Home ರಾಜ್ಯ ನ.13 ರಿಂದ 15ರ ವರೆಗೂ ಸಿಐಟಿಯುನ 16ನೇ ರಾಜ್ಯ ಸಮ್ಮೇಳನ – ಮೀನಾಕ್ಷಿ ಸುಂದರಂ

ನ.13 ರಿಂದ 15ರ ವರೆಗೂ ಸಿಐಟಿಯುನ 16ನೇ ರಾಜ್ಯ ಸಮ್ಮೇಳನ – ಮೀನಾಕ್ಷಿ ಸುಂದರಂ

ಹಾಸನ : ನಗರದ ಅಂಬೇಡ್ಕರ್ ಭವನದಲ್ಲಿ ನವೆಂಬರ್ 13 ರಿಂದ 15ರ ವರೆಗೆ ಸಿಐಟಿಯುವಿನ 16ನೇ ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ತಿಳಿಸಿದರು.

  ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಕಳೆದ 10 ವರ್ಷಗಳ ಅವಧಿಯಲ್ಲಿ ದೊಡ್ಡಪ್ರಮಾಣದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇತ್ತೀಚಿನ ಬೆಳವಣಿಗೆಗಳಿಂದ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುವ ಎಲ್ಲಾ ಸಾಧ್ಯತೆಗಳು ಎದುರಾಗುತ್ತಿವೆ. ಭಾರತ ಯಾರ ಜೊತೆಗೆ ವ್ಯಾಪಾರ ಮಾಡಬೇಕು ಎಂಬುದನ್ನು ಅಮೇರಿಕ ತೀರ್ಮಾನ ಮಾಡುವ ರಾಜಕೀಯ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರ ಪರಿಣಾಮವೇನೆಂದರೆ ಅಮೇರಿಕಾದ ಕೃಷಿ ಉತ್ಪನ್ನಗಳನ್ನು ಭಾರತಕ್ಕೆ ಯಾವುದೇ ಸುಂಕವಿಲ್ಲದೆ ಕಳುಹಿಸಲು ಅಮೇರಿಕಾ ನಿರ್ಧರಿಸಿದೆ. ಇದರಿಂದಾಗಿ ಭಾರತದಲ್ಲಿ ಹೈನುಗಾರಿಕೆ ಸೇರಿದಂತೆ ಇತರೆ ಕೃಷಿ ಉತೊನ್ನಗಳ ಮೇಲೆ ತೀರ್ವತರವಾದ ದಾಳಿ ಆರಂಭವಾಗಿ, ಇವುಗಳ ಮೇಲೆ ಅವಲಂಭಿತವಾಗಿರುವ ಗ್ರಾಮೀಣ ಉದ್ಯೋಗ ಕುಸಿದು, ನಿರುದ್ಯೋಗ ಪ್ರಮಾಣ ತೀರ್ವವಾಗಿ ಹೆಚ್ಚಳವಾಗುತ್ತಿದೆ ಎಂದರು. ಈಗಾಗಲೇ ಭಾರತದ ಕೃಷಿ ಬಿಕ್ಕಟ್ಟಿಗೆ ಸಿಲುಕಿದ್ದು ಅವೈಜ್ಞಾನಿಕವಾದ ಭೂಸ್ವಾಧೀನದಿಂದಾಗಿ ಕೃಷಿಯನ್ನ ನಂಬಿರುವ ರೈತರು ಮತ್ತು ಕೃಷಿ ಕೂಲಿಕಾರರನ್ನು ಗ್ರಾಮೀಣ ಪ್ರದೇಶದಿಂದ ಒಕ್ಕಲೆಬ್ಬಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಕಳೆದುಕೊಂಡವರಿಗೆ ನಗರ ಪ್ರದೇಶಗಳಲ್ಲಿಯೂ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ. ಸೃಷಿಯಾಗುತ್ತಿರುವ ಉದ್ಯೋಗಗಳನ್ನೂ ಉದ್ಯೋಗ ಎಂದು ಕರೆಯದಂತಾಗಿದೆ. ಕಳೆದ 10 ವರ್ಷಗಳಲ್ಲಿ ಖಾಯಂ ಉದ್ಯೋಗಗಳೇ ಸೃಷ್ಠಿಯಾಗುತ್ತಿಲ್ಲ ಎಂಬುದನ್ನು ಸರ್ಕಾರಿ ಅಂಕಿಅಂಶಗಳೇ ಸಾಬೀತುಪಡಿಸುತ್ತಿವೆ. ಇದೇ ಸಂದರ್ಭಲ್ಲಿ ಕಾರ್ಪೋರೇಟ್‌ಗಳ ಆಸ್ತಿಯ ಪ್ರಮಾಣದಲ್ಲಿ ತೀರ್ವ ಏರಿಕೆ ಕಂಡುಬಂದಿದೆ. ಭಾರತದಲ್ಲಿ ಐದು ಕಂಪನಿಗಳ ಹಣಕಾಸೇತರ ಆಸ್ತಿಯಲ್ಲಿ ದೇಶದ ಜಿಡಿಪಿಯ ಶೇಖಡ 20 ರಷ್ಟಿದೆ. ದೇಶದ ಆಸ್ತಿ ಕೆಲವೇ ಕೆಲವು ಕಾರ್ಪೊರೇಟ್ ಕಂಪನಿಗಳ ಕೈಯಲ್ಲಿ ಶೇಖರಣೆಯಾಗುತ್ತಿರುವಾಗ ದುಡಿಯುವ ಕಾರ್ಮಿಕ ವರ್ಗದ ವೇತನದಲ್ಲಿ ತೀರ್ವ ಕಡಿತವಾಗುತ್ತಿದೆ. ಇದರಿಂದ ದೇಶದಲ್ಲಿ ಬಡತನ ಹೆಚ್ಚಳವಾಗುತ್ತಿದ್ದು ನಿರುದ್ಯೋಗ ಪ್ರಮಾಣವೂ ತೀರ್ವವಾಗುತ್ತಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯವನ್ನು ಕಾಪಾಡುವ ರೀತಿಯ ನೀತಿಗಳನ್ನು ಜಾರಿಗೆ ತರಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಬದಲಾಗಿ ಎಲ್ಲಾ ಇಲಾಖೆಗಳಲ್ಲೂ ಗುತ್ತಿಗೆ ಕಾರ್ಮಿಕರ ಪ್ರಮಾಣ ಹೆಚ್ಚಳವಾಗುತ್ತಿದೆ. ಹೊರಗುತ್ತಿಗೆ ನೌಕರರು ಖಾಯಂ ಉದ್ಯೋಗವನ್ನು ಕೇಳುವ ಹಕ್ಕೇ ಇಲ್ಲ ಎಂಬ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಸರ್ಕಾರಗಳು ಸಾರ್ವಜನಿಕ ವಿತರಣಾವ್ಯವಸ್ಥೆ, ಶಿಕ್ಷಣ, ಆರೋಗ್ಯದಂತಹ ಸಾರ್ವಜನಿಕ ಕ್ಷೇತ್ರಗಳಿಗೆ ಹಣವನ್ನು ತೊಡಗಿಸದೆ ಜನರ ಸಂಕಷ್ಟಗಳನ್ನು ನಿವಾರಿಸಲು ಸಾಧ್ಯವಾಗುವುದಿಲ್ಲ. ದುಡಿಯುವ ಜನರ ಕೊಂಡುಕೊಳ್ಳುವ ಶಕ್ತಿ ಕಡಿಮೆಯಾಗುತ್ತಿರುವಾಗ ಕಾರ್ಪೊರೇಟ್ ಕಂಪನಿಗಳ ಲಾಭ ಹೆಚ್ಚಾಗುತ್ತಿದೆ. ಇದರ ಆರ್ಥಿಕ ನೀತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬೇಕು. ಸರ್ಕಾರಿ ಖನಿಜ ಸಂಪತ್ತನ್ನ ಖಾಸಗೀಕರಣ ಮಾಡುವುದು, ಸರ್ಕಾರಿ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಿಸುತ್ತಿದೆ ಎಂದು ದೂರಿದರು. ಬಂಡವಾಳದಾರರಿಗೆ ರಿಯಾಯಿತಿಗಳನ್ನು ಸರ್ಕಾರ ನೇರವಾಗಿ ಘೋಷಿಸುತ್ತಿದೆ. ಆಸ್ತಿಯ ಪ್ರಮಾಣ ಹೆಚ್ಚಿರುವವರ ಮೇಲೆ ತೆರಿಗೆಯನ್ನು ಹೆಚ್ಚಳ ಮಾಡಬೇಕು. ಖಾಯಂ ಉದ್ಯೋಗಗಳ ಪ್ರಮಾಣವನ್ನು ಹೆಚ್ಚಳಮಾಡಬೇಕು, ಕನಿಷ್ಟವೇತನವನ್ನು ವೈಜ್ಞಾನಿಕವಾಗಿ ನಿಗದಿ ಮಾಡಲು ಸಾಧ್ಯವಾಗಬೇಕು. ಸುಪ್ರೀಂ ಕೋರ್ಟ್ನ ತೀರ್ಪಿನಂತೆ ಅಕುಶಲ ಕಾರ್ಮಿಕರಿಗೆ ಕನಿಷ್ಟ ೩೧ ಸಾವಿರ ವೇತನವನ್ನು ನಿಗದಿ ಮಾಡಬೇಕು. ಇಂತಹ ಜನಪರ ನೀತಿಗಳನ್ನು ಜಾರಿಗೆ ತಂದರೆ ಕೈಗಾರಿಕಾ ಅಭಿವೃದ್ಧಿ ಸಾರ್ವತ್ರಿಕವಾಗಿ ನಡೆಯುತ್ತದೆ. ಜನರು ಇಂತಹ ಸಂಕಷ್ಟಗಳನ್ನು ಎದುರಿಸುತ್ತಿರುವಾಗ ದುಡಿಯುವ ವರ್ಗದ ಐಕ್ಯತೆಯನ್ನು ಒಡೆಯಲು ಧರ್ಮದ ಹೆಸರಿನಲ್ಲಿ ಕೋಮುದ್ವೇಷವನ್ನು ಬಿತ್ತುವ ಕೆಲಸಗಳು ಹೆಚ್ಚಾಗುತ್ತಿವೆ. ಸಂವಿಧಾನದ ಆಶಯದಂತೆ ವೈಜ್ಞಾನಿಕ ಮನೋಭಾವವನ್ನು ಬೆಳಸಬೇಕಾಗಿದ್ದ ಸರ್ಕಾರಗಳು ಮೌಡ್ಯವನ್ನು ಬಿತ್ತುವ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸಲು ಸರ್ಕಾರಿ ಯಂತ್ರಗಳನ್ನು ಬಳಸಲಾಗುತ್ತಿದೆ. ಇದು ಸಂವಿಧಾನಕ್ಕೆ ಮಾಡುವ ಅವಮಾನ. ಕೂಡಲೇ ಸರ್ಕಾರಗಳು ಎಲ್ಲಾ ಧಾರ್ಮಿಕ ಚಟುವಟಿಕೆಗಳಿಂದ ದೂರವಿರಬೇಕು. ಜನರ ಸಂಕಷ್ಟಗಳನ್ನು ಪರಿಹರಿಸಲು ಆರ್ಥಿಕವಾಗಿ, ಸಾಮಾಜಿಕವಾಗಿ, ವೈಜ್ಞಾನಿಕವಾಗಿ ಬಗೆಹರಿಸಲು ಬೇಕಾದ ನೀತಿಗಳನ್ನು ಜಾರಿಗೊಳಿಸಬೇಕಾಗದ ಸರ್ಕಾರಗಳು ಜನರನ್ನು ದಿಕ್ಕುತಪ್ಪಿಸಲು ಜನರಲ್ಲಿ ಮೌಡ್ಯವನ್ನು ಬಿತ್ತಿ ದೇವಸ್ಥಾನಗಳ ಕಡೆ ಹೋಗುವಂತೆ ಪ್ರಚೋದಿಸುತ್ತಿವೆ. ಎಲ್ಲಿ ಸಂಕಷ್ಟ ಹೆಚ್ಚಾಗುತ್ತದೆಯೋ ಅಲ್ಲಿ ದೇವಸ್ಥಾನಗಳಿಗೆ ಜನ ಹೋಗುವುದು ಹೆಚ್ಚಾಗುತ್ತದೆ. ಇದನ್ನು ಸರ್ಕಾರಗಳು ಉಪಯೋಗ ಮಾಡಬಾರದು. ಭಕ್ತಿ ಮೌಡ್ಯವಾಗಬಾರದು, ಭಕ್ತಿ ಧರ್ಮ ದ್ವೇಶವಾಗಬಾರದು, ಭಕ್ತಿಯನ್ನ ರಾಜಕೀಯ ಲಾಭದ ಅಸ್ತ್ರವನ್ನಾಗಿ ಯಾವುದೇ ಸರ್ಕಾರಗಳು ಬಳಸಿಕೊಳ್ಳಬಾರದು ಎಂದರು.

ಬೆಂಗಳೂರು ಕೇಂದ್ರತ ಅವೈಜ್ಞಾನಿಕ ಅಭಿವೃದ್ಧಿಯ ಕಲ್ಪನೆಯನ್ನು ಬಿಟ್ಟು ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಸೂಕ್ತ ಗಮನವನ್ನು ಕೊಡಲು ಸರ್ಕಾರ ಮುಂದಾಗಬೇಕು. ಬೆಂಗಳೂರಿನ ಸುತ್ತಮುತ್ತಲು ನಡೆಸುತ್ತಿರುವ ವ್ಯಾಪಕ ಭೂಸ್ವಾಧೀನ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕೃಷಿ ಭೂಮಿಯನ್ನು ಇಲ್ಲದಂತೆ ಮಾಡುತ್ತದೆ. ಕೈಗಾರಿಕೆಗಳನ್ನು ಸ್ಥಾಪಿಸಲು ಕೃಷಿ ಯೋಗ್ಯ ಫಲವತ್ತಾದ ಭೂಮಿಯನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಬಾರದು. ಈ ಎಲ್ಲಾ ನೀತಿಗಳ ಕುರಿತು ೨೦೨೫ ನವೆಂಬರ್ ೧೩ ರಿಂದ ೧೫ ವರೆಗೆ ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಸಿಐಟಿಯುವಿನ ೧೬ನೇ ರಾಜ್ಯ ಸಮ್ಮೇಳನದಲ್ಲಿ ಸುಧೀರ್ಘವಾಗಿ ಚರ್ಚಿಸಲಾಗುವುದು. ಈ ಸಮ್ಮೇಳನವನ್ನು ಸಿಐಟಿಯುನ ಅಖಿಲ ಭಾರತ ಅಧ್ಯಕ್ಷರಾದ ಡಾ.ಹೇಮಲತಾರವರು ಉಧ್ಘಾಟಿಸಲಿದ್ದಾರೆ. ಸಿಐಟಿಯು ಅಖಿಲ ಭಾರತ ಕಾರ್ಯದರ್ಶಿ ಕೆ.ಎನ್.ಉಮೇಶ್ ಭಾಗವಹಿಸಲಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಆಯ್ಕ ೪೫೦ ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಹಾಸನ ಜಿಲ್ಲಾಧ್ಯಕ್ಷ ಧರ್ಮೇಶ್, ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪ, ಉಪಾಧ್ಯಕ್ಷರಾದ ಜಿ.ಪಿ.ಸತ್ಯನಾರಾಯಣ, ಖಜಾಂಚಿ ಅರವಿಂದ್ ಇತರರು ಉಪಸ್ಥಿತರಿದ್ದರು.

You cannot copy content of this page

Exit mobile version