ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಹತ್ತನೇ ಲೇಖನ
ತಮ್ಮ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ, ಕಾರ್ಮಿಕ ಚಳವಳಿಯಲ್ಲಿ ರೇಣು ಚಕ್ರವರ್ತಿ ಆಳವಾಗಿ ತೊಡಗಿಸಿಕೊಂಡಿದ್ದರು, ಹಲವಾರು ಮುಷ್ಕರಗಳನ್ನು ಆಯೋಜಿಸಿದ್ದರು ಮತ್ತು ಹಲವು ಬಾರಿ ಜೈಲು ಶಿಕ್ಷೆಗೂ ಗುರಿಯಾಗಿದ್ದರು.
ರೇಣು ಚಕ್ರವರ್ತಿ ಒಬ್ಬ ಕಮ್ಯುನಿಸ್ಟ್ ನಾಯಕಿ, ಸಂಘಟಕಿ, ಖ್ಯಾತ ಸಂಸದೀಯ ಪಟು ಮತ್ತು ಶಿಕ್ಷಣ ತಜ್ಞೆ. ಭಾರತದ ಕಮ್ಯುನಿಸ್ಟ್ ಚಳುವಳಿ ಮತ್ತು ಮಹಿಳಾ ಚಳುವಳಿಗಳ ಮೇಲೆ ಅಳಿಸಲಾಗದ ಛಾಪು ಮೂಡಿಸಿದವರು.
1948 ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ ನಿಷೇಧಿಸಲ್ಪಟ್ಟಾಗ, 1951 ರ ತನಕ ರೇಣು ಚಕ್ರವರ್ತಿ ಭೂಗತರಾಗಿದ್ದರು. ನಂತರ 1951 ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವು ಸ್ಪರ್ಧಿಸಲು ನಿರ್ಧರಿಸುತ್ತದೆ. ರೇಣು ಚಕ್ರವರ್ತಿ ಬಸಿರ್ಹಾತ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುತ್ತಾರೆ. ಆ ಮೂಲಕ ಪಶ್ಚಿಮ ಬಂಗಾಳದಿಂದ ಚುನಾಯಿತರಾದ ಏಕೈಕ ಮಹಿಳಾ ಸಂಸದರಾಗಿ ಗುರುತಿಸಿಕೊಳ್ಳುತ್ತಾರೆ. 1957 ರಲ್ಲಿ ಅದೇ ಕ್ಷೇತ್ರದಿಂದ ಅವರು ಮರು ಆಯ್ಕೆಯಾಗುತ್ತಾರೆ. 1962 ರಲ್ಲಿ ಮೂರನೇ ಲೋಕಸಭೆಗೆ ಸ್ಪರ್ಧಿಸುವ ಅವರು ಇಡೀ ದೇಶದಲ್ಲಿಯೇ ಅತ್ಯಧಿಕ ಮತಗಳನ್ನು ಪಡೆದುಕೊಂಡು ಗೆದ್ದು ಬರುತ್ತಾರೆ.
1964 ರಲ್ಲಿ ಸಿಪಿಐ ಪಕ್ಷವು ವಿಭಜನೆಯಾದ ನಂತರ ಅವರು ಹಳೆಯ ಪಕ್ಷದಲ್ಲಿಯೇ ಮುಂದುವರಿಯುತ್ತಾರೆ. ಆದರೆ, 1967 ಮತ್ತು 1971 ರ ಚುನಾವಣೆಗಳಲ್ಲಿ ಅದೇ ಕ್ಷೇತ್ರದಿಂದ ಸಿಪಿಐ(ಎಂ) ಅಭ್ಯರ್ಥಿಯ ಎದುರು ಸೋಲು ಕಂಡಿದ್ದರು. ಹಾಗಂತ ಅವರು ತಮ್ಮ ಕ್ಷೇತ್ರವನ್ನು ಎಂದೂ ನಿರ್ಲಕ್ಷಿಸಲಿಲ್ಲ. ಜನರು ಅವರ ಒಡನಾಟವನ್ನು ಮೆಚ್ಚುತ್ತಿದ್ದರು. 1969 ರಲ್ಲಿ ಯುನೈಟೆಡ್ ಫ್ರಂಟ್‌ನ ಎರಡನೇ ಅವಧಿಯಲ್ಲಿ ಕೆಲಕಾಲ ಸಹಕಾರಿ ಮಂತ್ರಿಯಾಗಿಯೂ ಕೆಲಸ ಮಾಡಿದ್ದರು.
1958 ರಲ್ಲಿ ಅಮೃತಸರದಲ್ಲಿ ನಡೆದ ಸಿಪಿಐ ಕಾಂಗ್ರೆಸ್‌ನಲ್ಲಿ ಅವರು ರಾಷ್ಟ್ರೀಯ ಮಂಡಳಿಗೆ ಆಯ್ಕೆಯಾಗಿದ್ದರು.
1917 ಅಕ್ಟೋಬರ್ 21 ರಂದು ಕಲ್ಕತ್ತಾದ ಒಂದು ಬ್ರಾಹ್ಮೋ ಕುಟುಂಬದಲ್ಲಿ ಜನಿಸಿದ ರೇಣು ಕಲ್ಕತ್ತಾದ ಲೊರೆಟೊ ಹೌಸ್ ಮತ್ತು ವಿಕ್ಟೋರಿಯಾ ಸಂಸ್ಥೆಯಲ್ಲಿ ಓದಿಕೊಂಡು ನಂತರ ಕೇಂಬ್ರಿಡ್ಜ್‌ನ ನ್ಯೂನ್‌ಹ್ಯಾಮ್ ಕಾಲೇಜಿನಲ್ಲಿ ಶಿಕ್ಷಣವನ್ನು ಪೂರ್ತಿ ಮಾಡುತ್ತಾರೆ. ಕಲ್ಕತ್ತಾದಲ್ಲಿ ಆನರ್ ಪದವಿ ಪಡೆದ ನಂತರ, ಕೇಂಬ್ರಿಡ್ಜಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಟ್ರೈಪೋಸ್ ಉತ್ತೀರ್ಣರಾಗುತ್ತಾರೆ (1937-39). ಡಾ. ಬಿಧಾನ್ ಚಂದ್ರ ರಾಯ್ ಸೋದರ ಸೊಸೆಯಾಗಿದ್ದ ರೇಣು ಅವರು, ಅವರಿಂದಲೇ ರಾಜಕೀಯದಲ್ಲಿ ಆಸಕ್ತಿ ತಳೆದಿದ್ದರು.
ಯುರೋಪಿನಲ್ಲಿದ್ದಾಗ, ರೇಣು ಚಕ್ರವರ್ತಿ ಫ್ಯಾಸಿಸಂನ ಉದಯವನ್ನು ಕಣ್ಣಾರೆ ಕಂಡವರು. ಬರ್ಲಿನ್ನಿನ ಅನ್ಟರ್ ಡೆನ್ ಲಿಂಡೆನ್‌ನಲ್ಲಿ ಫ್ಯಾಸಿಸ್ಟ್ ಯುವಕರು ಮಾರ್ಚ್ ನಡೆಸುವುದನ್ನು ಅವರು ಕಂಡಿದ್ದರು. ಆಸ್ಟ್ರಿಯಾದ ಮೇಲೆ ನಾಜಿ ಆಕ್ರಮಣಕ್ಕೆ ಸಾಕ್ಷಿಯಾಗಿದ್ದರು. ಜೆಕೊಸ್ಲೊವಾಕಿಯಾದ ವಿಘಟನೆಯ ಘಟನೆಗಳನ್ನು ಗಮನಿಸುತ್ತಿದ್ದರು. ಅವರು ಫ್ಯಾಸಿಸಮ್ಮಿನ ಕಟು ವಿರೋಧಿಯಾಗಿದ್ದರು. ಹಿಟ್ಲರನ ಕಿಂಡರ್, ಕುಚೆ, ಕಿರ್ಚೆ – ಮಹಿಳೆಯರು ಹೆರಿಗೆ, ಅಡುಗೆ ಮತ್ತು ಚರ್ಚ್‌ಗೆ ಸೀಮಿತ – ಎಂಬ ನಿಲುವನ್ನು ತಿರಸ್ಕರಿಸಿದ್ದರು.
ರೇಣು ಚಕರ್ವರ್ತಿ ಅವರು ಮಾರ್ಕ್ಸ್‌ವಾದಿ ಚಿಂತಕ ಜಾನ್ ಸ್ಟ್ರಾಚಿಯವರ ಉಪನ್ಯಾಸಗಳಿಗೆ ಹಾಜರಾಗುತ್ತಿದ್ದರು. ನಂತರ FEDIND (ಫೆಡರೇಷನ್ ಆಫ್ ಇಂಡಿಯನ್ ಸ್ಟೂಡೆಂಟ್ಸ್ ಸೊಸೈಟೀಸ್ ಇನ್ ಇಂಗ್ಲೆಂಡ್ ಆಂಡ್ ಐರ್ಲೆಂಡ್) ಸಂಘಟನೆಯ ಸ್ಥಾಪಕ ಕಾರ್ಯದರ್ಶಿಯಾದರು. ಅಮೇರಿಕಾದಲ್ಲಿ 1938 ರಲ್ಲಿ ನಡೆದ ಅಂತರಾಷ್ಟ್ರೀಯ ಯುವ ಕಾಂಗ್ರೆಸ್‌ನಲ್ಲಿ ಕೂಡ ಅವರು ಭಾಗವಹಿಸಿದ್ದರು.
1939 ರಲ್ಲಿ ಕೇಂಬ್ರಿಡ್ಜ್‌ನಲ್ಲಿ ನಡೆದ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ತಾನು ಕೇಳಿದ್ದ ಆಕೆಯ ಧ್ವನಿಯನ್ನು ಹಿರಿಯ ಸಂಸದ ಹಿರೇನ್ ಮುಖರ್ಜಿ ನೆನಪಿಸಿಕೊಳ್ಳುತ್ತಾರೆ. ಆ ಸಮ್ಮೇಳನದ ಘೋಷಣೆಯು “ಯಾವ ಬಾವುಟ, ಅದು ಕೆಂಬಾವುಟ” ಎಂದಾಗಿತ್ತು.
1938 ರಲ್ಲಿ ಅವರು ಪ್ರಮುಖ ಬ್ರಿಟಿಷ್ ಕಮ್ಯುನಿಸ್ಟ್ ರಜನಿ ಪಾಮ್ ದತ್ ಅವರ ಜೊತೆ ಸಂಪರ್ಕಕ್ಕೆ ಬರುತ್ತಾರೆ. ಅದೇ ವರ್ಷ, ಅವರು ಗ್ರೇಟ್ ಬ್ರಿಟನ್ ಕಮ್ಯುನಿಸ್ಟ್ ಪಕ್ಷವನ್ನು ಸೇರುವುದು. ಭಾರತಕ್ಕೆ ಮರಳಿದ ನಂತರ ಆಗ ಇಲ್ಲಿ ಅಕ್ರಮವಾಗಿದ್ದ ಕಮ್ಯುನಿಸ್ಟ್ ಪಕ್ಷವನ್ನು ಸೇರಿ ಸಕ್ರಿಯ ಎಡಪಂಥೀಯ ರಾಜಕಾರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಆ ಕುರಿತು ಅವರು ಹೀಗೆ ಬರೆಯುತ್ತಾರೆ. “ನಾನು ಭಾರತಕ್ಕೆ ಮರಳಿ ಬಂದಿದ್ದೆ, ನನ್ನ ದೇಶದ ವಿಮೋಚನೆಗಾಗಿ ಹೋರಾಡುವ ಕಿಚ್ಚಿನ ಜೊತೆಗೆ.”
ಬ್ರಿಟನ್‌ನಲ್ಲಿದ್ದಾಗ ಪ್ರಮುಖ ಕಮ್ಯುನಿಸ್ಟ್ ಚಿಂತಕ ಮತ್ತು ಪತ್ರಕರ್ತ ನಿಖಿಲ್ ಚಕ್ರವರ್ತಿ ಅವರನ್ನು ಭೇಟಿಯಾಗುತ್ತಾರೆ. 1942 ಜನವರಿ 3 ರಂದು ರೇಣು ಮತ್ತು ನಿಖಿಲ್ ಭಾರತದಲ್ಲಿ ವಿವಾಹಿತರಾಗುತ್ತಾರೆ. ಅವರಿಗೆ ಜನಿಸಿದ ಮಗ ಸುಮಿತ್ ಚಕ್ರವರ್ತಿ, ತಂದೆ ಸ್ಥಾಪಿಸಿದ ಮೇನ್‌ಸ್ಟ್ರೀಮ್ ಪತ್ರಿಕೆಯ ಸಂಪಾದಕರಾಗಿದ್ದಾರೆ.
ಎರಡನೇ ಮಹಾಯುದ್ಧದ ಸಮಯದಲ್ಲಿ, ಇಂಡೋ-ಬರ್ಮಾ ಗಡಿಯಲ್ಲಿ ಬ್ರಿಟಿಷ್ ಮತ್ತು ಅಮೇರಿಕನ್ ಸೈನಿಕರು ಮಹಿಳೆಯರ ಮೇಲೆ ನಡೆಸಿದ ದೌರ್ಜನ್ಯಗಳನ್ನು ಪ್ರತಿಭಟಿಸಿ ರೇಣು ಚಕ್ರವರ್ತಿ ಮತ್ತು ಇತರರು ವೈಸ್‌ರಾಯ್‌ಗೆ ಪತ್ರ ಬರೆದು ಸಹಿ ಸಂಗ್ರಹ ನಡೆಸುತ್ತಾರೆ. ಜಪಾನ್ ಪಡೆಗಳು ಮುನ್ನುಗ್ಗಿ ಬರುತ್ತಿದ್ದರೂ ಕೂಡ ಬ್ರಿಟಿಷ್ ಸೇನೆ ಹಳ್ಳಿಗಳನ್ನು ನಾಶ ಮಾಡುವುದನ್ನು ತಡೆಯಲು ಅವರು ಹಳ್ಳಿಗಳಿಗೆ ಪ್ರಯಾಣಿಸುತ್ತಾರೆ. ಅದಾಗಲೇ ಮೂಡಿ ಬರುತ್ತಿದ್ದ ಬರ ಪರಿಸ್ಥಿತಿಗೂ ಅವರು ಸ್ಪಂದಿಸುತ್ತಾರೆ.
1940 ರ ಆರಂಭದಲ್ಲಿ ದೆಹಲಿಯಲ್ಲಿ ನಡೆದ AISF ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಭಾಗವಹಿಸಿದ್ದರು. ರೇಣು ಚಕ್ರವರ್ತಿ, ಕನಕ್ ದಾಸ್‌ಗುಪ್ತಾ ಮೊದಲಾದವರು ಬಂಗಾಳದಲ್ಲಿ ಹೆಣ್ಣುಮಕ್ಕಳನ್ನು ಸಂಘಟಿಸಿಕೊಂಡು ವಿದ್ಯಾರ್ಥಿನಿಯರ ಸಮಿತಿಯನ್ನು ರಚಿಸುತ್ತಾರೆ.
1940 ರಲ್ಲಿ ಛಾತ್ರಿ ಸಂಘ (ವಿದ್ಯಾರ್ಥಿನಿಯರ ಸಂಘಟನೆ) ತನ್ನ ಮೊದಲ ಸಮ್ಮೇಳನವನ್ನು ಲಕ್ನೋದಲ್ಲಿ ನಡೆಸುತ್ತದೆ. ರೇಣು ಚಕ್ರವರ್ತಿ ಅದರ ಪ್ರಮುಖ ಸಂಘಟಕರಲ್ಲಿ ಒಬ್ಬರಾಗಿದ್ದರು. ತರುಣಿ ವಿದ್ಯಾರ್ಥಿನಿಯರು ಸೇರಿ ಮಹಿಳಾ ಚಳುವಳಿಗೆ ಅಡಿಪಾಯ ಹಾಕಿದ ಆ ಕಾರ್ಯಕ್ರಮಕ್ಕೆ ಸರೋಜಿನಿ ನಾಯ್ಡು ಮುಖ್ಯ ಅತಿಥಿಗಳಾಗಿ ಆಗಮಿಸಿ, ಅಧ್ಯಕ್ಷತೆ ವಹಿಸಿದ್ದರು.
1942 ರ ಏಪಿಲ್ ತಿಂಗಳಲ್ಲಿ ರೇಣು ಚಕ್ರವರ್ತಿ, ರಾಣಿ ಮಿತ್ರಾ ದಾಸ್‌ಗುಪ್ತಾ ಮತ್ತು ಮಣಿಕುಂತಲಾ ಸೇನ್ ಅವರುಗಳು ಸೇರಿಕೊಂಡು ಮಹಿಳಾ ಆತ್ಮ ರಕ್ಷಾ ಸಮಿತಿ (MARS) ಯನ್ನು ರಚಿಸುತ್ತಾರೆ. ಅದಕ್ಕೆ ಇಲಾ ಭಟ್ಟಾಚಾರ್ಯ ಅವರನ್ನು ಸಂಘಟನಾ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ನಂತರ MARS ಸಾವಿರಾರು ಸದಸ್ಯರನ್ನು ಒಳಗೊಂಡ ಬೃಹತ್ ಮತ್ತು ಪರಿಣಾಮಕಾರಿ ಸಂಘಟನೆಯಾಗಿ ಬೆಳೆಯುತ್ತದೆ.
1942 ಡಿಸೆಂಬರ್ ತಿಂಗಳಲ್ಲಿ ಕಲ್ಕತ್ತಾ ಸೇರಿದಂತೆ, ವಿಶಾಖಪಟ್ಟಣ, ಚಿತ್ತಗಾಂಗ್ ಮತ್ತು ಇತರ ಕಡೆಗಳಲ್ಲಿ ಜಪಾನ್ ದಾಳಿ ಮಾಡಲು ಆರಂಭಿಸಿ ಬಾಂಬ್ ಸುರಿಸುತ್ತದೆ. ಆಗ ಉಂಟಾದ ಸಾಮೂಹಿಕ ವಲಸೆಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಬಹಳ ದೊಡ್ಡ ಮಟ್ಟದ ಸಹಾಯ ಲಭಿಸುವುದು ಇದೇ MARS ಸಂಘಟನೆಯಿಂದ. ರೇಣು ಚಕ್ರವರ್ತಿ ಆ ಪರಿಹಾರ ಕಾರ್ಯಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ತೆಭಾಗ ಚಳುವಳಿಯಲ್ಲಿ ಕೂಡ MARS ಮಹತ್ವದ ಪಾತ್ರ ವಹಿಸಿತ್ತು.
ಇದರ ಜೊತೆಗೆ, ನಿರ್ಗತಿಕ ಮಹಿಳೆಯರ ಪುನರ್ವಸತಿಗಾಗಿ ನಾರಿ ಸೇವಾ ಸಂಘವನ್ನು ಕೂಡ ಸ್ಥಾಪಿಸುತ್ತಾರೆ. AIWC (ಆಲ್ ಇಂಡಿಯಾ ವುಮೆನ್ಸ್ ಕಾನ್ಫರೆನ್ಸ್) ಸದಸ್ಯರೂ ಆಗಿದ್ದ ರೇಣು ಅವರ ತಾಯಿ ಬ್ರಹ್ಮ ಕುಮಾರಿ ರಾಯ್ ಈ ಸಂಘದ ಕೇಂದ್ರದಲ್ಲಿದ್ದರು. ನಿಖಿಲ್ ಚಕ್ರವರ್ತಿ ಅವರ ತಾಯಿ ಶೈಲಜಾ ಚಕ್ರವರ್ತಿ ಕೂಡ ಮಹಿಳಾ ಸಬಲೀಕರಣಕ್ಕಾಗಿ ದುಡಿದಿದ್ದರು.
1942 ಏಪ್ರಿಲ್ 27 ಮತ್ತು 28 ರಂದು MARS ಸಂಘಟನೆಯ ಮೊದಲ ಸಮ್ಮೇಳನ ನಡೆಯುತ್ತದೆ. ಅಲ್ಲಿ ರೇಣು ಚಕ್ರವರ್ತಿ ಮಾತನಾಡುತ್ತಾರೆ. ಅದರ ಮೊದಲ ಪ್ರಾಂತೀಯ ಸಮ್ಮೇಳನವು 1943 ಮೇ 8 ರಂದು ಕಲ್ಕತ್ತಾದಲ್ಲಿ ನಡೆಯುತ್ತದೆ. ಅಲ್ಲಿ ಅವರು ಸವಿಸ್ತಾರವಾಗಿ ಮಾತನಾಡುತ್ತಾರೆ. ಬರ ಪರಿಹಾರಕ್ಕೆ ಒತ್ತಾಯಿಸಿ ವಿಧಾನಸಭೆಗೆ 5,000 ಮಹಿಳೆಯರ ಜಾಥಾವನ್ನು MARS ಆಯೋಜಿಸುತ್ತದೆ. ನಾಗರಿಕ ರಕ್ಷಣಾ ಘಟಕಗಳು, ಪ್ರಥಮ ಚಿಕಿತ್ಸಾ ಕೇಂದ್ರಗಳು ಮತ್ತು ಗಂಜಿಕೇಂದ್ರಗಳನ್ನು ಸ್ವತಃ ರೇಣು ಚಕ್ರವರ್ತಿ ಮುಂದೆ ನಿಂತು ಸಂಘಟಿಸುತ್ತಾರೆ.
1946-47 ರ ಕೋಮು ಗಲಭೆಗಳಲ್ಲಿ, ಅದರಲ್ಲೂ ವಿಶೇಷವಾಗಿ ನವಖಲಿಯಲ್ಲಿ ಅವರು ಸಕ್ರಿಯರಾಗಿದ್ದರು. ಅವರು ಹೀಗೆ ಬರೆಯುತ್ತಾರೆ. “ನನ್ನ ಪುಟ್ಟ ಮಗ (ಸುಮಿತ್) ಆಗ ಕೇವಲ ಒಂದು ವರ್ಷದ ಮಗು. ನಾನು ಕಷ್ಟದಲ್ಲಿದ್ದೆ, ಆದರೆ ನವಖಲಿಯಲ್ಲಿ ಕಷ್ಟ ಅನುಭವಿಸುತ್ತಿರುವ ಸಹೋದರಿಯರ ಕೂಗು ಕೇಳಿಕೊಂಡು ನನಗೆ ಮನೆಯಲ್ಲಿ ಉಳಿಯಲು ಸಾಧ್ಯವಿರಲಿಲ್ಲ.”
ಅವರು ಅಪಾರ ಅಧ್ಯಯನ ನಡೆಸಿ ಬರೆದಿರುವ ಪುಸ್ತಕ “ಭಾರತೀಯ ಮಹಿಳಾ ಚಳುವಳಿಯಲ್ಲಿ ಕಮ್ಯುನಿಸ್ಟರು” 1940-50 ರ ನಡುವಿನ ಮಹಿಳಾ ಚಳುವಳಿಯ ಸಮಗ್ರ ಇತಿಹಾಸವನ್ನು ಕಟ್ಟಿಕೊಡುತ್ತದೆ.
ತನ್ನ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ, ಕಾರ್ಮಿಕ ಚಳುವಳಿಯಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದರು. ಹಲವು ಕಾರ್ಮಿಕ ಮುಷ್ಕರಗಳನ್ನು ಅವರು ಆಯೋಜಿಸಿದ್ದರು. ಹಲವು ಬಾರಿ ಜೈಲು ಶಿಕ್ಷೆಗೂ ಗುರಿಯಾಗಿದ್ದರು. ಅವರು ಮಹಿಳಾ ಚಳುವಳಿಗೆ ಗಣನೀಯ ಕೊಡುಗೆ ನೀಡಿದವರು. 1953 ರಲ್ಲಿ ಅವರು ಸದಸ್ಯರಾಗಿ ಆಯ್ಕೆಯಾಗಿದ್ದ ವುಮೆನ್ಸ್ ಇಂಟರ್ನ್ಯಾಷನಲ್ ಡೆಮಾಕ್ರಟಿಕ್ ಫೆಡರೇಷನ್ (WIDF) ಸಹಿತ ಹಲವು ಸಂಘಟನೆಗಳ ಕಾರ್ಯಕಾರಿ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದರು.
WIDF ನ ಸಂವಿಧಾನ ಸಭೆಯು 1945 ರಲ್ಲಿ ಪ್ಯಾರಿಸ್‌ನಲ್ಲಿ MARS ಸಂಯೋಜನೆಯೊಂದಿಗೆ ನಡೆಯುತ್ತದೆ. WIDF ಸಂಘಟನೆಯು 1953 ಜೂನ್ ತಿಂಗಳಲ್ಲಿ ಕೋಪನ್ ಹೇಗನ್‌ನಲ್ಲಿ ತನ್ನ ವಿಶ್ವ ಕಾಂಗ್ರೆಸ್‌ಗೆ ಭಾರತದಿಂದ ಪ್ರತಿನಿಧಿಗಳನ್ನು ಆಹ್ವಾನಿಸುತ್ತದೆ. ವಿದೇಶದಿಂದ ಹಿಂತಿರುಗುವ ರೇಣು ಚಕ್ರವರ್ತಿ ಆ ಆಹ್ವಾನವನ್ನು ಹಿಡಿದುಕೊಂಡೇ ಬಂದಿದ್ದರು. ಆ ಮೂಲಕ 30 ಮಹಿಳೆಯರ ನಿಯೋಗ ರಚಿಸಿ ಕಳುಹಿಸಿಕೊಡುತ್ತಾರೆ.
1953 ಮಾರ್ಚ್ 10 ರಂದು ದೆಹಲಿಯಲ್ಲಿ ಅದರ ಪೂರ್ವಸಿದ್ಧತಾ ಸಭೆ ನಡೆಯುತ್ತದೆ. ರೇಣು ಚಕ್ರವರ್ತಿ, ಅರುಣಾ ಅಸಫ್ ಅಲಿ ಸೇರಿದಂತೆ 12 ರಾಜ್ಯಗಳ ಇತರ ಪ್ರತಿನಿಧಿಗಳು WIDF ಮನವಿಗೆ ಸಹಿ ಮಾಡುತ್ತಾರೆ.
1953 ಮೇ 9 ರಂದು ರಾಷ್ಟ್ರೀಯ ಪೂರ್ವಸಿದ್ಧತಾ ಸಮ್ಮೇಳನವನ್ನು ದೆಹಲಿಯಲ್ಲಿ ಆಯೋಜಿಸಲಾಗುತ್ತದೆ. ಅಲ್ಲಿ ರಾಷ್ಟ್ರೀಯ ಸಮನ್ವಯ ಸಮಿತಿಯನ್ನು ರಚಿಸಲಾಗುತ್ತದೆ. 1954 ಜೂನ್ 4 ರಂದು ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವುಮೆನ್ (NFIW) ಸಂಘಟನೆಯ ಸ್ಥಾಪನಾ ಸಭೆ ಆರಂಭವಾಗುತ್ತದೆ. ಅಲ್ಲಿ ರೇಣು ಚಕ್ರವರ್ತಿ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಮತ್ತು ಸಂಘಟನೆಯ ಸಂವಿಧಾನದ ಕರಡು ತಯಾರಿಸುತ್ತಾರೆ. 1962 ರ NFIW ಸಮ್ಮೇಳನದಲ್ಲಿ ಅವರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ. 1970 ರ ತನಕ ಅವರ ಆ ಸ್ಥಾನದಲ್ಲಿ ಮುಂದುವರಿಯುತ್ತಾರೆ.
1950 ರ ದಶಕದಲ್ಲಿ ಜಮ್ಶೆಡ್‌ಪುರ ಮತ್ತಿತರ ಕಡೆಗಳಲ್ಲಿ ನಡೆದ ಕಾರ್ಮಿಕ ಚಳುವಳಿಯಲ್ಲಿ ರೇಣು ಚಕ್ರವರ್ತಿ ಸಕ್ರಿಯರಾಗಿದ್ದರು. ಆ ಕಾರಣದಿಂದ ಅವರು ಮತ್ತಷ್ಟು ಸೆರೆವಾಸವನ್ನೂ ಅನುಭವಿಸುತ್ತಾರೆ. AIWC ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಅವರು, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇದ್ದರೂ ಕೂಡ ಇತರ ಕಮ್ಯುನಿಸ್ಟ್ ಮತ್ತು ಎಡಪಂಥೀಯ ಮಹಿಳೆಯರೊಂದಿಗೆ ಕೆಲಸ ಮಾಡುತ್ತಲೇ ಬಂದರು.
1940 ರಿಂದ 1947 ರವರೆಗೆ ಅವರು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಲೇ, ಸಾಮುದಾಯಿಕ ಮತ್ತು ಪಕ್ಷದ ಕೆಲಸಗಳಿಗೂ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಅವರೊಬ್ಬ ಪ್ರತಿಭಾನ್ವಿತ ಗಾಯಕಿ ಮತ್ತು ಚಿತ್ರ ಕಲಾವಿದೆಯಾಗಿದ್ದರು. ಅವರ ಲೋಕಸಭಾ ವ್ಯಕ್ತಿಚಿತ್ರದಲ್ಲಿ ಅಂಕಣಗಳ ಓದು ಮತ್ತು ಬರವಣಿಗೆ ಅವರ ಹವ್ಯಾಸಗಳಾಗಿದ್ದವೆಂದು ಕಾಣಬಬಹುದು. ಅವರು ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳೆಲ್ಲವೂ ಮಹಿಳೆಯರ ವಿಮೋಚನೆಯ ಮೇಲೆ ಕೇಂದ್ರೀಕರಿಸಿದ್ದವು.
1970 ರ ಹೊತ್ತಿಗೆ ತನ್ನ ಜನ್ಮಜಾತ ಹೃದಯ ರೋಗದಿಂದ ಬಳಲುತ್ತಿದ್ದ ಅವರು ಹೃದಯ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು. ಇದರ ಹೊರತಾಗಿಯೂ ಅವರು ಸೆರೆಬ್ರಲ್ ಹೇಮರೇಜ್ ಆಗುವ ತನಕವೂ ಸಕ್ರಿಯವಾಗಿಯೇ ಇದ್ದರು.
1994 ಏಪ್ರಿಲ್ 16 ರಂದು ರೇಣು ಚಕ್ರವರ್ತಿ ನಿಧನರಾದರು.
ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.