬಿಐಯನ್ನು ಛೂ ಬಿಡಬಹುದಿತ್ತು. ಆ ದೇಶದ ಪ್ರಧಾನಿಗೆ ಹೇಳಿದರೆ ಹೇಗೆ?” ಮುಷ್ಟಿ ಹಿಡಿದು ಯೋಚಿಸುತ್ತ ನಮೋ ಶತಪಥ ಹಾಕಿದ.
ಓಡೋಡಿ ಬಂದ ಆಪ್ತಕಾರ್ಯದರ್ಶಿ “ಘಾತವಾಯಿತು ಮಹಾಸ್ವಾಮಿ…ಪೈಲ್ವಾನ್ ತೂಕ ನೂರೇ ಗ್ರಾಮ್ ಹೆಚ್ಚಾಗಿ ಅವಳನ್ನು ಡಿಸ್ ಕ್ವಾಲಿಫೈ ಮಾಡಿದ್ದಾರೆ!” ಎಂದಾಗ, ನಮೋಗೆ ಕುಣಿಯಬೇಕು ಅನ್ನಿಸಿದರೂ “ಅಯ್ಯೋ…ಎಂಥಾ ದುರ್ವಿಧಿ. ಅದೆಂಥ ರೂಲ್ಸುಗಳು! ಹೋಗಲಿ…ನಾವೇನು ಮಾಡುವಂತಿಲ್ಲ. ಒಂದು ಚೊಂಬು ತಣ್ಣಗಿನ ಹಾಲು ತಗೊಂಬಾ. ಹೊಟ್ಟೆಗೆ ಬೆಂಕಿ ಬಿದ್ದಿದೆ” ಎಂದು, ಹಾಲು ಕುಡಿದು ದೇಹದ ತಾಪಮಾನ ಇಳಿಸಿಕೊಂಡ.
“ಮಗಳೇ…ನೀನು ಚಾಂಪಿಯನ್ನರ ಚಾಂಪಿಯನ್, ನಮ್ಮ ದೇಶದ ಹೆಮ್ಮೆ. ಪದಕ ಕೈತಪ್ಪಿದ್ದಕ್ಕಾಗಿ ನಿನಗಿಂತ ನನಗೆ ಎಷ್ಟು ನೋವಾಗಿದೆ ಎಂದರೆ ಅದನ್ನು ಪದಗಳಲ್ಲಿ ಬರೆಯಲಾಗುತ್ತಿಲ್ಲ. ಧೃತಿಗೆಡಬೇಡ…ನಾವೆಲ್ಲ ನಿನ್ನೊಂದಿಗಿದ್ದೇವೆ” ಎಂದು ತೋರಿಕೆ ಸಂದೇಶ ಹಾಕಿ, ಅತ್ತ ಕ್ರೀಡಾ ಮಂತ್ರಿ ಅಮಾನುಷ್ ಮಂಡೂಕನಿಗೆ ಪೈಲ್ವಾನಳಿಗೆ ವ್ಯಯಿಸಿದ ಖರ್ಚುವೆಚ್ಚವನ್ನು ಪ್ರಕಟಿಸಲು ಚಿತಾವಣೆ ಮಾಡಿದ.
ಪೊಲೀಸರಿಂದ ರಸ್ತೆಲೀ ದರದರ ಎಳೆದಾಡಿಸಿಕೊಂಡು ಅವಮಾನಕ್ಕೆ ಈಡಾಗಿದ್ದ ಕುಸ್ತಿಪಟುವಿನ ಪ್ರತಿಭಟನೆ ಮರೆಯದ ದೇಶದ ವಿವೇಕವಂತರು – ಗೆದ್ದಾಗ ಎಲ್ಲಾ ಸ್ಪರ್ಧಿಗಳಿಗೆ ಅಭಿನಂದಿಸುವಂತೆ ಕುಸ್ತಿಪಟುವಿಗೆ ಶುಭಾಶಯ ಹೇಳದೆ, ಅನರ್ಹಗೊಂಡಾಗ ಲೇವಡಿಸುವಂತೆ ಹಾಕಿದ ಮೊಸಳೆ ಕಣ್ಣೀರಿನ ಸಂದೇಶಕ್ಕೆ ನಮೋನ ಮೇಲೆ ಆಕ್ರೋಶಗೊಂಡರು. ಕ್ಷುಲ್ಲಕ ಕಾರಣಕ್ಕೆ ಪದಕ ಕೈತಪ್ಪಿದ್ದಕ್ಕಾಗಿ ಇಡೀ ದೇಶವೇ ನಿರಾಶಭಾವ ಹೊಂದಿರುವಾಗ, ಪೈಲ್ವಾನಳಿಗೆ ಸರ್ಕಾರ ವ್ಯಯಿಸಿದ್ದ ಹಣದ ಉಲ್ಲೇಖ ಮಾಡಿದ್ದು ನಮೋನ ಸೇಡಿನ ಕ್ರಮವೆಂದು ಖಂಡಿಸಿದರು.
“ಈ ನಮೋ ಒಬ್ಬ ಹೇಡಿ. ಅಸೂಕ್ಷ, ಕಿಡಿಗೇಡಿ. ಶೋಷಣೆಯ ವಿರುದ್ಧ ಸಿಡಿದೆದ್ದ ಕುಸ್ತಿಪಟುವಿಗೆ ಖರ್ಚು ಮಾಡಿರುವುದು ಜನರ ತೆರಿಗೆ ಹಣ. ಅದನ್ನು ಪ್ರಕಟಿಸಿದರೆ – ದಿನಕ್ಕೆ ಇಪ್ಪತ್ತು ಬಟ್ಟೆ ಬದಲಿಸಿ ಶೋಕಿ ಮಾಡುತ್ತ, ವಿಮಾನದಲ್ಲಿ ಫಾರಿನ್ ಸುತ್ತಿ ಮಜಾ ಮಾಡುವ ಖರ್ಚನ್ನು ಜನರ ಮುಂದಿಡಲಿ” ಎಂದು ಪ್ರಜ್ಞಾವಂತರು ನಮೋವನ್ನು ಛೇಡಿಸಿದರು.
ಮೂರು ಬಿಟ್ಟ ನಮೋಗೆ ಅದು ತಾಕುವುದೇ? ಉತ್ತರ ಸಿಗದೆ ಉಳಿವ ಪ್ರಶ್ನೆ.
ಚಂದ್ರಪ್ರಭ ಕಠಾರಿ
cpkatari@yahoo.com