“..ಕರ್ನಾಟಕದಲ್ಲಿ ಮೂಢನಂಬಿಕೆ ನಿಷೇಧ ಕಾಯಿದೆ ಜಾರಿಯಲ್ಲಿ ಇದೆಯಾದರೂ, ಮೇಲುಕೀಳಿನ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಬರಲು ಪ್ರಚೋದಿಸುವ ಬಲಪಂಥೀಯ ರಾಜಕಾರಣವು ಮೂಢನಂಬಿಕೆಗಳ ನಿವಾರಣೆಗೆ ದೊಡ್ಡ ಅಡ್ಡಿಯಾಗಿದೆ..” ನಿಖಿಲ್ ಕೋಲ್ಪೆಯವರ ಬರಹದಲ್ಲಿ
ಪ್ರಾಣಿಬಲಿಯು ಪುರಾತನ ದೈವಿಕ ನಂಬಿಕೆಯ ಆಚರಣೆಗಳಲ್ಲಿ ಒಂದು. ಅದು ಪ್ರಪಂಚದಾದ್ಯಂತ ಧಾರ್ಮಿಕ ನಂಬಿಕೆಗಳಲ್ಲಿ ಹಾಸುಹೊಕ್ಕಾಗಿದೆ. ಬಹುಶಃ ಮನುಷ್ಯನು ಬೇಟೆಯಾಡಿ ಜೀವನ ಸಾಗಿಸುತ್ತಿದ್ದಾಗ, ಅದರಲ್ಲಿ ಒಂದು ಪಾಲನ್ನು ತಾನು ನಂಬುವ ದೇವರಿಗೆ, ಶಕ್ತಿಗೆ ನೀಡುವುದು, ನಂತರ ಪಶುಪಾಲನೆಯಲ್ಲಿ ತೊಡಗಿದಾಗ ತಾನು ತಿನ್ನುವ ಪ್ರಾಣಿಯನ್ನು ಬಲಿಕೊಡುವುದು ಬುಡಕಟ್ಟುಗಳಲ್ಲಿ ಒಂದು ಆಚರಣೆಯಾಗಿ ಮುಂದುವರಿದುಕೊಂಡು ಬಂದಿರಬೇಕು. ನಂತರ ನರಬಲಿ ಕೊಡುವ ಆಚರಣೆಯೂ ಬೆಳೆದುಬಂತು. ಅನೇಕ ಬುಡಕಟ್ಟುಗಳಲ್ಲಿ ನರಭಕ್ಷಣೆಯೂ ಇತ್ತಾದುದರಿಂದ ನರಬಲಿ, ಸೆರೆಸಿಕ್ಕ ಶತ್ರುವನ್ನು ಬಲಿಕೊಟ್ಟು ಉಣ್ಣುವ ಪದ್ಧತಿಯೂ ಬೆಳೆದುಬಂದಿರಬೇಕು. ಜಗತ್ತಿನಾದ್ಯಾಂತ ಪುರಾಣಗಳಲ್ಲಿ, ದಂತಕತೆಗಳಲ್ಲಿ, ಜಾನಪದದಲ್ಲಿ ಬಲಿಯ ವಿವರಣೆಗಳು ಹೇರಳವಾಗಿ ದೊರೆಯುತ್ತವೆ. ಅತ್ಯಂತ ಜನಪ್ರಿಯ ಉದಾಹರಣೆ ಎಂದರೆ, ಕುದುರೆಯನ್ನು ಬಲಿಕೊಡುವ ಅಶ್ವಮೇಧ ಯಾಗ. ನರಬಲಿಗಳ ಕುರಿತೂ ಅಲ್ಲಿ ವಿವರಗಳು ಇವೆ.
ಇವೆಲ್ಲವೂ ಜನಪದರ ಮನಸ್ಸಿನಲ್ಲಿ ಎಷ್ಟು ಆಳವಾಗಿ ಕೂತಿವೆ ಎಂದರೆ, ಈಗಲೂ ನಿಧಿಗಾಗಿ ಬಲಿಕೊಡುವ ಘಟನೆಗಳ ಬಗ್ಗೆ ಕೆಲವೊಮ್ಮೆ ವರದಿಗಳನ್ನು ಓದುತ್ತೇವೆ. ಐದು ದಶಕಗಳ ಹಿಂದೆ ನಾನು ಚಿಕ್ಕ ಹುಡುಗನಾಗಿದ್ದಾಗ ಹೊಸ ಸೇತುವೆಗಳು ಮತ್ತು ಕಟ್ಟಡಗಳ ನಿರ್ಮಾಣ ಆರಂಭಿಸುವ ಮೊದಲು ಮಕ್ಕಳನ್ನು ಹೇಗೆ ಬಲಿಕೊಡಲಾಗುತ್ತದೆ ಎಂದು ಜನರು ಸ್ವತಃ ಕಣ್ಣಾರೆ ಕಂಡವರಂತೆ ವಿವರಿಸುತ್ತಿದ್ದರು. ನಮ್ಮೂರಲ್ಲಿ ನೇತ್ರಾವತಿ ನದಿಯ ಅಡ್ಡಕ್ಕೆ ಮಂಗಳೂರು-ಬೆಂಗಳೂರು ರೈಲ್ವೇ ಸೇತುವೆಯ ನಿರ್ಮಾಣ ಆರಂಭಿಸುವ ಮೊದಲು ಇಂತಾ ವದಂತಿ ಹಬ್ಬಿ, ಹಿರಿಯರು, ನಾವು ಮಕ್ಕಳೆಲ್ಲಾ ಅಲ್ಪಸ್ವಲ್ಪ ಹೆದರಿಕೊಂಡೇ ಓಡಾಡುತ್ತಿದ್ದೆವು. ನಂತರದ ವರ್ಷಗಳಲ್ಲಿ ಎರಡು ಭಾರೀ ಸೇತುವೆಗಳು ನಿರ್ಮಾಣವಾದಾಗ ಮಕ್ಕಳು ಅಂತಾ ಯಾವುದೇ ಭಯದ ಸುಳಿವನ್ನೂ ಹೊಂದಿರಲಿಲ್ಲ ಎಂಬುದೇ ಬೆಳವಣಿಗೆಯ ಸಂಕೇತ. ತಮ್ಮ ದೇವದೇವತೆಗಳಿಗೆ, ಮುಖ್ಯವಾಗಿ ಮಾರಿ ಮುಂತಾದ ಹೆಣ್ಣು ದೇವತೆಗಳಿಗೆ ಕೋಣ, ಆಡು, ಕುರಿ, ಹಂದಿ ಇತ್ಯಾದಿ ಬಲಿಕೊಡುವುದು ನಡೆದುಕೊಂಡು ಬಂದಿದೆ. ಧಾರ್ಮಿಕ ಕಾರಣಗಳಿಗೆ ಪ್ರಾಣಿ ಬಲಿ ಕೊಡುವುದನ್ನು 1959ರಲ್ಲಿಯೇ ನಿಷೇಧಿಸಲಾಗಿದ್ದರೂ, ಪ್ರಾಣಿ ಹಿಂಸೆ ತಡೆ ಕಾಯಿದೆಗಳು ಜಾರಿಯಲ್ಲಿದ್ದರೂ ಇವು ಎಗ್ಗಿಲ್ಲದೇ ನಡೆಯುತ್ತಿವೆ.
ಕರಾವಳಿಯಲ್ಲಿ ಬಲಿಗಳ ಬಗ್ಗೆ ಹೇಳುವುದಾದರೆ, ಇಂದಿಗೂ ಊರಿನ ಮಾರಿಪೂಜೆಗಳಲ್ಲಿ ಹಂದಿ ಮತ್ತು ಕೋಳಿಗಳ ಬಲಿ ಮುಂದುವರಿದಿದೆ. ಮಂಗಳೂರಿನ ಬೋಳಾರ ಮತ್ತು ಉರ್ವಾ ಹಾಗೂ ಕಾಪುವಿನ ಮಾರಿಪೂಜೆ ತುಂಬಾ ಹೆಸರುವಾಸಿ. ಇವುಗಳಲ್ಲಿ ಒಂದು ಇರುವ ಬೋಳಾರವು ತಾಯಿಯ ಕಡೆಯಿಂದ ನನಗೆ ಅಜ್ಜಿಮನೆ. ಪ್ರಸಿದ್ಧ ಮಂಗಳಾದೇವಿ ದೇವಸ್ಥಾನ ಮತ್ತು ಮಾರಿಗುಡಿ ನಡುವೆಯೇ ಇತ್ತು. ಅಲ್ಲಿ ಕೋಣ ಬಲಿ ಕೊಡುವ ಬೀಭತ್ಸ ದೃಶ್ಯವನ್ನು ನಾನು ನೋಡಿದ್ದೆ. ಇದು ಉರ್ವಾ ಮತ್ತು ಕಾಪುವಿನಲ್ಲಿಯೂ ನಡೆಯುತ್ತಿತ್ತು. ಈಗ ನಿಷೇಧದ ನಂತರ ಕೋಣಗಳ ಬಲಿ ಸಂಪೂರ್ಣವಾಗಿ ನಿಂತಿದೆ. ಬೋಳಾರದ ಮಾರಿಯಮ್ಮ- ಮಂಗಳಾದೇವಿಯ ಅಕ್ಕನೆಂದು ಕತೆಕಟ್ಟಿ ದಲಿತರಿಂದ ಅರ್ಚನೆ ನಡೆಯುತ್ತಿದ್ದ ಗುಡಿಯ ವೈದಿಕರು ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಮಾರಿಯಮ್ಮಂದಿರೆಲ್ಲಾ ಮಾರಿಕಾಂಬೆಯರಾಗಿದ್ದಾರೆ. ಉಳಿದ ಕಡೆಗಳಲ್ಲಿಯೂ ಹಿಂದೂತ್ವದ ಕೋಮುವಾದಿ ಶಕ್ತಿಗಳದ್ದೇ ಕಾರುಬಾರು. ಇಲ್ಲೆಲ್ಲಾ ಸರಕಾರ ಬಲಿಯನ್ನು ನಿಷೇಧಿಸಿದ್ದರೂ, ಜನರು ಮಾತ್ರ ಹಬ್ಬದ ದಿನ ಗುಡಿಗಳ ಪಕ್ಕದ ರಸ್ತೆಗಳಲ್ಲಿ, ತಮ್ಮ ತಮ್ಮ ಹಿತ್ತಿಲುಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೋಳಿ ಕೊಯ್ದು ಔತಣ ಮಾಡುತ್ತಾರೆ.
ತುಳುನಾಡಿನ ಬೂತಗಳಿಗಂತೂ ಕೋಳಿ ಬೇಕೇಬೇಕು. ಗುಳಿಗ ಮುಂತಾದ ಬೂತಗಳ ಕೋಲಗಳಲ್ಲಿ ಬೂತದ ಕೈಗೇ ಜೀವಂತ ಕೋಳಿಯನ್ನು ಕೊಡಲಾಗುತ್ತದೆ. ಪಾತ್ರಿಯು ಅದರ ಕತ್ತನ್ನು ಕಚ್ಚಿ ರಕ್ತ ಹೀರುತ್ತಾನೆ. ಬ್ರಾಹ್ಮಣರು ಮಾತ್ರ ಕೋಳಿಯ ಬದಲು ಕುಂಬಳ ಕಡಿಯುತ್ತಾರೆ. ಈಗೀಗ ಇವೆಲ್ಲವೂ ಬ್ರಾಹ್ಮಣರ ಮತ್ತು ಅವರು ನಿಯಂತ್ರಿಸುವ ಹಿಂದೂತ್ವವಾದಿಗಳ ಸುಪರ್ದಿಗೆ ಬಂದಿವೆ. ಆದರೆ, ಮಾರಿ ಪೂಜೆಗಳಲ್ಲಿ ಊರೂರುಗಳಲ್ಲಿ ಹಂದಿ ಮತ್ತು ಕೋಳಿ ಕೊಯ್ಯುವುದು ತಡೆಯಿಲ್ಲದೇ ಮುಂದುವರಿದಿದೆ. ಅಲ್ಲೆಲ್ಲಾ ಕೇಸರಿ ತೋರಣಗಳು ಆವರಿಸಿವೆ.
ನಾನು ಉಲ್ಲೇಖಿಸುತ್ತಾ ಬಂದಿರುವ ಸಮೀಕ್ಷೆ ನಡೆದ ಹೊತ್ತಿಗೆ, ಬಹುತೇಕ ಎಲ್ಲಾ ಕಡೆಗಳಲ್ಲಿ ಕೋಣ, ಕುರಿ, ಹಂದಿ, ಕೋಳಿಗಳ ಬಲಿ ನಡೆಯುತ್ತಿತ್ತಾದರೂ, ಕೆಲವೊಂದನ್ನು ವಿಶೇಷವಾಗಿ ಉಲ್ಲೇಖಿಸಬಹುದು. ದಾವಣಗೆರೆಯ ದುಗ್ಗಮ್ಮ, ತಿಮ್ಮಸಂದ್ರದ ಮಾರಮ್ಮ ಮುಂತಾದ ಕಡೆಗಳಲ್ಲಿ ಸಾವಿರ ಸಾವಿರ ಲೆಕ್ಕದಲ್ಲಿ ಪ್ರಾಣಿಗಳ ಬಲಿ ನಡೆಯುತ್ತಿತ್ತು. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಎತ್ತಂಬಾಡಿಯಲ್ಲಿ ಮಾರಮ್ಮನಿಗೆ ಬಲಿ ನೀಡುವ ಹಂದಿಮರಿಗಳಿಗೆ ಕಚ್ಚಿ ರಕ್ತ “ಹೀರುವ” ಪಾತ್ರಿಗಳು ಅವುಗಳನ್ನು ನಿಧಾನವಾಗಿ ಕೊಲ್ಲುತ್ತಿದ್ದರು. ಹಾಸನದ ಅರಕಲಗೂಡಿನ ರಾಮನಾಥಪುರದ ಬಳಿಯಲ್ಲಿ ನೂರೈವತ್ತಕ್ಕೂ ಹೆಚ್ಚಿನ ಕೋಣಗಳನ್ನು ಬಲಿಕೊಡಲಾಗಿತ್ತು. ಇವು ಕೂಡಾ ಬಹುದೊಡ್ಡ ವ್ಯಾಪಾರ, ವಾಣಿಜ್ಯ ಹಿತಾಸಕ್ತಿಗಳಾಗಿದ್ದವು.
ಇಂದು ಮಾಂಸಾಹಾರಕ್ಕೆ ಕಳಂಕ ಹಚ್ಚಿ, ದೇವಾಲಯಗಳಿಗೆ ಮಾಂಸ ತಿಂದು ಪ್ರವೇಶಿಸಬಾರದು ಇತ್ಯಾದಿ ಸಾಂಸ್ಕೃತಿಕ ಆಕ್ರಮಣಗಳ ಹೊತ್ತಿನಲ್ಲಿಯೂ, ಹಲವರು ವಾರದ ಒಂದೆರಡು ದಿನ ಮಾಂಸಹಾರ ಸೇವಿಸುವುದಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ಹೊತ್ತಿನಲ್ಲಿಯೂ ಪ್ರಾಣಿಬಲಿ ನಿಷೇಧವನ್ನು ಆಹಾರದ ಹಕ್ಕಿನ ಮೇಲೆ ದಾಳಿ ಮತ್ತು ನಂಬಿಕೆಯ ಮೇಲಿನ ಆಕ್ರಮಣ ಎಂದು ವ್ಯಾಪಕವಾಗಿ ಭಾವಿಸಲಾಗುತ್ತಿರುವುದರಿಂದ ಕಾನೂನು ಒಂದರಿಂದಲೇ ಪ್ರಾಣಿ ಬಲಿಯನ್ನು ತಡೆಯುವುದು, ಅದನ್ನು ಅನುಷ್ಟಾನಗೊಳಿಸುವುದು ಅಸಾಧ್ಯವಾದ ಕೆಲಸ ಎನ್ನಬಹುದು. ಯಾಕೆಂದರೆ, ಇದರ ರಾಜಕೀಯ ಪರಿಣಾಮಗಳು ಗಂಭೀರವಾಗಿ ಇರಬಹುದು. ಕಾಪುವಿನಲ್ಲಿ ದಶಕಗಳ ಹಿಂದೆ ಇಂತಾ ಪ್ರಯತ್ನ ನಡೆದಾಗ, ಭಾರೀ ಹಿಂಸಾಚಾರ ನಡೆದು ಮನುಷ್ಯ ರಕ್ತವೇ ಹರಿದಿತ್ತು. ಇದಲ್ಲದೇ ಬಕ್ರೀದ್ ಸಂದರ್ಭದಲ್ಲಿಯೂ ಬಲಿದಾನದ ಸಂಕೇತವಾಗಿ ಬಲಿಗಳು ವ್ಯಾಪಕವಾಗಿ ನಡೆಯುತ್ತವೆ. ಬಹುತೇಕ ಜನರು ಈ ಬಲಿಗಳನ್ನು ಹಿಂಸೆಯೆಂದು ಭಾವಿಸುವುದಿಲ್ಲ. ಇದೆಲ್ಲವುಗಳ ಹೊರತಾಗಿಯೂ, ಒಂದು ರೀತಿಯ ನಿಯಂತ್ರಣ ಖಂಡಿತವಾಗಿಯೂ ಅಗತ್ಯವಿದೆ ಎಂದು ಕೆಳಗೆ ವಿವರಿಸಿದ ಪದ್ದತಿಗಳು ಸೂಚಿಸುತ್ತವೆ. ಯಾಕೆಂದರೆ, ಇಲ್ಲಿ ಪ್ರಾಣಿ ಬಲಿಯ ಜೊತೆಜೊತೆಗೆ ತಳವರ್ಗಗಳ ಜನರ ಶೋಷಣೆಯೂ ನಡೆಯುತ್ತದೆ.
ಭೂತಬಿಲ್ಲೆ ತಿರುಗುವುದು
ಈ ಹೆಸರಿನ ವಿಲಕ್ಷಣ ಆಚರಣೆಯೊಂದು ಅವಿಭಜಿತ ಬಳ್ಳಾರಿ ಜಿಲ್ಲೆಯ ಬಹುತೇಕ ಊರುಗಳಲ್ಲಿ ನಡೆಯುತ್ತಿತ್ತು. ಉದಾಹರಣೆಗಾಗಿ, ಯಶವಂತನಗರದ ಮಲ್ಲಮ್ಮನ ಜಾತ್ರೆಯಲ್ಲಿ ವ್ಯಕ್ತಿಯೊಬ್ಬ ತಲೆಯಿಂದ ಕಾಲಿನ ವರೆಗೆ ಕೂದಲನ್ನು ಸಂಪೂರ್ಣವಾಗಿ ಬೋಳಿಸಿ ಒಂದು ಚಿಂದಿಯೂ ಬಟ್ಟೆಯಿಲ್ಲದೇ ಜಾತ್ರೆಯಿಡಿ ಸುತ್ತುತ್ತಿದ್ದ. ಈತನ ಕತ್ತಿನಲ್ಲಿ ಹೂ ಮಾಲೆ, ಕೈಯಲ್ಲಿ ಒಂದು ಕತ್ತಿ ಇರುತ್ತಿತ್ತು. ಎದುರಾದವರನ್ನು ಕತ್ತಿಯಿಂದ ಕತ್ತರಿಸುವಂತೆ ಆತ ವರ್ತಿಸುತ್ತಿದ್ದ. ಸಾಮಾನ್ಯವಾಗಿ ಪರಿಶಿಷ್ಟ ಜಾತಿಗಳ ಜನರು ಈ ಪಾತ್ರ ವಹಿಸುತ್ತಿದ್ದರೂ, ಮಾದಿಗ ಜನಾಂಗದವರು ಹೆಚ್ಚು. ಈ ರೀತಿ ಮಾಡುವುದರಿಂದ ಊರಿನ ಕೇಡು ನಿವಾರಣೆಯಾಗುತ್ತದೆ ಎಂಬುದು ನಂಬಿಕೆ.
ಬುಲ್ ಕೊಡುವುದು
ಒಂದೇ ಏಟಿಗೆ ಕತ್ತು ಕತ್ತರಿಸುವುದು ಒಂದು ಮಾತು. ಆದರೆ, ಪ್ರಾಣಿಗಳನ್ನು ಹಿಂಸಿಸಿ ಕೊಲ್ಲುವುದು ಬೇರೆಯೇ ಮಾತು. ಈ ದಾಖಲಾತಿಯ ವೇಳೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಬಳಿಯ ಹಿರೇ ಬನ್ನಿಗೋಳ ಎಂಬಲ್ಲಿ ಯುಗಾದಿಯ ಹೊತ್ತಿಗೆ ಅಮಾವಾಸ್ಯೆಯ ದಿನ ಊರ ಅಗಸೆಯ ಮುಂದೆ ನಡೆದ ಒಂದು ಆಚರಣೆಯಲ್ಲಿ, ಬಲಿಷ್ಟವಾದ ಒಂದು ಹಂದಿಯನ್ನು ನೆಲದಲ್ಲಿ ಕುತ್ತಿಗೆಯ ತನಕ ಹುಗಿದಿರುತ್ತಾರೆ. ಹಂದಿಯು ಮಿಸುಕಾಡಲಾರದೇ ಚೀರುತ್ತಿರುತ್ತದೆ. ಒಬ್ಬ ರೈತ ಕಾದು ಕೆಂಪಾಗಾದ ಕುಂಟೆ ಬಳೆಯನ್ನು ಅದರ ನೆತ್ತಿಗಿಟ್ಟು ನಂತದ ತನ್ನ ಎತ್ತುಗಳ ಮೈಗೆ ಇಡುತ್ತಾನೆ. ಹಂದಿಯು ಎದೆ ಬಿರಿಯುವಂತೆ ಕಿರಿಚಾಡುತ್ತಿದ್ದರೆ, ಎತ್ತುಗಳು ನೋವಿನಿಂದ ಹಗ್ಗ ಕಿತ್ತಕೊಂಡು ಓಡುತ್ತವೆ. ನಂತರ ಮತ್ತೊಬ್ಬ ರೈತ ಬರುತ್ತಾನೆ… ನಂತರ ಇನ್ನೊಬ್ಬ… ನಂತರ ಮಗದೊಬ್ಬ… ಹೀಗೆ ಎಲ್ಲಾ ಮುಗಿದಾಗ ಮಧ್ಯಾಹ್ನವಾಗಿರುತ್ತದೆ. ಅದು ಹೇಗೋ ಆ ತನಕ ಅರೆಜೀವ ಉಳಿಸಿಕೊಂಡ ಹಂದಿಯನ್ನು ಸಂಪೂರ್ಣ ಹೂಳಿ. ಅದರ ಮೇಲೆ ಕಲ್ಲಿಡುತ್ತಾರೆ. ಇದರಿಂದ ರಾಸುಗಳಿಗೆ ಕಾಯಿಲೆ ಬರುವುದಿಲ್ಲ ಎಂಬ ಮೂಢನಂಬಿಕೆ. ನಾವಿಗ ಕಾಣುತ್ತಿರುವ ಧಾರ್ಮಿಕ ಕ್ರೌರ್ಯ ನಮ್ಮೊಳಗೇ ಅಂತರ್ಗತವಾಗಿದೆಯೋ, ಅಥವಾ ಇಂತಾ ಕ್ರೂರ ಆಚರಣೆಗಳೇ ಅವುಗಳನ್ನು ಗಟ್ಟಿಗೊಳಿಸಿ ಧಾರ್ಮಿಕ ಮಾನ್ಯತೆ ನೀಡುತ್ತವೆಯೋ ಎಂದು ನಾನು ಯೋಚಿಸುತ್ತೇನೆ!
ಸರ್ಗಾ ಒಯ್ಯುವುದು
ಈ ಆಚರಣೆಯು ಮುಖ್ಯವಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯುತ್ತಿತ್ತು. ಉದಾಹರಣೆಗೆ ಅದೇ ತಾಲೂಕಿನ ಮದಿಕೆಪುರ, ಹಿರಿಯೂರು ತಾಲೂಕಿನ ಬೇಡರ ಹಳ್ಳಿ, ನೆರೆಯ ಜಿಲ್ಲೆಯ ಗಾಜನೂರು, ಆಯನಹಳ್ಳಿ. ಶೂನ್ಯ ಮಾಸದಲ್ಲಿ ನಡೆಯುವ ಈ ಆಚರಣೆಯಲ್ಲಿ ಕೋಣನ ಬಲಿಯಿದೆ. ಬಲಿಯ ನಂತರ ಅದರ ರಕ್ತ ಬೆರೆಸಿದ ಅನ್ನವನ್ನು ಮಾದಿಗ ಜನಾಂಗದ ವ್ಯಕ್ತಿ ಊರಿಡಿ ಬೆತ್ತಲೆಯಾಗಿ ತಿರುಗಿ ಅಲ್ಲಲ್ಲಿ ಚೆಲ್ಲಿ ಬರುತ್ತಾನೆ. ಗಾವು ಜಗಿಯುವ ಆಚರಣೆಯು ಬಳ್ಳಾರಿಯಲ್ಲಿಯೂ ನಡೆಯುತ್ತದೆ. ಇದರಲ್ಲಿ ಕೋಣದ ಜೊತೆಗೆ ಮೇಕೆ ಇರುತ್ತದೆ. ಮಾದಿಗ ಸಮುದಾಯದ ವ್ಯಕ್ತಿ ಜೀವಂತ ಮೇಕೆಯ ಕತ್ತನ್ನು ಕಚ್ಚಿ, ಹಲ್ಲಿನಿಂದ ಸಿಗಿದು ರಕ್ತವನ್ನು ಊರಿಡೀ ಸಿಂಪಡಿಸಿ ಬರುತ್ತಾನೆ.
ದಲಿತ ಸಂಘಟನೆಗಳು ಈ ಆಚರಣೆಗಳನ್ನು ಆಗಲೇ ಬಲವಾಗಿ ವಿರೋಧಿಸುತ್ತಿದ್ದವು. ಆದರೆ, ಉಳಿದವರ ಸಾಮಾನ್ಯ ಪ್ರತಿಕ್ರಿಯೆ ಹೇಗಿತ್ತೆಂದರೆ, “ಇದು ಸರಿಯೋ, ತಪ್ಪೋ ಗೊತ್ತಿಲ್ಲ ಸಾರ್, ಈ ತನಕ ಯಾರೂ ಈ ರೀತಿ ಕೇಳಿಲ್ಲ, ನಮ್ಗೆ ಅಂತಾ ಯೋಚ್ನೇನೇ ಬರಾಕಿಲ್ಲ”. ಇದು ಜನರ ನಡುವೆ ಜಾಗೃತಿಯ ಅಗತ್ಯವಿದೆ; ಹಿಂದಿನಿಂಲೂ ನಡೆಯುತ್ತಾ ಬರುತ್ತಿದೆ ಎಂಬ ಸಾಂಪ್ರದಾಯಿಕ ಮನಸ್ಥಿತಿ ಮತ್ತು ಯಾವುದನ್ನೂ ಪ್ರಶ್ನಿಸಲು ಇರುವ ಭಯ ಇದಕ್ಕೆ ಕಾರಣವಾಗಿದೆ ಎಂಬುದನ್ನು ತೋರಿಸುತ್ತದೆ. ಜಾತಿ ಬಹಿಷ್ಕಾರ, ಜಾತಿ ವಿರೋಧಿ, ಧರ್ಮ ವಿರೋಧಿ ಪಟ್ಟ ಇತ್ಯಾದಿ ಪಟ್ಟಭದ್ರ ಹಿತಾಸಕ್ತಿಗಳ ಕುಮ್ಮಕ್ಕಿನಿಂದ ತನ್ನಿಂದ ತಾನಾಗಿ ಸುಲಭವಾಗಿ ಬರುತ್ತವೆ. ಕರ್ನಾಟಕದಲ್ಲಿ ಮೂಢನಂಬಿಕೆ ನಿಷೇಧ ಕಾಯಿದೆ ಜಾರಿಯಲ್ಲಿ ಇದೆಯಾದರೂ, ಆಳವಾದ ನಂಬಿಕೆಗಳು, ಧರ್ಮದ ಹೆಸರಿನಲ್ಲಿ ಮತ ಪಡೆಯಲು ಮತ್ತು ಮೇಲುಕೀಳಿನ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಬರಲು ಪ್ರಚೋದಿಸುವ ಬಲಪಂಥೀಯ ರಾಜಕಾರಣವು ಮೂಢನಂಬಿಕೆಗಳ ನಿವಾರಣೆಗೆ ದೊಡ್ಡ ಅಡ್ಡಿಯಾಗಿದೆ. ಕೋಮುವಾದದ ಜೊತೆಗೆ ನಾವು ಬಲಪಂಥೀಯ ಹಿಂದೂತ್ವ ರಾಜಕಾರಣವನ್ನು ವಿರೋಧಿಸಲು ಪ್ರಬಲವಾದ ಕಾರಣಗಳಲ್ಲಿ ಇದೂ ಒಂದು.