ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಹನ್ನೊಂದನೇ ಲೇಖನ
ಚಂದ್ರಶೇಖರ್ ಯಾವತ್ತೂ ವ್ಯಕ್ತಿ ಕೇಂದ್ರಿತ ರಾಜಕಾರಣದ ವಿರೋಧಿಯಾಗಿದ್ದರು. ಸೈದ್ಧಾಂತಿಕ ಮತ್ತು ಸಾಮಾಜಿಕ ಬದಲಾವಣೆಯ ರಾಜಕಾರಣವನ್ನು ಬೆಂಬಲಿಸುತ್ತಿದ್ದರು.
ಹಿರಿಯ ಸಂಸದ ಮತ್ತು ಮಾಜಿ ಪ್ರಧಾನಿಯಾಗಿದ್ದ ಚಂದ್ರಶೇಖರ್ ಅವರು ಮೂರು ಬಾರಿ ರಾಜ್ಯಸಭೆಗೆ ಮತ್ತು ಎಂಟು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದವರು. ಅವರೊಬ್ಬ ಹುಟ್ಟಾ ಬಂಡಾಯಗಾರ. ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ, ಅವರ ಮಗಳು ಇಂದಿರಾ ಗಾಂಧಿ, ಆಕೆಯ ಮಗ ರಾಜೀವ್ ಗಾಂಧಿ, ಪಿವಿ ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಸೇರಿದಂತೆ ಹಲವು ಪ್ರಧಾನ ಮಂತ್ರಿಗಳ ವಿರುದ್ಧ ರಾಜಕೀಯ ಹೋರಾಟ ನಡೆಸಿದ ಹೆಗ್ಗಳಿಕೆ ಅವರಿಗಿದೆ.
ಕಾಂಗ್ರೆಸ್‌ನೊಳಗಿನ ಬಂಡಾಯಗಾರ
1962 ರಲ್ಲಿ ಮೊದಲ ಬಾರಿಗೆ ಪ್ರಜಾ ಸೋಷಿಯಲಿಸ್ಟ್ ಪಕ್ಷದ (ಪಿಎಸ್‌ಪಿ) ಅಭ್ಯರ್ಥಿಯಾಗಿ ರಾಜ್ಯಸಭೆಗೆ ಆಯ್ಕೆಯಾಗುವ ಅವರು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದ್ದರು. ಸಂಸದರಾಗಿ ಅವರು ಮಾಡುವ ಮೊದಲ ಕೆಲಸ, ಆಗಿನ ಪ್ರಧಾನ ಮಂತ್ರಿ ನೆಹರೂ ಅವರನ್ನು ಎದುರು ಹಾಕಿಕೊಳ್ಳುವುದು. ಆಗಿನ ಪಂಜಾಬ್ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ಕೈರೋನ್ ವಿರುದ್ಧ ಕೇಳಿ ಬಂದಿದ್ದ ಭ್ರಷ್ಟಾಚಾರ ಆರೋಪದ ಕುರಿತು ತನಿಖೆ ನಡೆಸಲು ಒಂದು ಆಯೋಗವನ್ನು ರಚಿಸಲಾಗಿತ್ತು. ಆ ಆಯೋಗ ತನ್ನ ವರದಿಯನ್ನು ಸಲ್ಲಿಸಿತೇ ಎಂದು ಚಂದ್ರಶೇಖರ್ ಪ್ರಧಾನ ಮಂತ್ರಿಯ ಬಳಿ ಕೇಳುತ್ತಾರೆ. ನೆಹರೂ ತಾನಿನ್ನೂ ಆ ವರದಿಯನ್ನು ಪಡೆದಿಲ್ಲ ಎಂದು ಉತ್ತರಿಸುತ್ತಾರೆ. ಆದರೆ, ಮರುದಿನ ಚಂದ್ರಶೇಖರ್ ಅವರು, ಕೆಲವು ಪತ್ರಿಕೆಗಳು ವರದಿಯ ಭಾಗಗಳನ್ನು ಪ್ರಕಟಿಸಿವೆ ಎಂದು ಹೇಳುತ್ತಾ ಅದೇ ವಿಷಯವನ್ನು ಮತ್ತೆ ಎತ್ತುತ್ತಾರೆ.
ಪ್ರಧಾನ ಮಂತ್ರಿ ತಾನು ಅದನ್ನು ಮರೆತಿದ್ದೆ ಮತ್ತು ವರದಿಯನ್ನು ಸ್ವೀಕರಿಸಲಾಗಿದೆ ಎಂದು ಒಪ್ಪಿಕೊಳ್ಳುತ್ತಾರೆ. “ಕ್ಷಮಿಸಿ” ಎಂದು ಚಂದ್ರಶೇಖರ್ ಬಳಿ ಹೇಳುತ್ತಾರೆ. ಚಂದ್ರಶೇಖರ್ ಆ ಪ್ರಶ್ನೆಯನ್ನು ಮುಂದುವರಿಸಿದ ರೀತಿ ನೆಹರೂ ಅವರನ್ನು ಪ್ರಭಾವಿತಗೊಳಿಸಿತ್ತು. “ಆ ಗಡ್ಡದಾರಿ ಯುವಕ ಯಾರು?” ಎಂದು ನೆಹರೂ ತನ್ನ ಸಂಪುಟದ ಮಂತ್ರಿಗಳಲ್ಲಿ ಒಬ್ಬರಾಗಿದ್ದ ದಿನೇಶ್ ಸಿಂಗ್ ಬಳಿ ಕೇಳುತ್ತಾರೆ. “ಅವರು ಉತ್ತರ ಪ್ರದೇಶದ ಪಿಎಸ್‌ಪಿ ಸದಸ್ಯ. ಇದೀಗ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.” ಎಂದು ಸಿಂಗ್ ಉತ್ತರಿಸುತ್ತಾರೆ.
ಮರುದಿನ ಅದೇ ಸಿಂಗ್ ಚಂದ್ರಶೇಖರ್ ಬಳಿ ನೆಹರೂ ಅವರನ್ನು ಭೇಟಿಯಾಗುವಂತೆ ಹೇಳುತ್ತಾರೆ. ಹಾಗೆ ಯುವ ಪೀಳಿಗೆ ಮತ್ತು ಹಳೆ ಪೀಳಿಗೆಯ ಭೇಟಿ ನಡೆಯುತ್ತದೆ. ಅದರೊಂದಿಗೆ ಚಂದ್ರಶೇಖರ್ ಅವರ ಸುಮಾರು ಅರ್ಧ ಶತಮಾನಗಳಷ್ಟು ಕಾಲದ ಪ್ರಜಾಸತ್ತಾತ್ಮಕ ವೃತ್ತಿಜೀವನಕ್ಕೆ ಮುನ್ನುಡಿ ಬರೆಯಲಾಗುತ್ತದೆ. 1964 ಮೇ ತಿಂಗಳಲ್ಲಿ ನೆಹರೂ ಅವರ ಮರಣದ ನಂತರ ಚಂದ್ರಶೇಖರ್ ಅವರು ಅಶೋಕ್ ಮೆಹ್ತಾ, ಎನ್‌ಡಿ ತಿವಾರಿ, ಎಸ್‌ಎಮ್. ಕೃಷ್ಣ, ವಸಂತ್ ಸಾಥೇ ಮೊದಲಾದವರ ಜೊತೆಗೆ ಕಾಂಗ್ರೆಸ್ ಪಕ್ಷವನ್ನು ಸೇರುತ್ತಾರೆ.
ಆ ನಂತರ ಚಂದ್ರಶೇಖರ್ ಅವರು ಇಂದಿರಾ ಗಾಂಧಿಯವರ ಆಪ್ತರಾಗುತ್ತಾರೆ. 1969 ರಲ್ಲಿ ಕಾಂಗ್ರೆಸ್ ವಿಭಜನೆಯ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಚುನಾಯಿತ ಸದಸ್ಯರಾಗಿದ್ದರು. ಇಂದಿರಾ ಗಾಂಧಿ ಚಂದ್ರಶೇಖರ್ ಬಳಿ ಪಕ್ಷವು ಅನುಸರಿಸಬೇಕಾದ ಆರ್ಥಿಕ ನೀತಿಗಳ ಕುರಿತು ಒಂದು ಟಿಪ್ಪಣಿ ನೀಡಲು ಕೋರಿದ್ದರು. ಚಂದ್ರಶೇಖರ್ ಅದಕ್ಕಾಗಿ ಒಂದು ಉನ್ನತ ಮಟ್ಟದ ಎಡಪಂಥೀಯ ಅರ್ಥಶಾಸ್ತ್ರಜ್ಞರ ಸಭೆ ಕರೆದು, ಅವರು ಇಂದಿರಾ ಗಾಂಧಿ ಕೋರಿದ ಟಿಪ್ಪಣಿ ತಯಾರಿಸಿಕೊಡಬೇಕೆಂದು ಆಗ್ರಹಿಸುತ್ತಾರೆ. ಏಐಸಿಸಿಯ ಬೆಂಗಳೂರು ಅಧಿವೇಶನದಲ್ಲಿ ಅವರು ಆ ಟಿಪ್ಪಣಿಯನ್ನು ಓದುತ್ತಾರೆ. ನಂತರದಲ್ಲಿ ಇದು ಹತ್ತು ಅಂಶಗಳ ಕಾರ್ಯಕ್ರಮ ಎಂದೇ ಪ್ರಸಿದ್ಧವಾಯಿತು. ಹಿಂದಿನ ರಾಜರುಗಳಿಗೆ ನೀಡುತ್ತಿದ್ದ ರಾಜಧನ ರದ್ಧತಿ, ಬ್ಯಾಂಕ್ ಮತ್ತು ಕಲ್ಲಿದ್ದಲು ರಾಷ್ಟ್ರೀಕರಣ ಮತ್ತು ಗರೀಬೀ ಹಠಾವೋ ಮೊದಲಾದ ಕಾರ್ಯಕ್ರಮಗಳಿಗೆ ಇದು ಬುನಾದಿ ಹಾಕಿತು.
ಸ್ಥಾಪಿತ ಹಿತಾಸಕ್ತಿಗಳ ವಿರುದ್ಧದ ಅವರ ಹೋರಾಟಗಳು ಮತ್ತು ನಿಲುವುಗಳ ಕಾರಣದಿಂದ ಚಂದ್ರಶೇಖರ್ ಅವರನ್ನು “ಯಂಗ್ ಟರ್ಕ್” ಎಂದೇ ಕರೆಯುತ್ತಿದ್ದರು. ಸಮಾನತೆಯ ನೀತಿಗಳಿಗಾಗಿ ಕಾಂಗ್ರೆಸ್ ಒಳಗಡೆಯೇ “ಸಕ್ರಿಯ ಗುಂಪು” ರಚಿಸಿಕೊಂಡಿದ್ದ ಇತರ ಯಂಗ್ ಟರ್ಕ್‌ಗಳಲ್ಲಿ ಕೃಷ್ಣಕಾಂತ್, ಮೋಹನ್ ಧಾರಿಯಾ, ರಾಮ್ ಧನ್ ಮತ್ತು ಲಕ್ಷ್ಮಿ ಕಾಂತಮ್ಮ ಮೊದಲಾದವರು ಸೇರಿದ್ದರು.
ಚಂದ್ರಶೇಖರ್ ಯಾವತ್ತೂ ವ್ಯಕ್ತಿ ಕೇಂದ್ರಿತ ರಾಜಕಾರಣದ ವಿರೋಧಿಯಾಗಿದ್ದರು. ಸೈದ್ಧಾಂತಿಕ ಮತ್ತು ಸಾಮಾಜಿಕ ಬದಲಾವಣೆಯ ರಾಜಕಾರಣವನ್ನು ಬೆಂಬಲಿಸುತ್ತಿದ್ದರು. ಹಾಗಾಗಿಯೇ 1973-75 ರ ಪ್ರಕ್ಷಬ್ಧ ಕಾಲಘಟ್ಟದಲ್ಲಿ ಅವರು ಹಿಂದಿನ ತಲೆಮಾರಿನ ನಾಯಕರಾಗಿದ್ದ ಜಯಪ್ರಕಾಶ್ ನಾರಾಯಣ್ ಮತ್ತು ಅವರ ಆದರ್ಶ ತುಂಬಿದ ಬದುಕಿನ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಬಹಳ ಬೇಗನೇ ಅವರು ಕಾಂಗ್ರೆಸ್‌ನೊಳಗಿನ ಭಿನ್ನಮತದ ಕೇಂದ್ರಬಿಂದುವಾಗಿ ಬದಲಾಗುತ್ತಾರೆ.
ಅವರು ತಮ್ಮ ಅಧಿನಾಯಕಿ ಇಂದಿರಾ ಗಾಂಧಿಯವರ ನೀತಿಗಳನ್ನು ಕೂಡ ಕಟುವಾಗಿ ಟೀಕಿಸುತ್ತಿದ್ದರು. 1975 ಜೂನ್ 25 ರಂದು ತುರ್ತು ಪರಿಸ್ಥಿತಿ ಘೋಷಣೆಯಾದಾಗ ಚಂದ್ರಶೇಖರ್ ಕಾಂಗ್ರೆಸ್ ಸಂಸದರಾಗಿದ್ದರು. ಅಷ್ಟೇ ಅಲ್ಲದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಉನ್ನತ ಅಂಗಗಳಾದ ಕೇಂದ್ರ ಚುನಾವಣಾ ಸಮಿತಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ಆದರೂ ಕೂಡ ಆಂತರಿಕ ಭದ್ರತಾ ಕಾಯ್ದೆಯಡಿಯಲ್ಲಿ ಸುಮಾರು 19 ತಿಂಗಳುಗಳ ಕಾಲ ಅವರು ಜೈಲುವಾಸವನ್ನು ಅನುಭವಿಸಬೇಕಾಗಿ ಬಂದಿತ್ತು.
ಆರಂಭಿಕ ಕಾಲ
1927 ಏಪ್ರಿಲ್ 17 ರಂದು ಉತ್ತರ ಪ್ರದೇಶದ ಬಲ್ಲಿಯಾದಲ್ಲಿರುವ ಇಬ್ರಾಹಿಂಪಟ್ಟಿ ಎಂಬ ಹಳ್ಳಿಯಲ್ಲಿ ಒಂದು ಕಿಸಾನ್ ರಜಪೂತ ಕುಟುಂಬದಲ್ಲಿ ಚಂದ್ರಶೇಖರ್ ಅವರ ಜನನ. ಬಲ್ಲಿಯಾದಲ್ಲಿರುವ ಸತೀಶ್ ಚಂದ್ರ ಪಿಜಿ ಕಾಲೇಜಿನಲ್ಲಿ ಪದವಿ ಮತ್ತು 1951 ರಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದಿಂದ ಎಂಎ ಪದವಿ ಅವರ ವಿದ್ಯಾಭ್ಯಾಸ.
ವಿದ್ಯಾರ್ಥಿ ರಾಜಕೀಯದಲ್ಲಿ ಅವರೊಬ್ಬ ಫೈರ್‌ಬ್ರ್ಯಾಂಡ್ ಎಂದೇ ಪ್ರಸಿದ್ಧರಾಗಿದ್ದರು. ಆಚಾರ್ಯ ನರೇಂದ್ರ ದೇವ ಅವರೊಂದಿಗೆ ಸಮಾಜವಾದಿ ಪಕ್ಷದಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದವರು. ಓದು ಮುಗಿಸಿದ ನಂತರ, ಸಮಾಜವಾದಿ ಚಳವಳಿಯಲ್ಲಿ ಪೂರ್ಣ ಕಾಲಿಕ ಕಾರ್ಯಕರ್ತರಾಗಿ ತೊಡಗಿಸಿಕೊಳ್ಳುತ್ತಾರೆ.
ಬಲ್ಲಿಯಾದ ಪಿಎಸ್‌ಪಿ ಜಿಲ್ಲಾ ಕಾರ್ಯದರ್ಶಿಯಾಗಿ 1951 ರಲ್ಲಿ ಮೊದಲ ಬಾರಿಗೆ ಆಯ್ಕೆಯಾಗುತ್ತಾರೆ. ನಂತರದ ಒಂದು ವರ್ಷದೊಳಗೆ ಪಿಎಸ್‌ಪಿಯ ಉತ್ತರ ಪ್ರದೇಶ ರಾಜ್ಯ ಘಟಕದ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ. 1955-56 ರ ಹೊತ್ತಿಗೆ ಅವರು ರಾಜ್ಯದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. 1962 ರಲ್ಲಿ ಉತ್ತರ ಪ್ರದೇಶದಿಂದ ಪಿಎಸ್‌ಪಿ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಆಯ್ಕೆಯಾಗುವುದರೊಂದಿಗೆ ಅವರ ಸಂಸದೀಯ ಬದುಕು ಆರಂಭವಾಗುವುದು.
1968 ಮತ್ತು 1974 ರಲ್ಲಿ ಅವರು ಉತ್ತರ ಪ್ರದೇಶದಿಂದಲೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತೆ ರಾಜ್ಯಸಭೆಗೆ ಆಯ್ಕೆಯಾಗುತ್ತಾರೆ. 1977 ರಲ್ಲಿ ಬಲ್ಲಿಯಾದಿಂದ ಜನತಾ ಪಕ್ಷದ ಸದಸ್ಯರಾಗಿ ಲೋಕಸಭೆ ಪ್ರವೇಶಿಸುತ್ತಾರೆ. 1977 ಮೇ 1 ರಂದು ಆಡಳಿತಾರೂಢ ಜನತಾ ಪಕ್ಷದ ಅಧ್ಯಕ್ಷರಾಗಿ ಅವರು ಆಯ್ಕೆಯಾಗುತ್ತಾರೆ. 1988 ರವರೆಗೆ ಆ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ.
ಅದರ ನಂತರ ಅವರು ಜನತಾ ಪಾರ್ಟಿಯ ವಿವಿಧ ಅವತಾರಗಳಲ್ಲಿ ಬಲ್ಲಿಯಾದಿಂದ ಸ್ಫರ್ಧಿಸಿ ಗೆಲ್ಲುತ್ತಾರೆ. 1980 ರಲ್ಲಿ ಜನತಾ ಪಾರ್ಟಿ, 1989 ರಲ್ಲಿ ಜನತಾ ದಳ, 1991, 1996, 1998, 1999 ಮತ್ತು 2004 ರಲ್ಲಿ ಎಸ್‌ಜೆಪಿಯಿಂದ ಗೆಲ್ಲುತ್ತಾರೆ. 1984 ರಲ್ಲಿ ಒಂದು ಬಾರಿ ಮಾತ್ರವೇ ಆ ಕ್ಷೇತ್ರದಲ್ಲಿ ಅವರು ಸೋಲು ಕಂಡಿದ್ದರು.
ಚಂದ್ರಶೇಖರ್ ಒಬ್ಬ ಅಸಾಮಾನ್ಯ ಸಂಸದೀಯ ಪಟುವಾಗಿದ್ದರು. ಅವರಿಗೆ 1995 ರಲ್ಲಿ ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅವರು ಸಂಸತ್ತಿನಲ್ಲಿ ಯಾವುದಾದರೂ ವಿವಾದಾತ್ಮಕ ವಿಷಯಗಳ ಕುರಿತು ಮಾತನಾಡುವಾಗ ಅಥವಾ ಅಂತಹ ವಿಷಯಗಳಲ್ಲಿ ಮಧ್ಯಪ್ರವೇಶ ಮಾಡುವಾಗಲೆಲ್ಲ, ಇಡೀ ಸದನವು ಅವರ ಮಾತನ್ನು ಉತ್ಸಾಹದಿಂದ ಕೇಳಿಸಿಕೊಳ್ಳುತ್ತಿತ್ತು. ಸರಕಾರ ಕೂಡ ಅವರ ಅಭಿಪ್ರಾಯಗಳಿಗೆ ಗೌರವ ಕೊಡುತ್ತಿತ್ತು. ಅವರು ಮಾತನಾಡಿದರು, ಗಟ್ಟಿಯಾಗಿಯೇ ಮಾತನಾಡಿದರು, ತನ್ನ ನೋಟ್ ನೋಡದೆ ಮಾತನಾಡುತ್ತಲೇ ಹೋದರು.
ಭಾರತ ಯಾತ್ರೆ (1983)
ಚಂದ್ರಶೇಖರ್ ಅವರು 6 ಜನವರಿ 1983 ರಿಂದ 25 ಜೂನ್ 1983 ರ ತನಕ ಸುಮಾರು 4260 ಕಿ.ಮೀ ದೀರ್ಘವಾದ ಪಾದಯಾತ್ರೆ ಕೈಗೊಂಡಿದ್ದರು. ಕನ್ಯಾಕುಮಾರಿಯಿಂದ ಆರಂಭವಾದ ಆ ಪಾದಯಾತ್ರೆ ನವದೆಹಲಿಯ ರಾಜ್‌ಘಾಟ್ ತನಕ ಸಾಗಿತ್ತು. ಜನಸಾಮಾನ್ಯರ ನಡುವೆ ಸಂಪರ್ಕವನ್ನು ಗಟ್ಟಿಗೊಳಿಸಲು ಮತ್ತು ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಆ ಪಾದಯಾತ್ರೆಯನ್ನು ಕೈಗೊಳ್ಳಲಾಗಿತ್ತು. ಜನವರಿ 6 ರಂದು ಕರ್ನಾಟಕದಲ್ಲಿ ಅವರ ಪಕ್ಷ ಅಧಿಕಾರ ವಹಿಸಿಕೊಂಡ ದಿನವೇ ಅವರು ಕನ್ಯಾಕುಮಾರಿಯಿಂದ ಭಾರತ ಯಾತ್ರೆ ಹೊರಟಿದ್ದರು.
ತರ್ತು ಪರಿಸ್ಥಿತಿ ಘೋಷಣೆಯ ಎಂಟನೇ ವಾರ್ಷಿಕ ಮತ್ತು ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ದಿನವಾದ ಜೂನ್ 25 ರಂದು ನವದೆಹಲಿಯ ರಾಜ್‌ಘಾಟ್‌ನಲ್ಲಿ ಭಾರತ ಯಾತ್ರೆಯನ್ನು ಸಮಾರೋಪ ಮಾಡುತ್ತಾರೆ.
1988 ರಲ್ಲಿ ಜನತಾ ಪಾರ್ಟಿ ಇತರ ಪಕ್ಷಗಳೊಂದಿಗೆ ವಿಲೀನಗೊಂಡು ವಿ.ಪಿ. ಸಿಂಗ್ ನೇತೃತ್ವದ ಜನತಾ ದಳ ರೂಪುಗೊಳ್ಳುತ್ತದೆ. 1989 ರ ಸಾರ್ವತ್ರಿಕ ಚುನಾವಣೆಗಳ ನಂತರ ಜನತಾ ದಳದ ಸಂಸದೀಯ ಪಕ್ಷವನ್ನು ಮುನ್ನಡೆಸಲು ವಿ.ಪಿ ಸಿಂಗ್ ಅವರಿಗಿಂತ ಹೆಚ್ಚಿನ ಅರ್ಹತೆ ತನಗಿದೆ ಎಂದು ಚಂದ್ರಶೇಖರ್ ಭಾವಿಸುತ್ತಾರೆ.
ವಿ.ಪಿ. ಸಿಂಗ್ ಉತ್ತರ ಪ್ರದೇಶ ರಾಜಕೀಯಕ್ಕೆ ಪ್ರವೇಶಿಸುವ ಮೊದಲೇ ಸಂಸದರಾಗಿದ್ದ ಚಂದ್ರಶೇಖರ್ ಹಿರಿಯ ಸಂಸದರು ಮತ್ತು ಹಿರಿಯ ರಾಜಕಾರಣಿಯೂ ಆಗಿದ್ದರು. ಹಾಗಾಗಿಯೇ ತನಗೆ ಸಂಸದೀಯ ಪಕ್ಷದ ಬೆಂಬಲ ಇದೆ ಎಂದು ಅವರು ಭಾವಿಸಿರಬಹುದು.
ಆದರೆ 1988 ರಲ್ಲಿ ವಿ.ಪಿ. ಸಿಂಗ್ ಜೊತೆಗೆ ಕಾಂಗ್ರೆಸ್ ತೊರೆದು ಬಂದಿದ್ದ ಅರುಣ್ ನೆಹರು ಮತ್ತು ದೇವಿಲಾಲ್ ಮೈತ್ರಿ ಮಾಡಿಕೊಂಡು, ಸಂಸದೀಯ ನಾಯಕನನ್ನು ಆರಿಸುವ ಸಮಯ ಬಂದಾಗ, ಚಂದ್ರಶೇಖರ್ ಅವರಿಗೆ ಯಾವ ಸಾಧ್ಯತೆಯನ್ನೂ ಬಿಟ್ಟುಕೊಡದೆ ವಿ.ಪಿ. ಸಿಂಗ್ ಅವರನ್ನು ಆಯ್ಕೆ ಮಾಡಿ ಬಿಡುತ್ತಾರೆ. ಪ್ರಧಾನಿಯಾಗಿ ತನ್ನನ್ನು ಆಯ್ಕೆ ಮಾಡದ ಆ ನಡೆಯಿಂದ ಕೋಪಗೊಳ್ಳುವ ಚಂದ್ರಶೇಖರ್ ಸಭೆಯಿಂದ ಎದ್ದು ಹೊರ ನಡೆಯುತ್ತಾರೆ.
ಹಂಗಾಮಿ ಪ್ರಧಾನಿ
ವಿ.ಪಿ. ಸಿಂಗ್ ಮತ್ತು ದೇವಿಲಾಲ್ ಒಟ್ಟಿಗೆ ಒಪ್ಪಂದ ಮಾಡಿಕೊಂಡು ತಾನು ಪ್ರಧಾನ ಮಂತ್ರಿಯಾಗುವುದನ್ನು ತಪ್ಪಿಸಿದರೆಂದು ಚಂದ್ರಶೇಖರ್ ಯಾವಾಗಲೂ ದೂರುತ್ತಿದ್ದರು. 1990 ರಲ್ಲಿ ಮಂಡಲ್ ವರದಿಯ ನಂತರದ ಗಲಾಟೆಯ ಸಮಯದಲ್ಲಿ ಅದೇ ನೆಪವನ್ನು ವಿ.ಪಿ. ಸಿಂಗ್ ಸರಕಾರವನ್ನು ಉರಳಿಸಲೂ ಬಳಸಿಕೊಳ್ಳುತ್ತಾರೆ. ನಂತರ ಅವರು ಹೊಸ ಪಕ್ಷವಾದ ಜನತಾ ದಳ (ಎಸ್) ಕಟ್ಟುತ್ತಾರೆ. ಅವರ ಜೊತೆಗಿದ್ದ 64 ಸಂಸದರು ಮತ್ತು ರಾಜೀವ್ ಗಾಂಧಿಯವರ ಸಹಕಾರದಿಂದ 1990 ರಲ್ಲಿ ವಿ.ಪಿ. ಸಿಂಗ್ ಅವರನ್ನು ಕೆಳಗಿಳಿಸಿ ಭಾರತದ ಎಂಟನೇ ಪ್ರಧಾನ ಮಂತ್ರಿಯಾಗಿ ಚಂದ್ರಶೇಖರ್ ನೇಮಕಗೊಳ್ಳುತ್ತಾರೆ.
ಅವರ ಅಧಿಕಾರಾವಧಿಯಲ್ಲಿ, ಮನಮೋಹನ್ ಸಿಂಗ್ ಆರ್ಥಿಕ ಸಲಹೆಗಾರರಾಗಿದ್ದರು. ಅವರು ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರೊಂದಿಗೆ ಆರ್ಥಿಕ ಉದಾರೀಕರಣದ ಕುರಿತು ಹಲವು ದಾಖಲೆಗಳನ್ನು ಸಿದ್ಧಪಡಿಸಿದ್ದರು. ಆದರೆ ಕಾಂಗ್ರೆಸ್ ತನ್ನ ಬೆಂಬಲವನ್ನು ಹಿಂಪಡೆದುಕೊಂಡ ಕಾರಣ ಸಂಸತ್ತಿನಲ್ಲಿ ಅವು ಯಾವುವೂ ಅಂಗೀಕಾರವಾಗುವುದಿಲ್ಲ.
ಜೈರಾಮ್ ರಮೇಶ್ ತಮ್ಮ “ಟು ದಿ ಬ್ರಿಂಕ್ ಅಂಡ್ ಬ್ಯಾಕ್: ಇಂಡಿಯಾಸ್ 1991 ಸ್ಟೋರಿ” ಎಂಬ ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ. “ಚಂದ್ರಶೇಖರ್ ಅವರ ವ್ಯಾಪಾರ ಮತ್ತು ಹೂಡಿಕೆ ಕುರಿತಾದ ಸಂಪುಟ ಸಮಿತಿಯು 11 ಮಾರ್ಚ್ 1991 ರಂದೇ ಹೊಸ ರಫ್ತು ನೀತಿಯನ್ನು ಅನುಮೋದಿಸಿತ್ತು. ಆ ಅನುಮೋದನೆಯಲ್ಲಿ ನಂತರದಲ್ಲಿ ಭಾರತದ ಆರ್ಥಿಕ ಸುಧಾರಣೆಗೆ ನಾಂದಿ ಹಾಡಿದ ಪಿ.ವಿ. ನರಸಿಂಹ ರಾವ್ ಸರಕಾರದ 4 ಜುಲೈ 1991 ರ ಪ್ಯಾಕೇಜ್‌ನ ಮುಖ್ಯ ಅಂಶಗಳು ಅಡಕವಾಗಿದ್ದವು.”
ಆದರೂ, ಚಂದ್ರಶೇಖರ್ ಕೇವಲ ಏಳು ತಿಂಗಳ ಕಾಲ ಮಾತ್ರವೇ ಪ್ರಧಾನಿಯಾಗಿದ್ದರು. ಚರಣ್ ಸಿಂಗ್ ನಂತರ ಎರಡನೇ ಅತಿ ಕಡಿಮೆ ಅವಧಿಯ ಪ್ರಧಾನ ಮಂತ್ರಿ ಅವರಾಗಿದ್ದರು. ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವ ಮೊದಲೇ 1991 ಮಾರ್ಚ್ 6 ರಂದು ಕಾಂಗ್ರೆಸ್ ತನ್ನ ಬೆಂಬಲವನ್ನು ಹಿಂಪಡೆದ ಕಾರಣ ಚಂದ್ರಶೇಖರ್ ರಾಜೀನಾಮೆ ನೀಡಬೇಕಾಗಿ ಬರುತ್ತದೆ.
ಸಂಸದರಾಗಿ ಅವರು ಬಡಬಗ್ಗರ ಪರವಾಗಿ ತೀವ್ರ ಆಸಕ್ತಿ ಹೊಂದಿದ್ದರು. ಆ ವರ್ಗದ ಏಳಿಗೆಗಾಗಿ, ಸಾಮಾಜಿಕ ಬದಲಾವಣೆಗಾಗಿ ತ್ವರಿತ ನೀತಿಗಳನ್ನು ರೂಪಿಸಲು ಅವರು ಸದಾ ವಾದಿಸುತ್ತಿದ್ದರು. ಆ ಮೂಲಕ ತನ್ನದೇ ಆದ ಛಾಪು ಮೂಡಿಸಿದರು. ಅದರೊಂದಿಗೆ ಪ್ರಭುತ್ವ ಬೆಂಬಲದೊಂದಿಗೆ ಬೆಳೆದು ಬರುತ್ತಿದ್ದ ಏಕಸ್ವಾಮ್ಯತನಗಳ ವಿರುದ್ಧ ಅವರು ತೀವ್ರ ದಾಳಿಗಿಳಿದಾಗ ಅಧಿಕಾರ ಕೇಂದ್ರಗಳೊಂದಿಗೆ ಸಂಘರ್ಷವನ್ನೂ ಎದುರಿಸಬೇಕಾಯಿತು.
ಲೋಕಸಭೆಯಲ್ಲಿ ಕೆಲವು ಹಾಸ್ಯಭರಿತ ಕ್ಷಣಗಳಿದ್ದವು. ಚಂದ್ರಶೇಖರ್ ಅವರು ಅಟಲ್ ಬಿಹಾರಿ ವಾಜಪೇಯಿಯವರನ್ನು “ಗುರುದೇವ” ಎಂದು ಕರೆಯುತ್ತಿದ್ದರು. ಬದಲಿಗೆ ವಾಜಪೇಯಿ ಚಂದ್ರಶೇಖರ್ ಅವರನ್ನು “ಗುರು ಘಾಂಟಾಲ್” ಎಂದು ಕರೆಯುತ್ತಿದ್ದರು. ಪ್ರಧಾನಮಂತ್ರಿಯಾಗಿದ್ದ ಪಿ.ವಿ. ನರಸಿಂಹರಾವ್ ಸಾಮಾನ್ಯವಾಗಿ ಯಾವುದೇ ವಿವಾದಾತ್ಮಕ ವಿಷಯಗಳ ಮೇಲೆ ಮಾತನಾಡುತ್ತಿರಲಿಲ್ಲ. ಆದಷ್ಟೂ ಅಂತಹ ಸಂಗತಿಗಳನ್ನು ತಪ್ಪಿಸಿಕೊಳ್ಳುತ್ತಿದ್ದರು. ವಿರೋಧ ಪಕ್ಷದ ಸದಸ್ಯರು ಕೆರಳಿಸಿದರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಇದನ್ನು ಗಮನಿಸಿದ ಚಂದ್ರಶೇಖರ್ ಒಂದು ದಿನ ಅವರನ್ನು “ಮೌನಿ ಬಾಬಾ” ಎಂದು ಕರೆದು ಬಿಟ್ಟಿದ್ದರು.
ಚಂದ್ರಶೇಖರ್ 1969 ರಲ್ಲಿ ಯಂಗ್ ಇಂಡಿಯನ್ ಎಂಬ ವಾರಪತ್ರಿಕೆಯನ್ನು ಸ್ಥಾಪಿಸಿ ಅದರ ಸಂಪಾದಕರಾಗಿದ್ದರು. ಆ ಕಾಲದಲ್ಲಿ ಅತಿಹೆಚ್ಚು ಉಲ್ಲೇಖಿಸಲ್ಪಟ್ಟ ಸಂಪಾದಕೀಯಗಳು ಎಂದು ಅವು ಹೆಗ್ಗಳಿಕೆ ಪಡೆದುಕೊಂಡಿದ್ದವು. ಇಂದಿರಾ ಗಾಂಧಿಯಿಂದ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದಾಗ ಮೇರಿ ಜೈಲ್ ಡೈರಿ ಎಂಬ ಪುಸ್ತಕವನ್ನೂ ಬರೆದಿದ್ದರು. ಅವರ ಬರಹಗಳ ಸಂಗ್ರಹ ಡೈನಾಮಿಕ್ಸ್ ಆಫ್ ಸೋಷಿಯಲ್ ಚೇಂಜ್ ಬಹಳ ಪ್ರಸಿದ್ಧವಾಗಿದೆ.
ದೀರ್ಘಕಾಲದ ಅನಾರೋಗ್ಯದ ಕಾರಣ 2007 ಜುಲೈ 8 ರಂದು ಚಂದ್ರಶೇಖರ್ ನಿಧನರಾದರು. ಆಗ ಅವರಿಗೆ 80 ವರ್ಷ ವಯಸ್ಸಾಗಿತ್ತು.
ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.