ಭೂಕುಸಿತ ದುರಂತಗಳಿಂದ ಎಚ್ಚೆತ್ತುಕೊಂಡಿರುವ ಸರಕಾರ, ತಕ್ಷಣದಿಂದಲೇ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆಗೆ ಕಾರ್ಯಪಡೆವೊಂದನ್ನು ರಚಿಸಿದೆ ಎಂಬ ವರದಿ ದಿನ ಪತ್ರಿಕೆಯಲ್ಲಿ ಬಂದಿದೆ. ವಯನಾಡಿನಲ್ಲಿ ದುರಂತ ಸಂಭವಿಸಿದ್ದು, ಊರಿಂದ ಸುಮಾರು ಹತ್ತು ಕಿಲೋಮೀಟರು ದೂರದಲ್ಲಿನ ಬೆಟ್ಟ ಕುಸಿತದಿಂದ. ಶೀರೂರಿನ ಬೆಟ್ಟ ಕುಸಿತ ಅವೈಜ್ಞಾನಿಕ ಅಭಿವೃದ್ಧಿ ಕಾರ್ಯದಿಂದ. ಈ ದುರಂತಗಳ ಮುಖ್ಯ ಕಲ್‍ಪ್ರಿಟ್ಟು, ಅತಿಯಾಗಿ ಸುರಿದ ಮಳೆ. ಆದರೆ, ಈ ಕಾರ್ಯಾಚರಣೆ ಪಡೆಯು ದುರಂತ ಕಾರಣವನ್ನು ಗುರಿಯಾಗಿಸಿಕೊಂಡು, ಹುಡುಕಿ ಹೊರಟಿರುವುದು ಮಲೆನಾಡಿನತ್ತ. ಮಲೆನಾಡ ರೈತ ಅರಣ್ಯ ಒತ್ತುವರಿದಾರನಂತೆ, ದುರಂತಕ್ಕೆ ಕಾರಣನಾದವನಂತೆ ಬಿಂಬಿತನಾಗುತ್ತಿದ್ದಾನೆ.
ಹೌದು ಮಲೆನಾಡಿನ ರೈತರು ಕಾಡನ್ನೇ ಅವಲಂಬಿಸಿಕೊಂಡಿರುವ ವ್ಯವಸಾಯವನ್ನು ಮಾಡಿಕೊಂಡು ಬಂದಿರುವುದು ನಿಜ. ಮಲೆನಾಡ ಬದುಕಿಗೆ, ಮಲೆನಾಡಿನ ಕೃಷಿ ಪದ್ಧತಿಗೆ, ಅರಣ್ಯದ ನೆರವು ಬೇಕೇಬೇಕು. ಸೊಪ್ಪು, ಸೌದೆ, ದರಗು, ಹಸಿರೆಲೆ ಗೊಬ್ಬರ ಇವುಗಳ ನೆರವಿಲ್ಲದೆ ಮಲೆನಾಡ ವ್ಯವಸಾಯ ಬದುಕು ಸಾಧ್ಯವೇ ಇಲ್ಲ. ಕುಮ್ಕಿ, ಬಾಣೆ, ದರಗಿನ ಹಡ್ಡೆ, ಒಳಕಡೆ, ಸೊಪ್ಪಿನ ಬೆಟ್ಟ ಇಂತಹ ಭೂಮಿಗಳನ್ನು ಅಲ್ಲಿನ ರೈತರು ಅವಲಂಬಿಸಿಕೊಂಡೇ ಬದುಕಿದ್ದಾರೆ. ಆದ್ದರಿಂದಲೇ ಕುಮ್ಕಿ, ಬಾಣೆ, ದರಗಿನ ಹಡ್ಡೆ, ಒಳಕಡೆ, ಸೊಪ್ಪಿನ ಬೆಟ್ಟ ಭೂಮಿಯನ್ನು ಅಲ್ಲಿನ ವ್ಯವಸಾಯಗಾರನ ನೆರವಿಗಾಗಿ, ಹಿಂದಿನ ರಾಜಮಹಾರಾಜರುಗಳ ಕಾಲದಿಂದ ಬ್ರಿಟೀಷು ಕಾಲದವರೆಗಿನ ಆಡಳಿತಗಳು ಮಾನ್ಯ ಮಾಡಿದ್ದ ಸಹಾಯಕ ಭೂಮಿಗಳಾಗಿವೆ. ಇವು ಮೊದಲಿಂದಲೂ ರೂಡಿಗತವಾಗಿ ಬಂದ ವಿಶೇಷ ಹಕ್ಕಿನ ಭೂಮಿ. ಇವು ಕಂಡಿತಾ ಮಲೆನಾಡಿನ ರೈತ ಹೊಸದಾಗಿ ಮಾಡಿರುವ ಅನಧಿಕೃತ ಒತ್ತುವರಿ ಭೂಮಿಗಳಲ್ಲ.
ಕಾರ್ಯಾಚರಣೆಗೆ ಹೊರಟ ಈಗಿನ ವತ್ತುವರಿ ಪಡೆ ಏನು ಮಾಡುತ್ತದೆ? ಗ್ರಾಮ ನಕಾಶೆಯನ್ನು ಕೈಯಲ್ಲಿ ಹಿಡಿದು ನೋಡಲಾಗುತ್ತದೆ. ಈಗಂತೂ ದಿಶಾಂಕ್ ಯಾಪ್, ಜಿಪಿಎಸ್ಸುಗಳು ಅವರ ಸಹಾಯಕ್ಕಿವೆ. ರೈತರಿಗೆ ಆರ್.ಟಿ.ಸಿ. ಭೂಮಿಯ ಗಡಿಯನ್ನು ಬಿಟ್ಟು, ರೂಡಿಗತವಾಗಿ ಬಂದ ವಿಶೇಷ ಹಕ್ಕಿನ ಯಾವ ಭೂಮಿಯ ಮೇಲೂ ಆತನಿಗೆ ಹಕ್ಕಿಲ್ಲ. ಆದ್ದರಿಂದ, ಅಲ್ಲಿ ತಕ್ಷಣವೇ ಒತ್ತುವರಿ ಸ್ಕೆಚ್ಚು ರೆಡಿಯಾಗುತ್ತದೆ! ಹಾಕಿದ ಬೆಳೆ ಕಿತ್ತೆಸೆಯಲು ಅಥವಾ ಯಾರೂ ಆಚಿಂದೀಚೆ ಓಡಾಡಲಾಗದ ಟ್ರೆಂಚು ತೆಗೆಯಲು ಜೇಸೀಬಿ ಹಾಜರಾಗುತ್ತದೆ! ತಯಾರಾದ ವತ್ತುವರಿ ಸ್ಕೆಚ್ಚು ಮೇಲಿನ ಕಚೇರಿಗೆ, ಸರಕಾರಿ ಭೂಮಿ ವತ್ತುವರಿಯ ದಂಡನಾತ್ಮಕ ಕ್ರಮಕ್ಕೆ ರವಾನೆಯಾಗುತ್ತದೆ. ಹೊಸದಾಗಿ ರಚಿತವಾದ ಕಾನೂನು, ರೂಡಿಗತವಾಗಿ ಬಂದ ಭೂಮಿಯ ಅನುಭೊಗದಾರನನ್ನೇ ವತ್ತುವರಿದಾರನೆಂದು ಸರ್ವೇ ಸ್ಕೆಚ್ಚು ಮೂಲಕ ಚಿತ್ರಿಸುತ್ತದೆ. ದೊಡ್ಡ ದೊಡ್ಡ ವತ್ತವರಿಗಳು, ಅಕ್ರಮ ಗಣಿಗಾರಿಕೆ, ಟಿಂಬರು ಕಡಿದು ಲೂಟಿ ಮಾಡುತ್ತಿರುವರ ಮೇಲಿನ ನಿರ್ಧಾಕ್ಷಿಣ್ಯ ಕ್ರಮಕ್ಕೆ ಮಲೆನಾಡಿಗರ ವಿರೋಧವಿಲ್ಲ.
ಈಗ ನಮಗೆ ಭೂಆಡಳಿತವನ್ನು ವ್ಯಾಖ್ಯಾನಿಸಲು ಇರುವ ಕಾಯಿದೆ ಕರ್ನಾಟಕ ಭೂಕಂದಾಯ ಅಧಿನಿಯಮ 1964. ಅದು ಜಾರಿಗೆ ಬಂದದ್ದು 1964 ಏಪ್ರಿಲ್ 1 ರಿಂದ. ಆದರೆ, ಕುಮ್ಕಿ, ಬಾಣೆ, ದರಗಿನ ಹಡ್ಡೆ, ಒಳಕಡೆ, ಸೊಪ್ಪಿನ ಬೆಟ್ಟ ಅದಕ್ಕಿಂತಲೂ ಮೊದಲಿಂದಲೂ ರೈತರ ಅನುಭೋಗದಲ್ಲಿವೆ. ಕರ್ನಾಟಕ ಭೂಕಂದಾಯ ಅಧಿನಿಯಮ ಜಾರಿಯ ಮೊದಲು, ಈ ವಿಶೇಷ ಹಕ್ಕಿನ ಭೂಮಿಯ ಆಡಳಿತವನ್ನು, ಕೊಡಗು, ಬಾಂಬೆ, ಮದ್ರಾಸು, ಹೈದರಾಬಾದ್ ಮತ್ತು ಮೈಸೂರು ಆಯಾ ಪ್ರಾಂತ್ಯಗಳ ವಿವಿಧ ಕಾನೂನುಗಳ ಅನ್ವಯ, ಕ್ರಮಬದ್ಧವಾಗಿಯೇ ನಡೆಸಿಕೊಂಡು ಬರಲಾಗುತ್ತಿತ್ತು. ಈಗಿನ ಕರ್ನಾಟಕ ಭೂಕಂದಾಯ ಅಧಿನಿಯಮ 1964 ರಚನೆಯಲ್ಲಿ, ಹಳೇ ಮೈಸೂರು ಪ್ರಾಂತ್ಯದ ರೆವಿನ್ಯೂ ಆಡಳಿತಕ್ಕಾಗಿ ರಚಿಸಿದ್ದ 1888 ರ ಮೈಸೂರು ರೆವಿನ್ಯೂ ಕೋಡಿನ ಪ್ರಭಾವ ಹೆಚ್ಚಾಗಿ ಇರುವುದು ಕಾಣಬರುತ್ತದೆ. ಹಳೆ ಮೈಸೂರು ಪ್ರದೇಶದ ವ್ಯವಸಾಯವು, ಒಣ ಬೇಸಾಯ ಅಥವಾ ನಾಲಾ ನೀರು ಆಧಾರಿತವಾದದ್ದು. ಅದರ ರಚನೆಕಾರರಿಗೆ ಮಲೆನಾಡಿನ ವ್ಯವಸಾಯ ಕ್ರಮದ ಅರಿವಾಗಲಿ, ಸಹಾಯಕ ಭೂಮಿಯ ನೆರವಿನ ಅವಶ್ಯಕತೆಯ ಅರಿವಾಗಲಿ ಇಲ್ಲದಿರುವುದು ಸಹಜ. ವಿವಿಧ ಪ್ರಾಂತ್ಯಗನ್ನು ಒಳಗೊಂಡಿರುವ ವಿಶಾಲ ಕರ್ನಾಟಕ ದೇಶಕ್ಕೆ, 1888 ರ ಮೈಸೂರು ರೆವಿನ್ಯೂ ಕೋಡಿನ ಇತ್ತೀಚಿನ ಆವೃತ್ತಿಯಂತಿರುವ ಕರ್ನಾಟಕ ಭೂಕಂದಾಯ ಅಧಿನಿಯಮ 1964ರ ಪ್ರಾವಧಾನಗಳಿಂದ, ಮಲೆನಾಡಿನ ವ್ಯವಸಾಯಕ್ಕೆ ರೂಡಿಗತವಾಗಿ ಬಂದ ವಿಶೇಷ ಸೌಲಭ್ಯದ ರಕ್ಷಣೆಯು ಸಾಧ್ಯವಿಲ್ಲ. ಅವುಗಳನ್ನು ಉಳಿಸಿಕೊಳ್ಳಲು ಬದಲಿ ಕಾನೂನಿನ ರಚನೆ ಅನಿವಾರ್ಯ. ಕೊಡಗು, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಗಳ ರೈತರ ಒಗ್ಗಟ್ಟಿನ ಹೋರಾಟದಿಂದ ಅದು ಸಾಧ್ಯವಾಗಬಹುದು.
ಸರಡವಳ್ಳಿ ಜಿ ರಮೇಶ