ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶ ಉಲ್ಲಂಘಿಸಿ ವಿಡಿಯೋ ಮಾಡಿದ ‘ದೂತ’ ಖ್ಯಾತಿಯ ಸಮೀರ್ ಎಂಡಿ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.
ಇತ್ತೀಚೆಗೆ ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದು ಧರ್ಮಸ್ಥಳ ಸೌಜನ್ಯ ಪ್ರಕರಣದ ಇಂಚಿಂಚೂ ಮಾಹಿತಿ ಹೊರಹಾಕಿದ ಸಮೀರ್ ಎಂಡಿ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದಲ್ಲೂ ದೊಡ್ಡ ಸುದ್ದಿ ಮಾಡಿದ್ದರು. ದಿನ ಕಳೆದಂತೆ ಈ ವಿಡಿಯೋ ಸೆನ್ಸೇಷನ್ ಸೃಷ್ಟಿ ಮಾಡಿ ಕೋಟಿಗಟ್ಟಲೆ ವೀಕ್ಷಣೆ ಪಡೆದುಕೊಂಡಿತ್ತು. ಆ ನಂತರ ಕೆಲವು ದಿನಗಳ ಬಳಿಕ ಅದೇ ಧರ್ಮಸ್ಥಳದ ಕುರಿತಾಗಿ ಅಲ್ಲಿ ನಡೆದ ಕೊಲೆ ಅತ್ಯಾಚಾರ, ಅಪಹರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಇನ್ನೊಂದು ವಿಡಿಯೋ ಮಾಡಲಾಗಿತ್ತು.
ಈ ಎರಡನೇ ವಿಡಿಯೋಗೆ ಸಂಬಂಧಿಸಿದಂತೆ ಧರ್ಮಸ್ಥಳ ಡಿ.ಹರ್ಷೇಂದ್ರ ಕುಮಾರ್ ಮತ್ತು ನಿಶ್ಚಲ್ ಡಿ. 10 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ನ್ಯಾಯಾಲಯವು ಯೂಟ್ಯೂಬರ್ ಗೆ ನೋಟೀಸ್ ಜಾರಿ ಮಾಡಿ, ಹಾಜರಾಗುವಂತೆ ಸೂಚನೆಯನ್ನು ನೀಡಿದೆ. ಮುಖ್ಯವಾಗಿ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಹರಿಬಿಟ್ಟಿದ್ದ ವಿಡಿಯೊ ತಕ್ಷಣ ಡಿಲೀಟ್ ಮಾಡಲು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಧೀಶ ಎಸ್. ನಟರಾಜ್ ಈ ಆದೇಶ ಮಾಡಿದ್ದಾರೆ.
ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕ್ಷೇತ್ರದ ಧರ್ಮಸ್ಥಳವನ್ನು ಗುರಿಯಾಗಿಸಿಕೊಂಡು ಈ ಹಿಂದೆ ಮಾಡಿರುವ ವಿಡಿಯೊ ತೆಗೆದುಹಾಕುವಂತೆ ಮತ್ತು ಈ ಕುರಿತು ವಿಡಿಯೊ ಮಾಡದಂತೆ ತಡೆಯಾಜ್ಞೆ ನೀಡಿತ್ತು. ಆದರೆ, ನ್ಯಾಯಾಲಯದ ತಡೆಯಾಜ್ಞೆ ಅದೇಶವನ್ನು ಉಲ್ಲಂಘಿಸಿ, ಎರಡನೆ ವಿಡಿಯೋ ಬಿಟ್ಟಿರುವ ಹಿನ್ನೆಲೆ ಸಮೀರ್ ಎಂಡಿ ಮೇಲೆ ಮಾನಷ್ಟ ಮೊಕದ್ದಮೆ ದಾಖಲಾಗಿದೆ.