ದೆಹಲಿ: ಉತ್ತರ ಭಾರತದಲ್ಲಿ ಮಳೆ ತನ್ನ ರೌದ್ರಾವತಾರವನ್ನು ತೋರಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ವಿವಿಧ ಅಪಘಾತಗಳಲ್ಲಿ 10 ಜನರು ಮೃತಪಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ತ್ರಿಕೂಟ ಪರ್ವತಗಳ ಮೇಲಿರುವ ವೈಷ್ಣೋದೇವಿ ದೇವಸ್ಥಾನದ ಯಾತ್ರಾ ಮಾರ್ಗದಲ್ಲಿ ಮಂಗಳವಾರ ಸುರಿದ ಭಾರಿ ಮಳೆಗೆ ಭೂಕುಸಿತ ಸಂಭವಿಸಿ ಆರು ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿದ್ದಾರೆ. ರಿಯಾಸಿ ಜಿಲ್ಲೆಯಲ್ಲಿ ಮಾತಾ ವೈಷ್ಣೋದೇವಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಘೋಷಿಸಿದ್ದಾರೆ.
ದೋಡಾ ಜಿಲ್ಲೆಯಲ್ಲಿ ಮಂಗಳವಾರ ಮೇಘಸ್ಫೋಟದಿಂದ ಉಂಟಾದ ಆಕಸ್ಮಿಕ ಪ್ರವಾಹಕ್ಕೆ ನಾಲ್ವರು ಬಲಿಯಾಗಿದ್ದು, 10ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ಕಥುವಾ, ಸಾಂಬಾ, ದೋಡಾ, ಜಮ್ಮು, ರಾಂಬನ್, ಕಿಷ್ಟ್ವಾಡ್ ಸೇರಿದಂತೆ ಜಮ್ಮು ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿತ್ತು.
ಭಾರಿ ಮಳೆಯ ಹಿನ್ನೆಲೆಯಲ್ಲಿ ಜಮ್ಮು ವಿಭಾಗದಾದ್ಯಂತ ಸರ್ಕಾರಿ ಮತ್ತು ಖಾಸಗಿ ಕಚೇರಿಗಳನ್ನು ಮುಚ್ಚಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಸುರಿದ ಭಾರಿ ಮಳೆಗೆ ಬಿಯಾಸ್ ನದಿ ಉಕ್ಕಿ ಹರಿಯುತ್ತಿದ್ದು, ಪ್ರವಾಹದಿಂದ ಹಲವು ವಸತಿ ಪ್ರದೇಶಗಳು ಮುಳುಗಿವೆ. ಅಂಗಡಿಗಳು ಮತ್ತು ಮನೆಗಳು ಕೊಚ್ಚಿ ಹೋಗಿದ್ದು, ಕಟ್ಟಡಗಳು ಕುಸಿದಿವೆ.
ಹೆದ್ದಾರಿಗಳು ಕೊಚ್ಚಿ ಹೋಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಮನಾಲಿ-ಲೇಹ್ ಹೆದ್ದಾರಿಯಲ್ಲಿ ಸಂಪೂರ್ಣ ಲೋಡ್ ತುಂಬಿದ್ದ ಹೆವಿ ಡ್ಯೂಟಿ ಟ್ರಕ್ ಪ್ರವಾಹಕ್ಕೆ ಕೊಚ್ಚಿ ಹೋಗಿದೆ.
ಲೇಹ್-ಮನಾಲಿ ಹೆದ್ದಾರಿಯಲ್ಲಿ ಯಾವುದೇ ವಾಹನಗಳಿಗೆ ಅವಕಾಶ ನೀಡುತ್ತಿಲ್ಲ. ಕುಲು ಮತ್ತು ಮನಾಲಿ ನಡುವಿನ ಹೆದ್ದಾರಿ ಕೊಚ್ಚಿಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಯಾಸ್ ನದಿ ಉಕ್ಕಿ ಹರಿಯುತ್ತಿರುವುದರಿಂದ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ 30 ಹಳ್ಳಿಗಳು ಜಲಾವೃತವಾಗಿವೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್ 27 ರಿಂದ 30 ರವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.